ಹೆಚ್ಚುತ್ತಿರುವ ವಾಯುಮಾಲಿನ್ಯವು ಹಿಂಸಾತ್ಮಕ ವರ್ತನೆಯನ್ನು ಪ್ರಚೋದಿಸುತ್ತಿದೆ: ವಿಜ್ಞಾನಿಗಳು

Update: 2019-11-03 15:45 GMT

ಹೊಸದಿಲ್ಲಿ,ನ.3: ಹೆಚ್ಚಿನ ವಾಯಮಾಲಿನ್ಯವು ಜನರ ಜೀವಗಳನ್ನು ವಿವಿಧ ರೀತಿಗಳಲ್ಲಿ ಅಪಾಯಕ್ಕೊಡ್ಡುತ್ತಿರಬಹುದು. ಅದು ಧೂಮ್ರಪಾನಕ್ಕಿಂತ ಹೆಚ್ಚಿನ ಸಾವುಗಳನ್ನುಂಟು ಮಾಡುತ್ತದೆ ಎನ್ನುವುದು ಈಗಾಗಲೇ ತಿಳಿದಿರುವ ವಿಷಯವಾಗಿದೆ. ಆದರೆ,ವಾಯುವಿನಲ್ಲಿಯ ಪಾರ್ಟಿಕ್ಯುಲೇಟ್‌ಗಳು ಅಥವಾ ಇಂಗಾಲದ ಸೂಕ್ಷ್ಮಕಣಗಳು ಮತ್ತು ಒರೆನ್ ಪ್ರಮಾಣವು ಪ್ರಚಲಿತ ಸುರಕ್ಷತಾ ಮಟ್ಟವನ್ನು ಮೀರಿದಾಗ ವ್ಯಕ್ತಿಯಲ್ಲಿ ಆಕ್ರಮಣಕಾರಿ ಮತ್ತು ಹಿಂಸಾತ್ಮಕ ವರ್ತನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ತಾಪಮಾನವು ಕಡಿಮೆಯಿದ್ದಾಗ ಈ ಪರಿಣಾಮ ಇನ್ನಷ್ಟು ಘೋರವಾಗಿರುತ್ತದೆ ಎಂದು ಅಮೆರಿಕದ ಕೊಲರಾಡೊ ಸ್ಟೇಟ್ ವಿವಿಯ ಸಂಶೋಧಕರ ತಂಡವೊಂದು ಬೆಳಕಿಗೆ ತಂದಿದೆ.

ಸಂಶೋಧಕರು ಅಮೆರಿಕದಲ್ಲಿ ಎಂಟು ವರ್ಷಗಳ ವಾಯು ಗುಣಮಟ್ಟ ಅಧ್ಯಯನವನ್ನು ಎಫ್‌ಬಿಐನ ಅಪರಾಧ ಅಂಕಿಅಂಶಗಳೊಂದಿಗೆ ಹೋಲಿಸುವ ಮೂಲಕ ಮಾಲಿನ್ಯಕಾರಕಗಳ ಸಾಂದ್ರತೆಗೂ ಆಕ್ರಮಣಕಾರಿ ಮತ್ತು ಹಿಂಸಾತ್ಮಕ ವರ್ತನೆಗೂ ಸಂಬಂಧವಿದೆ ಎನ್ನುವುದನ್ನು ಕಂಡುಕೊಂಡಿದ್ದಾರೆ.

ಪಾರ್ಟಿಕ್ಯುಲೇಟ್‌ಗಳಿಗೆ ದೈನಂದಿನ ಒಡ್ಡಿಕೊಳ್ಳುವಿಕೆಯಲ್ಲಿ ಪ್ರತಿ ಘನ ಮೀಟರ್‌ಗೆ 10 ಮೈಕ್ರೋಗ್ರಾಮ್‌ಗಳಷ್ಟು ಏರಿಕೆಯು ಹಿಂಸಾತ್ಮಕ ಅಪರಾಧಗಳಲ್ಲಿ ಶೇ.1.4 ಏರಿಕೆಯೊಂದಿಗೆ ಸಂಬಂಧವನ್ನು ಹೊಂದಿದೆ ಮತ್ತು ಓರೆನ್‌ಗೆ ಒಡ್ಡಿಕೊಳ್ಳ್ಳುವಿಕೆಯಲ್ಲಿ ಪ್ರತಿ ಮಿಲಿಯನ್‌ಗೆ 0.01 ಏರಿಕೆಯು ಹಲ್ಲೆಗಳಲ್ಲಿ ಶೇ.1.15 ಏರಿಕೆಯೊಂದಿಗೆ ಗುರುತಿಸಿಕೊಂಡಿದೆ ಎಂದು ಸಂಶೋಧಕರು ವರದಿಯಲ್ಲಿ ತಿಳಿಸಿದ್ದಾರೆ. ಪಾರ್ಟಿಕ್ಯುಲೇಟ್ ಮಟ್ಟಗಳಲ್ಲಿ ಶೇ.10ರಷ್ಟು ಇಳಿಕೆಯು ಪ್ರತಿ ವರ್ಷ ಅಪರಾಧ ವೆಚ್ಚಗಳಲ್ಲಿ 1.4 ಶತಕೋಟಿ ಬಿಲಿಯನ್ ಡಾಲರಗಳನ್ನು ಉಳಿಸಬಹುದಾಗಿದೆ ಎಂದು ಸಂಶೋಧಕರು ಲೆಕ್ಕ ಹಾಕಿದ್ದಾರೆ.

ವಾಯುಮಾಲಿನ್ಯ ಮತ್ತು ಅಪರಾಧಗಳ ನಡುವಿನ ಸಂಬಂಧಕ್ಕೆ ಜನರು ಹೆಚ್ಚಿನ ಮಟ್ಟದ ವಾಯುಮಾಲಿನ್ಯಕ್ಕೆ ತೆರೆದುಕೊಂಡಾಗ ಒತ್ತಡದ ಹಾರ್ಮೋನ್ ಕಾರ್ಟಿಸಾಲ್‌ನ ಉತ್ಪತ್ತಿಯಲ್ಲಿ ಏರಿಕೆಯು ಕಾರಣವಾಗಿರಬಹುದೆಂದು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ ಸಂಶೋಧಕರು ಕಳೆದ ವರ್ಷ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News