ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಂಧಿತರ ಬಿಡುಗಡೆಗೆ ಹುನ್ನಾರ: ದಿನೇಶ್ ಅಮೀನ್ ಮಟ್ಟು ಗಂಭೀರ ಆರೋಪ

Update: 2019-10-28 15:40 GMT

ಬೆಂಗಳೂರು, ಅ.28: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ದಿಕ್ಕು ಬದಲಾಯಿಸುವ ಜೊತೆಗೆ, ಬಂಧಿತರನ್ನು ಹೊರಗಡೆ ಕರೆತರುವ ಹುನ್ನಾರ ನಡೆಯುತ್ತಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಗಂಭೀರ ಆರೋಪ ಮಾಡಿದರು.

ಪತ್ರಕರ್ತ, ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಖಂಡಿಸಿ, ಸೋಮವಾರ ನಗರದ ವೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಪ್ರಗತಿಪರರು, ಹೋರಾಟಗಾರರು, ಚಿಂತಕರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ, ಮೇಲ್ನೋಟಕ್ಕೆ ಕಾಣುವಂತೆ ಸರಳವಾಗಿಲ್ಲ. ಇಲ್ಲಿ ಗೌರಿ ಲಂಕೇಶ್ ಹತ್ಯೆಯ ನೆರಳು ಇರಬಹುದು. ಒಟ್ಟು, ಇವರಿಗೆ ಮಾವೋವಾದಿಗಳ ಸಂಪರ್ಕ ಇದೆ ಎಂದು ಸಾಬೀತುಪಡಿಸಲು ಈ ಪ್ರಕರಣವನ್ನು ಬಳಸಬಹುದು ಎನ್ನುವ ಅನುಮಾನ ಇದೆ ಎಂದು ತಿಳಿಸಿದರು.
ಏಕೆಂದರೆ, ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಬದಲಾವಣೆ ಮಾಡಿದಾಗಲೇ ಇಂತಹ ಸೂಚನೆ ಬಂದಿತ್ತು. ಅಷ್ಟೇ ಅಲ್ಲದೆ, ಬಂಧಿತ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು, ಇಡೀ ಪ್ರಕರಣದ ದಿಕ್ಕನ್ನು ಬದಲಾಯಿಸಬೇಕು ಎನ್ನುವ ಯೋಚನೆಯೂ ಅವರಲ್ಲಿ ಇರಬೇಕು ಎಂದು ಆಪಾದಿಸಿದರು.

ಸರಕಾರದ ಕೆಲ ವಿಚಾರಗಳು, ನಿರ್ಧಾರಗಳು, ಮುಖ್ಯಮಂತ್ರಿ, ಗೃಹ ಸಚಿವರಿಗೆ ತಿಳಿಯದಂತೆ ನಡೆಯುತ್ತಿವೆ ಎಂದ ಅವರು, ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಹೊರಗಡೆ ಕರೆತರುವ ಜವಾಬ್ದಾರಿ ನಮ್ಮ ಮೇಲಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ, ಮನವಿ ಸಲ್ಲಿಸೋಣ ಎಂದು ಅಮೀನ್‌ ಮಟ್ಟು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News