ಜಮ್ಮು ಕಾಶ್ಮೀರಕ್ಕೆ ಪತ್ರಕರ್ತರಿಗೆ ಮುಕ್ತ ಪ್ರವೇಶಾವಕಾಶಕ್ಕೆ ಅಮೆರಿಕ ಸಂಸತ್ ಸದಸ್ಯರ ಆಗ್ರಹ

Update: 2019-10-26 15:34 GMT

ವಾಷಿಂಗ್ಟನ್, ಅ.26: ಜಮ್ಮು ಮತ್ತು ಕಾಶ್ಮೀರಕ್ಕೆ ವಿದೇಶಿ ಪತ್ರಕರ್ತರು ಹಾಗೂ ಸಂಸದರಿಗೆ ಮುಕ್ತ ಪ್ರವೇಶಾವಕಾಶ ಒದಗಿಸಬೇಕೆಂದು ಒತ್ತಾಯಿಸಿ ಅಮೆರಿಕದ 6 ಸಂಸತ್ ಸದಸ್ಯರು ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ಹರ್ಷವರ್ಧನ್ ಶ್ರಿಂಗ್ಲಾರಿಗೆ ಪತ್ರ ಬರೆದಿದ್ದಾರೆ.

ಜಮ್ಮು ಕಾಶ್ಮೀರ ಕಣಿವೆಯಲ್ಲಿರುವ ಪರಿಸ್ಥಿತಿ ಭಾರತ ಹೇಳಿಕೊಳ್ಳುತ್ತಿರುವುದಕ್ಕಿಂತ ವಿಭಿನ್ನವಾಗಿದೆ ಎಂದು ಅಲ್ಲಿರುವ ಮುಖಂಡರು ಮಾಹಿತಿ ನೀಡಿರುವುದಾಗಿ ಸಂಸದರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಮತ್ತು ಆರ್ಥಿಕ ಸಾಮಾನ್ಯ ಸ್ಥಿತಿ ನೆಲೆಗೊಳಿಸುವ ಕುರಿತ ಮಾರ್ಗಸೂಚಿಯ ಮಾಹಿತಿ ನೀಡುವಂತೆ ಹಾಗೂ ಬಂಧನಲ್ಲಿರುವ ಎಲ್ಲಾ ರಾಜಕೀಯ ಮುಖಂಡರನ್ನೂ ಬಿಡುಗಡೆಗೊಳಿಸುವಂತೆ ಗುರುವಾರ ಅಮೆರಿಕ ಭಾರತವನ್ನು ಒತ್ತಾಯಿಸಿತ್ತು.

ನಮ್ಮ ಪ್ರಶ್ನೆ ಕಾಶ್ಮೀರದಲ್ಲಿರುವ ಪರಿಸ್ಥಿತಿ ಬಗ್ಗೆ ಅಕ್ಟೋಬರ್ 16ರಂದು ಶ್ರಿಂಗ್ಲಾ ನೀಡಿರುವ ವಿವರಣೆಗೂ ನಮಗೆ ಲಭಿಸಿರುವ ಮಾಹಿತಿಗೂ ಇರುವ ವ್ಯತ್ಯಾಸದ ಕುರಿತಾಗಿದೆ ಎಂದು ಅಕ್ಟೋಬರ್ 24ರಂದು ಸಂಸದರಾದ ಡೇವಿಡ್ ಎನ್ ಸಿಸಿಲಿನ್, ಡೀನಾ ಟೈಟಸ್, ಕ್ರಿಸ್ಸೀ ಹೌಲಾನ್, ಆ್ಯಂಡಿ ಲೆವಿನ್, ಜೇಮ್ಸ್ ಪಿ ಮೆಕವರ್ನ್ ಮತ್ತು ಸೂಸಾನ್ ವೈಲ್ಡ್ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಶ್ರಿಂಗ್ಲಾರ ಸಭೆಯಲ್ಲಿ ಉಪಸ್ಥಿತರಿದ್ದ ಹಲವರು ಕಾಶ್ಮೀರದ ಪರಿಸ್ಥಿತಿ ಕುರಿತು ವಿಭಿನ್ನ ಚಿತ್ರಣ ನೀಡಿದ್ದಾರೆ. 370ನೇ ವಿಧಿ ರದ್ದತಿ, ಇಂಟರ್‌ನೆಟ್ ಮತ್ತು ಸಂವಹನ ವ್ಯವಸ್ಥೆ ಕಡಿತ, ರಾಜಕೀಯ ಮುಖಂಡರು ಹಾಗೂ ಹೋರಾಟಗಾರರ ಬಂಧನ, ಕರ್ಫ್ಯೂ ವಿಧಿಸಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕಾಶ್ಮೀರದಲ್ಲಿ ಆಗುವ ಬೆಳವಣಿಗೆಗಳನ್ನು ಪತ್ರಕರ್ತರು ವ್ಯಾಪಕವಾಗಿ ವರದಿ ಮಾಡಿದ್ದಾರೆ. ಇದರಲ್ಲಿ ಕೆಲವು ಅಂತರಾಷ್ಟ್ರೀಯ ವರದಿಗಾರರ ಪಾತ್ರ ಮಹತ್ತರವಾದುದು. ಆದರೆ ಈಗ ಅಲ್ಲಿರುವ ಭದ್ರತಾ ನಿರ್ಬಂಧಗಳಿಂದಾಗಿ ಪತ್ರಕರ್ತರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಸಮಸ್ಯೆಯಾಗುತ್ತಿದೆ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆಯ ಕಾರ್ಯವಾಹಕ ಸಹಾಯಕ ಸಚಿವೆ ಆಲಿಸ್ ಜಿ ವೆಲ್ಸ್ ಹೇಳಿದ್ದಾರೆ.

ಪತ್ರಕರ್ತರು ಹಾಗೂ ಸಂಸದ್ ಸದಸ್ಯರಿಗೆ ಕಾಶ್ಮೀರ ಪ್ರದೇಶಕ್ಕೆ ಮುಕ್ತ ಪ್ರವೇಶಾವಕಾಶ ನೀಡಿದಾಗ ಮಾತ್ರ ನಿಜವಾದ ಪಾರದರ್ಶಕತೆ ಸಾಧ್ಯ. ಮುಕ್ತ ಮಾಧ್ಯಮ ಹಾಗೂ ಸಂವಹನ ವ್ಯವಸ್ಥೆಯ ಹಿತದೃಷ್ಟಿಯಿಂದ ಸ್ಥಳೀಯ ಹಾಗೂ ವಿದೇಶಿ ಪತ್ರಕರ್ತರು ಹಾಗೂ ಇತರ ಅಂತರಾಷ್ಟ್ರೀಯ ಪ್ರವಾಸಿಗರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಮುಕ್ತ ಪ್ರವೇಶಾವಕಾಶ ನೀಡಲು ಭಾರತವನ್ನು ಉತ್ತೇಜಿಸುತ್ತೇವೆ ಎಂದು ಸಂಸದ್ ಸದಸ್ಯರ ಪತ್ರದಲ್ಲಿ ತಿಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದೊಳಗೆ ಶೇ.100 ಸ್ಥಿರ ದೂರವಾಣಿ ಸಂಪರ್ಕ ಮರುಸ್ಥಾಪಿಸಲಾಗಿದೆಯೇ, ಪ್ರಿಪೇಯ್ಡ್ ಮೊಬೈಲ್ ಸೇವೆ ಸಹಿತ ಎಲ್ಲಾ ಮೊಬೈಲ್ ಫೋನ್‌ಗಳಿಗೆ ಯಾವಾಗ ಸಂಪರ್ಕ ನೀಡಲಾಗುತ್ತದೆ, ಯಾವಾಗ ಪೂರ್ಣಪ್ರಮಾಣದಲ್ಲಿ ಇಂಟರ್‌ನೆಟ್ ಸಂಪರ್ಕ ಒದಗಿಸಲಾಗುತ್ತದೆ, ಆಗಸ್ಟ್ 5ರ ಬಳಿಕ ರಾಜ್ಯದಲ್ಲಿ ಸಾರ್ವಜನಿಕ ಸುರಕ್ಷಾ ಕಾಯ್ದೆ ಹಾಗೂ ಇತರ ಕಾಯ್ದೆಯಡಿ ಎಷ್ಟು ಮಂದಿಯನ್ನು ಬಂಧನದಲ್ಲಿಡಲಾಗಿದೆ, ಇವರಲ್ಲಿ ಅಪ್ರಾಪ್ತ ವಯಸ್ಸಿನವರು ಎಷ್ಟು ಮಂದಿ, ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಬಂಧನದಲ್ಲಿರುವವರ ವಿರುದ್ಧ ನಡೆಸಲಾಗುವ ಪ್ರಮಾಣಿತ ನ್ಯಾಯಾಂಗ ಕಾರ್ಯವಿಧಾನ ಯಾವುದು , ಜಮ್ಮು ಕಾಶ್ಮೀರದಲ್ಲಿ ಸಾರ್ವಜನಿಕರು ಮುಕ್ತವಾಗಿ ಸಂಚರಿಸುವಂತಾಗಲು ಸರಕಾರ ಯಾವ ಯೋಜನೆ ರೂಪಿಸಿದೆ, ಇದನ್ನು ಯಾವಾಗ ನಿರೀಕ್ಷಿಸಬಹುದು ಎಂದು ಸಂಸದ್ ಸದಸ್ಯರು ಪ್ರಶ್ನಿಸಿದ್ದಾರೆ.

ಅಲ್ಲದೆ, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬಯಸುವ ಅಮೆರಿಕ ಸಂಸತ್ ಸದಸ್ಯರನ್ನು ಹಾಗೂ ವಿದೇಶಿ ಅಧಿಕಾರಿಗಳನ್ನು ಭಾರತ ಸರಕಾರ ಸ್ವಾಗತಿಸುವುದೇ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News