ಈ ರಾಜ್ಯದಲ್ಲಿ ಅಯೋಧ್ಯೆ ತೀರ್ಪಿನ ತನಕ ಪೊಲೀಸ್ ಸಿಬ್ಬಂದಿಗೆ ರಜೆ ಇಲ್ಲ

Update: 2019-11-02 16:52 GMT

ಭೋಪಾಲ್, ನ. 2: ಇಡೀ ದೇಶದ ಗಮನವನ್ನು ಸೆಳೆದಿರುವ ಹಾಗೂ ಕೋಮುಸೂಕ್ಷ್ಮತೆ ಹೊಂದಿರುವ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುವುದಕ್ಕೆ ಮುನ್ನ ರಜೆಯನ್ನು ಪಡೆಯದಂತೆ ಮಧ್ಯಪ್ರದೇಶ ಸರಕಾರವು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದೆ.

ಈ ವಿಷಯವಾಗಿ ಶುಕ್ರವಾರದಂದು ರಾಜ್ಯ ಪೊಲೀಸ್ ಮುಖ್ಯ ಕಾರ್ಯಾಲಯವು ಆದೇಶವನ್ನು ಜಾರಿಗೊಳಿಸಿದ್ದು, ಅದನ್ನು ರಾಜ್ಯದ ಎಲ್ಲಾ ಜಿಲ್ಲೆಗಳು ಪೊಲೀಸ್ ಅಧೀಕ್ಷಕರು ಹಾಗೂ ಇತರ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಲಾಗಿದೆ.

‘‘ರಾಜ್ಯದಲ್ಲಿ ಕಾನೂನು , ಶಿಸ್ತುಪಾಲನೆ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಮತ್ತು ಮೀಲಾದುನ್ನಬಿ, ಗುರುನಾನಕ್ ಜಯಂತಿ ಹಬ್ಬಗಳು ಬರುತ್ತಿರುವುದರಿಂದ ಹಾಗೂ ಅಯೋಧ್ಯೆ ತೀರ್ಪಿನ ನಿರೀಕ್ಷೆಯ ಹಿನ್ನೆಲೆಯಲ್ಲಿ ನವೆಂಬರ್ 1ರಿಂದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಉದ್ಯೋಗಿಗಳು ಮುಂದಿನ ಆದೇಶದವರೆಗೆ ರಜೆಯನ್ನು ಪಡೆಯುವುದನ್ನು ನಿಷೇಧಿಸಲಾಗಿದೆ ಎಂದು ಸುತ್ತೋಲೆಯು ತಿಳಿಸಿದೆ.

ಆದರೆ ಅನಿವಾರ್ಯ ಕಾರಣಗಳಿಂದಾಗಿ ರಜೆ ಬೇಕಾದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಮೇಲಾಧಿಕಾರಿಗಳಿಂದ ಅನುಮತಿಯನ್ನು ಪಡೆಯಬಹುದಾಗಿದೆ ಎಂದು ಸುತ್ತೋಲೆಯು ತಿಳಿಸಿದೆ.

40 ದಿವಸಗಳ ಸತತ ವಿಚಾರಣೆಯ ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯ ನ್ಯಾಯಪೀಠವು ಬಹಳ ಸಮಯದಿಂದ ನೆನೆಗುದಿಯಲ್ಲಿರುವ ಅಯೋಧ್ಯೆ ವಿವಾದದ ಕುರಿತ ತನ್ನ ತೀರ್ಪನ್ನು ಕಾದಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News