ಈ ಕ್ರೌರ್ಯದ ಕುರಿತಂತೆ ಏನು ಹೇಳುತ್ತೀರಿ?

Update: 2019-11-01 18:38 GMT

ಕೊಡಗಿನ ಚರಿತ್ರೆ ದಾಖಲಿಸುವ ಈ ಎರಡು ವೀರರ ಉದಾಹರಣೆಗಳು ಏನು ಹೇಳುತ್ತವೆ? ಟಿಪ್ಪುಸುಲ್ತಾನ್ ಮಾತ್ರ ಕೊಡಗು ಜನರನ್ನು ಕೊಂದಿದ್ದ ಎಂದು ಹೇಳುತ್ತವೆಯೇ? ಹಾಗೆ ನೋಡಿದರೆ ಟಿಪ್ಪುತನ್ನ ವೈಯಕ್ತಿಕ ತೆವಲು, ತಿಕ್ಕಲುತನಗಳಿಗೆ ಯಾರನ್ನೂ ಕೊಲ್ಲಲಿಲ್ಲ. ಅವರು ಹಿಂದೂಗಳಿರಲಿ, ಕೊಡವರಿರಲಿ, ಮುಸ್ಲಿಮರಿರಲಿ, ಕ್ರೈಸ್ತರಿರಲಿ ಯಾರು ತನ್ನ ಶತ್ರುಗಳಾದ ಬ್ರಿಟಿಷರ ಜೊತೆ ಕೈ ಮಿಲಾಯಿಸಿದ್ದರೋ ಅವರ ಮೇಲಷ್ಟೇ ಕ್ರಮ ತೆಗೆದುಕೊಂಡಿದ್ದ ಟಿಪ್ಪ್ಪು.


ಕೊಡಗಿನ ಶಾಸಕರಾದ ಅಪ್ಪಚ್ಚು ರಂಜನ್ ಅವರು ಟಿಪ್ಪುಕುರಿತು ಚರಿತ್ರೆ ಪುಸ್ತಕಗಳಲ್ಲಿ ಇರುವುದನ್ನು ತೆಗೆಯಲು ಸರಕಾರಕ್ಕೆ ಬೇಡಿಕೆ ಸಲ್ಲಿಸಿ ಅದರಂತೆ ಸರಕಾರ ಕ್ರಮ ತೆಗೆದುಕೊಳ್ಳ್ಳುವುದಾಗಿ ತಿಳಿದು ಬಂದಿದೆ. ಟಿಪ್ಪುಕೊಡವರ ಮೇಲೆ ಹಿಂಸೆ ನಡೆಸಿದ್ದ ಎಂಬುದು ಶಾಸಕರ ಮತ್ತು ಅನೇಕ ಕೊಡವ ಬಿಜೆಪಿಗರ ನಂಬಿಕೆ. ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದನ್ನು ಕೊಡವರೇ ಆದ ಎ.ಕೆ. ಸುಬ್ಬಯ್ಯ ಅವರು ಹಿಂದೊಮ್ಮೆ ಹೇಳಿದ್ದರು. ನಿಜವಾಗಿಯೂ ಪರಮತ ಸಹಿಷ್ಣುವಾಗಿದ್ದ, ಈ ನಾಡಿನ ಹೆಮ್ಮೆಯ ದೇಶಪ್ರೇಮಿ ರಾಜನಾಗಿದ್ದ ಟಿಪ್ಪುಸುಲ್ತಾನನು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನಡೆಸಿರುವ ಕೆಲವು ಕ್ರಮಗಳನ್ನು ಇಂದಿನ ಮತಾಂಧ ದೃಷ್ಟಿಕೋನದಲ್ಲಿ ನೋಡಿರುವುದು ಪರಿಣಾಮ ಇದು. ಬೇರೆ ಏನೂ ಅಲ್ಲ.

ಟಿಪ್ಪುಸುಲ್ತಾನನ ಕಾಲವನ್ನು ಇತಿಹಾಸದಿಂದ ಅಳಿಸಲು ಹೊರಟಿರುವ ಮಾನ್ಯ ಅಪ್ಪಚ್ಚು ರಂಜನ್ ಮತ್ತು ಬಿಜೆಪಿ ಸರಕಾರಕ್ಕೆ ಕೊಡಗು-ಮೈಸೂರಿನ ಇತಿಹಾಸದ ಈ ಕೆಳಗಿನ ದಾಖಲಾಗಿರುವ ಪುಟಗಳನ್ನು ದಯಮಾಡಿ ಸೇರಿಸಿಕೊಳ್ಳಿ ಎಂದು ಈ ಮೂಲಕ ವಿನಂತಿ. ಇದು ಟಿಪ್ಪುಸುಲ್ತಾನನ ವಿರುದ್ಧ ಬ್ರಿಟಿಷರೊಂದಿಗೆ ಮೈತ್ರಿ ಮಾಡಿಕೊಂಡು ಟಿಪ್ಪುಸುಲ್ತಾನನ ಸೋಲಿಗೆ ಕಾರಣಕರ್ತರಲ್ಲಿ ಒಬ್ಬನಾದ ಕೊಡಗಿನ ವೀರರಾಜ ಮತ್ತು ಅವನ ನಂತರ ಕೊಡಗನ್ನು ಆಳಿದ ಲಿಂಗರಾಜ - ಈ ಇಬ್ಬರ ಕುರಿತ ದಾಖಲಾಗಿರುವ ಲಿಖಿತ ಚರಿತ್ರೆ.
1799ರಲ್ಲಿ ಶ್ರೀರಂಗಪಟ್ಟಣ ಕದನದಲ್ಲಿ ಟಿಪ್ಪುಸುಲ್ತಾನನು ಮೀರ್ ಸಾದಿಕ್ ಎಂಬ ದ್ರೋಹಿಯ ಸಂಚಿನಿಂದಾಗಿ ರಣರಂಗದಲ್ಲೇ ಸಾವನ್ನಪ್ಪುತ್ತಾನೆ. ಇದರ ನಂತರ ಇಡೀ ಮೈಸೂರು ರಾಜ್ಯ ಬ್ರಿಟಿಷರ ಹಿಡಿತಕ್ಕೆ ಬರುತ್ತದೆ. ಬ್ರಿಟಿಷರಿಗೆ ಸಹಾಯ ಮಾಡಿದ್ದ ಕೊಡಗಿನ ಪಾಳಯಗಾರ (warlord) ವೀರರಾಜ ನಂತರ ಕೊಡಗಿನ ಆಡಳಿತ ನಡೆಸುತ್ತಾನೆ. ಈತನ ಆಡಳಿತದ ಕೊನೆಯ ದಿನಗಳಲ್ಲಿ ಏನಾಯಿತು ಎಂದು ‘‘ಮ್ಯಾನುಅಲ್ ಆಫ್ ಕೂರ್ಗ- ಎ ಗ್ಯಾಜೆಟಿಯರ್ (Manual of Coorg; a gazetter of the natural features of the country, and the social and political condition of its inhabitants) ಎಂಬ ಚಾರಿತ್ರಿಕ ದಾಖಲೆಯಲ್ಲಿ ದಾಖಲಾಗಿರುವುದು ಹೀಗೆ.

‘‘ಮಹಾದೇವರಾಣಿಯ ಸಾವಿನ ನಂತರ ವಿರಾಜೇಂದ್ರನ ಜೀವನದ ರಕ್ತಸಿಕ್ತವಾದಂತಹ ಕಡೆಯ ನಾಟಕೀಯ ಅಂಕ ಶುರುವಾಯಿತು. ಅವಳೊಂದಿಗೆ ಒಬ್ಬ ಮಗ ಮತ್ತು ಉತ್ತರಾಧಿಕಾರಿಯ ಆಸೆಯೂ ಮಣ್ಣುಗೂಡಿತು. ಆತ (ವಿರಾಜೇಂದ್ರ) ಆಕೆಯನ್ನು ಬಹಳ ಪ್ರೀತಿಸಿದ್ದ. ಬದುಕಿದ್ದರೆ ಅವಳು ಆತನನ್ನು ಒಳ್ಳೆಯವನನ್ನಾಗಿ ಮಾಡುತ್ತಿದ್ದಳೋ ಏನೋ, ಅವಳ ಸಾವು ಅವನನ್ನು ಹೆಚ್ಚುಕಡಿಮೆ ಹುಚ್ಚನನ್ನಾಗಿ ಮಾಡಿತು. ಒಂಟಿತನ ಅವನನ್ನು ಆವರಿಸಿಕೊಂಡಿತು. ಅವನನ್ನು ಪ್ರೀತಿಸಲಾಗಲೀ, ಸಮಾಧಾನಿಸಲಾಗಲೀ ಯಾರೂ ಇರಲಿಲ್ಲ.

ಮಹಾದೇವರಾಣಿ ನಾಲ್ವರು ಹೆಣ್ಣು ಮಕ್ಕಳನ್ನು ಬಿಟ್ಟು ಹೋಗಿದ್ದಳು. ಅವರಲ್ಲಿ ದೊಡ್ಡವಳಿಗೆ ಕೇವಲ ಎಂಟು ವಯಸ್ಸು. ಕಿರಿಯ ರಾಣಿಯಿಂದ ಗಂಡು ಮಗನನ್ನು ಪಡೆದು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಲು ವಿರಾಜೇಂದ್ರ ಯೋಚಿಸಿದನಾದರೂ ಕೊನೆಗೆ ಹಿರಿಯ ಮಗಳಾದ ದೇವಮ್ಮಾಜಿಯನ್ನೇ ಆಕೆ 9 ವರ್ಷದವಳಿದ್ದಾಗ ಮಲ್ಲಪ್ಪಎಂಬ ಕೊಡಗಿನವನಿಗೆ ಕೊಟ್ಟು ಮದುವೆ ಮಾಡಿದನು. ಆಕೆಗೆ ಗಂಡು ಮಗುವಾದರೆ ಅವನನ್ನೇ ಉತ್ತರಾಧಿಕಾರಿ ಮಾಡುವ ಉದ್ದೇಶ ಇದರಲ್ಲಿತ್ತು. ಈ ಹೊತ್ತಿಗೆ ವಿರಾಜೇಂದ್ರನ ಮನಸಿನಲ್ಲಿ ಸಂಶಯದ ಭೂತ ಹೊಕ್ಕಿತ್ತು. ಗುಪ್ತ ಶತ್ರುಗಳು ತನ್ನ ವಿರುದ್ಧ ಸಂಚು ಮಾಡುತ್ತಿದ್ದಾರೆ ಎಂಬ ಭಯದಲ್ಲಿ ದಿನವೂ ಬದುಕತೊಡಗಿದನು. ಹಿಂದೂಗಳನ್ನು ಅದರಲ್ಲೂ ಕೊಡವರನ್ನೇ ಅವನು ನಂಬದಂತಾಗಿ ದ್ವೇಷಿಸತೊಡಗಿದನು. ತನ್ನ ಹುಚ್ಚುತನಕ್ಕೋ, ತನ್ನ ಸಂಶಯದಿಂದಲೋ ಒಟ್ಟಿನಲ್ಲಿ ನೂರಾರು ತನ್ನ ಜನರನ್ನೇ ಕೊಂದು ಹಾಕಿದನು. ಆದರೆ ಅವನ ಕ್ರೌರ್ಯ ದಿನೇ ದಿನೇ ಹೆಚ್ಚುತ್ತಲೇ ಹೋಯಿತು. ಕೊನೆಗೆ ಇದೆಲ್ಲ ಒಂದು ಕ್ಲೈಮ್ಯಾಕ್ಸ್ ತಲುಪಿತು.

ರಾಜನು ಆಫ್ರಿಕ ಮೂಲದ ಅಂಗರಕ್ಷಕರನ್ನು ಇಟ್ಟುಕೊಳ್ಳತೊಡಗಿದನು. ಆದರೆ ಅರಮನೆಯ ಸೈನಿಕರಲ್ಲಿ, ರಕ್ಷಕ ಭಟರಲ್ಲಿ, ದಳಪತಿಗಳಲ್ಲಿ ಕೆಲವರನ್ನು ಹೊರತುಪಡಿಸಿದರೆ ಉಳಿದವರು ಕೊಡವರಾಗಿದ್ದರು. ಕಬ್ಬಿಣದ ನೊಗದ ಭಾರವನ್ನು ತಡೆಯಲಾಗದೇ ಅವರೆಲ್ಲಾ ರಾಜನನ್ನು ಮುಗಿಸಲು ಸಂಚು ಹೂಡಿದರು. ಯಾವ ದಿನ ಯಾವ ಗಳಿಕೆಯಲ್ಲಿ ರಾಜನ ತಲೆ ತೆಗೆಯುವುದು ಎಂದೂ ನಿಶ್ಚಿತವಾಗಿತ್ತು. ಕೋಟೆಯ ಬಾಗಿಲುಗಳನ್ನು ಮತ್ತು ಅರಮನೆಯ ಪ್ರವೇಶ ದ್ವಾರವನ್ನು ಹಿಡಿತಕ್ಕೆ ಪಡೆದುಕೊಂಡಿದ್ದ ಎಲ್ಲಾ ಕೊಡವ ಭಟರು ಒಪ್ಪಂದದಿಂದ ಸಂಚು ಹೂಡಿದ್ದರಿಂದ ವಿರಾಜೇಂದ್ರನ ಅಂತ್ಯ ಬಹುತೇಕ ಖಚಿತವಾಗಿತ್ತು. ಇನ್ನೇನು ರಾಜನ ತಲೆ ತೆಗೆಯಲು ಕೆಲವೇ ಕ್ಷಣಗಳು ಬಾಕಿ ಇರುವಾಗ ಯಾರೋ ಮಾಹಿತಿ ನೀಡಿ ಎಚ್ಚರಿಸಿದರು. ಕೂಡಲೇ ಓಡಿದ ವಿರಾಜೇಂದ್ರ ತನ್ನ ಆಫ್ರಿಕನ್ ಅಂಗರಕ್ಷಕರನ್ನು ಕರೆಸಿದ. ಕೋಟೆಗಳ ಬಾಗಿಲುಗಳನ್ನು ಮುಚ್ಚಲಾಯಿತು. ಸುಮಾರು 300 ಕೊಡವರನ್ನು ಅರಮನೆಯ ಅಂಗಳದಲ್ಲಿ ಸೇರಿಸಲಾಯಿತು. ಅವರ ತಲೆ ಕಡಿಯಲು ಆಫ್ರಿಕನ್ನರಿಗೆ ಆದೇಶ ನೀಡಲಾಯಿತು. ಸ್ವತಃ ರಾಜನೇ ಕಿಟಕಿಯ ಬಳಿ ನಿಂತು ಕೋವಿಯಿಂದ ಭಯಭೀತಗೊಂಡು ನಿಂತಿದ್ದ ಸಂಚುಕೋರರ ಮೇಲೆ ಗುಂಡು ಹಾರಿಸಿದ. ಅವರನ್ನೆಲ್ಲಾ ಕುರಿಗಳನ್ನು ಕೊಚ್ಚಿಹಾಕುವಂತೆ ಕೊಂದು ಹಾಕಲಾಯಿತು. ಸ್ವತಃ ತಾನೇ 20 ಜನರನ್ನು ಕೊಂದು ಹಾಕಿದ್ದಾಗಿ ವಿರಾಜೇಂದ್ರ ಹೊಗಳಿಕೊಂಡಿದ್ದ. ಮಿಕ್ಕವರ ತಲೆಗಳನ್ನು ಸಿದ್ದಿಗಳ ಕೈಯಲ್ಲಿನ ಖಡ್ಗಗಳಿಂದ ತರಿದು ಹಾಕಲಾಯಿತು. ಈ ಭೀಬತ್ಸವನ್ನು ಕಣ್ಣಾರೆ ನೋಡಿದ್ದ ಜಮಾದಾರ ವೃದ್ಧನೊಬ್ಬ ಅಂದು ಹಾಗೆ ನೂರಾರು ಜನರನ್ನು ಕತ್ತರಿಸುವಾಗ ನೆತ್ತರು ಹರಿದು ಮುಂಗಾರಿನ ಮಳೆಯೊಂದಿಗೆ ಹರಿದುಕೊಂಡು ಹೋಗುತ್ತಿದ್ದುದಾಗಿ ಹೇಳಿದ್ದ. ಆತ ಹೇಳಿದ ಪ್ರಕಾರ 300 ಕೊಡವರು. ಆದರೆ ಅಂದು ವಿರಾಜೇಂದ್ರ ಕತ್ತರಿಸಿದ್ದು 800 ಕೊಡವರ ತಲೆಗಳನ್ನು ಎಂಬುದಾಗಿ ಕೊಡವ ಜನರು ಹೇಳುತ್ತಾರೆ. ಎರಡೂ ಸಂಖ್ಯೆಗಳು ನಿಜವಿರಬಹುದು ಯಾಕೆಂದರೆ, ಅಂದು ತನ್ನ ವಿರುದ್ಧ ಸಂಚು ಹೂಡಿದ್ದ ಕೊಡವರ ಕುಟುಂಬಗಳ ಗಂಡಸರನ್ನು ಅವರ ಹೆಂಗಸರುಗಳನ್ನು ತನ್ನ ಸೇವಕರಿಗೆ ಹಂಚಿದ್ದ. ಈ ಹತ್ಯಾಕಾಂಡ ನಡೆಸಿದ್ದು 1807ರ ಕಡೆಯಲ್ಲಿ ಅಥವಾ 1808ನೇ ಇಸವಿಯ ಆರಂಭದಲ್ಲಿ.’’ (ಪುಟ 277-278)

ಈ ವಿರಾಜೇಂದ್ರ ಯಾವ ಮಟ್ಟಿಗೆ ಕ್ರೂರಿಯಾಗಿದ್ದ ಎನ್ನಲು ಇದೇ ಕೃತಿಯಲ್ಲಿ ದಾಖಲಾಗಿರುವ ಮತ್ತೊಂದು ಉಲ್ಲೇಖ ಹೀಗಿದೆ.
‘‘ವೀರರಾಜ ಕೊಡಗಿನ ಆಡಳಿತವನ್ನು ವಹಿಸಿಕೊಳ್ಳುತ್ತಿದ್ದಂತೆ ರಾಕ್ಷಸನಂತಾದ. ಅವನು ತನ್ನ ತಂದೆಯ ಹೆಂಡತಿಯರಲ್ಲಿ ಕಿರಿಯರಾದವರನ್ನೆಲ್ಲಾ ತನ್ನ ಬಳಕೆಗೆ ಇಟ್ಟುಕೊಂಡು ತನ್ನ ಅಂತಃಪುರದ ರಾಣಿಯರ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಿಕೊಂಡ. ಅತ್ಯುತ್ತಮ ಕೊಡವ ಕುಟುಂಬಗಳ ಲೆಕ್ಕವಿಲ್ಲದಷ್ಟು ಮಹಿಳೆಯರನ್ನು ಅವರು ಹೆರಿಗೆಯಾದ ಕೂಡಲೇ ಮಡಿಕೇರಿಗೆ ಬರಲು ಆದೇಶ ನೀಡಿದ್ದ. ಅಲ್ಲಿ ಅವರು ತಮ್ಮ ಶಿಶುಮಕ್ಕಳಿಗೆ ಹಾಲು ಕುಡಿಸುವ ಸಮಯದಲ್ಲಿ ಅರಮನೆಯ ಬಳಿಯ ಮನೆಯೊಂದರಲ್ಲಿ ಅವರನ್ನು ಇಡಲಾಗುತ್ತಿತ್ತು. ಅವರ ಎದೆಹಾಲಿನಲ್ಲಿ ಒಂದಷ್ಟು ಭಾಗವನ್ನು ರಾಜನಿಗೆ ಅವನ ಆಹಾರದಲ್ಲಿ ವೈದ್ಯಕೀಯ ಬಳಕೆಗೆ ಕೊಂಡೊಯ್ಯಲಾಗುತ್ತಿತ್ತು. ಯಾರಾದರೂ ರಾಜನ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದರೆ ಅವರನ್ನು ಕೊಲ್ಲಲಾಗುತ್ತಿತ್ತು. ಆ ಮಹಿಳೆ ಮಾತ್ರ ಅಲ್ಲ ಅವಳ ಇಡೀ ಕುಟುಂಬವನ್ನೇ ನಾಶ ಮಾಡಲಾಗುತ್ತಿತ್ತು. ಅವನು ತನ್ನ ರಾಜ್ಯದ ಎಲ್ಲಾ ಅವಿವಾಹಿತ ಹೆಣ್ಣುಮಕ್ಕಳು ತನ್ನೊಂದಿಗೆ ಮಲಗಬೇಕು ಎಂದು ಆಗ್ರಹಪಡಿಸಿದ್ದ. ರಾಜನ ಈ ಹುಚ್ಚು ಬೇಡಿಕೆಯನ್ನು ಕೇಳಿದ ಒಂದೇ ರಾತ್ರಿಯಲ್ಲಿ ಎಲ್ಲಾ ಕೊಡವರು ತಮ್ಮ ಹೆಣ್ಣುಮಕ್ಕಳನ್ನು ರಾತ್ರೋರಾತ್ರಿ ಮದುವೆ ಮಾಡಿದ್ದರು. ಇದರಿಂದ ವಿರಾಜೇಂದ್ರನ ಕೋಪ ನೆತ್ತಿಗೇರಿತು. ಹೀಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿ ತಮ್ಮ ಹೆಣ್ಣುಮಕ್ಕಳ ಮಾನ ಕಾಪಾಡಿಕೊಳ್ಳಲು ನೋಡಿದ ಎಷ್ಟೋ ಪೋಷಕರನ್ನು ಕರೆಸಿ ಅವರ ಕಿವಿಗಳನ್ನು ಕತ್ತರಿಸಲಾಯಿತು, ಹಲವರನ್ನು ಕೊಂದು ಹಾಕಲಾಯಿತು. ಮತ್ತೆಷ್ಟೋ ಜನರನ್ನು ಬಂಧೀಖಾನೆಗೆ ಕೂಡಲಾಯಿತು..’’ (ಪುಟ 319)

ಇದು ಕೊಡಗಿನ ರಾಜ ವಿರಾಜೇಂದ್ರನ ಕ್ರೂರ ಚರಿತ್ರೆಯಾದರೆ ಅವನ ನಂತರದಲ್ಲಿ ಅಧಿಕಾರ ವಹಿಸಿಕೊಂಡ ಅವನ ಸೋದರ ಲಿಂಗರಾಜನ ಕ್ರೌರ್ಯವನ್ನು ಈ ಗೆಜೆಟಿಯರ್ ಹೀಗೆ ದಾಖಲಿಸಿದೆ.
‘‘ಅವನ ಸಹೋದರ ಲಿಂಗರಾಜನಲ್ಲಿರುವ ಕ್ರೌರ್ಯ ಅಸಾಧಾರಣವಾಗಿತ್ತು. ಅವನು ಸಣ್ಣ ಮಟ್ಟದ ನೀರೋ ಆಗಿದ್ದ. ಕ್ರೂರತೆ ಅವನಿಗೆ ಕ್ರೀಡೆಯಾಗಿತ್ತೆಂದು ಕಾಣುತ್ತದೆ. ಅವನು ತನ್ನ ಬಲಿಪಶುಗಳನ್ನು ತನ್ನ ಕೈಯಾರೆ ಕೋವಿಯಿಂದ ಅಥವಾ ಬಿಲ್ಲಿನಿಂದ ಅಥವಾ ಚಾಕುವಿನಿಂದ ಇರಿದು ಕೊಲ್ಲುತ್ತಿದ್ದ. ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ ಜನರನ್ನೂ ಅವರ ಕಿವಿಗಳನ್ನು ಕತ್ತರಿಸಲಾಗುತ್ತಿತ್ತು, ಅವರ ಮೂಗುಗಳನ್ನು ಕೊಯ್ಯಲಾಗುತ್ತಿತ್ತು ಇಲ್ಲವೆ ಅವರ ನಾಲಗೆಗಳನ್ನು ಸೀಳಲಾಗುತ್ತಿತ್ತು. ಅವನು ಕೇಳಿದ್ದಕ್ಕೆ ಸರಿಯಾಗಿ ಉತ್ತರಿಸದೆ ಹೋದರೆ ಅವರ ಬಾಯಿಗಳನ್ನೇ ಸವರಲಾಗುತ್ತಿತ್ತು. ಅಂದರೆ ಅವರ ತುಟಿಗಳನ್ನು ಸುತ್ತಲೂ ಕೆತ್ತಲಾಗುತ್ತಿತ್ತು. ನಂತರ ಅವರಿಗೆ ಅನ್ನ ನೀರು ಕೊಡದೇ ಸಾಯಲು ಬಿಡಲಾಗುತ್ತಿತ್ತು. ಮಿಕ್ಕವರನ್ನು ಮಡಿಕೇರಿಯ ರಾಜಾ ಸೀಟ್ ಬಳಿಯ ಗುಡ್ಡದಿಂದ ಎತ್ತಿ ಕೆಳಕ್ಕೆ ಒಗೆಯಲಾಗುತ್ತಿತ್ತು. ಲಿಂಗಾರಾಜ ಚಿನ್ನದ ದಾಹಿಯಾಗಿದ್ದ ಹಾಗೆಯೇ ರಕ್ತದಾಹಿಯಾಗಿದ್ದ, ಈ ಕಾರಣದಿಂದಲೇ ಜನರನ್ನು ಚಿತ್ರವಿಚಿತ್ರವಾಗಿ ಕೊಂದು ತನ್ನ ಆಸ್ತಿ ಹೆಚ್ಚು ಮಾಡಿಕೊಳ್ಳುತ್ತಿದ್ದ’’ (ಪುಟ- 313)

ಕೊಡಗಿನ ಚರಿತ್ರೆ ದಾಖಲಿಸುವ ಈ ಎರಡು ವೀರರ ಉದಾಹರಣೆಗಳು ಏನು ಹೇಳುತ್ತವೆ? ಟಿಪ್ಪುಸುಲ್ತಾನ್ ಮಾತ್ರ ಕೊಡಗು ಜನರನ್ನು ಕೊಂದಿದ್ದ ಎಂದು ಹೇಳುತ್ತವೆಯೇ? ಹಾಗೆ ನೋಡಿದರೆ ಟಿಪ್ಪುತನ್ನ ವೈಯಕ್ತಿಕ ತೆವಲು, ತಿಕ್ಕಲುತನಗಳಿಗೆ ಯಾರನ್ನೂ ಕೊಲ್ಲಲಿಲ್ಲ. ಅವರು ಹಿಂದೂಗಳಿರಲಿ, ಕೊಡವರಿರಲಿ, ಮುಸ್ಲಿಮರಿರಲಿ, ಕ್ರೈಸ್ತರಿರಲಿ ಯಾರು ತನ್ನ ಶತ್ರುಗಳಾದ ಬ್ರಿಟಿಷರ ಜೊತೆ ಕೈ ಮಿಲಾಯಿಸಿದ್ದರೋ ಅವರ ಮೇಲಷ್ಟೇ ಕ್ರಮ ತೆಗೆದುಕೊಂಡಿದ್ದ ಟಿಪ್ಪ್ಪು. ಆದರೆ ಹೈದರ್- ಟಿಪ್ಪುಗಿಂತ ಮೊದಲಿದ್ದ ಮೈಸೂರಿನ ಚಿಕ್ಕದೇವರಾಯ ಒಡೆಯರ ಕಾಲದಿಂದಲೂ ಮೈಸೂರಿನೊಂದಿಗೆ ಕೊಡವ ಪಾಳಯಗಾರರ ಕಾದಾಟವಿತ್ತು. ಹೈದರ್-ಟಿಪ್ಪುಗಿಂತ ಮೊದಲೇ ಮೈಸೂರು ಅರಸರು ಕೊಡವ ಸೈನಿಕರನ್ನು ಕೊಂದಿದ್ದರು, ಹಾಗೆಯೇ ಕೊಡವ ಪಾಳಯಗಾರರು 15,000 ಮೈಸೂರಿನ ಸೈನಿಕರನ್ನು ಕೊಂದಿದ್ದರು. ನಂತರ ಟಿಪ್ಪುಬ್ರಿಟಿಷರ ವಿರುದ್ಧ ಹೋರಾಡುವಾಗ ಬ್ರಿಟಿಷರ ಜೊತೆ ಕೈ ಮಿಲಾಯಿಸಿಕೊಂಡು ಮೈಸೂರು ಸೈನ್ಯದ ವಿರುದ್ಧವಾಗಿ ದಂಡೆತ್ತಿ ಹೋದ ವಿರಾಜೇಂದ್ರನನ್ನು ಟಿಪ್ಪುಸುಮ್ಮನೆ ಬಿಡಲು ಸಾಧ್ಯವಿತ್ತೇ? ಇದನ್ನೇ ಕೊಡವರ ಮೇಲಿನ ಕ್ರೌರ್ಯ ಎಂದು ಹೇಳುವ ಹಿಂದುತ್ವವಾದಿ ವಕ್ತಾರರು ಟಿಪ್ಪುಮಡಿದ ನಂತರ ಬ್ರಿಟಿಷರ ಬೆಂಬಲದಿಂದ ಕೊಡಗಿನ ರಾಜನಾದ ವಿರಾಜೇಂದ್ರ ಮತ್ತು ಅವನ ತಮ್ಮ ಲಿಂಗರಾಜ ಕೊಡವರ ಮೇಲೆ ನಡೆಸಿದ ಪೈಶಾಚಿಕ ಹಿಂಸಾಕಾಂಡಗಳನ್ನು ಏನೆಂದು ಹೇಳುತ್ತಾರೆ. - ಇವರು ನಡೆಸಿದ ರೀತಿಯ ಬರ್ಬರ ಹಿಂಸೆಯನ್ನು ರಾಜಧರ್ಮವನ್ನಷ್ಟೇ ಪಾಲಿಸಿದ್ದ ಟಿಪ್ಪು ನಡೆಸಿದ್ದನೇ? ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಅಕ್ಷರಗಳನ್ನೂ ಅಳಿಸಿ ಹಾಕಲಾಗುತ್ತದೆಯೇ? ಉತ್ತರಿಸಿ ಅಪ್ಪಚ್ಚು ರಂಜನ್ ಅವರೇ.

Writer - ಹರ್ಷಕುಮಾರ್ ಕುಗ್ವೆ

contributor

Editor - ಹರ್ಷಕುಮಾರ್ ಕುಗ್ವೆ

contributor

Similar News