ಕಂಟೇನರ್‌ನಲ್ಲಿ 39 ಶವಗಳ ಪತ್ತೆ ಪ್ರಕರಣ: ಸಹೋದರರಿಗಾಗಿ ಬ್ರಿಟನ್ ಪೊಲೀಸರ ಶೋಧ
ಲಂಡನ್, ಅ. 30: ಲಂಡನ್‌ನಲ್ಲಿ ಕಳೆದ ವಾರ ಟ್ರಕ್ ಕಂಟೇನರ್‌ನಲ್ಲಿ ಪತ್ತೆಯಾದ 39 ಮೃತದೇಹಗಳ ಬಗ್ಗೆ ತನಿಖೆ ನಡೆಸುತ್ತಿರುವ ಬ್ರಿಟಿಶ್ ಪೊಲೀಸರು, ನಾರ್ದರ್ನ್ ಐರ್‌ಲ್ಯಾಂಡ್‌ನ ಇಬ್ಬರು ಸಹೋದರರಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ತನಿಖೆಯಲ್ಲಿ ಇವರಿಬ್ಬರು ಅಗತ್ಯವಾಗಿ ಬೇಕಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಶೀತಲೀಕೃತ ಕಂಟೇನರ್‌ನಲ್ಲಿ ಪತ್ತೆಯಾದ 39 ಶವಗಳು, ಏಶ್ಯ, ಆಫ್ರಿಕ ಮತ್ತು ಮಧ್ಯ ಪ್ರಾಚ್ಯಗಳ ಬಡವರು ಜೀವದ ಹಂಗು ತೊರೆದು ಅಪಾಯಕಾರಿ ರೀತಿಗಳಲ್ಲಿ ಬ್ರಿಟನ್ ಪ್ರವೇಶಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ತೆರೆದಿಟ್ಟಿದೆ.
31 ಪುರುಷರು ಮತ್ತು ಎಂಟು ಮಹಿಳೆಯರ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ, ಗುರುತು ಪತ್ತೆ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದಾಗಿ ವಿಯೆಟ್ನಾಮ್ ಹೇಳಿದೆ. ಮೃತರಲ್ಲಿ ಹೆಚ್ಚಿನವರು ತನ್ನ ಪ್ರಜೆಗಳು ಎಂಬ ಭೀತಿಯನ್ನು ಅದು ವ್ಯಕ್ತಪಡಿಸಿದೆ.
ಹತ್ಯೆ ಮತ್ತು ಮಾನವ ಕಳ್ಳಸಾಗಣೆ ಆರೋಪಗಳನ್ನು ಹೊತ್ತಿರುವ 40 ಮತ್ತು 34 ವರ್ಷದ ಸಹೋದರರನ್ನು ತನಿಖೆಗೆ ಗುರಿಪಡಿಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.