ಫಾರ್ಮುಲಾ 1: ಆರನೇ ವಿಶ್ವ ಪ್ರಶಸ್ತಿ ಗೆದ್ದ ಹ್ಯಾಮಿಲ್ಟನ್

Update: 2019-11-04 07:06 GMT

ವಾಷಿಂಗ್ಟನ್: ಖ್ಯಾತ ಫಾರ್ಮುಲಾ 1 ರೇಸರ್ ಲೆವಿಸ್ ಹ್ಯಾಮಿಲ್ಟನ್ ತಮ್ಮ ಆರನೇ ವಿಶ್ವ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಮೆರಿಕನ್ ಗ್ರಾಂಡ್ ಪ್ರಿಕ್ಸ್‌ನಲ್ಲಿ ಮರ್ಸಿಡೆಸ್ ಬೆಂಝ್ ತಂಡದ ವಲ್ಟೆರಿ ಬೊಟ್ಟಾಸ್ ಅವರ ನಂತರ ಎರಡನೆಯವರಾಗಿ ಸ್ಪರ್ಧೆ ಮುಗಿಸಿದರೂ, ಆರನೇ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಗ್ರಿಡ್‌ನಲ್ಲಿ ಐದನೆಯವಾಗಿ ಸ್ಪರ್ಧೆ ಆರಂಭಿಸಿದ 34 ವರ್ಷದ ಹ್ಯಾಮಿಲ್ಟನ್, ಅಪೂರ್ವ ಬದ್ಧತೆಯಿಂದ ಹೋರಾಡಿದರೂ ಅಗ್ರಸ್ಥಾನ ಸಂಪಾದಿಸಲು ಸಾಧ್ಯವಾಗಲಿಲ್ಲ. ಎರಡು ಬಾರಿ ಮುನ್ನಡೆಯಲ್ಲಿದ್ದರೂ, ಮೂರು ಲ್ಯಾಪ್‌ಗಳಿರುವಾಗ ಬೊಟ್ಟಾಸ್ ಅವರು ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿದರು. ಅಂತಿಮವಾಗಿ 150ನೇ ಬಾರಿ ಪೋಡಿಯಂಗೇರುವ ಸಾಧನೆ ಮಾಡಿದ ಹ್ಯಾಮಿಲ್ಟನ್ ಸತತ 31ನೇ ಬಾರಿ ಅಂಕ ಸಂಪಾದನೆಯೊಂದಿಗೆ ರೇಸ್ ಕೊನೆಗೊಳಿಸಿದರು.

ಮೈಕೆಲ್ ಶೂಮೇಕರ್ ಮಾತ್ರ ಏಳು ಬಾರಿ ವಿಶ್ವ ಪ್ರಶಸ್ತಿ ಗೆದ್ದಿದ್ದು, ಈ ದಾಖಲೆಯನ್ನು ಸರಿಗಟ್ಟಲು ಹ್ಯಾಮಿಲ್ಟನ್ ಅವರಿಗೆ ಒಂದು ಪ್ರಶಸ್ತಿ ಅಗತ್ಯವಿದೆ. ಹ್ಯಾಮಿಲ್ಟನ್ ಇದಕ್ಕೂ ಮುನ್ನ 2008, 2014, 2015, 2017 ಮತ್ತು 2018ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಅರ್ಜೆಂಟೀನಾದ ಜುವಾನ್ ಮ್ಯಾನ್ಯುಯಲ್ ಫಂಗಿಯೊ ಐದು ಪ್ರಶಸ್ತಿ ಗೆದ್ದಿದ್ದಾರೆ.

"ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ನಿರೀಕ್ಷೆಗೂ ಮೀರಿದ್ದು. ಇಂದಿನ ರೇಸ್ ಅಷ್ಟು ಕಠಿಣವಾಗಿತ್ತು. ವೆಲಟ್ಟೆರಿ ಶ್ರೇಷ್ಠ ಸಾಧನೆ ಮಾಡಿದರು. ಒಬ್ಬ ಅಥ್ಲೀಟ್ ಆಗಿ ನಾನು ಹೊಸಬನಾಗಿಯೇ ಇರಲು ಬಯಸುತ್ತೇನೆ. ಈ ಸೀಸನ್‌ನಲ್ಲಿ ಇದನ್ನು ಮುಂದುವರಿಸುತ್ತೇನೆ" ಎಂದು ಹ್ಯಾಮಿಲ್ಟನ್ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News