ಕನ್ನಡ ರಂಗಭೂಮಿಯ ಮೇಲೆ ‘ವಿದಿಶಾ ಪ್ರಹಸನ’

Update: 2019-10-26 18:31 GMT

ಯಾವುದೇ ಒಂದು ನಾಟಕವು ನಿತ್ಯನೂತನವಾಗಿ ಉಳಿಯುವುದು ಅದರ ರಂಗಪ್ರಯೋಗ ಸಾಧ್ಯತೆಗಳಿಂದ ಮಾತ್ರ ಎಂದು ತೋರಿಸಿಕೊಟ್ಟ ಈ ನಾಟಕವು ಇತ್ತೀಚೆಗೆ ಧಾರವಾಡದ ಸೃಜನ ರಂಗಮಂದಿರದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಕಾರಣವಾಯಿತು. ಈ ನಾಟಕಕ್ಕೆ ಜಂಬೆ ಅವರು ರಂಗಕ್ಕೆ ತೋರುತ್ತಿರುವ ಬದ್ಧತೆ, ಕಲಾವಿದರ ಪರಿಶ್ರಮ ಹಾಕಿರುವುದು ಎದ್ದು ಕಾಣುತ್ತಿತ್ತು.

‘ಕಾಳಿದಾಸನ ಮಾಲವಿಕಾಗ್ನಿಮಿತ್ರಂ’ ನಾಟಕವನ್ನು ಆಧಾರವಾಗಿಟ್ಟುಕೊಂಡು ರಚಿತವಾದ ನಾಟಕ ಈ ‘ವಿದಿಶಾ ಪ್ರಹಸನ’. ಈ ನಾಟಕವನ್ನು ಬಹಳ ವಿಭಿನ್ನವಾಗಿ ಕಟ್ಟಲಾಗಿದೆ. ರಂಗದ ಮೇಲೆ ಒಂದೊಂದು ಪಾತ್ರಗಳು ಜೀವಂತವಾಗಿ ನಿಂತು ನಮ್ಮ ಕಲೆಗಳ ರಾಯಭಾರಿಗಳಾಗಿ ನಿಂತುಕೊಳ್ಳುವಾಗ ನೋಡುಗರ ಮೈಮನ ತನ್ನತ್ತ ಸೆಳೆದುಕೊಳ್ಳುತ್ತವೆ. ನಾಡಿನ ಕಲೆ ಬಯಲಾಟ, ತಮಿಳುನಾಡಿನ ತೆರಕೂತ್ತು ಜುಗಲ್ ಬಂಧಿಯಂತೆ ನೋಡುಗರನ್ನು ಮೋಡಿ ಮಾಡುವುದಂತೂ ನಿಜ.

ಕಾಳಿದಾಸನ ಕಾವ್ಯದಲ್ಲಿ ಅಗ್ನಿಮಿತ್ರನ ತಂದೆ ಪುಷ್ಪಮಿತ್ರ ಅಶ್ವಮೇಧಯಾಗ ಮಾಡುತ್ತಾನೆ, ಮಗ ವಸುಮಿತ್ರ ಯಜ್ಞ್ಞಾಶ್ವದ ಬೆಂಗಾವಲಾಗಿ ದಿಗ್ವಿಜಯಕ್ಕೆ ಹೋಗಿದ್ದಾನೆ. ವಿದರ್ಭದಲ್ಲಿ ಭಾವಮೈದುನನ್ನು ಸೆರೆಯಲ್ಲಿರಿಸಲಾಗಿದೆ. ಆದರೆ, ಈ ಎಲ್ಲದರ ಭಿತ್ತಿಯಲ್ಲಿ ಅಗ್ನಿಮಿತ್ರ ಮಾತ್ರ ವಿದಿಶಾ ಅರಮನೆಯಲ್ಲಿ ಮಾಲವಿಕೆಯೊಡನೆ ಪ್ರೇಮ ಪ್ರಹಸನದಲ್ಲಿದ್ದು, ತನಗೆ ಇನ್ನಿರ್ವವರು ಪತ್ನಿಯರು ಇದ್ದಾರೆಂಬ ಪರಿಜ್ಞಾನವೇ ಅವನಿಗಿರುವುದಿಲ್ಲ.

 ಇನ್ನು ಎರಡನೆಯ ಹೆಂಡತಿ ರಾಣಿ ಇರಾವತಿ ರಾಜನ ಚಪಲ, ಚಲನವಲನಗಳ ಮೇಲೆ ನಿಗಾವಹಿಸಿ ಅಗ್ನಿಮಿತ್ರ ಮತ್ತು ಮಾಲವಿಕ ಪ್ರಣಯ ಪ್ರಸಂಗಕ್ಕೆ ಭಂಗತರುತ್ತಿರುತ್ತಾಳೆ. ಹಾಗೆ ಅಗ್ನಿಮಿತ್ರ ಮತ್ತು ವಿದೂಷಕನಿಂದ ನಡೆಯುವ ಹಾವಳಿಯನ್ನು ನಿಗ್ರಹಿಸುತ್ತ ಇಲ್ಲಿ ರಾಜ ಅಗ್ನಿಮಿತ್ರನನ್ನ ದಂಡಿಸುವ ಮಟ್ಟಕ್ಕೂ ಬಂದು ನಿಲ್ಲುವಂತಹದ್ದು. ತನ್ನ ಗಂಡ ಬೇರೆಯವರ ಸ್ವತ್ತಾದರೆ ಯಾವ ಹೆಂಡತಿ ಸಹಿಸುತ್ತಾಳೆ? ಎನ್ನುವುದಕ್ಕೆ ಅರಮನೆಯಲ್ಲಿ ನಡೆಯುವ ಅನೇಕ ಪ್ರಸಂಗಗಳು ಸಾಕ್ಷಿ ನುಡಿಯುತ್ತವೆ. ಅಗ್ನಿಮಿತ್ರ ಮತ್ತು ವಿದೂಷಕನ ಸಂಚಿನಲ್ಲಿ ಬಕುಲಾವಳಿಕೆಯೂ ಭಾಗಿಯಾಗಿ ಮಾಲವಿಕೆಗೆ ಸಹಾಯಮಾಡುತ್ತಾಳೆ. ಈ ನಾಟಕದಲ್ಲಿ ಕೊನೆಗೆ ಅಗ್ನಿಮಿತ್ರನ ಮನೋವಾಂಛಲ್ಯವೇ ಗೆಲುತ್ತದೆ. ಇದು ಪ್ರಸಕ್ತ ರಾಜಕೀಯ ಸ್ಥಿತಿಯನ್ನು ಅಣಕಿಸಿದಂತೆ ಕಾಣುತ್ತದೆ. ನೆರೆಹಾವಳಿ ಬಂದು ಜನರು ತೊಂದರೆಯಲ್ಲಿ ಸಿಲುಕಿದ್ದಾರೆ, ಅಗ್ನಿಮಿತ್ರ ಮಾಲವಿಕಳ ಚೆಲುವು ಮತ್ತು ಕುಣಿತಕ್ಕೆ ಮರುಳಾಗಿ ಪ್ರಣಯ ಪ್ರಸಂಗದಲ್ಲಿ ತೇಲುವಾಗ ಅವನ ಕಣ್ಣಿಗೆ ಇದೆಲ್ಲ ಹೇಗೆ ಕಾಣಬೇಕು? ರಾಜ್ಯದ ಸಮಸ್ಯೆಗಳನ್ನು ಮರೆಸಿ ಜನರ ಗಮನ ಬೇರೆಡೆ ಹರಿಸಲಿಕ್ಕಾಗಿ ಯುದ್ಧ ಸಾರುತ್ತಾರೆ. ಜನರ ಕಷ್ಟವನ್ನು ಮರೆಸುವುದಕ್ಕೆ ಉತ್ಸವಗಳನ್ನು ನಡೆಸುತ್ತಿದ್ದಾರೆ. ಇಂತಹ ಉತ್ಸವದ ನಡುವೆ ನಾವು ದಮನಿತರಾಗಿದ್ದೇವೆ ಎಂದು ಸಾರಿ ಹೇಳುತ್ತವೆ ಬಡವರ ಕಣ್ಣೀರು. ಅದಃಪತನದಲ್ಲಿ ಅಂತ್ಯವಾಗುವ ಸಮ್ರಾಜ್ಯದ ಕಥೆ, ಅರಮನೆ, ಅಂತಃಪುರ, ವಿಧಾನಸೌಧ, ವಿಕಾಸಸೌಧ ಹೀಗೆ ವಾಸ್ತವ ಆವರಣದಲ್ಲಿಯೇ ಅವತಾರಗಳ ವೇಷದಲ್ಲಿ ಜನ್ಮ ತಾಳಿ ಜೀವ ನುಂಗುತ್ತಿವೆ. ಸಾಮಾಜಿಕ ರಾಜಕೀಯ ಪರಿಸ್ಥಿತಿಗಳನ್ನ್ನು ನೆನಪಿಸುವ ನಾಟಕ ವಿದಿಶಾ ಪ್ರಹಸನ.

 ಇಂತಹ ಒಂದು ವಿಭಿನ್ನ ವಸ್ತುವುಳ್ಳ ನಾಟಕದ ಪ್ರಯೋಗಕ್ಕೆ ಕೈ ಹಾಕಿದ್ದು ಕನ್ನಡ ರಂಗಭೂಮಿಯ ಕ್ರಿಯಾಶೀಲ ರಂಗಕರ್ಮಿ ಚಿದಂಬರರಾವ್ ಜಂಬೆ, ಪ್ರಸ್ತುತ ಪಡಿಸಿದ್ದು ಧಾರವಾಡ ರಂಗಾಯಣದ ಮಾಜಿ ನಿರ್ದೇಶಕರಾದ ಪ್ರಮೋದ್ ಶಿಗ್ಗಾಂವ್, ಕನ್ನಡಕ್ಕೆ ಅಚ್ಚುಕಟ್ಟಾಗಿ ಅನುವಾದ ಮಾಡಿದವರು ಸಿದ್ದಲಿಂಗ ಪಟ್ಟಣಶೆಟ್ಟಿ, ನಾಟಕಕ್ಕೆ ಬಯಲಾಟದ ಕುಣಿತಗಳನ್ನು ಕಲಿಸಿದ್ದು ಬಸವರಾಜ ಶಿಗ್ಗಾಂವ್, ಈ ನಾಟಕಕ್ಕೆ ಸಂಗೀತವನ್ನು ನೀಡಿದವರು ಬಸವಲಿಂಗಯ್ಯ ಹಿರೇಮಠ, ಹಿನ್ನ್ನೆಲೆ ಗಾಯಕರು ಎಲ್ಲ ರಂಗಾಯಣದ ಕಲಾವಿದರು ಮತ್ತು ಸುನಂದ ನಿಂಬನಗೌಡರ, ರಂಗಸಜ್ಜಿಕೆ ರಾಮಚಂದ್ರ ಶೆರೇಗಾರ, ವಸ್ತ್ರವಿನ್ಯಾಸ ಪಳನಿ ಮತ್ತು ಬಸವರಾಜ ಶಿಗ್ಗಾಂವ್, ಬೆಳಕಿನ ವಿನ್ಯಾಸವನ್ನು ಬಹಳ ಅಚ್ಚುಕಟ್ಟಾಗಿ ಕಿಟ್ಟಿ ಗಾಂವಕರ್ ಮಾಡಿದ್ದಾರೆ ಈ ನಾಟಕದಲ್ಲಿ ಸಂಗೀತಕ್ಕೆ ಶಹನಾಯಿ ಬಳಸಿದ್ದು ವಿಶೇಷವಾಗಿತ್ತು, ಅರಮನೆಯಲ್ಲಿ ದಿಬ್ಬಣ ಹೊರಟಂತೆ ನಾಟಕದ್ದುದ್ದಕೂ ಭಾಸವಾಗಿತ್ತಿತ್ತು. ನಾಟಕದ ಯಶಸ್ಸಿಗೆ ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಪ್ರಮಾಣಿಕವಾಗಿ ಮಾಡಿರುವುದು ರಂಗದ ಮೇಲೆ ಎದ್ದು ಕಾಣುತ್ತದೆ. ಯಾವುದೇ ಒಂದು ನಾಟಕವು ನಿತ್ಯನೂತನವಾಗಿ ಉಳಿಯುವುದು ಅದರ ರಂಗಪ್ರಯೋಗ ಸಾಧ್ಯತೆಗಳಿಂದ ಮಾತ್ರ ಎಂದು ತೋರಿಸಿಕೊಟ್ಟ ಈ ನಾಟಕವು ಇತ್ತೀಚೆಗೆ ಧಾರವಾಡದ ಸೃಜನ ರಂಗಮಂದಿರದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಕಾರಣವಾಯಿತು. ಈ ನಾಟಕಕ್ಕೆ ಜಂಬೆ ಅವರು ರಂಗಕ್ಕೆ ತೋರುತ್ತಿರುವ ಬದ್ಧತೆ, ಕಲಾವಿದರ ಪರಿಶ್ರಮ ಹಾಕಿರುವುದು ಎದ್ದು ಕಾಣುತ್ತಿತ್ತು. ಜಂಬೆಯವರು ಈ ಮೊದಲು ‘ಮಾಲವಿಕಾಗ್ನಿಮಿತ್ರಮ್’ ನಾಟಕಕ್ಕೆ ತಮಿಳು ಜಾನಪದವಾದ ತೆರಕೂತ್ತುವನ್ನು ಬಳಸಿ ಕನ್ನಡೇತರ ನಾಡಿನಲ್ಲಿ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ. ಹಾಗಾಗಿ ಇಂತಹ ಪ್ರಯೋಗವನ್ನು ನಮ್ಮ ಗ್ರಾಮೀಣ ಹಿರಿಯ ಕಲಾವಿದರನ್ನು ಬಳಸಿಕೊಂಡು ಅದೇ ಬಗೆಯ ಪಾತ್ರ ನಿರ್ವಹಣೆ, ಕಥೆಗೆ ನೀಡುವ ತಿರುವು, ಸಂಭಾಷಣಾ ಕೌಶಲ್ಯ, ಪಾತ್ರಗಳ ಮಾತು ಆರಂಭವಾಗುವ ಮುಂಚೆ ದೊಡ್ಡಾಟದ ತಾಳಗಳಿಗೆ ಭಂಗಬರದಂತೆ ನಿರ್ವಹಿಸಿದ್ದು ಮಾತ್ರ ಅಚ್ಚರಿ.

ಇಲ್ಲಿಯ ಕಲಾವಿದರು ವೃತ್ತಿಕಲಾವಿದರಾದರೂ ಬಯಲಾಟ, ದೊಡ್ಡಾಟದ ಕಲಾವಿದರೇನಲ್ಲ. ನಾಟಕಕ್ಕೆ ದೊಡ್ಡಾಟದ ಪರಿಕಲ್ಪನೆಯನ್ನು ಲಕ್ಷ್ಯದಲ್ಲಿ ಇಟ್ಟುಕೊಂಡು ಮೂಲದ ಗೀತೆಗಳಿಗೆ ವ್ಯತ್ಯಯ ಬರದಂತೆ ನೋಡಿಕೊಳ್ಳಲಾಗಿದೆ. ಒಬ್ಬ ಕ್ರಿಯಾಶೀಲ ನಿರ್ದೇಶಕ ನಿತ್ಯವೂ ರಂಗಭೂಮಿಗೆ ಹೊಸತನ್ನು ಕಂಡುಕೊಳ್ಳಲು ಹವಣಿಸುತ್ತಾನೆ, ಜೊತೆಗೆ ಶೋಧಿಸುವ, ಪರಿಕಲ್ಪಿಸುವ, ಜನತೆಯ ಆಕಾಂಕ್ಷೆಗಳಿಗೆ ಸ್ಪಂದಿಸುವ ಸಾಧ್ಯತೆಯನ್ನು ನೀಡಬಲ್ಲ ಆಯಾಮವನ್ನು ಹೊಂದಿರುತ್ತಾನೆ. ವಿದಿಶಾ ಪ್ರಹಸನ ಮೂಲ ನಾಟಕದ ಮುಖ್ಯ ವಿದೂಷಕನೊಂದಿಗೆ ಸಹವರ್ತಿಗಳಾಗಿ ಇಬ್ಬರು ಅಪರ ತೇಪಾರ ಸರ್ವವಿದ್ಯಾ ಪಾರಂಗತ ವಿದೂಷಕರು ಮೈದಳೆಯುತ್ತಾರೆ. ಇಲ್ಲಿ ಅಪರ ತೇಪರರಿಬ್ಬರು ತಮ್ಮದೇ ಆದ ಭಿನ್ನ ಅಸ್ಮಿತೆಯನ್ನು ಉಳಿಸಿಕೊಂಡು, ಟೀಕಿಸುವ, ಚರ್ಚಿಸುವ ಮತ್ತು ಆ ಮೂಲಕ ಪ್ರೇಕ್ಷಕರ ಮನಸ್ಸನ್ನು ಹಿಡಿದಿಡುವ ಪ್ರಯತ್ನ ಮಾಡುತ್ತಾರೆ. ಈ ಪಾತ್ರಗಳಲ್ಲಿ ಅಕ್ಷತಾ ಕುಮಟ ಅವರ ಅಭಿನಯ ಮಾತ್ರ ಪ್ರೇಕ್ಷಕರನ್ನು ಹಿಡಿದಿಡುವಂತೆ ಮಾಡುತ್ತಾಳೆ. ಹಾಗೆಯೇ ಅಗ್ನಿಮಿತ್ರನ ಪಾತ್ರದಲ್ಲಿ ಸಂಜು ಚವ್ಹಾಣ ಅಭಿನಯವು ಕೂಡ ಅಷ್ಟೇ ಮೋಜಿನಿಂದ ಕೂಡಿತ್ತು. ಮಾಲವಿಕಾಗ್ನಿಮಿತ್ರಮ್ ನಾಟಕದಲ್ಲಿ ಕಾಳಿದಾಸನು ಆಯ್ದುಕೊಂಡ ವಸ್ತು ಮೌರ್ಯ ಕಾಲದ ಇತಿಹಾಸದಂತೆ ತೋರುವ ಪುರಾತನ ಶೈಲಿಯ ನಾಟಕ. ಆದರೆ ಇಲ್ಲಿ ಕಾಳಿದಾಸನು ತನ್ನ ಕಾಲದ ರಾಜಕೀಯ ಏಳು ಬೀಳುಗಳನ್ನು ವಿವರಿಸುತ್ತಾನೆ; ಕನ್ನಡಕ್ಕೆ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅನುವಾದ ಮಾಡುವ ಸಂದರ್ಭದಲ್ಲಿ ಆ ಸೂಕ್ಷ್ಮತೆಯನ್ನು ಮತ್ತು ನಮ್ಮ ನೆಲದಲ್ಲಿ ನಡೆಯುವ ಸಮಕಾಲಿನ ರಾಜಕೀಯ ವಾಸ್ತವ ಸಂಗತಿಗಳನ್ನು, ರಾಜಕಾರಣಿಗಳು, ಅಧಿಕಾರಿಗಳು ವಿಲಾಸಭೋಗಜೀವನ, ಪ್ರೇಮಪುರಾಣಗಳು, ಭ್ರಷ್ಟಾಚಾರಗಳು, ಜನಸಾಮನ್ಯರ ಸಮಸ್ಯೆಗಳಿಗೆ ಸ್ಪಂಧಿಸದೆ ಜಾರಿಕೊಳ್ಳುವ ಪ್ರಯತ್ನಗಳು ತಂತ್ರಗಾರಿಕೆ ಸೂಚ್ಯವಾಗಿ ಇಲ್ಲಿ ಹೆಣೆಯಲಾಗಿದೆ.

ತೆರಕೂತ್ತು ಪ್ರಕಾರದ ರಂಗ ಪ್ರಯೋಗಗಳಲ್ಲಿ ಇಂಥದ್ದಕ್ಕೆ ಅಪಾರ ಸ್ವಾತಂತ್ರ್ಯ ಇದೆ ಎಂಬುದು ಜಂಬೆಯವರ ಪ್ರಯೋಗಗಳಲ್ಲಿ ಕಂಡುಬರುತ್ತದೆ. ಬಹುಶಃ ಸಂಸ್ಕೃತ ನಾಟಕವೊಂದಕ್ಕೆ ಈ ರೀತಿಯ ಕಸಿ ಮಾಡುವ ಮತ್ತು ಕನ್ನಡ ಸಂದರ್ಭಕ್ಕೆ ಅಂತಹವುಗಳನ್ನು ಹೊಸಪ್ರಯೋಗಕ್ಕೆ ಬಳಸುವ ಕಾರ್ಯ ಕನ್ನಡ ಆಧುನಿಕ ರಂಗಭೂಮಿಯು ಸಾಧ್ಯತೆಗಳನ್ನು ಮಾಡಿಕೊಟ್ಟಿದೆ ಎನ್ನಬಹುದು. ನಮ್ಮ ನೆಲದ ಬಗ್ಗೆ ಯೋಚಿಸುವ ಮತ್ತು ಬಹುತ್ವದ ನೆಲೆಯಲ್ಲಿ ನೋಡುವಂತಹದನ್ನು ನಾಟಕದುದ್ದಕೂ ತೋರಿಸಿಕೊಟ್ಟಿದ್ದಾರೆ. ಧಾರವಾಡದ ಪ್ರೇಕ್ಷಕರಿಗೂ ಇಂತಹ ನಾಟಕಗಳು ಹಬ್ಬದ ಊಟವೇ ಇದ್ದಂತೆ ಎನ್ನುವುದನ್ನು ಅವರು ಕುಳಿತು ನೋಡುವುದರಿಂದಲೇ ಗೊತ್ತಾಗುತ್ತದೆ.

Writer - ಮಲ್ಲಮ್ಮ ಯಾಟಗಲ್

contributor

Editor - ಮಲ್ಲಮ್ಮ ಯಾಟಗಲ್

contributor

Similar News

ಜಗದಗಲ
ಜಗ ದಗಲ