ಹಾಂಕಾಂಗ್: ಪ್ರತಿಭಟನಕಾರರು, ಪೊಲೀಸರ ನಡುವೆ ಮತ್ತೆ ಘರ್ಷಣೆ

Update: 2019-11-04 18:01 GMT

ಹಾಂಕಾಂಗ್, ನ. 4: ರವಿವಾರ ಮತ್ತೆ ರಸ್ತೆಗಿಳಿದು ಪ್ರತಿಭಟನೆ ಮಾಡಿದ ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಪ್ರತಿಭಟನಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಾ ಶಾಪಿಂಗ್ ಮಾಲೊಂದರಲ್ಲಿ ಜಮಾಯಿಸಿದರು. ಈ ಸಂದರ್ಭದಲ್ಲಿ ಚಾಕುವಿನಿಂದ ಆಕ್ರಮಣ ನಡೆಸಿದ ವ್ಯಕ್ತಿಯೊಬ್ಬ ಹಲವಾರು ಮಂದಿಯನ್ನು ಇರಿದು ಗಾಯಗೊಳಿಸಿದನು ಹಾಗೂ ಸ್ಥಳೀಯ ರಾಜಕಾರಣಿಯೊಬ್ಬರ ಕಿವಿಯ ತುಂಡೊಂದನ್ನು ಅಗಿದು ಹರಿದು ಹಾಕಿದನು ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟೈಕೂ ಶಿಂಗ್‌ನ ಪೂರ್ವ ಉಪನಗರ ಸಿಟಿಪ್ಲಾಝಾದಲ್ಲಿ ಪ್ರತಿಭಟನಕಾರರು ಮಾನವ-ಸರಪಣಿಯೊಂದನ್ನು ಏರ್ಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿತು. ಪ್ರತಿಭಟನಕಾರರು ಎಸ್ಕಲೇಟರ್‌ನಲ್ಲಿ ಮೇಲೆ-ಕೆಳಗೆ ಓಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಶಾಪಿಂಗ್ ಮಾಲ್‌ಗೆ ಖರೀದಿಗೆ ಬಂದಿದ್ದ ಗ್ರಾಹಕರ ನಡುವೆಯೇ ಪ್ರತಿಭಟನಕಾರರು ಮತ್ತು ಪೊಲೀಸರ ಕಣ್ಣಾಮುಚ್ಚಾಲೆ ಆಟ ನಡೆಯಿತು.

ಮಾಲ್‌ನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಪ್ರತಿಭಟನಕಾರರು ದಾಂಧಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು.

ಹಲವಾರು ಮಂದಿ ಗಾಯಗೊಂಡಿದ್ದಾರೆ. ಚಾಕುವಿನಿಂದ ದಾಳಿ ನಡೆಸಿದ ವ್ಯಕ್ತಿಯನ್ನು ಪ್ರತಿಭಟನಕಾರರು ಬಳಿಕ ಥಳಿಸಿದ್ದಾರೆ.

ಡೆಮಾಕ್ರಟಿಕ್ ಜಿಲ್ಲಾ ಕೌನ್ಸಿಲರ್ ಆ್ಯಂಡ್ರೂ ಚಿಯುರ ಕಿವಿ ಹರಿದಿದ್ದು, ರಕ್ತ ಸುರಿಯುತ್ತಿತ್ತು.

ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವಕ್ಕಾಗಿ ಆಗ್ರಹಿಸಿ ನಿರಂತರ 16ನೇ ವಾರ ಪ್ರತಿಭಟನೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News