ಫೇಸ್‌ಬುಕ್ ಬಳಕೆದಾರರ ಮಾಹಿತಿ, ವಿವರಗಳು ಮತ್ತೆ ಸೋರಿಕೆ!

Update: 2019-11-06 17:25 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ನ. 6: ಕನಿಷ್ಠ 100 ಆ್ಯಪ್ ತಯಾರಕರು ಫೇಸ್‌ಬುಕ್ ಬಳಕೆದಾರರ ದತ್ತಾಂಶಗಳನ್ನು ತಿಂಗಳುಗಳ ಕಾಲ ಬಳಸಿರಬಹುದು ಎಂದು ಫೇಸ್‌ ಬುಕ್ ಬುಧವಾರ ಹೇಳಿದೆ. ಕನಿಷ್ಠ 11 ಭಾಗೀದಾರ ಸಂಸ್ಥೆಗಳು ಕಳೆದ 60 ದಿನಗಳಲ್ಲಿ ಗ್ರೂಪ್ ಸದಸ್ಯರ ಮಾಹಿತಿಗಳನ್ನು ಕಲೆಹಾಕಿರುವುದನ್ನು ಅದು ಖಚಿತಪಡಿಸಿದೆ.

ಇದರೊಂದಿಗೆ ಫೇಸ್‌ಬುಕ್‌ನ ಇನ್ನೊಂದು ಮಾಹಿತಿ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ.

ಆ್ಯಪ್‌ಗಳು, ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಮಾಧ್ಯಮ ನಿರ್ವಹಣಾ ಮತ್ತು ವೀಡಿಯೊ ಸ್ಟ್ರೀಮಿಂಗ್ ಆ್ಯಪ್‌ಗಳು ಫೇಸ್‌ಬುಕ್ ಗ್ರೂಪ್‌ಗಳಿಂದ ದತ್ತಾಂಶ ಪಡೆಯುವುದನ್ನು ಮುಂದುವರಿಸಿವೆ ಎನ್ನುವುದನ್ನು ಪತ್ತೆಹಚ್ಚಿರುವುದಾಗಿ ಫೇಸ್‌ಬುಕ್ ತಿಳಿಸಿದೆ. ಅವುಗಳು ಗ್ರೂಪ್‌ಗಳ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರೊಫೈಲ್ ಚಿತ್ರಗಳು ಮತ್ತು ಹೆಸರುಗಳು ಮುಂತಾದ ಗ್ರೂಪ್ ಸದಸ್ಯರ ವಿವರಗಳನ್ನು ಗ್ರೂಪ್ಸ್ ಎಪಿಐ (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್) ಮೂಲಕ ಸಂಗ್ರಹಿಸಿವೆ ಎಂದು ಸಾಮಾಜಿಕ ಮಾಧ್ಯಮ ದೈತ್ಯ ಹೇಳಿದೆ.

‘‘ದತ್ತಾಂಶ ಸೋರಿಕೆಗೆ ಸಂಬಂಧಿಸಿ ನಮಗೆ ಯಾವುದೇ ಪುರಾವೆ ಲಭ್ಯವಾಗದಿದ್ದರೂ, ಈ ಆ್ಯಪ್‌ಗಳು ಉಳಿಸಿಕೊಂಡಿರಬಹುದಾದ ಯಾವುದೇ ಗ್ರೂಪ್ ಸದಸ್ಯರ ಮಾಹಿತಿಗಳನ್ನು ಅಳಿಸಿ ಹಾಕುವಂತೆ ನಾವು ಅವುಗಳಿಗೆ ಸೂಚಿಸುತ್ತೇವೆ ಹಾಗೂ ಅವುಗಳನ್ನು ಅಳಿಸಿ ಹಾಕಲಾಗಿದೆಯೇ ಎನ್ನುವುದನ್ನು ಖಚಿತಪಡಿಸಲು ಪರಿಶೋಧನೆ ನಡೆಸುತ್ತೇವೆ’’ ಎಂದು ಫೇಸ್‌ಬುಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News