ಪಾಕ್: ಇಮ್ರಾನ್ ಸರಕಾರದ ವಿರುದ್ಧ ಬೃಹತ್ ‘ಆಝಾದಿ ಮೆರವಣಿಗೆ’

Update: 2019-11-01 17:28 GMT

ಇಸ್ಲಾಮಾಬಾದ್, ನ. 1: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಿರೋಧ ಪಕ್ಷದ ನಾಯಕರು ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2018ರ ಚುನಾವಣೆಯಲ್ಲಿ ‘ಭಾರೀ ಪ್ರಮಾಣದ ಅಕ್ರಮಗಳನ್ನು ನಡೆಸುವ’ ಮೂಲಕ ಅಧಿಕಾರಕ್ಕೆ ಬಂದಿರುವ ಅವರ ‘ನಕಲಿ’ ಸರಕಾರವನ್ನು ತೊಲಗಿಸುವ ಕಾಲ ಬಂದಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಪ್ರಭಾವಿ ಧಾರ್ಮಿಕ ನಾಯಕ ವೌಲಾನಾ ಫಝ್ಲುರ್ ರೆಹಮಾನ್‌ರ ಜಮೀಯತ್ ಉಲೇಮಾ-ಎ-ಇಸ್ಲಾಮ್-ಫಝ್ಲಾ (ಜೆಯುಐ-ಎಫ್) ಏರ್ಪಡಿಸಿರುವ ಸರಕಾರ ವಿರೋಧಿ ‘ಆಝಾದಿ ಮೆರವಣಿಗೆ’ಯ ಸಂದರ್ಭದಲ್ಲಿ ಅವರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮೌಲಾನಾ ಫಝ್ಲುರ್ ರೆಹಮಾನ್ ಜೊತೆಗೆ, ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಅವಾಮಿ ನ್ಯಾಶನಲ್ ಪಾರ್ಟಿಯ ನಾಯಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದರು.

‘‘ಈ ನಕಲಿ ಸರಕಾರವನ್ನು ಉರುಳಿಸುವ ಸಮಯ ಬಂದಿದೆ. ಇಮ್ರಾನ್ ಖಾನ್‌ರನ್ನು ಪಾಕಿಸ್ತಾನ ತೊಲಗಿಸುವವರೆಗೆ ನಾವು ವಿರಮಿಸುವುದಿಲ್ಲ’’ ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ ಪಕ್ಷದ ಅಧ್ಯಕ್ಷ ಶೆಹಬಾಝ್ ಶರೀಫ್ ಸಾವಿರಾರು ಮಂದಿಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News