ಇರಾಕ್: ಇರಾನ್ ಕೌನ್ಸುಲೇಟ್ ಕಚೇರಿ ಹೊರಗೆ ಪ್ರತಿಭಟನೆ: 3 ಪ್ರತಿಭಟನಕಾರರ ಸಾವು

Update: 2019-11-04 18:13 GMT

ಕರ್ಬಾಲ (ಇರಾಕ್), ನ. 4: ಇರಾಕ್‌ನ ಪವಿತ್ರ ನಗರ ಕರ್ಬಲಾದಲ್ಲಿರುವ ಇರಾನ್‌ನ ಕೌನ್ಸುಲೇಟ್ ಕಚೇರಿಯ ಹೊರಗೆ ರವಿವಾರ ರಾತ್ರಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಮೂವರು ಪ್ರತಿಭಟನಕಾರರು ಮೃತಪಟ್ಟಿದ್ದಾರೆ.

ದಕ್ಷಿಣದ ನಗರದಲ್ಲಿರುವ ಕೌನ್ಸುಲೇಟ್ ಕಚೇರಿಯ ಗೋಡೆಗಳನ್ನು ಏರಿ ಅದಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆಗಳು ಗೋಲಿಬಾರು ನಡೆಸಿದವು.

ಇರಾಕ್‌ನಲ್ಲಿ ಅಕ್ಟೋಬರ್ 1ರಂದು ಸರಕಾರ ವಿರೋಧಿ ಪ್ರತಿಭಟನೆ ಆರಂಭಗೊಂಡಂದಿನಿಂದ ಈವರೆಗೆ 250ಕ್ಕೂ ಅಧಿಕ ಪ್ರತಿಭಟನಕಾರರು ಪ್ರಾಣ ಕಳೆದುಕೊಂಡಿದ್ದಾರೆ.

 ಕರ್ಬಲಾದಲ್ಲಿ ರವಿವಾರ ತಡರಾತ್ರಿ ಪ್ರತಿಭಟನಕಾರರು ಇರಾನ್ ಕೌನ್ಸುಲೇಟ್ ಕಚೇರಿಯ ಸುತ್ತಲಿನ ಕಾಂಕ್ರೀಟ್ ಬ್ಲಾಕ್‌ಗಳ ಮೇಲೆ ಇರಾಕ್ ಧ್ವಜಗಳನ್ನು ನೇತಾಡಿಸಿದರು ಹಾಗೂ ಸ್ಪ್ರೇ ಪೇಂಟ್ ಮೂಲಕ ‘‘ಕರ್ಬಲಾ ಸ್ವತಂತ್ರಗೊಂಡಿದೆ, ಇರಾನ್ ಹೋಗು, ಹೋಗು’’ ಎಂದು ಬರೆದರು.

ಕೆಲವರು ಕೌನ್ಸುಲೇಟ್ ಮೇಲೆ ಕಲ್ಲುಗಳನ್ನ ಎಸೆದರು ಹಾಗೂ ಗೋಡೆಗಳಲ್ಲಿ ಪಟಾಕಿಗಳನ್ನು ಸಿಡಿಸಿದರು. ಬಳಿಕ ಕಟ್ಟಡದ ದ್ವಾರದಲ್ಲಿ ಟಯರ್‌ಗಳಿಗೆ ಬೆಂಕಿ ಕೊಟ್ಟರು.

ಪ್ರತಿಭಟನಕಾರರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಹಾಗೂ ಗೋಲಿಬಾರ್ ಮಾಡಿದರು.

ತಾವು ವಿರೋಧಿಸುತ್ತಿರುವ ‘‘ಭ್ರಷ್ಟ ಹಾಗೂ ಅದಕ್ಷ’’ ಇರಾಕ್ ಸರಕಾರವನ್ನು ಇರಾನ್ ಬೆಂಬಲಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ಇರಾನ್ ವಿರುದ್ಧ ಆಕ್ರೋಶಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News