ದಿಲ್ಲಿಯೆಂಬ ಗ್ಯಾಸ್ ಚೇಂಬರ್: ಮಾಲಿನ್ಯದ ಮೂಲ ಹುಡುಕುತ್ತಾ

Update: 2019-11-04 04:58 GMT

ಮಹಾತ್ಮ ಗಾಂಧೀಜಿ ‘ಪರಿಸರ ಮಾಲಿನ್ಯ’ದ ವಿರುದ್ಧ ದೊಡ್ಡದಾಗಿ ಧ್ವನಿಯೆತ್ತಿದ್ದರು. ಅವರು ಪ್ರಪ್ರಥಮವಾಗಿ ಕಾಂಗ್ರೆಸ್‌ನ ಮಹಾಸಮ್ಮೇಳನದಲ್ಲಿ ಭಾಗವಹಿಸಿದಾಗ, ಅಲ್ಲಿರುವ ಶೌಚಾಲಯದ ಹೀನ ಸ್ಥಿತಿಯನ್ನು ಗಮನಿಸಿದರು ಮತ್ತು ತಾವೇ ಸ್ವತಃ ಶೌಚಾಲಯಗಳನ್ನು ಶುಚಿಗೊಳಿಸತೊಡಗಿದರು. ಭಾರತದಲ್ಲಿ ಅವರ ಸ್ವಾತಂತ್ರ ಹೋರಾಟದ ಪುಟ ತೆರೆದುಕೊಂಡಿದ್ದು ಶೌಚಾಲಯವನ್ನು ಶುದ್ಧೀಕರಿಸುವ ಮೂಲಕ. ಅಂತಿಮವಾಗಿ ಅದು ಬ್ರಿಟಿಷರನ್ನು ಭಾರತದಿಂದ ಗುಡಿಸಿ ಹೊರ ಹಾಕುವವರೆಗೂ ಮುಂದುವರಿಯಿತು. ಭಾರತದ ಪುಣ್ಯ ಕ್ಷೇತ್ರಗಳಿಗೆ ಕಾಲಿರಿಸಿದಾಗ ಅಲ್ಲಿನ ಪರಿಸರ ಮಾಲಿನ್ಯವನ್ನು ಕಂಡು ಅವರು ದಂಗು ಬಡಿದಿದ್ದರು. ‘ಇಂತಹ ಪರಿಸರದಲ್ಲಿ ದೇವರು ಇರುವುದು ಸಾಧ್ಯವೇ ಇಲ್ಲ. ಇನ್ನು ಮುಂದೆ ಯಾವ ತೀರ್ಥ ಕ್ಷೇತ್ರಗಳಿಗೂ ಕಾಲಿಡಲಾರೆ’ ಎಂದು ಶಪಥ ಮಾಡಿದ್ದರು. ಅಲ್ಲಿಂದ ಅವರು ಕಾಶಿಯಂತಹ ಸ್ಥಳಗಳಲ್ಲಿ ದೇವರನ್ನು ಹುಡುಕುವುದನ್ನೇ ನಿಲ್ಲಿಸಿದರು. ಇದೇ ಸಂದರ್ಭದಲ್ಲಿ ಉಡುಪಿಗೆ ಬಂದ ಮಹಾತ್ಮಾ ಗಾಂಧೀಜಿ ಅಲ್ಲಿನ ಮಠದೊಳಗೂ ಕಾಲಿಡುವುದಕ್ಕೆ ನಿರಾಕರಿಸಿದರು. ಕಾರಣ ಇಷ್ಟೇ. ಗಾಂಧೀಜಿ ಮಠದ ನಿರ್ವಾಹಕರಲ್ಲಿ ಕೇಳಿದರು ‘‘ಈ ಮಠದೊಳಗೆ ದಲಿತರಿಗೆ ಪ್ರವೇಶವಿದೆಯೆ?’’. ಪ್ರತಿಯಾಗಿ ‘ಇಲ್ಲ’ ಎನ್ನುವ ಉತ್ತರ ಸಿಕ್ಕಿತು. ಯಾವ ಮಠ, ದೇವಾಸ್ಥಾನಗಳಲ್ಲಿ ಅಸ್ಪಶ್ಯರಿಗೆ ಪ್ರವೇಶವಿಲ್ಲವೋ ಆ ಪರಿಸರಕ್ಕೆ ನಾನೂ ಕಾಲಿಡಲಾರೆ ಎಂದು ಅವರು ಅಲ್ಲಿಂದ ಮರಳಿದರು.

ಮಾಲಿನ್ಯವೆನ್ನುವುದು ಕೇವಲ ಬಾಹ್ಯ ಸಂಗತಿಯಲ್ಲ. ಶುದ್ಧಿಗೆ ಅಂತರಂಗದ ಜೊತೆಗೆ ನೇರ ಸಂಬಂಧವಿದೆ ಎಂದು ಗಾಂಧೀಜಿ ಭಾವಿಸಿದ್ದರು ಮತ್ತು ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಆಂದೋಲನವನ್ನು ಅವರು ರೂಪಿಸಿದ್ದರು. ಅಂತರಂಗವನ್ನು ಶುದ್ಧಿಗೊಳಿಸದೇ ಬಹಿರಂಗವನ್ನು ಶುದ್ಧಿಗೊಳಿಸಲು ಸಾಧ್ಯವಿಲ್ಲ ಎನ್ನುವುದು ಅವರ ನಿಲುವಾಗಿತ್ತು. ಇಂದು ಅಂತರಂಗದ ತುಂಬಾ ‘ಮಾಲಿನ್ಯ’ಗಳನ್ನು ಹೊತ್ತುಕೊಂಡ ನಾಯಕರು ದೇಶದ ಬೀದಿ ಗುಡಿಸುವ ನಟನೆ ಮಾಡಿ ಸ್ವಚ್ಛತೆಗೆ ಕರೆ ನೀಡುತ್ತಿದ್ದಾರೆ. ಆದರೆ ಆ ಕರೆ ವಿಫಲವಾಗುತ್ತಿದೆ. ನಮ್ಮ ನಾಯಕರ ಕೇಂದ್ರ ಸ್ಥಾನವಾಗಿರುವ ದಿಲ್ಲಿ ಇಂದು ‘ಗ್ಯಾಸ್ ಚೇಂಬರ್’ ಆಗಿ ಪರಿವರ್ತನೆ ಹೊಂದಿದೆ ಎನ್ನುವುದನ್ನು ಅಲ್ಲಿನ ನಾಯಕರೇ ಒಪ್ಪಿಕೊಂಡಿದ್ದಾರೆ. ಇನ್ನು ಅವರು ದೇಶದ ಉಳಿದ ಪ್ರದೇಶಗಳಿಗೆ ಯಾವ ರೀತಿಯ ಸ್ವಚ್ಛತೆಯನ್ನು ಬೋಧಿಸುತ್ತಾರೆ?

ಗಾಂಧೀಜಿಯೆಂದರೆ ‘ಸ್ವಚ್ಛತಾ ಆಂದೋಲನ’ ಮಾತ್ರವಲ್ಲ ಎನ್ನುವುದನ್ನು ಮೊದಲು ಬಿಜೆಪಿ ಮತ್ತು ಸಂಘಪರಿವಾರ ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ. ಸ್ವಚ್ಛತಾ ಆಂದೋಲನ ಅವರ ಹಲವು ಹೋರಾಟಗಳ ಒಂದು ಅಂಗ ಮಾತ್ರವಾಗಿತ್ತು. ಬೃಹತ್ ವೃಕ್ಷದ ಒಂದು ರೆಂಬೆ ಮಾತ್ರ. ಬರೇ ರೆಂಬೆಯ ತುಂಡು ಜನರಿಗೆ ನೆರಳು ನೀಡುವುದಕ್ಕೆ ಸಾಧ್ಯವಿಲ್ಲ. ಗಾಂಧೀಜಿಯ ಸ್ವಚ್ಛತೆ ಅಂತರಂಗದಿಂದ ಆರಂಭವಾಯಿತು. ಬಳಸುವ ಭಾಷೆಯಲ್ಲೇ ಅದು ಅಡಗಿತ್ತು. ಗಾಂಧೀಜಿಯ ಅಹಿಂಸೆ, ಸೌಹಾರ್ದ, ಮಾನವೀಯತೆ, ಜಾತ್ಯತೀತತೆ ಇವೆಲ್ಲವನ್ನು ಎಸೆದು, ಬರೇ ಸ್ವಚ್ಛತೆಯ ಕರಪತ್ರ ಮುಂದಿಟ್ಟು ಗಾಂಧಿ ಜಪ ಮಾಡಿದರೆ ಗಾಂಧಿ ಮತ್ತು ಸ್ವಚ್ಛತೆ ಎರಡನ್ನೂ ನಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ದೀಪಾವಳಿ ಬಂದು ಹೋಯಿತು. ಈ ದೀಪಾವಳಿ ನಗರಗಳಲ್ಲಿ ಸಂಭ್ರಮಗಳನ್ನು ಬಿತ್ತಿ ಹೋಗಿರುವುದಕ್ಕಿಂತ ಮಾಲಿನ್ಯಗಳನ್ನು ಹರಡಿ ಹೋದದ್ದೇ ಹೆಚ್ಚು. ದಿಲ್ಲಿಯಂತಹ ನಗರ ಪ್ರದೇಶಗಳಲ್ಲಿ ದೀಪಾವಳಿಯ ಬಳಿಕ ಮಾಲಿನ್ಯ ಅತಿರೇಕವನ್ನು ತಲುಪಿತು. ದೀಪಾವಳಿ ಹಬ್ಬ ಯಾವ ರೀತಿಯಲ್ಲೂ ಮಾಲಿನ್ಯಗಳಿಗೆ ಪ್ರೋತ್ಸಾಹವನ್ನು ನೀಡುವುದಿಲ್ಲ. ಅದು ಹಣತೆಗಳ ಹಬ್ಬ. ಮನೆ ಮನಗಳಲ್ಲಿ ಈ ಹಣತೆ ಒಂದು ರೂಪಕದಂತೆ ಬೆಳಗಬೇಕು. ಆದರೆ ನಾವಿಂದು ದೀಪಾವಳಿಯನ್ನು ‘ಪಟಾಕಿ ಹಬ್ಬ’ವಾಗಿ ಪರಿವರ್ತಿಸಿದ್ದೇವೆ.

ಇದು ಏಕಕಾಲದಲ್ಲಿ ಕಸಗಳನ್ನಷ್ಟೇ ಅಲ್ಲ, ವಾಯುವನ್ನೂ ಕೆಡಿಸುತ್ತವೆ. ಜೊತೆಗೆ ಜನಸಾಮಾನ್ಯರನ್ನು ಕಂಗೆಡಿಸುವ ಶಬ್ದ ಮಾಲಿನ್ಯವನ್ನು ಹರಡುತ್ತದೆ. ಇದನ್ನು ಪರಿಸರ ಹೋರಾಟಗಾರರು ಮುಂದಿಟ್ಟಾಗ, ಅದಕ್ಕೆ ಬಿಜೆಪಿಯ ಮುಖಂಡನೊಬ್ಬ ಜಾತಿ, ಧರ್ಮದ ಹಣೆಪಟ್ಟಿಯನ್ನು ಲಗತ್ತಿಸುತ್ತಾನೆ. ಒಂದು ನಿರ್ದಿಷ್ಟ ಧರ್ಮದ ಜನರನ್ನು ಗುರಿಯಾಗಿಸಿದ ಆತ ‘‘ಪಟಾಕಿಯನ್ನಲ್ಲ, ಮೊದಲು ಆ ಧರ್ಮೀಯರ ಮಕ್ಕಳನ್ನು ನಿಷೇಧಿಸಿ’ ಎಂದು ಹೇಳಿಕೆ ನೀಡುತ್ತಾನೆ. ಇದು ಈತನ ವೈಯಕ್ತಿಕ ಹೇಳಿಕೆಯಲ್ಲ. ಈ ದೇಶವನ್ನು ಆಳುವ ಸರಕಾರವನ್ನು ನಿಯಂತ್ರಿಸುವ ಸಂಸ್ಥೆಯ ನಾಯಕರ ಒಳಗಿನ ಮಾತುಗಳ ಪ್ರತಿನಿಧಿ ಆತ. ಇಲ್ಲಿ ಪಟಾಕಿಯ ಹಿಂದಿರುವುದು ದ್ವೇಷದ ಮನಸ್ಥಿತಿ. ಈ ಮನಸ್ಥಿತಿ ಅಳಿಯದೆ ಮಾಲಿನ್ಯವನ್ನು ತಡೆಗಟ್ಟುವುದು ಸಾಧ್ಯವಿಲ್ಲ. ಮಾಲಿನ್ಯವೆನ್ನುವುದು ರಸ್ತೆಯ ಕಸ ಹೆಕ್ಕುವುದರಿಂದಷ್ಟೇ ಮುಗಿಯುವುದಿಲ್ಲ. ಶುಚಿಯಾದ ರಸ್ತೆಯಲ್ಲಿ ಅಮಾಯಕರ ರಕ್ತದ ಕಲೆ ಅಂಟದಂತೆ ನೋಡಿಕೊಳ್ಳುವುದು ಕೂಡ ಸ್ವಚ್ಛತೆಯ ಭಾಗವೇ ಆಗಿದೆ.

ಅರವಿಂದ ಕೇಜ್ರಿವಾಲ್ ದಿಲ್ಲಿಯನ್ನು ‘ಗ್ಯಾಸ್‌ಚೇಂಬರ್’ ಎಂದು ಬಣ್ಣಿಸಿದ್ದಾರೆ. ವಿಶ್ವಕ್ಕೆ ಗ್ಯಾಸ್ ಚೇಂಬರ್ ಪರಿಚಯವಾಗಿರುವುದು ಹಿಟ್ಲರ್ ಮೂಲಕ. ಆತನ ದ್ವೇಷದ ಪರಾಕಾಷ್ಠೆಯ ಮಾಲಿನ್ಯದಿಂದ ಸೃಷ್ಟಿಯಾದದ್ದು ‘ಗ್ಯಾಸ್‌ಚೇಂಬರ್’. ಅಮಾಯಕರನ್ನು ವಿಷಾನಿಲ ನೀಡಿ ಸಾಯಿಸುವುದಕ್ಕೆ ಆತನೇ ತಯಾರಿಸಿದ ಚೇಂಬರ್ ಅದು. ದ್ವೇಷ ಎನ್ನುವ ವಿಷಾನಿಲವನ್ನು ಜನರಲ್ಲಿ ಹರಡುವ ಮೂಲಕ ಇಂತಹದೊಂದು ಗ್ಯಾಸ್‌ಚೇಂಬರ್‌ನ್ನು ಸೃಷ್ಟಿಸಲು ಸಂಘಪರಿವಾರ ಈ ದೇಶದಲ್ಲಿ ಹಲವು ದಶಕಗಳಿಂದ ಯತ್ನಿಸುತ್ತಲೇ ಇದೆ. ದ್ವೇಷ ಭಾಷಣಗಳ ಮೂಲಕ ಈ ದೇಶವಾಸಿಗಳ ಮನಸ್ಸುಗಳನ್ನು ಕಲುಷಿತಗೊಳಿಸುವಲ್ಲಿ ಸಂಘಪರಿವಾರ ನಾಯಕರು ಬಹುತೇಕ ಯಶಸ್ವಿಯಾಗಿದ್ದಾರೆ. ಎನ್‌ಆರ್‌ಸಿ, ಕಾಶ್ಮೀರ, ರಾಮಮಂದಿರ ಇತ್ಯಾದಿ ಹೇಳಿಕೆಗಳ ಮೂಲಕ ಈ ವಿಷಾನಿಲಗಳು ಮನ ಮನೆಗೆ ಹರಡಲು ಸರಕಾರ ವಿಶೇಷ ಮುತುವರ್ಜಿ ವಹಿಸಿವೆ. ಇದು ಹೊರಗಿನ ಮಾಲಿನ್ಯಕ್ಕಿಂತ ಹೆಚ್ಚು ಅಪಾಯಕಾರಿ. ಇಂದು ದಿಲ್ಲಿ ಮಾತ್ರವಲ್ಲ, ಇಡೀ ದೇಶ ಈ ಮಾಲಿನ್ಯದಿಂದ ಕಲುಷಿತಗೊಂಡಿದೆ. ದೇಶದ ಆರೋಗ್ಯ ಚೆನ್ನಾಗಿರಬೇಕಾಗಿದ್ದರೆ ದೇಹ ಮತ್ತು ಮನಸ್ಸು ಎರಡೂ ಮಾಲಿನ್ಯದಿಂದ ರಕ್ಷಣೆ ಪಡೆಯಬೇಕು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಆದುದರಿಂದ, ಇಂದು ಒಳ ಹೊರಗಿನ ಮಾಲಿನ್ಯಗಳ ವಿರುದ್ಧ ಜೊತೆ ಜೊತೆಯಾಗಿ ಹೋರಾಡಬೇಕಾಗಿದೆ.

ಇಡೀ ದಿಲ್ಲಿ ಹೊಗೆಯಿಂದ ತುಂಬಿ ಹೋಗಿದೆ. ಈ ‘ಹೊಗೆ’ಯ ಮೂಲ ಯಾವುದು ಎಂಬ ಚರ್ಚೆ ನಡೆಯುತ್ತಿದೆ. ಒಂದು ಗುಂಪು ಇದರ ಹೊಣೆಯನ್ನು ರೈತರ ತಲೆಗೆ ಕಟ್ಟುತ್ತಿದ್ದಾರೆ. ಮತ್ತೊಂದು ಗುಂಪು ವಾಹನ ದಟ್ಟನೆಯೇ ಕಾರಣ ಎಂದು ವಾದಿಸುತ್ತಿದೆ. ಕೇಂದ್ರ ಸರಕಾರ ‘ಕೇಜ್ರಿವಾಲ್’ ಹೊಣೆ ಎಂದು ಹೇಳಿ ನುಣುಚಿಕೊಳ್ಳುತ್ತಿದೆ. ದಿಲ್ಲಿಯ ಸರಕಾರ ‘ಕೇಂದ್ರದ ಕಡೆಗೆ’ ಬೆರಳು ತೋರಿಸುತ್ತಿದೆ. ಯಾರಿಗೂ ಮಾಲಿನ್ಯದ ಮೂಲ ಹುಡುಕಿ ಅದನ್ನು ನಿವಾರಿಸುವ ಉದ್ದೇಶವಿಲ್ಲ. ತಮ್ಮ ವಿರೋಧಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಕ್ಕಾಗಿ ಈ ಮಾಲಿನ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಮೊತ್ತ ಮೊದಲು ಮಾಲಿನ್ಯವನ್ನು ರಾಜಕೀಯಗೊಳಿಸುವುದು ನಿಲ್ಲಬೇಕು. ಈ ಮಾಲಿನ್ಯದ ಹಿಂದೆ ರೈತರು ತ್ಯಾಜ್ಯಗಳಿಗೆ ನೀಡುವ ಬೆಂಕಿಯಷ್ಟೇ, ವಾಹನಗಳು ಉಗುಳುವ ಹೊಗೆಯೂ ಇದೆ. ಜೊತೆಗೆ ನೆರೆಯ ಪಾಕಿಸ್ತಾನ ಪ್ರದೇಶದಿಂದಲೂ ತ್ಯಾಜ್ಯದ ಹೊಗೆ ಆಮದಾಗುತ್ತಿದೆ. ಈ ನಿಟ್ಟಿನಲ್ಲಿ ನೆರೆ ದೇಶದ ಜೊತೆಗೂ ನಾವು ಉತ್ತಮ ವಾತಾವರಣ ನಿರ್ಮಾಣ ಮಾಡಿ ಮಾತುಕತೆ ನಡೆಸುವು ಅತ್ಯಗತ್ಯವಾಗಿದೆ. ಪಟಾಕಿಯ ಹೆಸರಲ್ಲಿ, ಧರ್ಮದ ಹೆಸರಲ್ಲಿ ದ್ವೇಷದ ಹೊಗೆ ಉಗುಳುವ ನಾಯಕರ ಪಾತ್ರವೂ ಇದರ ಹಿಂದಿದೆ. ಎಲ್ಲ ಹೊಗೆಯ ಮೂಲವೂ ನಮ್ಮ ಎದೆಯೊಳಗಿದೆ. ನಿವಾರಣೆಯ ಕೆಲಸ ಅಲ್ಲಿಂದಲೇ ಆರಂಭವಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News