ಪಾಕ್ ಸಂಪೂರ್ಣ ಬಂದ್: ಧಾರ್ಮಿಕ ನಾಯಕ ಎಚ್ಚರಿಕೆ

Update: 2019-11-04 18:16 GMT

ಇಸ್ಲಾಮಾಬಾದ್, ನ. 4: ಅಧಿಕಾರದಿಂದ ಕೆಳಗಿಳಿಯಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ಗೆ ಆ ದೇಶದ ಧಾರ್ಮಿಕ ನಾಯಕ ಹಾಗೂ ರಾಜಕಾರಣಿ ಮೌಲಾನಾ ಫಝ್ಲುರ್ ರೆಹಮಾನ್ ನೀಡಿರುವ ಎರಡು ದಿನಗಳ ಗಡುವು ರವಿವಾರ ರಾತ್ರಿ ಮುಕ್ತಾಯಗೊಂಡಿದ್ದು, ಇಡೀ ದೇಶವನ್ನು ಬಂದ್ ಮಾಡುವುದಾಗಿ ಫಝ್ಲುರ್ ರೆಹಮಾನ್ ಬೆದರಿಕೆ ಹಾಕಿದ್ದಾರೆ.

ಎರಡು ದಿನಗಳ ಗಡುವಿನ ಕೊನೆಯಲ್ಲಿ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಜಮೀಯತ್ ಉಲೇಮಾ-ಎ-ಇಸ್ಲಾಮ್ ಫಝ್ಲಾ (ಜೆಯುಐ-ಎಫ್)ನ ನಾಯಕ ರೆಹಮಾನ್ ಈ ಎಚ್ಚರಿಕೆ ನೀಡಿದರು.

ರಾಜೀನಾಮೆ ನೀಡುವಂತೆ ಪ್ರಧಾನಿಯ ಮೇಲೆ ಒತ್ತಡ ಹೇರಲು ರೆಹಮಾನ್ ಕಳೆದ ವಾರ ‘ಆಝಾದಿ ಮಾರ್ಚ್’ ಎಂಬ ಹೆಸರಿನಲ್ಲಿ ಬೆಂಬಲಿಗರ ಬೃಹತ್ ಮೆರವಣಿಗೆಯೊಂದನ್ನು ಇಸ್ಲಾಮಾಬಾದ್‌ಗೆ ಒಯ್ದಿದ್ದರು.

ರವಿವಾರ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ದೇಶ ಈಡೇರುವವರೆಗೆ ಪ್ರತಿಭಟನೆಗಳು ಮುಂದುವರಿಯುವುದು ಎಂದು ಹೇಳಿದರು.

‘‘ಆಡಳಿತಗಾರ (ಇಮ್ರಾನ್ ಖಾನ್) ಅಧಿಕಾರದಿಂದ ಕೆಳಗಿಳಿಯಬೇಕು ಹಾಗೂ ನ್ಯಾಯೋಚಿತ ಚುನಾವಣೆಯ ಮೂಲಕ ಹೊಸ ಆಡಳಿತಗಾರನನ್ನು ಆಯ್ಕೆ ಮಾಡಲು ಜನರಿಗೆ ಅವಕಾಶ ನೀಡಬೇಕು ಎನ್ನುವುದು ಸ್ಪಷ್ಟವಾಗಿದೆ. ಇದಕ್ಕೆ ಹೊರತಾದ ಬೇರೆ ಆಯ್ಕೆ ಇಲ್ಲ ಎನ್ನುವುದೂ ಸ್ಪಷ್ಟವಾಗಿದೆ’’ ಎಂದರು.

ಈಗ ನಡೆಯುತ್ತಿರುವ ಪ್ರತಿಭಟನೆಗಳು ಒಂದನೇ ಯೋಜನೆಯ ಭಾಗವಾಗಿದೆ ಹಾಗೂ ನನ್ನಲ್ಲಿ ಎರಡು ಮತ್ತು ಮೂರನೇ ಯೋಜನೆಗಳೂ ಇವೆ. ಇಸ್ಲಾಮಾಬಾದ್‌ನಲ್ಲಿ ಧರಣಿಯನ್ನು ಮುಂದುವರಿಸುವುದೇ ಅಥವಾ ಅದನ್ನು ವಿಸ್ತರಿಸುವುದೇ ಎಂಬ ಬಗ್ಗೆ ನಾನು ನಿರ್ಧಾರವೊಂದನ್ನು ತೆಗೆದುಕೊಳ್ಳುವೆ ಎಂದು ಧಾರ್ಮಿಕ ನಾಯಕ ಹೇಳಿದರು.

‘‘ಇಂದು ಇಸ್ಲಾಮಾಬಾದ್ ಸ್ಥಗಿತಗೊಂಡಿದೆ. ಮುಂದಕ್ಕೆ ಇಡೀ ದೇಶವನ್ನು ನಾವು ಬಂದ್ ಮಾಡುತ್ತೇವೆ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ, ನಿಲ್ಲಿಸುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News