ಹೌದು, ಕಾಶ್ಮೀರ ಶಾಂತವಾಗಿದೆ!

Update: 2019-11-01 05:55 GMT

ಕಾಶ್ಮೀರದಲ್ಲಿ ಶಾಂತಿಯನ್ನು ಕಾಪಾಡಲು ಕೇಂದ್ರ ಸರಕಾರ ಸತತ ಪ್ರಯತ್ನವನ್ನು ನಡೆಸುತ್ತಲೇ ಇದೆ. ಅದರ ಭಾಗವಾಗಿ ಮೊದಲು ಮಾಧ್ಯಮಗಳನ್ನು ನಿಷೇಧಿಸಲಾಯಿತು. ಮಾಧ್ಯಮಗಳಲ್ಲಿ ಕಾಶ್ಮೀರದ ಅಶಾಂತಿಯ ಕುರಿತಂತೆ ಯಾವುದೇ ಸುದ್ದಿಗಳು ಬಿತ್ತರವಾಗುವುದಿಲ್ಲವಾದುದರಿಂದ ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದಾಯಿತು. ಒಂದು ವೇಳೆ, ಅಲ್ಲಿ ಅಶಾಂತಿಯಿದ್ದಿದ್ದರೆ ಅಥವಾ ಅಲ್ಲಿನ ಜನರಿಗೆ ಸರಕಾರದ ಕುರಿತಂತೆ ಅಸಮಾಧಾನಗಳಿದ್ದಿದ್ದರೆ ಟಿವಿ, ಮಾಧ್ಯಮಗಳಲ್ಲಿ ಅದು ಪ್ರಕಟವಾಗುತ್ತಿತ್ತು. ಆದುದರಿಂದ ಇಡೀ ಭಾರತದ ಪಾಲಿಗೆ ಕಾಶ್ಮೀರ ನೆಮ್ಮದಿಯಿಂದಿದೆ. 370ನೇ ವಿಧಿ ತೆಗೆದು ಹಾಕಿರುವುದರಿಂದ ಅವರು ಸಂತೋಷ ಸಂಭ್ರಮದಲ್ಲಿದ್ದಾರೆ. ಇನ್ನು, ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಯಾಗುವುದು ಮಾನವ ಹಕ್ಕು ಆಯೋಗದಿಂದ. ಅನಗತ್ಯವಾಗಿ ಹೇಳಿಕೆಗಳನ್ನು ನೀಡಿ ಅವರು ಜನರನ್ನು ಪ್ರಚೋದಿಸಬಹುದಾದುದರಿಂದ ಮಾನವ ಹಕ್ಕುಗಳಿಗೆ ಸಂಬಂಧಪಟ್ಟ ಎಲ್ಲ ಕಚೇರಿಗಳನ್ನು ಮುಚ್ಚಲಾಯಿತು. ಮಾಧ್ಯಮ ಕೇಂದ್ರಗಳಿಗೂ ಬೀಗ ಜಡಿಯಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಕಾಶ್ಮೀರದ ಪ್ರಮುಖ ನಾಯಕರೆಲ್ಲ ಇಂದಿಗೂ ಗೃಹ ಬಂಧನದಲ್ಲಿದ್ದಾರೆ.

ಒಂದು ವೇಳೆ ಅವರನ್ನು ಬಿಡುಗಡೆ ಮಾಡಿದ್ದೇ ಆದರೆ ಅವರೂ ಜನರಲ್ಲಿ ಸುಳ್ಳುಗಳನ್ನು ಬಿತ್ತಿ ಕಾಶ್ಮೀರದ ಶಾಂತಿಯನ್ನು ಕೆಡಿಸಬಹುದಾಗಿದೆ. ಅವರೆಲ್ಲರೂ ಕಾಶ್ಮೀರದ ನೆಲದವರೇ ಆಗಿದ್ದರೂ, ಕಾಶ್ಮೀರದ ಜನರ ಸ್ಥಿತಿಗತಿಗಳ ಕುರಿತಂತೆ ಮಾತನಾಡುವುದಕ್ಕೆ, ಅದನ್ನು ವೀಕ್ಷಿಸುವುದಕ್ಕೆ ಅಧಿಕಾರವಿಲ್ಲ. ಯಾಕೆಂದರೆ ಈಗ 370ನೇ ವಿಧಿ ತೆಗೆದು ಹಾಕಿರುವುದರಿಂದ, ಎಲ್ಲವನ್ನೂ ಕೇಂದ್ರವೇ ನೋಡಿಕೊಳ್ಳುತ್ತದೆ. ಕಾಶ್ಮೀರ ಪೂರ್ಣ ಪ್ರಮಾಣದಲ್ಲಿ ಭಾರತದ ಭಾಗವಾಗಿರುವುದರಿಂದ ಅಲ್ಲಿ ಶಾಂತಿ ನೆಲೆಸಿರಲೇಬೇಕು. ಹಾಗೆಂದು ದೇಶದ ವಿರೋಧ ಪಕ್ಷದ ನಾಯಕರಿಗೆ ಕಾಶ್ಮೀರದೊಳಗೆ ಮುಕ್ತ ಪ್ರವೇಶವಿಲ್ಲ. ಯಾಕೆಂದರೆ ಅವರೂ ಕಾಶ್ಮೀರದ ಶಾಂತಿಯನ್ನು ಕೆಡಿಸಬಹುದು. ಅಲ್ಲಿನ ಜನರಲ್ಲಿ ತಪ್ಪು ಮಾಹಿತಿಗಳನ್ನು ಬಿತ್ತಿ ಸರಕಾರದ ವಿರುದ್ಧ ದಂಗೆಯೇಳುವಂತೆ ಮಾಡಬಹುದು. ಸಂತೋಷ, ಸಂಭ್ರಮದಲ್ಲಿರುವ ಕಾಶ್ಮೀರ ಜನತೆಯ ಭದ್ರತೆಗಾಗಿ ಗಲ್ಲಿಗಲ್ಲಿಗಳಲ್ಲಿ ಸರಕಾರ ಸೇನೆಯನ್ನು ನಿಯೋಜಿಸಿದೆ. ಇದರಿಂದಾಗಿ ಅಲ್ಲಿನ ಜನರು ಉಗ್ರರಿಗೆ ಹೆದರದೇ ನಗರಗಳಲ್ಲಿ ಧೈರ್ಯದಿಂದ ಓಡಾಡುವಂತಾಗಿದೆ. ವ್ಯವಹಾರ, ವಹಿವಾಟು ನಡೆಸುವಂತಾಗಿದೆ.

370ನೇ ವಿಧಿರದ್ದಾದ ಬಳಿಕ ಕಾಶ್ಮೀರವು ಅಭಿವೃದ್ಧಿಯ ಕಡೆಗೆ ವೇಗವಾಗಿ ಹೆಜ್ಜೆಯಿಡುತ್ತಿದೆ. ಅಲ್ಲಿನ ವ್ಯಾಪಾರ ವಹಿವಾಟುಗಳು ಹೆಚ್ಚಿವೆ. ಆದರೂ ವಿಧಿ ರದ್ದಾದ ದಿನದಿಂದ, ಸುಮಾರು 25,000 ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಇದಕ್ಕೂ ಕಾಶ್ಮೀರದ 370 ವಿಧಿ ರದ್ದಿಗೂ ಯಾವುದೇ ಸಂಬಂಧವಿಲ್ಲ ಎಂದು ನಾವೆಲ್ಲ ನಂಬಿ ನಮ್ಮ ದೇಶಪ್ರೇಮವನ್ನು ಸಾಬೀತುಪಡಿಸಬೇಕು. ಕಾಶ್ಮೀರದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲೇ ಆರ್ಥಿಕ ಹಿಂಜರಿಕೆ ಇದೆ. ಹೀಗಿರುವಾಗ, ಕಾಶ್ಮೀರದಲ್ಲಿ ಕಳೆದ ಒಂದು ತಿಂಗಳಲ್ಲಿ 25,000 ಕೋಟಿ ರೂಪಾಯಿ ನಷ್ಟವಾಗಿರುವುದಕ್ಕೆ ಕೇಂದ್ರವನ್ನು ಹೊಣೆ ಮಾಡುವುದು ದೇಶದ್ರೋಹದ ಕೆಲಸವಾಗುತ್ತದೆ. ಇದೇ ಸಂದರ್ಭದಲ್ಲಿ ಹೊರಗಿನ ದೇಶಗಳು ‘ಕಾಶ್ಮೀರದಲ್ಲಿ ಶಾಂತಿ ಕಾಪಾಡಲು’ ಒತ್ತಡ ಹೇರುತ್ತಿವೆ. ಅವರನ್ನೆಲ್ಲ ವಿರೋಧ ಪಕ್ಷಗಳು ದಾರಿ ತಪ್ಪಿಸಿವೆ. ಅಮೆರಿಕ ಸಹಿತ ಹಲವು ದೇಶದ ರಾಜಕೀಯ ಮುಖಂಡರು ಕಾಶ್ಮೀರದ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ಮಕ್ಕಳು, ಅವರ ಶಿಕ್ಷಣ ಇತ್ಯಾದಿಗಳ ಬಗ್ಗೆ ವಿಶ್ವಸಂಸ್ಥೆಯೂ ಆತಂಕ ವ್ಯಕ್ತಪಡಿಸಿದೆ. ಭಾರತದ ಸುಪ್ರೀಂಕೋರ್ಟ್ ಕಾಶ್ಮೀರದ ಪ್ರಕರಣವನ್ನು ನಿಧಾನಗತಿಯಲ್ಲಿ ನಿಭಾಯಿಸುತ್ತಿದೆ ಎಂದು ವಿಶ್ವಸಂಸ್ಥೆ ಆರೋಪಿಸಿದೆ. ಆದರೆ ವಿಶ್ವಸಂಸ್ಥೆಯನ್ನು ಕೆಲವರು ದಾರಿ ತಪ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕವೂ ಸೇರಿದಂತೆ ವಿಶ್ವದ ಹಲವು ರಾಜಕೀಯ ನಾಯಕರು ಕಾಶ್ಮೀರ ಭೇಟಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಅಂತಹ ಭೇಟಿ, ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪವಾಗುತ್ತದೆ.

ಆದರೂ, ಆಧುನಿಕ ಕಾಶ್ಮೀರದ ಪ್ರವಾಸಕ್ಕಾಗಿ ಭಾರತವೇ ಐರೋಪ್ಯ ಒಕ್ಕೂಟದ ಕೆಲವು ಆಯ್ದ ಸದಸ್ಯರ ನಿಯೋಗವನ್ನು ಆಹ್ವಾನಿಸಿದೆ. ಭಾರತ ಸರಕಾರವೇ ಅವರನ್ನು ಆಹ್ವಾನಿಸಿರುವುದರಿಂದ, ಇದು ಭಾರತದ ಆಂತರಿಕ ವಿಷಯದಲ್ಲಿ ವಿದೇಶೀಯರ ಹಸ್ತಕ್ಷೇಪ ಎಂದು ತಿಳಿದುಕೊಳ್ಳುವುದು, ಬಣ್ಣಿಸುವುದು ತಪ್ಪಾಗುತ್ತದೆ. ಜೊತೆಗೆ ಅವರು ಅಲ್ಲಿಂದ ಅಧಿಕೃತವಾಗಿಯೇನೂ ಬಂದಿಲ್ಲ. ತಮ್ಮ ಸ್ವಯಂ ಇಚ್ಛೆಯಿಂದ ಆಗಮಿಸಿದ್ದಾರೆ. ಸರಕಾರವೂ ಅಧಿಕೃತವಾಗಿಯೇನೂ ಅವರನ್ನು ಆಹ್ವಾನಿಸಿಲ್ಲ. ಒಂದು ಖಾಸಗಿ ಆಹ್ವಾನ. ಜೊತೆಗೆ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎನ್ನುವುದು ಅವರಿಗೆ ಬಲವಾಗಿ ಮನವರಿಕೆಯಾದ ಬಳಿಕವೇ ಅವರನ್ನು ಕಾಶ್ಮೀರವನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಅವರನ್ನು ದಾರಿ ತಪ್ಪಿಸುವುದಕ್ಕೆ ಪತ್ರಕರ್ತರಾಗಲಿ, ಮಾನವ ಹಕ್ಕು ಸಂಘಟನೆಯಾಗಲಿ ಇಲ್ಲದೇ ಇರುವುದರಿಂದ ಅವರ ಭೇಟಿ, ಕಾಶ್ಮೀರದ ಕುರಿತಂತೆ ಇತರ ಭಾರತೀಯರೊಳಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ‘ನಮ್ಮದೇ ನೆಲದಲ್ಲಿ, ನಮ್ಮದೇ ನಾಯಕರಿಗೆ ಭೇಟಿ ಮಾಡಲು ಅವಕಾಶವಿಲ್ಲ. ಆದರೆ ಐರೋಪ್ಯ ಒಕ್ಕೂಟಕ್ಕೆ ಅವಕಾಶ ನೀಡಲಾಗಿದೆ. ಇದು ಅನ್ಯಾಯ’ ಎಂದು ಕೆಲವು ವಿರೋಧ ಪಕ್ಷ ನಾಯಕರು ಗದ್ದಲ ಎಬ್ಬಿಸುತ್ತಿದ್ದಾರೆ. ಇದೊಂದು ರೀತಿಯ ದ್ವಂದ್ವ ನೀತಿಯಾಗಿದೆ. ವಿದೇಶಿ ನಾಯಕರು ಕಾಶ್ಮೀರವನ್ನು ವೀಕ್ಷಿಸಿ ‘ಅಲ್ಲಿ ಎಲ್ಲ ಸರಿಯಿದೆ’ ಎಂದು ಹೇಳುತ್ತಿರುವಾಗ, ಭಾರತದೊಳಗಿರುವ ರಾಜಕೀಯ ನಾಯಕರು ‘ಕಾಶ್ಮೀರದಲ್ಲಿ ಸರಿಯಿಲ್ಲ’ ಎಂದು ಹೇಳುವುದು ಏನನ್ನು ಸೂಚಿಸುತ್ತದೆ? ಕನಿಷ್ಠ ವಿದೇಶೀ ನಾಯಕರಿಗೆ ಭಾರತದ ಬಗ್ಗೆ ಇರುವ ಪ್ರೀತಿ, ದೇಶದೊಳಗಿರುವ ರಾಜಕೀಯ ನಾಯಕರಿಗೆ ಇಲ್ಲ ಎನ್ನುವುದು ಸಾಬೀತಾಗುತ್ತದೆ.

ದೇಶದ ಮೇಲೆ ಪ್ರೀತಿಯಿಲ್ಲದವರನ್ನು ಕಾಶ್ಮೀರದೊಳಗೆ ಪ್ರವೇಶಿಸಲು ಬಿಟ್ಟರೆ, ಅವರು ಈಗ ಇರುವ ಕಾಶ್ಮೀರದ ಶಾಂತಿಯನ್ನು ಕೆಡಿಸುವುದರಲ್ಲಿ ಸಂಶಯವಿಲ್ಲ. ಆದುದರಿಂದಾಗಿ ಅವರಿಗೆ ಅವಕಾಶ ನೀಡುವುದು ಕಾಶ್ಮೀರದ ಜನರ ಬದುಕುವ ಹಕ್ಕನ್ನೇ ಕಿತ್ತುಕೊಂಡಂತಾಗುತ್ತದೆ. ಯಾವ ಕಾರಣಕ್ಕೂ ದೇಶದ ರಾಜಕೀಯ ನಾಯಕರಿಗಾಗಲಿ, ಕಾಶ್ಮೀರದೊಳಗಿರುವ ಅಲ್ಲಿನ ಸ್ಥಳೀಯ ನಾಯಕರಿಗಾಗಲಿ ಭೇಟಿಯ ಅವಕಾಶ ನೀಡಬಾರದು. ಇತ್ತೀಚೆಗೆ ಸ್ಥಳೀಯ ಚುನಾವಣೆ ಯಶಸ್ವಿಯಾಗಿ ನಡೆದಿರುವುದು ಕೂಡ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಅವರು ಭಾರತದ ನಿರ್ಧಾರವನ್ನು ಮನಃಪೂರ್ವಕವಾಗಿ ಒಪ್ಪಿರುವುದರ ಸಂಕೇತ ಇದಾಗಿದೆ. ನಿಜವಾದ ಅರ್ಥದಲ್ಲಿ ಇದು ಪ್ರಜಾಪ್ರಭುತ್ವದ ಗೆಲುವಾಗಿದೆ. ಕಾಶ್ಮೀರದಲ್ಲಿ ಮತದಾನಗಳು ನಡೆದೇ ಇಲ್ಲ ಎಂದು ಹೇಳಿ ಕೆಲವರು ಕಾಶ್ಮೀರದ ಶಾಂತಿಯನ್ನು ಕೆಡಿಸುತ್ತಿದ್ದಾರೆ. ಇದು ಇವಿಎಂ ತಿರುಚುವಿಕೆಯ ಆರೋಪದಷ್ಟೇ ಟೊಳ್ಳು. ಕಾಶ್ಮೀರದಲ್ಲಿ ಸಣ್ಣ ಅಪಸ್ವರವನ್ನೂ ಜನರು ಎತ್ತುತ್ತಿಲ್ಲ. ಅಲ್ಲಿ ಎಂತಹ ವೌನ ಆವರಿಸಿದೆ ಎಂದರೆ ಸೂಜಿ ಬಿದ್ದರೂ ಕೇಳಿಸುವಷ್ಟು. ಯಾವುದೇ ಸ್ಮಶಾನದಲ್ಲಿ ಇರದಷ್ಟು ವೌನ, ಶಾಂತಿಯನ್ನು ಕಾಶ್ಮೀರ ತನ್ನದಾಗಿಸಿದೆ. ಅದಕ್ಕಾಗಿ ನಾವು ಕಾಶ್ಮೀರದ ಜನತೆಯನ್ನು ಮತ್ತು ಕೇಂದ್ರ ಸರಕಾರವನ್ನು ಅಭಿನಂದಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News