ಉಗ್ರ ಚಟುವಟಿಕೆ ತಡೆಯುವಲ್ಲಿ ಪಾಕ್ ವಿಫಲ: ಅಮೆರಿಕ ವಿದೇಶಾಂಗ ಇಲಾಖೆ ವರದಿ

Update: 2019-11-02 16:23 GMT

ವಾಶಿಂಗ್ಟನ್, ನ. 2: ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರಿಗೆ ಹಣಕಾಸು ಪೂರೈಸುವುದು, ಅವರನ್ನು ನೇಮಿಸುವುದು ಮತ್ತು ಅವರಿಗೆ ತರಬೇತಿ ನೀಡುವುದು ಮುಂತಾದ ಕೃತ್ಯಗಳನ್ನು ನಡೆಸದಂತೆ ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಮುಂತಾದ ಪ್ರಮುಖ ಭಯೋತ್ಪಾದಕ ಸಂಘಟನೆಗಳನ್ನು ತಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದ ವರದಿಯೊಂದು ಹೇಳಿದೆ.

ಅದೂ ಅಲ್ಲದೆ, ಈ ಭಯೋತ್ಪಾದಕ ಗುಂಪುಗಳ ಮುಖವಾಡದ ಸಂಘಟನೆಗಳೊಂದಿಗೆ ಬಹಿರಂಗವಾಗಿಯೇ ತೊಡಗಿಸಿಕೊಂಡಿರುವ ಕೆಲವು ಭಯೋತ್ಪಾದಕರಿಗೆ ಕಳೆದ ವರ್ಷದ ಜುಲೈಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಕೂಡ ಪಾಕಿಸ್ತಾನ ಅವಕಾಶ ಮಾಡಿಕೊಟ್ಟಿದೆ ಎಂದು ‘ಕಂಟ್ರಿ ರಿಪೋರ್ಟ್ಸ್ ಆನ್ ಟೆರರಿಸಂ 2018’ ಎಂಬ ಹೆಸರಿನ ವರದಿ ತಿಳಿಸಿದೆ.

ಅಫ್ಘಾನ್ ತಾಲಿಬಾನ್ ಮತ್ತು ಅಫ್ಘಾನ್ ಸರಕಾರದ ನಡುವಿನ ರಾಜಕೀಯ ಶಾಂತಿ ಒಪ್ಪಂದಕ್ಕೆ ಪಾಕಿಸ್ತಾನ ಬಹಿರಂಗ ಬೆಂಬಲ ನೀಡಿರುವ ಹೊರತಾಗಿಯೂ, ತನ್ನ ನೆಲದಲ್ಲಿರುವ ಸುರಕ್ಷಿತ ಆಶ್ರಯ ತಾಣಗಳಲ್ಲಿ ಅಫ್ಘಾನ್ ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ಎಂಬ ಭಯೋತ್ಪಾದಕ ಗುಂಪುಗಳು ಕಾರ್ಯನಿರ್ವಹಿಸುವುದನ್ನು ತಡೆಯುವಲ್ಲಿಯೂ ಪಾಕಿಸ್ತಾನ ವಿಫಲವಾಗಿದೆ ಎಂದು ವರದಿ ಹೇಳಿದೆ.

ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ವಿಧಿಸಿರುವ ಶರತ್ತುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿರುವ ವರದಿ, ಲಷ್ಕರೆ ತಯ್ಯಬ ಮತ್ತು ಅದರ ಮಿತ್ರ ಗುಂಪುಗಳ ವಿರುದ್ಧ ವಿಶ್ವಸಂಸ್ಥೆ ವಿಧಿಸಿರುವ ದಿಗ್ಬಂಧನಗಳನ್ನು ಸಮಾನವಾಗಿ ಜಾರಿಗೊಳಿಸುವಲ್ಲಿ ಅದು ವಿಫಲವಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News