ಭಾರತ, ಪಾಕಿಸ್ತಾನ ಮಾತುಕತೆ ಮೂಲಕ ಕಾಶ್ಮೀರ ವಿವಾದ ನಿಭಾಯಿಸಬೇಕು

Update: 2019-11-01 17:13 GMT

ವಿಶ್ವಸಂಸ್ಥೆ, ನ. 1: ಭಾರತ ಮತ್ತು ಪಾಕಿಸ್ತಾನಗಳು ಮಾತುಕತೆಗಳ ಮೂಲಕ ಕಾಶ್ಮೀರ ವಿವಾದವನ್ನು ನಿಭಾಯಿಸಬೇಕು ಹಾಗೂ ಮಾನವಹಕ್ಕುಗಳಿಗೆ ಪೂರ್ಣ ಗೌರವವನ್ನು ನೀಡಬೇಕು ಎಂಬ ತನ್ನ ನಿಲುವನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಗುರುವಾರ ಪುನರುಚ್ಚರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯವು ಗುರುವಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಅಧಿಕೃತವಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಅವರು ಈ ಮನವಿ ಮಾಡಿದ್ದಾರೆ.

ಕಾಶ್ಮೀರದಲ್ಲಿನ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಮುಖ್ಯಸ್ಥರು ಕಳವಳ ಹೊಂದಿದ್ದಾರೆ ಹಾಗೂ ಮಾನವಹಕ್ಕುಗಳನ್ನು ಗೌರವಿಸಿದಾಗ ಮಾತ್ರ ಈ ವಿವಾದ ಬಗೆಹರಿಯುತ್ತದೆ ಎಂಬ ಸ್ಪಷ್ಟ ನಿಲುವನ್ನು ಹೊಂದಿದ್ದಾರೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥರ ಉಪ ವಕ್ತಾರ ಫರ್ಹಾನ್ ಹಕ್ ನುಡಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಹೊಂದಿದ ಸಂದರ್ಭದಲ್ಲಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿಯವರ ಹೇಳಿಕೆಯನ್ನು ಪತ್ರಕರ್ತರು ಬಯಸಿದಾಗ, ‘‘ಕಾಶ್ಮೀರದಲ್ಲಿನ ಪರಿಸ್ಥಿತಿಯ ಬಗ್ಗೆ ಗುಟೆರಸ್ ಈಗಾಗಲೇ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅದೇ ಕಳವಳವನ್ನು ಅವರು ಈಗಲೂ ಪುನರುಚ್ಚರಿಸುತ್ತಾರೆ. ನಿಮಗೆ ಗೊತ್ತಿರುವಂತೆ, ಕಾಶ್ಮೀರ ಪರಿಸ್ಥಿತಿಗೆ ಸಂಬಂಧಿಸಿ ಅವರು ಭಾರತ ಮತ್ತು ಪಾಕಿಸ್ತಾನಗಳ ಪ್ರತಿನಿಧಿಗಳನ್ನು ಈಗಾಗಲೇ ಭೇಟಿಯಾಗಿದ್ದಾರೆ’’ ಎಂದು ಫರ್ಹಾನ್ ಹಕ್ ಹೇಳಿದರು.

‘‘ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥರು ಭಾರತ ಮತ್ತು ಪಾಕಿಸ್ತಾನಗಳೆರಡಕ್ಕೂ ಮನವಿ ಮಾಡಿದ್ದಾರೆ ಹಾಗೂ ನಾವು, ಅದರಲ್ಲೂ ಮುಖ್ಯವಾಗಿ ಮಾನವಹಕ್ಕುಗಳ ಹೈಕಮಿಶನರ್ ಸ್ಪಷ್ಟಪಡಿಸಿರುವಂತೆ, ಮಾನವಹಕ್ಕುಗಳಿಗೆ ಪೂರ್ಣ ಗೌರವ ನೀಡುವ ಮೂಲಕ ಮಾತ್ರ ಕಾಶ್ಮೀರ ವಿಷಯವನ್ನು ಬಗೆಹರಿಸಬಹುದಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News