ಮೆಕ್‌ಡೊನಾಲ್ಡ್ಸ್ ಸಿಇಒ ವಜಾ : ಕಾರಣ ಏನು ಗೊತ್ತೇ ?

Update: 2019-11-04 04:22 GMT

ನ್ಯೂಯಾರ್ಕ್ : ಕಂಪೆನಿಯ ನಿಯಮಾವಳಿ ಉಲ್ಲಂಘಿಸಿ ಮಹಿಳಾ ಉದ್ಯೋಗಿಯೊಬ್ಬರ ಜತೆ ಒಪ್ಪಿತ ಸಂಬಂಧ ಇರಿಸಿಕೊಂಡ ಕಾರಣಕ್ಕೆ ಮೆಕ್‌ಡೊನಾಲ್ಡ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀವ್ ಎಸ್ಟರ್‌ಬ್ರೂಕ್ ಅವರನ್ನು ವಜಾಗೊಳಿಸಲಾಗಿದೆ.

ಮಾಜಿ ಅಧ್ಯಕ್ಷ ಹಾಗೂ ಸಿಇಒ ಈ ನಿರ್ಧಾರ ಕೈಗೊಂಡಿದ್ದು, ಉನ್ನತ ಹುದ್ದೆಯಲ್ಲಿರುವವರು ನೇರ ಅಥವಾ ಪರೋಕ್ಷ ಉದ್ಯೋಗಿಗಳ ಜತೆ ಪ್ರಣಯ ಸಂಬಂಧ ಇಟ್ಟುಕೊಳ್ಳುವುದನ್ನು ಮೆಕ್‌ಡೊನಾಲ್ಡ್ ಸಹಿಸುವುದಿಲ್ಲ ಎಂದು ಫಾಸ್ಟ್‌ಫುಡ್ ಬಹುರಾಷ್ಟ್ರೀಯ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

ಉದ್ಯೋಗಿಗಳಿಗೆ ಬರೆದ ಇ-ಮೇಲ್ ಸಂದೇಶದಲ್ಲಿ ಎಸ್ಟರ್‌ಬ್ರೂಕ್, ಉದ್ಯೋಗಿಯೊಬ್ಬರ ಜತೆ ಸಂಬಂಧ ಹೊಂದಿರುವುದು ನಿಜ ಎಂದು ಒಪ್ಪಿಕೊಂಡಿದ್ದು, ಇದು ದೊಡ್ಡ ತಪ್ಪು ಎಂದು ಹೇಳಿದ್ದಾರೆ. "ಕಂಪೆನಿಯ ಮೌಲ್ಯಗಳ ಹಿನ್ನೆಲೆಯಲ್ಲಿ, ಆಡಳಿತ ಮಂಡಳಿಯ ನಿರ್ಧಾರಕ್ಕೆ ನನ್ನ ಒಪ್ಪಿಗೆ ಇದೆ. ಇದು ಹೊರಹೋಗಲು ಸೂಕ್ತ ಸಮಯ" ಎಂದು ವಿವರಿಸಿದ್ದಾರೆ.

ವಿಷಯದ ಬಗ್ಗೆ ಸಮಗ್ರ ಚರ್ಚೆ ನಡೆಸಿದ ಬಳಿಕ ಮೆಕ್‌ಡೊನಾಲ್ಡ್ಸ್ ಆಡಳಿತ ಮಂಡಳಿ, ಎಸ್ಟರ್‌ಬ್ರೂಕ್ ಅವರ ವಜಾ ನಿರ್ಧಾರದ ಪರವಾಗಿ ಮತ ಚಲಾಯಿಸಿತು. ಎಸ್ಟರ್‌ಬ್ರೂಕ್ ಅವರ ನಿರ್ಗಮನ ಪ್ಯಾಕೇಜ್ ವಿವರಗಳನ್ನು ಸೋಮವಾರ ಬಹಿರಂಗಪಡಿಸಲಾಗುವುದು ಎಂದು ವಕ್ತಾರರು ಹೇಳಿದ್ದಾರೆ.

2015ರಿಂದ ಸಿಇಒ ಆಗಿರುವ ಅವರು ಕಂಪನಿಯ ಆಡಳಿತ ಮಂಡಳಿಯಿಂದಲೂ ಹೊರ ನಡೆಯಬೇಕಾಗುತ್ತದೆ. ಆದರೆ ಯಾವ ಉದ್ಯೋಗಿ ಜತೆ ಸಿಇಒ ಅಕ್ರಮ ಸಂಬಂಧ ಹೊಂದಿದ್ದರು ಎನ್ನುವುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಅಮೆರಿಕ ಮೆಕ್‌ಡೊನಾಲ್ಡ್ಸ್ ಅಧ್ಯಕ್ಷರಾಗಿದ್ದ ಕ್ರಿಸ್ ಕೆಂಪ್‌ಝಿನ್‌ಸ್ಕಿ ಅವರನ್ನು ಹೊಸ ಅಧ್ಯಕ್ಷ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News