ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹೊರ ಬರುವ ಪ್ರಕ್ರಿಯೆ ಆರಂಭಿಸಿದ ಅಮೆರಿಕ

Update: 2019-11-05 18:00 GMT

ವಾಶಿಂಗ್ಟನ್, ನ. 5: ಪ್ಯಾರಿಸ್ ಹವಾಮಾನ ಒಪ್ಪಂದದಿಂದ ತಾನು ಹಿಂದೆ ಸರಿಯುತ್ತಿರುವುದಾಗಿ ಅಮೆರಿಕ ಸೋಮವಾರ ವಿಶ್ವಸಂಸ್ಥೆಗೆ ಔಪಚಾರಿಕವಾಗಿ ತಿಳಿಸಿದೆ. ಈ ಮೂಲಕ ಒಪ್ಪಂದದಿಂದ ಹೊರಗುಳಿದ ಜಗತ್ತಿನ ಅತಿ ದೊಡ್ಡ ಆರ್ಥಿಕ ಶಕ್ತಿ ಅಮೆರಿಕವಾಗಿದೆ.

ಹವಾಮಾನ ಬದಲಾವಣೆಯ ವಾಸ್ತವ ಮತ್ತು ಅದರ ಪರಿಣಾಮಗಳ ಬಗ್ಗೆ ಅಗಾಧ ಪುರಾವೆಗಳಿದ್ದರೂ, ಒಪ್ಪಂದದಿಂದ ಹೊರಹೋಗುವ ಪ್ರಕ್ರಿಯೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಾಲನೆ ನೀಡಿದ್ದಾರೆ.

ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮರ ಮಧ್ಯಸ್ಥಿಕೆಯಲ್ಲಿ 2015ರಲ್ಲಿ ಜಾಗತಿಕ ಪರಿಸರ ಒಪ್ಪಂದಕ್ಕೆ ಜಗತ್ತಿನ ದೇಶಗಳು ಸಹಿ ಹಾಕಿದ್ದವು.

2020 ನವೆಂಬರ್ 4ರಂದು ಅಮೆರಿಕವು ಪ್ಯಾರಿಸ್ ಪರಿಸರ ಒಪ್ಪಂದದಿಂದ ಅಧಿಕೃತವಾಗಿ ಹೊರಬೀಳಲಿದೆ. ಅಂದರೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವ ಒಂದು ದಿನದ ಬಳಿಕ ಇದು ಸಂಭವಿಸಲಿದೆ. ಆ ಚುನಾವಣೆಯಲ್ಲಿ ಟ್ರಂಪ್ ಮರು ಆಯ್ಕೆಯನ್ನು ಕೋರುತ್ತಿದ್ದಾರೆ.

ಅಮೆರಿಕದ ನಿರ್ಧಾರವನ್ನು ಘೋಷಿಸಿದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಈ ಒಪ್ಪಂದವು ಅಮೆರಿಕದ ಮೇಲೆ ‘ಅನ್ಯಾಯಯುತ ಆರ್ಥಿಕ ಹೊರೆ’ಯನ್ನು ಹೇರಿದೆ ಎಂಬ ಟ್ರಂಪ್‌ರ ಹೇಳಿಕೆಯನ್ನು ಪುನರುಚ್ಚರಿಸಿದರು.

ಅಮೆರಿಕದಿಂದ ಪರಿಸರ ರಾಜಕೀಯ: ಡೆಮಾಕ್ರಟ್ ಸಂಸದ

ಅಮೆರಿಕದ ಟ್ರಂಪ್ ಆಡಳಿತವು ಮತ್ತೊಮ್ಮೆ ತನ್ನ ಮಿತ್ರ ದೇಶಗಳೊಂದಿಗೆ ಅಗೌರವಯುತವಾಗಿ ನಡೆದುಕೊಳ್ಳುತ್ತಿದೆ, ವಾಸ್ತವಗಳಿಗೆ ಕುರುಡಾಗಿದೆ ಹಾಗೂ ಜಗತ್ತಿನ ಅತಿ ದೊಡ್ಡ ಪರಿಸರ ಸವಾಲನ್ನು ಇನ್ನಷ್ಟು ರಾಜಕೀಕರಣಗೊಳಿಸುತ್ತಿದೆ ಎಂದು ಅಮೆರಿಕದ ಸೆನೆಟ್ ವಿದೇಶ ಸಂಬಂಧಗಳ ಸಮಿತಿಯಲ್ಲಿರುವ ಉನ್ನತ ಡೆಮಾಕ್ರಟ್ ಸಂಸದ ರಾಬರ್ಟ್ ಮೆನೆಂಡೀಝ್ ಹೇಳಿದ್ದಾರೆ.

ಸ್ವಾರ್ಥಕ್ಕಾಗಿ ಭೂ ಗ್ರಹವನ್ನು ಬಲಿಕೊಡುವವರು: ಮಾಜಿ ಉಪಾಧ್ಯಕ್ಷ ಅಲ್ ಗೋರ್

2015ರ ಪರಿಸರ ಒಪ್ಪಂದದಿಂದ ಅಮೆರಿಕವನ್ನು ಹಿಂದಕ್ಕೆ ಎಳೆಯುವ ಟ್ರಂಪ್ ಸರಕಾರದ ನಿರ್ಧಾರಕ್ಕೆ ಅಮೆರಿಕದ ಮಾಜಿ ಉಪಾಧ್ಯಕ್ಷ ಹಾಗೂ ಪರಿಸರ ಹೋರಾಟಗಾರ ಅಲ್ ಗೋರ್ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಹೊಸ ಅಧ್ಯಕ್ಷರು ಅಮೆರಿಕವನ್ನು 30 ದಿನಗಳಲ್ಲಿ ಒಪ್ಪಂದಕ್ಕೆ ಮರುಸೇರಿಸಬಹುದು ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

‘‘ಪರಿಸರ ಬಿಕ್ಕಟ್ಟನ್ನು ಪರಿಹರಿಸುವ ನಮ್ಮ ವೇಗವನ್ನು ಯಾವುದೇ ವ್ಯಕ್ತಿ ಅಥವಾ ಪಕ್ಷ ತಡೆಯಲು ಸಾಧ್ಯವಿಲ್ಲ. ಆದರೆ ಹೀಗೆ ಮಾಡಲು ಪ್ರಯತ್ನಿಸುವವರು ತಮ್ಮ ಸ್ವಾರ್ಥಕ್ಕಾಗಿ ಭೂ ಗ್ರಹವನ್ನು ಬಲಿಕೊಡಲು ನಡೆಸಿದ ಪ್ರಯತ್ನಗಳಿಗಾಗಿ ನೆನಪಿನಲ್ಲಿ ಉಳಿಯುವರು’’ ಎಂದು ಗೋರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News