ಆಸ್ಟ್ರೇಲಿಯದ ಸಹಾಯಕ ಕೋಚ್ ಆಗಿ ಆ್ಯಂಡ್ರೂ ಮೆಕ್‌ಡೊನಾಲ್ಡ್ ಆಯ್ಕೆ

Update: 2019-10-31 06:34 GMT

ಸಿಡ್ನಿ, ಅ.30: ಆಸ್ಟ್ರೇಲಿಯದ ಪುರುಷರ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ವಿಕ್ಟೋರಿಯದ ಆ್ಯಂಡ್ರೂ ಮೆಕ್‌ಡೊನಾಲ್ಡ್ ನೇಮಕಗೊಂಡಿದ್ದಾರೆ. ಇವರು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್‌ಗೆ ಕೋಚಿಂಗ್‌ನಲ್ಲಿ ನೆರವಾಗಲಿದ್ದಾರೆ.

ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್‌ರಂತಹ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸಿದ್ದ ಡೇವಿಡ್ ಸರ್ಕಾರ್ ಫೆಬ್ರವರಿಯಲ್ಲಿ ಸಹಾಯಕ ಕೋಚ್ ಸ್ಥಾನ ತ್ಯಜಿಸಿದ್ದರು. ‘‘ಮೆಕ್‌ಡೊನಾಲ್ಡ್ ಆಲ್‌ರೌಂಡ್ ಜ್ಞಾನದ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಅವರ ಕೌಶಲ್ಯತೆ ನಮ್ಮ ತಂಡಕ್ಕೆ ಅನುಕೂಲಕರವಾಗಲಿದೆ. ಕೋಚ್ ಆಗಿ ಆಯ್ಕೆಯಾದ ಕೆಲವೇ ಸಮಯದಲ್ಲಿ ತನ್ನ ಬದ್ದತೆ ಹಾಗೂ ಕ್ರಿಕೆಟ್‌ನಲ್ಲಿನ ಜ್ಞಾನದ ಮೂಲಕ ವಿಶ್ವದೆಲ್ಲೆಡೆ ತನ್ನ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ ಎಂದು 38ರ ಹರೆಯದ ಮೆಕ್‌ಡೊನಾಲ್ಡ್ ಬಗ್ಗೆ ಲ್ಯಾಂಗರ್ ಪ್ರತಿಕ್ರಿಯಿಸಿದರು.

 ಮೆಕ್‌ಡೊನಾಲ್ಡ್ ಕಳೆದ ಋತುವಿನಲ್ಲಿ ವಿಕ್ಟೋರಿಯ ಹಾಗೂ ಮೆಲ್ಬೋರ್ನ್ ತಂಡಗಳು ಎಲ್ಲ ಮೂರು ದೇಶೀಯ ಪ್ರಶಸ್ತಿ ಜಯಿಸಲು ಮಾರ್ಗದರ್ಶನ ನೀಡಿದ್ದರು. ಆಸೀಸ್‌ನ ಈಗಿನ ಆಟಗಾರರಾದ ಆ್ಯರೊನ್ ಫಿಂಚ್, ಮಾರ್ಕಸ್ ಹ್ಯಾರಿಸ್ ಹಾಗೂ ಜೇಮ್ಸ್ ಪ್ಯಾಟಿನ್ಸನ್‌ರೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಬ್ರಿಟನ್ ಹಾಗೂ ಭಾರತದಲ್ಲಿ ಕೋಚ್ ನೀಡಿದ್ದಾರೆ. 15 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದ ಮೆಕ್‌ಡೊನಾಲ್ಡ್ ಆಸ್ಟ್ರೇಲಿಯದ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News