ದೃಶ್ಯ-ಶಬ್ದಗಳ ಮಾರ್ಮಿಕ ಕಟ್ಟೋಣದ ಜಲ್ಲಿಕಟ್ಟು

Update: 2019-11-02 18:33 GMT

ಜಲ್ಲಿಕಟ್ಟು ಈಗಿನ ತಮಿಳು ನಾಡಿನ ಒಂದು ಪ್ರಾಚೀನ ಜಾನಪದ ಆಟ. ಇದು ಕ್ರಿಸ್ತಪೂರ್ವ ಅವಧಿಯಲ್ಲಿ ಶುರುವಾಯಿತು ಎನ್ನಲಾಗಿದೆ. ಒಂದು ಕೋಣವನ್ನು ಗುಂಪಿನ ನಡುವೆ ಬಿಡಲಾಗುತ್ತದೆ. ಅದು ಹೂಂಕರಿಸುತ್ತ ಓಡುತ್ತದೆ. ಕೋಣದ ಗೂನನ್ನು ಎರಡು ಕೈಗಳಲ್ಲಿ ಸ್ವಲ್ಪ ಸಮಯ ಹಿಡಿದು ಅದನ್ನು ನಿಲ್ಲಿಸುವವ ವಿಜಯಶಾಲಿಯಾಗುತ್ತಾನೆ. ಈ ಆಟದಲ್ಲಿ ಇನ್ನೂ ಕೆಲವು ಬಗೆಗಳಿವೆ. ಭಾಗವಹಿಸುವವರಿಗೆ ಗಾಯ, ನೋವು ಹಾಗೂ ಸಾವೂ ಸಂಭವಿಸುತ್ತದೆ. ಕೋಣ ಕೂಡ ಹಿಂಸೆಯನ್ನು ಅನುಭವಿಸುತ್ತದೆ. ಪೊಂಗಲ್ ಸಮಯದಲ್ಲಿ ಈ ಆಟವನ್ನು ಏರ್ಪಡಿಸಲಾಗುತ್ತದೆ. ಆದರೆ ಇತ್ತೀಚೆಗೆ ತೆರೆಕಂಡಿರುವ ಜಲ್ಲಿಕಟ್ಟು ಎಂಬ ಮಲಯಾಳಂ ಚಲನಚಿತ್ರದ ಶೀರ್ಷಿಕೆ ಮಾತ್ರ ಈ ಆಟಕ್ಕೆ ಸಂಬಂಧಿಸಿದೆ.

       ದಕ್ಷಿಣ ಕೇರಳದ ಇಡುಕ್ಕಿ ಜಿಲ್ಲೆಯ ಹಳ್ಳಿಯೊಂದರಲ್ಲಿ ವರ್ಕಿ(ನಟ ಚೆಂಬನ್ ವಿನೋದ್ ಜೋಸ್) ಎಂಬ ಕಟುಕನ ಕಸಾಯಿಖಾನೆಯಿಂದ ಒಂದು ಕೋಣ ವಧಾಸ್ಥಳದಿಂದ ತಪ್ಪಿಸಿಕೊಂಡು ಪೇರಿ ಕೀಳುತ್ತದೆ. ಆತನ ಸಹಾಯಕ ಅಂತೋನಿ(ನಟ ಅಂತೋನಿ ವರ್ಗೀಸ್) ಇದಕ್ಕಾಗಿ ಬಯ್ಗಳನ್ನು ಕೇಳಬೇಕಾಗುತ್ತದೆ. ಕೋಣ ಸಿಕ್ಕಿದ ಕಡೆ ನುಗ್ಗಿ ದಾಂಧಲೆ ಮಾಡುತ್ತದೆ. ಅದು ಕಾಲಿಟ್ಟಲ್ಲೆಲ್ಲ ಧ್ವಂಸದ ಪರ್ವ ಶುರುವಾಗುತ್ತದೆ. ಈ ಘಟನೆಯ ಸುದ್ದಿ ಪಕ್ಕದ ಹಳ್ಳಿಗಳಿಗೂ ಹಬ್ಬುತ್ತದೆ. ಕುಟ್ಟಚನ್(ನಟ ಸಾಬುಮೊನ್) ಎಂಬ ಹಳ್ಳಿಯ(ಕೋಣ ತಪ್ಪಿಸಿಕೊಂಡಿರುವ) ಮಾಜಿ ನಿವಾಸಿಯೊಬ್ಬ ಕೋಣವನ್ನು ಹಿಡಿಯಲು ಬಂದೂಕುಧಾರಿಯಾಗಿ, ಆತನ ಚೇಲಾಗಳ ಕೇಕೆ, ಜಯಕಾರಗಳೊಡನೆ ಪ್ರವೇಶ ಮಾಡುತ್ತಾನೆ. ಕೋಣದ ಓಟದಿಂದ ಅನೇಕ ಲುಕ್ಸಾನುಗಳಾಗುತ್ತವೆ. ಕೊನೆಗೆ ಈ ಕೋಣದ ಗತಿ ಏನಾಗುತ್ತದೆ ಎಂಬುದನ್ನು ಚಲನಚಿತ್ರದ ಅಂತ್ಯದಲ್ಲಿ ಕಾಣಬಹುದು.

  ಹಾಗೆ ನೋಡಿದರೇ ಈ ಚಲನಚಿತ್ರದ ವಸ್ತು ತುಂಬ ಸರಳ ಹಾಗೂ ತೆಳುವಾದದ್ದು. ಎಸ್.ಹರೀಶರ ಮಾವೋಯಿಸ್ಟ್ ಎಂಬ ಕಥೆಯನ್ನು ಆಧರಿಸಿದ ಈ ಚಲನಚಿತ್ರದ ಚಿತ್ರಕಥೆಯನ್ನು ಮೂಲ ಲೇಖಕ ಮತ್ತು ಆರ್.ಜಯಕುಮಾರ್ ಬರೆದಿದ್ದಾರೆ. ಇದು ನಿರ್ದೇಶಕ ಲಿಜೊ ಜೋಸ್ ಪೆಲ್ಲಿಸ್ಸೇರಿಯವರ ಏಳನೇ ಚಲನಚಿತ್ರ. ವೀಕ್ಷಕರು ಇವರ ಮುಂದಿನ ಚಲನಚಿತ್ರ ಯಾವುದು ಎಂದು ಕಾತರಿಸುವಷ್ಟು ಇವರು ಹಂತ ಹಂತವಾಗಿ ಬೆಳೆದಿದ್ದಾರೆ!

    ಈ ಚಲನಚಿತ್ರದಲ್ಲಿ ಸಣ್ಣ ಪಾತ್ರಗಳೇ ಕಿಕ್ಕಿರಿದಿವೆ. ಪ್ರಧಾನ ಪಾತ್ರವೆಂದು ಗುರುತಿಸಬಹುದಾದ್ದು ಕೋಣ ಮಾತ್ರವೇ. ತೊಂಬತ್ತೈದು ನಿಮಿಷಗಳ ಈ ಚಲನಚಿತ್ರದಲ್ಲಿ ಅದು ಹೆಚ್ಚು ಸಮಯ ಕಾಣಿಸಿಕೊಳ್ಳುವುದಿಲ್ಲ! ನೈಜ ಕೋಣವಂತೂ ಕೆಲವೇ ನಿಮಿಷಗಳ ಕಾಲ ಕಂಡು ಬರುತ್ತದೆ! ವಿಎಫ್‌ಎಕ್ಸ್ (ಹೆಚ್ಚಾಗಿ ಅಲ್ಲ) ಮತ್ತು ಅನಿಮೋಟ್ರಾನಿಕ್ಸ್ ಮೂಲಕ ಕೋಣವನ್ನು ತೋರಿಸಲಾಗಿದೆ. ಮಹಿಳಾ ಪಾತ್ರಗಳಂತೂ ಬಂದು ಹೋಗುತ್ತವೆ!

  ಚಲನಚಿತ್ರದ ಪ್ರಾರಂಭದಲ್ಲಿ, ಟೈಟಲ್ ಕಾರ್ಡ್‌ನ ಹಂತದಲ್ಲಿ, ರಾತ್ರಿ ತನ್ನ ಇರುವನ್ನು ನಿಧಾನವಾಗಿ ಕಳೆದುಕೊಳ್ಳುತ್ತ, ಅದು ಬೀರುವ ಬೆಳಕಿನಲ್ಲಿ ಕಾಣುವ ಪ್ರಕೃತಿ ದೃಶ್ಯಗಳು ಚಲನಚಿತ್ರದ ಆಂತರ್ಯವನ್ನು ಪರಿಚಯಿಸುತ್ತವೆ! ಮೊದಲ ದೃಶ್ಯದಲ್ಲಿ ಏಕ್ಸ್‌ಟ್ರೀಮ್ ಕ್ಲೋಸ್‌ಅಪ್ ಶಾಟ್ ಮೂಲಕ ಅರೆ ನಿದ್ರಾವಸ್ಥೆಯಲ್ಲಿರುವ ಕೆಲವು ಮಂದಿಯ ಉಸಿರಾಟವನ್ನು ತೋರಿಸಲಾಗಿದೆ. ಅವರ ನಡುವೆ ಕಣ್ಣು ತೆರೆಯದ ಒಬ್ಬ ಮುದುಕನೂ ಇರುತ್ತಾನೆ. ಹಿನ್ನೆಲೆಯಲ್ಲಿ ಗಡಿಯಾರದ ಶಬ್ಧ ಸುತ್ತಿಗೆಯ ಏಟುಗಳಂತೆ ಕೇಳಿಬರುತ್ತಿರುತ್ತದೆ! ನಂತರ ಕ್ಷಿಪ್ರಗತಿಯ ಸಂಕಲನದ ಮೂಲಕ ಕಟುಕನ ಕೊಚ್ಚುವಿಕೆ, ಮಾಂಸದ ಖರೀದಿ, ಜೊತೆಯಲ್ಲಿ ಜರುಗುವ ಸಂಭಾಷಣೆಗಳು, ಇತರ ಕೆಲವು ಕಾರ್ಯಗಳನ್ನು ಬಿಂಬಿಸಲಾಗಿದೆ.

  ಚಿತ್ರಕಥೆಯಲ್ಲಿ ವರ್ಕಿಯ ತಂಗಿ(ನಟಿ ಸಾಂತಿ ಬಾಲಚಂದ್ರನ್) ಅಂತೋನಿಯ ಬಗೆಗೆ ತೋರಿಸುವ ಮುನಿಸು, ಆಕೆಗೆ ಇರುವ ಅನೇಕ ಪ್ರೇಮಿಗಳ ಕುರಿತು ಕೆಲವು ಹಳ್ಳಿಗರ ಗುಲ್ಲು ಮಾತುಗಳು, ತನ್ನ ಮಗಳ ಮದುವೆಯ ನಿಸ್ಚಿತಾರ್ಥಕ್ಕಾಗಿ ಕೋಣದ ಮಾಂಸಕ್ಕಾಗಿ ಸಿರಿವಂತನ ಹಾತೊರೆಯುವಿಕೆ, ಆತನ ಮಗಳು ಇನ್ನೊಬ್ಬನೊಡನೆ ಪರಾರಿಯಾಗುವ ಪ್ರಯತ್ನ, ಅಂತೋನಿ ಮತ್ತು ಕುಟ್ಟಚನ್ ನಡುವೆ ಇರುವ ಹಳೆಯ ವೈರತ್ವ, ಕುಟ್ಟಚನ್‌ನ ಗತಕಾಲದ ವೃತ್ತಾಂತ, ಪೊಲೀಸ್ ಇನ್‌ಸ್ಪೆಕ್ಟರ್‌ನೊಬ್ಬ ತನ್ನ ಹೆಂಡತಿಯ ಮೇಲೆ ಕೈಮಾಡುವಿಕೆ, ಕೋಣದ ದಾಳಿ-ಹಾನಿ ಕುರಿತು ನಿರುಮ್ಮಳವಾಗಿ ಮಾತನಾಡುವ, ಪ್ರಾಣಿ ಕಲ್ಯಾಣ ಮತ್ತು ಪರ್ಯಾವರಣದ ಬಗೆಗೆ ಸ್ಪಂದಿಸುವ ವೃದ್ಧನ ಬದಲಾದ ನಡವಳಿಕೆ(ತನ್ನ ಔಷದೀಯ ಸಸ್ಯಗಳನ್ನು ಅದು ನಾಶಪಡಿಸಿತೆಂದು ತಿಳಿಯುವ ಸಂದರ್ಭದಲ್ಲಿ), ಇಡೀ ಹಳ್ಳಿಯೇ ತಲ್ಲಣಗೊಂಡಿದ್ದರೂ, ಅದರ ಹಿಂದಿನ ಕಾರಣವನ್ನು ಅರಿಯದ ಸಿಹಿತಿಂಡಿ ಮಾರುವ ಹುಡುಗನ ತಳ್ಳುಗಾಡಿಯ ಗಂಟೆಯ ಸದ್ದು, ಅದಕ್ಕೆ ಪ್ರತಿಕ್ರಿಯಿಸುವ ಕೋಣದ ಹಿಂದೆ ಬಿದ್ದಿರುವ ಜನರ ನಡತೆ, ಅವಸಾನದ ಹಂತದಲ್ಲಿರುವ ಮುದುಕನನ್ನು ನೋಡಿಕೊಳ್ಳುವ ವ್ಯಕ್ತಿ(ಬಹುಶಃ ಮಗನೇ ಇರಬೇಕು) ಕೋಣವನ್ನು ಹಿಡಿಯುವವರ ಜೊತೆ ಓಡಿಹೋಗುವ ಪರಿ, ಬ್ಯಾಂಕೊಂದಕ್ಕೆ ಕೋಣ ನುಗ್ಗುವ ಸಮಯದಲ್ಲಿ ಜರುಗುವ ಸಂಗತಿಗಳು ಇತ್ಯಾದಿ ಸಣ್ಣ, ಸಣ್ಣ ಪ್ರಸಂಗಗಳನ್ನು ಮೂಲಕಥೆಯಲ್ಲಿ ಹೆಣೆಯಲಾಗಿದೆ. ಈ ರೀತಿಯ ಅಡಕಗೊಳಿಸುವಿಕೆ ಲಿಜೊರವರ ಇತರ ಕೆಲವು ಚಲನಚಿತ್ರಗಳಲ್ಲಿ ಕಾಣಬಹುದು.

 ಕೋಣದ ಓಟ ಹಿಂಸೆಗೆ ಸಿಲುಕಿದ ಸಂತ್ರಸ್ತರ ಸ್ಥಿತಿಯನ್ನು ಸಂಕೇತಿಸುವಂತಿದೆ. ಅದನ್ನು ಹಿಡಿಯಲು/ಮುಗಿಸಲು ಸನ್ನದ್ಧರಾಗುವವರ ಸಿಟ್ಟು-ಸೆಡವು, ಹಠ, ಈರ್ಷ್ಯೆ, ಸ್ವಾರ್ಥ್ಯ, ಪ್ರತಿಕಾರ ಮನೋಭಾವ, ಗುಂಪು ಉನ್ಮಾದ, ಇವುಗಳ ಭಾಗವಾಗಿ ಭುಗಿಳೆಳುವ ಎಲ್ಲ ಅಧಿಕಾರಗಳ, ಆಸ್ತಿ, ಕಾಮದ ಹಿಂಸೆಗಳು ಚಲನಚಿತ್ರದಾದ್ಯಂತ ಹಾಸುಹೊಕ್ಕಾಗಿವೆ. ಅಂದರೆ ಮಾನವರಲ್ಲಿ ಅಂತರ್ಗಾಮಿನಿಯಾಗಿ ಹರಿಯುತ್ತಿರುವ ಮೃಗೀಯ (ಅವ)ಗುಣಗಳು ಹೇಗೆ ಸಂದರ್ಭಾನುಸಾರ ಸ್ಪೋಟಗೊಂಡು ಹಿಂಸಾಖಾಂಡಕ್ಕೆ ನಾಂದಿ ಹಾಡುತ್ತವೆ ಎನ್ನುವುದನ್ನು ದೃಶ್ಯ-ಶಬ್ದ ರೂಪಕಗಳ ಕಟ್ಟೋಣದ ಮೂಲಕ ನಿರ್ದೇಶಕರು ಸಿನೆಮಾ ಕಲೆಯನ್ನು ಪರಿಣಾಮಕಾರಿಯಾಗಿ ದಾಟಿಸುತ್ತಾರೆ!

  ಚಲನಚಿತ್ರದ ತಾಂತ್ರಿಕ ವಿಭಾಗಗಳ ಹೊಣೆಯನ್ನು ಹೊತ್ತಿರುವವರು ನಿರ್ದೇಶಕರ ಆಶೋತ್ತರಗಳಿಗೆ ಸಮರ್ಥವಾಗಿ ಸ್ಪಂದಿಸಿದ್ದಾರೆ. ಸಿನೆಮಾಟೋಗ್ರಾಫರ್ ಗಿರೀಶ್ ಗಂಗಾಧರರ ಕೆಲಸವಂತೂ ವಾರೇವ್ಹಾ ಎನ್ನುವಂತಿದೆ. ಮಧ್ಯಂತರಕ್ಕೆ ಮುನ್ನ ಒಂದು ಬಾವಿಯಲ್ಲಿ ಸಿಲುಕಿದ ಕೋಣದ ನೆಲೆಯಿಂದ ಮೇಲೆ ನಿಂತಿರುವ, ಕೆಳಗೆ ನೋಡುತ್ತಿರುವ ಗ್ರಾಮಸ್ಥರ ಕೈಗಳ ಟಾರ್ಚು/ಪಂಜುಗಳ ಬೆಳಕಿನ ದೃಶ್ಯದ ಲೋ ಯಾಂಗಲ್ ಶಾಟ್, ಮೂರು ಗುಂಪುಗಳಾಗಿ ವಿಭಜನೆಗೊಂಡು ಕತ್ತಲೆಯಲ್ಲಿ ಸಾಗುವ ಗ್ರಾಮಸ್ಥರು ಬೀರುವ ಬೆಳಕನ್ನು ಹಿಡಿದಿರುವ ಡ್ರೋನ್ ಶಾಟ್ ಮತ್ತು ಚಲನಚಿತ್ರದ ಕೊನೆಯ ಭಾಗದಲ್ಲಿ ಕೋಣದ(ಅಥವಾ ಅದರ ಮಾಂಸಕ್ಕಾಗಿ) ಮೇಲೆ ಮುಗಿಬಿದ್ದು ಮಾನವ ಪಿರಿಮಿಡ್ಡನ್ನು ನೆನಪಿಸುವ ಶಾಟ್ ಮತ್ತು ಮಂಜು ಮುಸುಕಿದ ವಾತಾವರಣದಲ್ಲಿ ತೂಗುಸೇತುವೆಯ ಮೇಲೆ ಓಡುವ ಕೆಲವು ವ್ಯಕ್ತಿಗಳ ಟಾಪ್ ಯಾಂಗಲ್ ಶಾಟ್, ಲಾಂಗ್ ಟೇಕುಗಳು, ಕತ್ತಲಿನ ದೃಶ್ಯಾವಳಿಗಳನ್ನು ಸೆರೆಹಿಡಿದಿರುವ ರೀತಿ ಮುಂತದವು ಅವರ ಪ್ರತಿಭೆಯನ್ನು ರವಾನಿಸುತ್ತವೆ.

 ಹಾಗೆಯೇ ಪ್ರಶಾಂತ್ ಪಿಳ್ಳೈರವರ ಸಂಗೀತ ಚಲನಚಿತ್ರದ ಹೂರಣಕ್ಕೆ ಭಾವವರ್ಧಕವಾಗಿ ಕೆಲಸ ಮಾಡಿದೆ. ಸಂಕಲನಕಾರ ದೀಪು ಜೋಸೆಫ್, ಶಬ್ದ ವಿನ್ಯಾಸಕಾರ ರಂಗನಾಥ್ ರವಿ, ಕಲಾ ನಿರ್ದೇಶಕ ಗೋಕುಲ್‌ದಾಸ್ ತಾವು ಎಂತಹ ಕಸುಬುದಾರರು ಎಂಬುದನ್ನು ಸಾಬೀತುಪಡಿಸಿದ್ದಾರೆ! ನಟನಾ ವರ್ಗ ಚೊಕ್ಕವಾಗಿ ಕಾರ್ಯವನ್ನು ನಿರ್ವಹಿಸಿದೆ.

  ಚಲನಚಿತ್ರದ ಅಂತ್ಯ ಭಾಗದಲ್ಲಿ, ಮೇಲೆ ಪ್ರಸ್ತಾಪಿಸಿರುವ ಮಾನವ ಪಿರಮಿಡ್ ಶಾಟ್‌ನ ತರುವಾಯ ಗುಹೆಯೊಂದರಲ್ಲಿನ ಆದಿಮಾನವರ ಅಟ್ಟಹಾಸವನ್ನು ತೋರಿಸುವ ಒಂದು ಶಾಟ್ ಇದೆ. ಇದರ ಆವಶ್ಯಕತೆಯಿತ್ತೇ ಎಂಬ ಪ್ರಶ್ನೆ ಮೂಡುತ್ತದೆ! ಕೊನೆಯ ದೃಶ್ಯದಲ್ಲಿ ಮರಣಶಯ್ಯೆಯಲ್ಲಿರುವ ಮುದುಕ ಮತ್ತು ಕೋಣದ ನೋಟ ಪರಸ್ಪರ ಸಂಧಿಸುತ್ತದೆ, ನಂತರ ಕ್ಯಾಮರಾ ಸ್ತಬ್ಧವಾಗುತ್ತದೆ. ಇದು ಹೊರಹೊಮ್ಮಿಸುವ ಭಾವಾರ್ಥ ವೀಕ್ಷಕರನ್ನು ಕಾಡುವಂತಿದೆ!

  ಒಮ್ಮಮ್ಮೆ ಕೋಣವನ್ನು ಬೆನ್ನಟ್ಟುವ ದೃಶ್ಯಗಳು ಮರುಕಳಿಸುತ್ತಿವೆಯಲ್ಲ ಎಂಬ ಭಾವನೆ ವೀಕ್ಷಕರಲ್ಲಿ ಮೂಡಬಹುದು. ಕೆಲವರಿಗೆ ಚಲನಚಿತ್ರದ ವಸ್ತು ಕೂಡ ಅಸಂಬದ್ಧ ಎನ್ನಿಸಬಹುದು. ಆದರೂ ಇಂತಹ ಪ್ರಶ್ನೆಗಳ ನಡುವೆ ಜಲ್ಲಿಕಟ್ಟು, ಆದಿಮ ಮಾನವನ ಹಂತದಲ್ಲೇ ಇರುವಂತೆ ತೋರುವ ಆಧುನಿಕ ಮಾನವಲೋಕದ ಆಳದಲ್ಲಿರುವ ಅಂಧಕಾರದ ಮುಸುಕನ್ನು ಸರಿಸುವ ರೀತಿಗೆ ನಮ್ಮ ಎರಡು ಮುಂಗೈಗಳನ್ನು ಒಟ್ಟಾಗಿ ಸೇರಿಸಬಹುದು!

ನಿರ್ದೇಶಕ ಲಿಜೊ ಒಂದು ಸಂದರ್ಶನದಲ್ಲಿ ತಾವು ದಕ್ಷಿಣ ಅಮೆರಿಕದ ಸಾಹಿತ್ಯ ಮತ್ತು ಗ್ಯಾಬ್ರಿಲ್ ಗಾರ್ಸಿಯ ಮಾರ್ಕೆಝ್‌ನಮಾಂತ್ರಿಕ ವಾಸ್ತವತೆಯಿಂದ ಸ್ಪೂರ್ತಿಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಅಂಶ ಅವರ ಚಲನಚಿತ್ರದಲ್ಲಿ ಢಾಳಾಗಿ ಕಂಡು ಬರುತ್ತದೆ!

Writer - ಮ ಶ್ರೀ ಮುರಳಿ ಕೃಷ್ಣ ಜ

contributor

Editor - ಮ ಶ್ರೀ ಮುರಳಿ ಕೃಷ್ಣ ಜ

contributor

Similar News

ಜಗದಗಲ
ಜಗ ದಗಲ