ಕಾಮನ್‌ವೆಲ್ತ್ ಚಾಂಪಿಯನ್ ರವಿ, ಇತರ ನಾಲ್ವರಿಗೆ ನಿಷೇಧ

Update: 2019-11-06 03:08 GMT

ಹೊಸದಿಲ್ಲಿ, ನ.5: ಉದ್ದೀಪನಾ ದ್ರವ್ಯ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಚಿನ್ನ ವಿಜೇತ ವೇಟ್‌ಲಿಫ್ಟರ್ ರವಿ ಕುಮಾರ್ ಹಾಗೂ ಇತರ ನಾಲ್ವರನ್ನು ರಾಷ್ಟ್ರೀಯ ಉದ್ದೀಪನಾ ನಿಗ್ರಹ ಘಟಕ (ನಾಡ) 4 ವರ್ಷಗಳ ನಿಷೇಧದ ಸಜೆ ವಿಧಿಸಿದೆ.

 ರವಿ ಕುಮಾರ್ 69 ಕಿ.ಗ್ರಾಂ ವಿಭಾಗದಲ್ಲಿ 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, 2014ರ ಗೇಮ್ಸ್‌ನಲ್ಲಿ 77 ಕಿ.ಗ್ರಾಂ ವಿಭಾಗದಲ್ಲಿ ಬೆಳ್ಳಿಪದಕ ಗೆದ್ದಿದ್ದರು. ಜೊತೆಗೆ, 2016ರ ಜೂನಿಯರ್ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವ ಪೂರ್ಣಿಮಾ ಪಾಂಡೆ, ಫೆಡರೇಶನ್ ಕಪ್‌ನ ಡಿಸ್ಕಸ್ ಥ್ರೋ ಚಾಂಪಿಯನ್ ಧರ್ಮರಾಜ್ ಯಾದವ್, 100 ಮತ್ತು 200 ಮೀ ಓಟಗಾರ ಸಂಜೀತ್, ವೆಯ್ಟೋ ಲಿಫ್ಟರ್ ಗುರ್ಮೈಲ್ ಸಿಂಗ್ ಕೂಡಾ ನಿಷೇಧಕ್ಕೆ ಒಳಗಾಗಿದ್ದಾರೆ. ರವಿ ಕುಮಾರ್ ಹಾಗೂ ಸಂಜೀತ್‌ರ ಮೂತ್ರದ ಮಾದರಿಯಲ್ಲಿ ನಿಷೇಧಿತ ಉದ್ದೀಪನಾ ದ್ರವ್ಯ ‘ಒಸ್ಟ್ರೈನ್’ನ ಅಂಶ ಕಂಡುಬಂದಿದೆ . ಕ್ರೀಡಾಪಟುಗಳ ಮಾಂಸಖಂಡ ಸದೃಢಗೊಳಿಸಲು ಒಸ್ಟ್ರೈನ್ ಬಳಸಲಾಗುತ್ತದೆ. ಭಾರತೀಯ ಕ್ರೀಡಾಪಟುಗಳ ದೃವ್ಯಪರೀಕ್ಷೆಯ ಸಂದರ್ಭ ಇದೇ ಪ್ರಪ್ರಥಮ ಬಾರಿಗೆ ಈ ಉದ್ದೀಪನಾ ದ್ರವ್ಯದ ಅಂಶದ ಕಂಡುಬಂದಿರುವುದು ಭಾರತದ ಒಲಿಂಪಿಕ್ಸ್ ತಯಾರಿಗೆ ಭಾರೀ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಇವರಿಬ್ಬರು ಒಲಿಂಪಿಕ್ಸ್ ಕ್ರೀಡೆಯಿಂದ ಅನರ್ಹರಾಗುವ ಸಾಧ್ಯತೆಯಿದೆ. ಅಂತರ್‌ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಅಸೋಸಿಯೇಷನ್(ಐಡಬ್ಲೂಎಫ್) ಒಲಿಂಪಿಕ್ಸ್ ಟೂರ್ನಿಗೆ ಸಂಬಂಧಿಸಿ ಹೊಸ ನಿಯಮಗಳನ್ನು ಪರಿಚಯಿಸಿದ್ದು 2008ರಿಂದ 2020ರ ಅವಧಿಯಲ್ಲಿ 20 ಅಥವಾ ಅದಕ್ಕಿಂತ ಹೆಚ್ಚಿನ ಉದ್ದೀಪನಾ ದ್ರವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದ ದೇಶವು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೇವಲ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ವೇಟ್ ಲಿಫ್ಟರ್‌ನ್ನು ಕಳುಹಿಸಬಹುದು. ಇದೇ ಅವಧಿಯಲ್ಲಿ 10ರಿಂದ 19 ಪ್ರಕರಣ ವರದಿಯಾದ ದೇಶ 2 ಪುರುಷ ಹಾಗೂ 2 ಮಹಿಳಾ ವೆಯ್ಟೆಲಿಫ್ಟರ್ ಅನ್ನು ಕಳುಹಿಸಬಹುದು. 2019ರ ಫೆಬ್ರವರಿಯಲ್ಲಿ ವಿಶಾಖ ಪಟ್ಟಣದಲ್ಲಿ ನಡೆದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದ್ರವ್ಯಪರೀಕ್ಷೆ ಸಂದರ್ಭ ಸಿಕ್ಕಿಬಿದ್ದಿರುವ ರವಿ ಕುಮಾರ್ ಹಾಗೂ ಪೂರ್ಣಿಮಾರಿಗೆ ಆ ದಿನದಿಂದಲೇ ನಿಷೇಧ ಜಾರಿಯಲ್ಲಿರುತ್ತದೆ. ಧರ್ಮ ರಾಜ್ ಮತ್ತು ಸಂಜೀತ್ ಅವರ ಅಮಾನತು ಅವಧಿ 2018ರ ಸೆಪ್ಟಂಬರ್ 19ರಿಂದ ಜಾರಿಯಲ್ಲಿರುತ್ತದೆ. ಮತ್ತೊಬ್ಬ ಅಥ್ಲೆಟ್ ಬಿಲ್ಲುಗಾರ ಸಂಗಮ್‌ಪ್ರೀತ್ ಬಿಸ್ಲಾರನ್ನು ಎಚ್ಚರಿಕೆ ನೀಡಿ ಬಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News