ಅಮಿತ್ ಶಾ ಪುತ್ರನ ಸಂಸ್ಥೆಯ ಆದಾಯ 116 ಕೋ.ರೂ.ಗೆ ಏರಿಕೆ: ಆದರೆ ವ್ಯವಹಾರಗಳು ಇನ್ನೂ ಅಸ್ಪಷ್ಟ

Update: 2019-11-02 08:01 GMT

ಹೊಸದಿಲ್ಲಿ, ನ.2: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ, ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜೇ ಶಾ ಅವರ ಉದ್ಯಮ 'ಕುಸುಮ್ ಫಿನ್‍ ಸರ್ವ್ ಎಲ್‍ಎಲ್‍ಪಿ' ಗಣನೀಯ ಆದಾಯ ಗಳಿಸುತ್ತಿದೆಯೆಂಬುದು ಅದು ಇತ್ತೀಚೆಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‍ಸೈಟ್‍ ನಲ್ಲಿ ಅಪ್ಲೋಡ್ ಮಾಡಿರುವ ತನ್ನ ಆದಾಯದ ಕುರಿತಾದ ಮಾಹಿತಿಗಳಿಂದ ತಿಳಿಯುತ್ತದೆ ಎಂದು caravanmagazine.in ವಿಶೇಷ ವರದಿ ತಿಳಿಸಿದೆ.

2015-2019ರ ನಡುವೆ ಜೇ ಶಾ ಒಡೆತನದ ಸಂಸ್ಥೆಯ ನಿವ್ವಳ ಮೌಲ್ಯ 24.61 ಕೋಟಿ ರೂ.ಗಳಷ್ಟು ಏರಿಕೆಯಾಗಿದೆಯಲ್ಲಿದೆ  ಒಟ್ಟು ಆದಾಯ  116.37 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ.

ಎಲ್‍ಎಲ್‍ಪಿಗಳು ಪ್ರತಿ ವರ್ಷದ ಅಕ್ಟೋಬರ್ 30ರೊಳಗಾಗಿ ತಮ್ಮ ಲೆಕ್ಕಪತ್ರಗಳನ್ನು ಸಲ್ಲಿಸಬೇಕಿದೆ ಹಾಗೂ  ಹಾಗೆ ಮಾಡದೇ ಇದ್ದಲ್ಲಿ ದಂಡ ಪಾವತಿಸಬೇಕಿದೆ. ಆದರೆ ನಿಗದಿತ ಅವಧಿಯಲ್ಲಿ ಲೆಕ್ಕಪತ್ರ ಬಹಿರಂಗಪಡಿಸದೇ ಇದ್ದ ಈ ಸಂಸ್ಥೆಗೆ ಯಾವುದೇ ದಂಡ ವಿಧಿಸಲಾಗಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗಿ ಸುಮಾರು ಮೂರು ತಿಂಗಳುಗಳ ನಂತರ-ಆಗಸ್ಟ್ 2019ರಲ್ಲಿ ಅದು ತನ್ನ ಲೆಕ್ಕಪತ್ರ ಸಚಿವಾಲಯದ ವೆಬ್ ಸೈಟ್‍ ನಲ್ಲಿ ಅಪ್ಲೋಡ್ ಮಾಡಿತ್ತು.

ಲಭ್ಯ ಮಾಹಿತಿಯ ಪ್ರಕಾರ ಸಂಸ್ಥೆಯ ಆದಾಯ 2014ರಲ್ಲಿ 79.60 ಲಕ್ಷ ರೂ. ಇದ್ದರೆ ಮುಂದಿನ ವರ್ಷಗಳಲ್ಲಿ ಅದು ಕ್ರಮವಾಗಿ 3.23 ಕೋಟಿ ರೂ., 24.26 ಕೋಟಿ ರೂ., 143.43 ಕೋಟಿ ರೂ., 111.87 ಕೋಟಿ ರೂ. ಹಾಗೂ 119.61 ಕೋಟಿ ರೂ.ಗೆ ಏರಿಕೆಯಾಗಿತ್ತು.

ಕಂಪೆನಿಯ ನಿವ್ವಳ ಮೌಲ್ಯ ಕೂಡ 2015ರಿಂದ ಏರಿಕೆಯಾಗುತ್ತಲೇ ಇದ್ದು, 2015ರಿಂದ 2019ರ ತನಕ ಕ್ರಮವಾಗಿ 1.21 ಕೋಟಿ ರೂ., ರೂ 5.83 ಕೋಟಿ, ರೂ 5.17 ಕೋಟಿ, ರೂ 20.25 ಕೋಟಿ ಹಾಗೂ ರೂ 25.83 ಕೋಟಿಯಾಗಿದೆ. ಸಂಸ್ಥೆ ಈ ಅವಧಿಯಲ್ಲಿ ಸಾಕಷ್ಟು ಸಾಲಗಳನ್ನೂ ಪಡೆದಿತ್ತು. 2016 ಆರ್ಥಿಕ ವರ್ಷದಲ್ಲಿ ಸಂಸ್ಥೆಯ ನಿವ್ವಳ ಸ್ಥಿರಾಸ್ತಿಯ ಮೌಲ್ಯ 9.51 ಕೋಟಿ ರೂ.ಗೆ ತಲುಪಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 1,738 ಶೇ.ದಷ್ಟು ಹೆಚ್ಚಳವಾಗಿದೆ.

ಆದರೆ ಸಂಸ್ಥೆ ಯಾವ ಸ್ವರೂಪದ ವ್ಯವಹಾರ ನಡೆಸುತ್ತಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಈ ಕುರಿತಂತೆ caravanmagazine.in  ಕೇಳಿದ ಪ್ರಶ್ನೆಗಳಿಗೆ ಅಹ್ಮದಾಬಾದ್ ರಿಜಿಸ್ಟ್ರಾರ್ ಆಫ್ ಕಂಪೆನೀಸ್ ಪ್ರತಿಕ್ರಿಯಿಸಿಲ್ಲ. 'ದಿ ವೈರ್' ವೆಬ್ ತಾಣ ಈ ಹಿಂದೆ ಕೇಳಿದ ಪ್ರಶ್ನೆಗೆ ಅದು ಸ್ಟಾಕ್ ಮತ್ತು ಶೇರುಗಳ ಟ್ರೇಡಿಂಗ್,  ರಫ್ತು-ಆಮದು ಚಟುವಟಿಕೆಗಳು, ಡಿಸ್ಟ್ರಿಬ್ಯೂಷನ್ ಮತ್ತು ಮಾರ್ಕೆಟಿಂಗ್ ಕನ್ಸಲ್ಟೆನ್ಸಿ ಸೇವೆಗಳನ್ನು ಒದಗಿಸುತ್ತಿದೆ ಎಂದು ಅವರ ವಕೀಲರು ತಿಳಿಸಿದ್ದರು.

ಸಾನಂದ್ ಎಂಬಲ್ಲಿ ಅಡಮಾನವಿರಿಸಲಾದ  ಭೂಮಿಯಲ್ಲಿ ಈ ಸಂಸ್ಥೆ ಫ್ಯಾಕ್ಟರಿಯೊಂದನ್ನು ಸ್ಥಾಪಿಸಲಾಗಿದೆಯೆನ್ನಲಾಗಿದ್ದರೂ caravanmagazine.in ಪ್ರತಿನಿಧಿ 2018ರಲ್ಲಿ ಅಲ್ಲಿಗೆ ಹೋದಾಗ ಅಲ್ಲಿ ಯಾವುದೇ ನಾಮಫಲಕವೂ ಇರಲಿಲ್ಲ ಹಾಗೂ ಅಲ್ಲಿನ ಭದ್ರತಾ ಸಿಬ್ಬಂದಿ ಒಳಕ್ಕೆ ಪ್ರವೇಶಿಸಲು ಅನುಮತಿ ಕೂಡ ನೀಡಿರಲಿಲ್ಲ. ಸಾಲ ಪಡೆದ ಸಂದರ್ಭ ನೀಡಲಾದ ದಾಖಲೆಗಳ ಪ್ರಕಾರ ಈ ಫ್ಯಾಕ್ಟರಿ ಪಿಪಿ, ಎಚ್‍ ಡಿಪಿಇ ಹಾಗೂ ಜಂಬೋ ಬ್ಯಾಗ್ ತಯಾರಿಕೆ ಮಾಡುತ್ತಿತ್ತು. ಅದರೆ ಅಲ್ಲಿ ಮಾತ್ರ ಯಾವುದೇ  ಉತ್ಪಾದನಾ ಕಾರ್ಯ ನಡೆಯುವಂತೆ ಕಂಡಿರಲಿಲ್ಲ.

caravanmagazine.in ಪತ್ರಿಕೆ ಅಕ್ಟೋಬರ್ 19ರಂದು ಜೇ ಶಾ ಅವರಿಗೆ  ಅವರ ಕಂಪೆನಿಯ  ಲೆಕ್ಕಪತ್ರಗಳ ಕುರಿತಂತೆ, ಉದ್ಯಮ, ಸಾಲ ಮತ್ತಿತರ ವಿಚಾರಗಳ ಕುರಿತಂತೆ ಹಲವು ಪ್ರಶ್ನೆಗಳನ್ನು ಕಳುಹಿಸಿದ್ದರೂ ಅವುಗಳಿಗೆ ಇನ್ನೂ ಉತ್ತರ ದೊರಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News