×
Ad

ಡಿ. 12ರಂದು ಚುನಾವಣೆ ನಡೆಸಲು ಬ್ರಿಟಿಶ್ ಸಂಸದರ ಒಪ್ಪಿಗೆ

Update: 2019-10-30 22:44 IST

ಲಂಡನ್, ಅ. 30: ಡಿಸೆಂಬರ್ 12ರಂದು ಮಧ್ಯಂತರ ಚುನಾವಣೆಯನ್ನು ನಡೆಸುವ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್‌ರ ಪ್ರಸ್ತಾವಕ್ಕೆ ಬ್ರಿಟಿಶ್ ಸಂಸದರು ಮಂಗಳವಾರ ಒಪ್ಪಿಗೆ ನೀಡಿದ್ದಾರೆ. ಬ್ರೆಕ್ಸಿಟ್ ಮೂರು ಬಾರಿ ವಿಳಂಬಗೊಳ್ಳಲು ಕಾರಣವಾದ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸಲು ಪ್ರಯತ್ನವಾಗಿ ಚುನಾವಣೆ ನಡೆಸುವ ಪ್ರಧಾನಿಯ ಇಂಗಿತವನ್ನು ಸಂಸದರು ಬೆಂಬಲಿಸಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದನ್ನು (ಬ್ರೆಕ್ಸಿಟ್) ಜನವರಿ 31ರವರೆಗೆ ಮುಂದೂಡಲು ಐರೋಪ್ಯ ಒಕ್ಕೂಟ ಔಪಚಾರಿಕವಾಗಿ ಒಪ್ಪಿದ ಗಂಟೆಗಳ ಬಳಿಕ, ನಾಲ್ಕು ವರ್ಷಗಳಲ್ಲಿ ಮೂರನೇ ಚುನಾವಣೆಗೆ ಸಂಸತ್ತು ಅಂಗೀಕಾರ ನೀಡಿತು.

ಜನಮತ ಸಮೀಕ್ಷೆಯಲ್ಲಿ ಜಾನ್ಸನ್‌ರ ಕನ್ಸರ್ವೇಟಿವ್ ಪಕ್ಷವು ಪ್ರತಿಪಕ್ಷ ಲೇಬರ್ ಪಕ್ಷಕ್ಕಿಂತ ಜನಪ್ರಿಯತೆಯಲ್ಲಿ ಮುಂದಿದೆ. ಹಾಗಾಗಿ, ತನ್ನ ಬ್ರೆಕ್ಸಿಟ್ ಯೋಜನೆಯನ್ನು ಜಾರಿಗೆ ತರಲು ಕೆಳಮನೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತ ಗೆಲ್ಲುವ ಭರವಸೆಯನ್ನು ಅವರು ಹೊಂದಿದ್ದಾರೆ.

ಆದರೆ, ಯಾವುದೇ ಬೆಲೆ ತೆತ್ತಾದರೂ ಅಕ್ಟೋಬರ್ 31ರ ಗಡುವಿನೊಳಗೆ ಐರೋಪ್ಯ ಒಕ್ಕೂಟದಿಂದ ಹೊರಬರುವುದಾಗಿ ಮಾಡಿರುವ ಪ್ರತಿಜ್ಞೆಯನ್ನು ಈಡೇರಿಸಲು ಬೊರಿಸ್ ವಿಫಲರಾಗಿರುವುದು ಅವರಿಗೆ ಹಿನ್ನಡೆಯಾಗುವುದೆಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News