ದ್ವಿತೀಯ ತ್ರೈಮಾಸಿಕದ ಗಳಿಕೆಯ ವರದಿ ಬಿಡುಗಡೆ ಮುಂದೂಡಿದ ಏರ್‌ಟೆಲ್

Update: 2019-10-29 17:25 GMT

ಹೊಸದಿಲ್ಲಿ, ಅ.29: ಸರಕಾರಕ್ಕೆ ಶಾಸನಬದ್ಧ ಸುಂಕ ಪಾವತಿಸಬೇಕೆಂಬ ಸುಪ್ರೀಂಕೋರ್ಟ್‌ನ ಆದೇಶದಿಂದ ಆಘಾತಗೊಂಡಿರುವ ಭಾರ್ತಿ ಏರ್‌ಟೆಲ್ ಸಂಸ್ಥೆ ದ್ವಿತೀಯ ತ್ರೈಮಾಸಿಕದ ಫಲಿತಾಂಶ ಬಿಡುಗಡೆಯನ್ನು ನವೆಂಬರ್ 14ಕ್ಕೆ ಮುಂದೂಡಿರುವುದಾಗಿ ಪ್ರಕಟಿಸಿದೆ.

ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ನಡೆಸಿದ ವ್ಯವಹಾರದ ಫಲಿತಾಂಶವನ್ನು ಏರ್‌ಟೆಲ್ ಸಂಸ್ಥೆ ಅ.29ರಂದು ಪ್ರಕಟಿಸಬೇಕಿತ್ತು. ಆದರೆ ಏರ್‌ಟೆಲ್ ಸಂಸ್ಥೆ ಸರಕಾರಕ್ಕೆ 42,000 ಕೋಟಿ ರೂ. ಶಾಸನಬದ್ಧ ಸುಂಕ ಪಾವತಿಸಬೇಕೆಂದು ಕಳೆದ ವಾರ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಬಗ್ಗೆ ಕೇಂದ್ರ ಸರಕಾರದ ಸ್ಪಷ್ಟನೆ ಹಾಗೂ ನೆರವು ಯಾಚಿಸಿರುವ ಕಾರಣ ಫಲಿತಾಂಶ ಪ್ರಕಟಣೆಯನ್ನು ನವೆಂಬರ್ 14ಕ್ಕೆ ಮುಂದೂಡಿರುವುದಾಗಿ ಸಂಸ್ಥೆ ತಿಳಿಸಿದೆ.

ದ್ವಿತೀಯ ತ್ರೈಮಾಸಿಕದ ಪರಿಶೋಧಿಸಿದ ಆರ್ಥಿಕ ವರದಿಯನ್ನು ಹಾಗೂ ಸೆಪ್ಟೆಂಬರ್ 30ಕ್ಕೆ ಅಂತ್ಯವಾಗುವ ಅರ್ಧವಾರ್ಷಿಕ ವರದಿಯನ್ನು ಅನುಮೋದಿಸುವ ಅಜೆಂಡಾವನ್ನು ಕೈಬಿಡುವಂತೆ ನಿರ್ದೇಶಕರ ಮಂಡಳಿಗೆ ಸಂಸ್ಥೆಯ ಆಡಳಿತ ವರ್ಗ ಶಿಫಾರಸು ಮಾಡಿರುವುದಾಗಿ ಸ್ಟಾಕ್‌ಎಕ್ಸ್‌ಚೇಂಜ್‌ಗೆ ಸಲ್ಲಿಸಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಶಾಸನಬದ್ಧ ಸುಂಕ ಪಾವತಿಯ ಮೊತ್ತದ ಬಗ್ಗೆ ಸ್ಪಷ್ಟನೆ ಕೋರಿ ಸಂಸ್ಥೆಯು ದೂರಸಂಪರ್ಕ ಇಲಾಖೆಯನ್ನು ಸಂಪರ್ಕಿಸಿದೆ. ಅಲ್ಲದೆ ಈ ಪ್ರತಿಕೂಲ ತೀರ್ಮಾನದ ಕುರಿತ ವ್ಯವಹಾರದಲ್ಲಿ ಇಲಾಖೆಯ ನೆರವನ್ನೂ ಕೋರಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ಇತರ ಟೆಲಿಕಾಂ ನಿರ್ವಾಹಕರು ಸರಕಾರಕ್ಕೆ 1.42 ಲಕ್ಷ ಕೋಟಿ ರೂ. ಪಾವತಿಸಬೇಕು ಎಂದು ಕಳೆದ ವಾರ ಸುಪ್ರೀಂಕೋರ್ಟ್ ಆದೇಶಿಸಿತ್ತು.

ಒಟ್ಟು ಆದಾಯ ಹೊಂದಾಣಿಕೆ (ಎಜಸ್ಟೆಡ್ ಗ್ರಾಸ್ ರೆವೆನ್ಯೂ) ಕುರಿತ ಸರಕಾರದ ನಿಲುವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಬಾಡಿಗೆ, ಇಂಟರ್‌ನೆಟ್ ಆದಾಯ ಹಾಗೂ ಡಿವಿಡೆಂಡ್ ಆದಾಯವನ್ನು ಒಟ್ಟು ಆದಾಯ ಹೊಂದಾಣಿಕೆಯಿಂದ ಹೊರಗಿಡಬೇಕು ಎಂಬುದು ಟೆಲಿಕಾಂ ಸಂಸ್ಥೆಗಳ ವಾದವಾಗಿದೆ.

ಲೈಸೆನ್ಸ್ ಶುಲ್ಕ ಮತ್ತು ತರಂಗಾಂತರ ಬಳಕೆಯ ಶುಲ್ಕವಾಗಿ ಏರ್‌ಟೆಲ್ ಸಂಸ್ಥೆ 42000 ಕೋಟಿ ರೂ, ವೊಡಾಫೋನ್- ಐಡಿಯಾ ಸಂಸ್ಥೆ 40,000 ಕೋಟಿ ರೂ, ರಿಲಯನ್ಸ್ ಕಮ್ಯುನಿಕೇಶನ್(ಆರ್‌ಕಾಮ್) ಸಂಸ್ಥೆ ಸುಮಾರು 14,000 ಕೋಟಿ ರೂ.ಯನ್ನು ಸರಕಾರಕ್ಕೆ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ಮಧ್ಯೆ, ಏರ್‌ಟೆಲ್‌ನ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹಾಗೂ ಅವರ ಸಹೋದರ ರಾಜನ್ ಮಿತ್ತಲ್ ಸೋಮವಾರ ದೂರಸಂಪರ್ಕ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಕಾರ್ಯದರ್ಶಿ ಅಂಶುಪ್ರಕಾಶ್‌ರನ್ನು ಭೇಟಿ ಮಾಡಿದ್ದಾರೆ. ಸರಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಬಡ್ಡಿ ಮತ್ತು ದಂಡದ ಮೊತ್ತವನ್ನು ಮನ್ನಾ ಮಾಡಬೇಕು ಎಂದವರು ಒತ್ತಾಯಿಸಿದ್ದು ತೀರ್ಪು ಪರಿಶೀಲನೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆಯೂ ಸುಳಿವು ನೀಡಿದ್ದಾರೆ.

ಟೆಲಿಕಾಂ ಸೇವೆ ಒದಗಿಸುವ ಸಂಸ್ಥೆ(ಟಿಎಸ್‌ಪಿ)ಗಳು ಆರಂಭದಲ್ಲಿ ನಿಗದಿತ ಲೈಸೆನ್ಸ್ ಶುಲ್ಕ ಪಾವತಿಸಬೇಕಿತ್ತು. 1999ರಲ್ಲಿ ಸರಕಾರ ‘ ಸ್ಥಾನಾಂತರ ಪ್ಯಾಕೇಜ್’ ಎಂಬ ನೂತನ ಪ್ಯಾಕೇಜ್ ಘೋಷಿಸಿತು . ಈ ಪ್ಯಾಕೇಜ್‌ನಡಿ, ಟಿಎಸ್‌ಪಿಗಳಿಗೆ ನಿಗದಿತ ಲೈಸೆನ್ಸ್ ಶುಲ್ಕದ ಬದಲು ಆದಾಯ ಹಂಚಿಕೆ ಶುಲ್ಕ(ಗಳಿಕೆಯ ಆಧಾರದಲ್ಲಿ ಪಾವತಿ) ಸೂತ್ರವನ್ನು ಪ್ರಸ್ತಾಪಿಸಲಾಗಿತ್ತು. ಇದನ್ನು ಟಿಎಸ್‌ಪಿಗಳು ನಿಶ್ಯರ್ಥವಾಗಿ ಒಪ್ಪಿಕೊಂಡವು. ಇದರಂತೆ 1999ರ ಜುಲೈ 31ರವರೆಗಿನ ಲೈಸೆನ್ಸ್ ಶುಲ್ಕ ಹಾಗೂ ಸ್ಥಾನಾಂತರದ ದಿನದವರೆಗಿನ ಬಡ್ಡಿಯನ್ನು ಟಿಎಸ್‌ಪಿಗಳು ಪಾವತಿಸಿವೆ.

 ಇದೀಗ ಸುಪ್ರೀಂಕೋರ್ಟ್ ಆದೇಶದ ಬಳಿಕ ಏರ್‌ಟೆಲ್, ವೊಡಾಫೋನ್ ಸಂಸ್ಥೆಗಳ ಅಧಿಕಾರಿಗಳು ಸರಕಾರದ ನೆರವು ಕೋರಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅಲ್ಲದೆ, 5ಜಿ ತರಂಗಗುಚ್ಛಗಳ ಹರಾಜಿನಲ್ಲಿ ಭಾಗವಹಿಸದಿರಲು ತೀರ್ಮಾನಿಸಲಾಗಿದೆ. ಸರಕಾರಿ ಸ್ವಾಮ್ಯದ ಬಿಎಸ್ಸೆಎನ್ನೆಲ್ ಮತ್ತು ಎಂಟಿಎನ್ನೆಲ್ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ , ಸಂವಹನ ಕ್ಷೇತ್ರದಲ್ಲಿ ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕವಾಗಿರುವ 5 ಜಿ ತರಂಗಗುಚ್ಛಗಳ ಹರಾಜಿನಲ್ಲಿ ಭಾಗವಹಿಸುವುದು ನಮ್ಮ ಆದ್ಯತೆಯಿಲ್ಲ. ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸುವುದು ಕಾರ್ಯಸಾಧ್ಯವೇ ಎಂಬ ಬಗ್ಗೆ ಮೊದಲು ನಿರ್ಧರಿಸಬೇಕಿದೆ ಎಂದು ಭಾರ್ತಿ ಏರ್‌ಟೆಲ್ ಮತ್ತು ವೊಡಫೋನ್ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News