×
Ad

ಕಾಶ್ಮೀರ ವಿಷಯದಲ್ಲಿ ಭಾರತವನ್ನು ಬೆಂಬಲಿಸುವ ದೇಶಗಳ ಮೇಲೆ ಕ್ಷಿಪಣಿ ದಾಳಿ: ಪಾಕ್ ಸಚಿವನ ವಿವಾದಾತ್ಮಕ ಹೇಳಿಕೆ

Update: 2019-10-30 22:17 IST

ಇಸ್ಲಾಮಾಬಾದ್, ಅ. 30: ಕಾಶ್ಮೀರ ವಿಷಯದಲ್ಲಿ ಭಾರತವನ್ನು ಬೆಂಬಲಿಸುವ ಯಾವುದೇ ದೇಶದ ಮೇಲೆ ಪಾಕಿಸ್ತಾನವು ಕ್ಷಿಪಣಿ ಹಾರಿಸುತ್ತದೆ ಹಾಗೂ ಆ ದೇಶವನ್ನು ಶತ್ರು ಎಂಬುದಾಗಿ ಪರಿಗಣಿಸುತ್ತದೆ ಎಂದು ಪಾಕಿಸ್ತಾನದ ಕಾಶ್ಮೀರ ವ್ಯವಹಾರಗಳ ಸಚಿವ ಅಲಿ ಅಮೀನ್ ಗಂದಾಪುರ್ ಹೇಳಿದ್ದಾರೆ.

‘‘ಕಾಶ್ಮೀರ ವಿಷಯದಲ್ಲಿ ಭಾರತದೊಂದಿಗಿನ ಉದ್ವಿಗ್ನತೆ ತಾರಕಕ್ಕೇರಿದರೆ, ಭಾರತದೊಂದಿಗೆ ಯುದ್ಧ ನಡೆಸುವ ಅನಿವಾರ್ಯತೆಗೆ ಪಾಕಿಸ್ತಾನ ಒಳಗಾಗುತ್ತದೆ. ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸದೆ ಭಾರತವನ್ನು ಬೆಂಬಲಿಸುವ ದೇಶಗಳನ್ನು ನಮ್ಮ ವೈರಿ ಎಂಬುದಾಗಿ ಪರಿಗಣಿಸಲಾಗುವುದು ಹಾಗೂ ಕ್ಷಿಪಣಿಯೊಂದನ್ನು ಭಾರತದತ್ತ ಮತ್ತು ಅದನ್ನು ಬೆಂಬಲಿಸುವ ದೇಶಗಳತ್ತ ಹಾರಿಸಲಾಗುವುದು’’ ಎಂದು ಮಂಗಳವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಹೇಳಿದರು.

ಸಚಿವರ ಈ ಪ್ರಚೋದನಕಾರಿ ಹೇಳಿಕೆಗಳನ್ನು ಒಳಗೊಂಡ ವೀಡಿಯೊದ ತುಣುಕೊಂದನ್ನು ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರದ ವಿಷಯದಲ್ಲಿ ದಿನೇ ದಿನೇ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಟೀಕೆಗೆ ಒಳಗಾಗುತ್ತಿರುವಂತೆಯೇ, ಪಾಕ್ ಸಚಿವ ಈ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

 ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ಭಾರತ ಸರಕಾರ ಸುಮಾರು ಮೂರು ತಿಂಗಳ ಹಿಂದೆ ರದ್ದುಪಡಿಸಿದ ಬಳಿಕ, ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಪಾಕಿಸ್ತಾನ ಏಕಪಕ್ಷೀಯವಾಗಿ ಕೆಳದರ್ಜೆಗಿಳಿಸಿತ್ತು. ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಪಾಕಿಸ್ತಾನ, ಭಾರತದಲ್ಲಿದ್ದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News