ನೀವು ಅತಿಯಾಗಿ ಮಾಂಸ ಸೇವಿಸಿದರೆ ನಿಮ್ಮ ಶರೀರದಲ್ಲಿ ಏನಾಗುತ್ತದೆ ಗೊತ್ತೇ?

Update: 2019-10-29 17:24 GMT

ಮಾಂಸ ಪ್ರೋಟಿನ್ ಮತ್ತು ಆರೋಗ್ಯಕರ ಕೊಬ್ಬುಗಳ ಅತ್ಯುತ್ತಮ ಮೂಲವಾಗಿದೆ. ನಮ್ಮ ಶರೀರವು ಸುಗಮವಾಗಿ ಕಾರ್ಯ ನಿರ್ವಹಿಸಲು ಇವೆರಡೂ ಪೋಷಕಾಂಶಗಳು ಅಗತ್ಯವಾಗಿವೆ ಮತ್ತು ಇದೇ ಕಾರಣದಿಂದ ಮಾಂಸ ನಮ್ಮ ಆಹಾರದ ಭಾಗವಾಗಿರಬೇಕು. ಆದರೆ ಮಾಂಸವನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸಿದರೆ ನಮ್ಮ ಶರೀರದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಇಲ್ಲಿದೆ ಈ ಕುರಿತು ಮಾಹಿತಿ.....

ಮಾಂಸವು ಅಧಿಕ ಪ್ರಮಾಣದಲ್ಲಿ ಪ್ರೋಟಿನ್ ಅನ್ನು ಒಳಗೊಂಡಿರುತ್ತದೆ ಮತ್ತು ಇದು ಎಲ್ಲ ವಿಧದ ಶರೀರಗಳಿಗೆ ಸೂಕ್ತ ಎಂದೇನೂ ಇಲ್ಲ ಮತ್ತು ಚಯಾಪಚಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದು. ಅತಿಯಾದ ಮಾಂಸ ಸೇವನೆ ಕೆಲವರಲ್ಲಿ ಯಾವುದೇ ಸಮಸ್ಯೆಯನ್ನುಂಟು ಮಾಡದಿರಬಹುದು,ಕೆಲವರಿಗೆ ನೋವು ಮತ್ತು ಅಹಿತಕರ ಅನುಭವವಾಗಬಹುದು.

ನಾವು ಅತಿಯಾಗಿ ಮಾಂಸವನ್ನು ಸೇವಿಸಿದಾಗ ಅದನ್ನು ಸಂಸ್ಕರಿಸಲು ಶರೀರಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಸೂಚಿಸುವ ಕೆಲವು ಲಕ್ಷಣಗಳು.

►ಹೊಟ್ಟೆಯುಬ್ಬರ

ಮಾಂಸ ಸೇವನೆಯ ಬಳಿಕ ಹೊಟ್ಟೆಯುಬ್ಬರವುಂಟಾದರೆ ಅದು ಆಹಾರವು ಸರಿಯಾಗಿ ಜೀರ್ಣಗೊಂಡಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಮಾಂಸ ಸೇವನೆಯ ಬಳಿಕ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದರೆ ನಿಮ್ಮ ಆಹಾರಕ್ರಮದಿಂದ ಅದನ್ನು ತೆಗೆದುಬಿಡಿ. ಉಬ್ಬರವು ಹೆಚ್ಚಾಗಿ ಹೊಟ್ಟೆನೋವು,ಕಿರಿಕಿರಿ ಮತ್ತು ಹೊಟ್ಟೆ ತುಂಬಿದೆ ಎಂಬ ಭಾವನೆಯನ್ನು ಉಂಟು ಮಾಡುತ್ತದೆ.

►ಮಲಬದ್ಧತೆ

ಮಾಂಸ,ವಿಶೇಷವಾಗಿ ಕೆಂಪು ಮಾಂಸವು ಕಡಿಮೆ ನಾರನ್ನು ಒಳಗೊಂಡಿರುತ್ತದೆ ಮತ್ತು ಇದು ಮಲಬದ್ಧತೆಯುಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಕೆಂಪು ಮಾಂಸವು ಅಧಿಕ ಕೊಬ್ಬನ್ನು ಹೊಂದಿರುತ್ತದೆ ಮತ್ತು ಅಧಿಕ ಕೊಬ್ಬನ್ನು ಒಳಗೊಂಡಿರುವ ಆಹಾರಗಳು ಜೀರ್ಣಗೊಳ್ಳಲು ತುಂಬ ಸಮಯ ಬೇಕಾಗುತ್ತದೆ. ಇದು ಅಜೀರ್ಣ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ

►ಕೆಟ್ಟ ಉಸಿರು

ಅಧಿಕ ಪ್ರೋಟಿನ್ ಅನ್ನು ಒಳಗೊಂಡ ಮಾಂಸದಂತಹ ಆಹಾರಗಳನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸುವುದು ಕೆಟ್ಟ ಉಸಿರಿಗೆ ಕಾರಣವಾಗಬಹುದು. ಕಿಟೊಸಿಸ್ ಎಂಬ ಚಯಾಪಚಯ ಸ್ಥಿತಿಯನ್ನು ನಮ್ಮ ಶರೀರವು ತಲುಪಿದಾಗ ಕೆಟ್ಟ ಉಸಿರು ಉಂಟಾಗುತ್ತದೆ. ಕಿಟೊಸಿಸ್ ಅಹಿತಕರ,ಕೊಳೆತ ಹಣ್ಣಿನ ವಾಸನೆಯನ್ನು ನೀಡುವ ರಾಸಾಯನಿಕಗಳನ್ನು ಬಿಡುಗಡೆಗೊಳಿಸುವುದು ಇದಕ್ಕೆ ಕಾರಣ.

►ಬಳಲಿಕೆ

ಅಧಿಕ ಪ್ರೋಟಿನ್ ಅನ್ನು ಒಳಗೊಂಡಿರುವ ಆಹಾರಗಳಲ್ಲಿ ಟ್ರಿಪ್ಟೊಫ್ಯಾನ್ ಎಂಬ ಅಮಿನೊ ಆ್ಯಸಿಡ್ ಇರುತ್ತದೆ. ಇದನ್ನು ಶರೀರವು ಸೆರಿಟೋನಿನ್ ಅನ್ನು ಉತ್ಪಾದಿಸಲು ಬಳಸಿಕೊಳ್ಳುತ್ತದೆ ಮತ್ತು ಈ ಸೆರೊಟೋನಿನ್ ದಣಿವು ಮತ್ತು ಅರೆ ನಿದ್ರಾವಸ್ಥೆಗೆ ಕಾರಣವಾಗುತ್ತದೆ.

►ವಾಕರಿಕೆ

ಅತಿಯಾಗಿ ಮಾಂಸವನ್ನು ಸೇವಿಸುವವರಲ್ಲಿ ದೊಡ್ಡಕರುಳಿನ ಹಿಂಭಾಗದಲ್ಲಿ ಉರಿಯೂತವುಂಟಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಇದು ತೀವ್ರ ಹೊಟ್ಟೆನೋವು ಮತ್ತು ವಾಕರಿಕೆಯನ್ನುಂಟು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News