ಸ್ಪೈವೇರ್ ಗಳು ಭಾರತದಲ್ಲಿ ಕಾರ್ಯಾಚರಿಸುತ್ತಿರುವುದು ಸರಕಾರಕ್ಕೆ ಗೊತ್ತಿತ್ತು: ಮಾಜಿ ಗೃಹ ಕಾರ್ಯದರ್ಶಿ ಪಿಳ್ಳೈ

Update: 2019-11-01 17:46 GMT

ಹೊಸದಿಲ್ಲಿ,ನ.1: ಇಸ್ರೇಲಿ ತಂತ್ರಜ್ಞಾನ ಸಂಸ್ಥೆ ಎನ್‌ಎಸ್‌ಒ ಭಾರತದಲ್ಲಿ ಕಾರ್ಯಾಚರಿಸುತ್ತಿದ್ದುದು ತನಗೆ ಗೊತ್ತಿತ್ತು ಮತ್ತು ಅದು ದೇಶದಲ್ಲಿಯ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಗೂಢಚರ್ಯೆ ತಂತ್ರಾಂಶಗಳನ್ನು ಮಾರಾಟ ಮಾಡಿತ್ತು ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅವರು ಹೇಳಿದ್ದಾರೆ.

ಸರಕಾರಿ ಏಜೆನ್ಸಿಗಳು ಹಿಂದೆಯೂ ಎನ್‌ಎಸ್‌ಒದಂತಹ ಸಂಸ್ಥೆಗಳಿಂದ ಸ್ಪೈವೇರ್‌ಗಳನ್ನು ಖರೀದಿಸಿವೆ ಎಂದು ಸುದ್ದಿ ಜಾಲತಾಣ ‘ದಿ ಕ್ವಿಂಟ್’ಗೆ ನೀಡಿರುವ ಸಂದರ್ಶನದಲ್ಲಿ ದೃಢಪಡಿಸಿರುವ ಪಿಳ್ಳೈ,ಇವೆಲ್ಲ ಸಾಮಾನ್ಯ ಎಂದು ಹೇಳಿದ್ದಾರೆ.

ಎನ್‌ಎಸ್‌ಒ ನಿರ್ಮಿತ ಸ್ಪೈವೇರ್ ‘ಪೆಗಾಸಸ್’ ಅನ್ನು ಕನಿಷ್ಠ ಎರಡು ಡಝನ್ ಭಾರತೀಯ ಸಾಮಾಜಿಕ ಹೋರಾಟಗಾರರು ಮತ್ತು ಮಾನವ ಹಕ್ಕುಗಳ ವಕೀಲರು ಸೇರಿದಂತೆ ವಿಶ್ವಾದ್ಯಂತ 1,400 ಜನರ ಖಾತೆಗಳನ್ನು ಹ್ಯಾಕ್ ಮಾಡಲು ಬಳಸಲಾಗಿತ್ತು ಎನ್ನುವುದನ್ನು ವಾಟ್ಸ್‌ಆ್ಯಪ್ ದೃಢಪಡಿಸಿದ ನಂತರ ತನ್ನನ್ನು ಸಂಪರ್ಕಿಸಿದ್ದ ‘ದಿ ಕ್ವಿಂಟ್‌’ಗೆ ‘ಪರವಾನಿಗೆ ಹೊಂದಿರುವ ಸರಕಾರಿ ಗುಪ್ತಚರ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ತಂತ್ರಜ್ಞಾನವನ್ನು ಒದಗಿಸುವುದು ತನ್ನ ಏಕಮಾತ್ರ ಉದ್ದೇಶವಾಗಿದೆ ’ಎಂದು ಎನ್‌ಎಸ್‌ಒ ತಿಳಿಸಿತ್ತು.

“ಭಾರತೀಯ ಪ್ರಜೆಗಳ ವಿರುದ್ಧ ಬೇಹುಗಾರಿಕೆ ನಡಸಲು ಸರಕಾರವು ಎನ್‌ಎಸ್‌ಒನಿಂದ ಪೆಗಾಸಸ್‌ನ್ನು ಖರೀದಿಸಿತ್ತೇ? ಅದನ್ನು ಕಾನೂನು ಸಮ್ಮತ ನಿಗಾಕ್ಕೆ ಬಳಸಬಹುದೇ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ.” ಎಂಬ ಪ್ರಶ್ನೆಗೆ ಉತ್ತರಿಸಿದ ಪಿಳ್ಳೈ,ಗುಪ್ತಚರ ವರದಿಗಳ ಮೂಲಕ ಗೃಹ ಕಾರ್ಯದರ್ಶಿಗಳಿಗೆ ಕೋರಿಕೆಯನ್ನು ಸಲ್ಲಿಸಿದಾಗ ಮತ್ತು ಅವರು ಅನುಮತಿಸಿದಾಗ ಮಾತ್ರ ಕಣ್ಗಾವಲನ್ನು ನಡೆಸಲಾಗುತ್ತದೆ. ರಾಜ್ಯ ಸರಕಾರಗಳೂ ಕಣ್ಗಾವಲು ಇರಿಸಲು ತಮ್ಮ ಪೊಲೀಸ್ ಪಡೆಗೆ ಅಧಿಕಾರ ನೀಡಬಹುದು. ವಿವಿಧ ರಾಜ್ಯಗಳ ಕಣ್ಗಾವಲಿಗೆ ಒಳಪಟ್ಟಿರುವ ವ್ಯಕ್ತಿಗಳ ಸಂಖ್ಯೆ ಕೇಂದ್ರ ಸರಕಾರದ ಕಣ್ಗಾವಲಿನ ಸಂಖ್ಯೆಗಿಂತ ಅಧಿಕವಾಗಿರುತ್ತದೆ ಎಂದು ತಿಳಿಸಿದರು.

   ತನ್ನ ಅಧಿಕಾರಾವಧಿ (2009-2011)ಯಲ್ಲಿ ಸುಮಾರು 4,000ದಿಂದ 8,000 ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಕೇಂದ್ರ ಸರಕಾರದ ಕಣ್ಗಾವಲಿಗೆ ಒಳಪಡಿಸಲಾಗಿತ್ತು ಎಂದೂ ಪಿಳ್ಳೈ ತಿಳಿಸಿದರು. ಯುಪಿಎ-2 ಸರಕಾರದಲ್ಲಿ ಪಿ.ಚಿದಂಬರಂ ಅವರು ಗೃಹಸಚಿವರಾಗಿ ನೇಮಕಗೊಂಡಾಗ ಪಿಳ್ಳೈ ಗೃಹ ಕಾರ್ಯದರ್ಶಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News