ಸ್ಥಗಿತಗೊಂಡಿರುವ ವಸತಿ ಯೋಜನೆಗಳ ನೆರವಿಗಾಗಿ 25,000 ಕೋ.ರೂ.ಗಳ ಪರ್ಯಾಯ ನಿಧಿ ಸ್ಥಾಪನೆ

Update: 2019-11-06 18:06 GMT

ಹೊಸದಿಲ್ಲಿ,ನ.6: ದೇಶಾದ್ಯಂತ ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ನೆರವಾಗುವ ಉದ್ದೇಶದಿಂದ 25,000 ಕೋ.ರೂ.ಗಳ ಪರ್ಯಾಯ ನಿಧಿ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು,ಕೈಗೆಟಕುವ ಬೆಲೆಗಳ ಮತ್ತು ಮಧ್ಯಮ ಆದಾಯ ವಸತಿ ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತಾ ಸಾಲವನ್ನು ಒದಗಿಸಲು ಸರಕಾರವು ವಿಶೇಷ ಗವಾಕ್ಷಿಯನ್ನು ಸ್ಥಾಪಿಸಲಿದೆ ಎಂದರು.

 ಪರ್ಯಾಯ ನಿಧಿ ವ್ಯವಸ್ಥೆಯಿಂದ 4.58 ಲಕ್ಷ ಮನೆಗಳನ್ನು ಹೊಂದಿರುವ 1600ರಷ್ಟು ಸ್ಥಗಿತಗೊಂಡಿರುವ ವಸತಿ ಯೋಜನೆಗಳಿಗೆ ಲಾಭವಾಗಲಿದೆ. ಸರಕಾರವು 10,000 ಕೋ.ರೂ.ಗಳನ್ನು ಈ ನಿಧಿಗೆ ಒದಗಿಸಲಿದ್ದು,ಎಸ್‌ಬಿಐ ಮತ್ತು ಎಲ್‌ಐಸಿಯಂತಹ ಸಂಸ್ಥೆಗಳು ಉಳಿದ 15,000 ಕೋ.ರೂ.ಗಳನ್ನು ಕ್ರೋಢೀಕರಿಸಲಿವೆ ಎಂದ ಅವರು,ಈ ಹೂಡಿಕೆಯನ್ನು ಮುಂಬೈನಲ್ಲಿ ಎರಡು ಕೋ.ರೂ.ಗೂ ಕಡಿಮೆ ವೆಚ್ಚದ,ದಿಲ್ಲಿ-ಎನ್‌ಸಿಆರ್,ಚೆನ್ನೈ ಮತ್ತು ಇತರ ಮಹಾನಗರಗಳಲ್ಲಿ 1.5 ಕೋ.ರೂ.ಗೂ ಕಡಿಮೆ ವೆಚ್ಚದ ಮತ್ತು ಇತರ ನಗರಗಳಲ್ಲಿ ಒಂದು ಕೋ.ರೂ.ಗೂ ಕಡಿಮೆ ವೆಚ್ಚದ ಯೋಜನೆಗಳನ್ನು ಪೂರ್ಣಗೊಳಿಸಲು ಬಳಸಲಾಗುವುದು ಎಂದು ತಿಳಿಸಿದರು.

ಸರಕಾರದ ಈ ಕ್ರಮವು ಉದ್ಯೋಗ ಸೃಷ್ಟಿಯ ಜೊತೆಗೆ ಸಿಮೆಂಟ್,ಕಬ್ಬಿಣ ಮತ್ತು ಉಕ್ಕು ತಯಾರಿಕೆ ಕ್ಷೇತ್ರಗಳಲ್ಲಿ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಹೊಂದಿದೆ,ಜೊತೆಗೆ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿಯ ಒತ್ತಡವನ್ನು ನಿವಾರಿಸಲೂ ಉದ್ದೇಶಿಸಿದೆ ಎಂದು ಸೀತಾರಾಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News