"ಸೇನೆಯಲ್ಲಿ ವ್ಯಭಿಚಾರ, ಸಲಿಂಗಕಾಮ ಸಹಿಸೆವು"

Update: 2019-11-01 03:54 GMT

ಹೊಸದಿಲ್ಲಿ, ನ.1: ವ್ಯಭಿಚಾರ ಮತ್ತು ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ತೀರ್ಪು ನೀಡಿದ್ದರೂ, ಸೇನೆಯಲ್ಲಿರುವವರು ಇಂಥದ್ದು ಎಸಗುವುದನ್ನು ಸಹಿಸುವುದಿಲ್ಲ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ. ಸೇನೆಯ ಅಧಿಕಾರಿಗಳು ಹಾಗೂ ಸೈನಿಕರು ನಡತೆ ತಪ್ಪಿದರೆ ಸೇನಾ ಕಾಯ್ದೆ-1950ರ ಅನ್ವಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಆದರೆ 12 ಲಕ್ಷಕ್ಕೂ ಅಧಿಕ ಮಂದಿ ಸೇನಾ ಸಿಬ್ಬಂದಿ, ವ್ಯಭಿಚಾರ ಹಾಗೂ ಸಲಿಂಗಕಾಮಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಆಡಳಿತಾವಧಿಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳನ್ನು ಸುಪ್ರೀಂಕೋರ್ಟ್ ಅನೂರ್ಜಿತಗೊಳಿಸಿದ್ದನ್ನೇ ಗಟ್ಟಿ ಹಿಡಿದುಕೊಂಡಿದ್ದರು. ಇದರ ಪರಿಣಾಮವಾಗಿ ಕೆಲ ಕೋರ್ಟ್‌ ಮಾರ್ಷಲ್ ಪ್ರಕ್ರಿಯೆಗಳನ್ನು ಸಿವಿಲ್ ನ್ಯಾಯಾಲಯಗಳು ರದ್ದುಪಡಿಸಿದ್ದವು.

ಸುಪ್ರೀಂತೀರ್ಪಿನಿಂದ ಸೇನಾ ಸಿಬ್ಬಂದಿಯನ್ನು ಹೊರತುಪಡಿಸಬೇಕು ಎಂಬ ಬಗ್ಗೆ ಸುಪ್ರೀಂಕೋಟ್‌ಗೆ ಪರಾಮರ್ಶೆ ಅರ್ಜಿ ಸಲ್ಲಿಸಲಾಗುತ್ತದೆಯೇ ಎಂದು ಕೇಳಿದಾಗ ಸೇನೆಯ ನಿರ್ಗಮನ ಸಹಾಯಕ ಲೆಫ್ಟಿನೆಂಟ್ ಜನರಲ್ ಅಶ್ವನಿ ಕುಮಾರ್, "ನಾವು ಈಗಾಗಲೇ ಹಾಗೆ ಮಾಡಿಲ್ಲ ಎಂದು ನಿಮಗೆ ಗೊತ್ತಿದೆಯೇ" ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟಿನ ತೀರ್ಪು ಈ ನೆಲದ ಕಾನೂನು. ಅದನ್ನು ಸೇನೆ ಗೌರವಿಸುತ್ತದೆ. ಆದರೆ ಸುವ್ಯವಸ್ಥೆ ಮತ್ತು ಶಿಸ್ತಿನ ಸಲುವಾಗಿ ಸೇನೆ ಕೆಲ ನಿರ್ದಿಷ್ಟ ಸಂಹಿತೆಗಳನ್ನು ಅನುಸರಿಸುತ್ತದೆ. ಕೆಲವು ಕಾನೂನುಬದ್ಧವಾಗಿದ್ದರೂ ನೈತಿಕವಾಗಿರಲಾರದು ಎಂದು ವಿಶ್ಲೇಷಿಸಿದರು.

ಜನರಲ್ ಬಿಪಿನ್ ರಾವತ್ ಕಳೆದ ಜನವರಿಯಲ್ಲೇ ಈ ಸಂಬಂಧ ನಿರ್ಧಾರ ಸ್ಪಷ್ಟಪಡಿಸಿ, ಸೇನೆ ಈ ವಿಚಾರದಲ್ಲಿ ಸಂಪ್ರದಾಯವಾದಿ ನಿರ್ಧಾರಕ್ಕೆ ಬದ್ಧ. ಸಹಮತದ ಸಲಿಂಗಕಾಮಕ್ಕಾಗಲೀ, ವಿವಾಹೇತರ ಸಂಬಂಧಕ್ಕಾಗಲೀ ಅವಕಾಶವಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News