ನಾಲ್ಕು ರಾಜ್ಯಗಳಿಗೆ ಮಹಾ, ಬುಲ್‌ಬುಲ್ ಚಂಡಮಾರುತ ಭೀತಿ !

Update: 2019-11-07 03:50 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತ ಉಪಖಂಡವನ್ನು ಸುತ್ತಿಕೊಂಡಿರುವ ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಮಹಾ ಹಾಗೂ ಬುಲ್‌ಬುಲ್ ಎಂಬ ಎರಡು ಚಂಡಮಾರುತ ಸಾಧ್ಯತೆ ಹಿನ್ನೆಲೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಬಂಗಾಳ ಹಾಗೂ ಒಡಿಶಾದಲ್ಲಿ ಕಟ್ಟೆಚ್ಚರ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಪಶ್ಚಿಮ ಕರಾವಳಿಗೆ ಮಹಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಇದು ಗುಜರಾತ್ ಹಾಗೂ ಮಹಾರಾಷ್ಟ್ರ ಮೇಲೆ ಪರಿಣಾಮ ಬೀರಲಿದೆ. ಅಂತೆಯೇ ಪೂರ್ವ ಕರಾವಳಿಯ ಬುಲ್‌ಬುಲ್ ಚಂಡಮಾರುತ ಬಂಗಾಳ ಹಾಗೂ ಒಡಿಶಾ ರಾಜ್ಯಗಳನ್ನು ಗುರಿ ಮಾಡಲಿದೆ.

"ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬಂಗಾಳಕೊಲ್ಲಿಯ ತಿತ್ಲಿ ಚಂಡಮಾರುತ ಮತ್ತು ಅರಬ್ಬಿ ಸಮುದ್ರದ ಲೂಬಾನ್ ಚಂಡಮಾರುತ ಇದೇ ವಾರ ಅಪ್ಪಳಿಸಿದ್ದವು. ಮತ್ತೆ ಅದೇ ಸಮಯದಲ್ಲಿ ಈ ವರ್ಷ ಕೂಡಾ ಎರಡೂ ಸಮುದ್ರಗಳಲ್ಲಿ ಚಂಡಮಾರುತ ವಿಶೇಷವೇನೂ ಅಲ್ಲ" ಎಂದು ಚಂಡಮಾರುತ ತಜ್ಞೆ, ಹವಾಮಾನ ಇಲಾಖೆ ವಿಜ್ಞಾನಿ ಸುನಿತಾ ದೇವಿ ಹೇಳಿದ್ದಾರೆ.

ಉತ್ತರ ಹಾಗೂ ದಕ್ಷಿಣ ವಾಯುಭಾರಗಳು ಸಂಗಮಿಸುವ ಸಮಭಾಜಕ ವೃತ್ತದ ಬಳಿಯ ಭೌಗೋಳಿಕ ಸಂಗಮ ವಲಯ ಸಕ್ರಿಯವಾಗುವ ಕಾರಣದಿಂದ ಚಂಡಮಾರುತ ಬೀಸಲಿದೆ. ಈ ವಲಯ ಸಕ್ರಿಯವಾದಾಗ, ಹೆಚ್ಚಿನ ಸುಳಿಗಳು ರೂಪುಗೊಳ್ಳುತ್ತವೆ. ಅನುಕೂಲಕರ ಪರಿಸ್ಥಿತಿಯಲ್ಲಿ ಅಂದರೆ ಸಾಕಷ್ಟು ತೇವಾಂಶವಿದ್ದು, ಸಮುದ್ರದ ಮೇಲ್ಮೈ ಉಷ್ಣಾಂಶ ಹೆಚ್ಚಿದಾಗ, ಚಂಡಮಾರುತ ರೂಪುಗೊಳ್ಳಲು ಕಾರಣವಾಗುತ್ತದೆ. ಈ ಬಾರಿ ಅರಬ್ಬಿ ಸಮುದ್ರ ಹೆಚ್ಚು ಸಕ್ರಿಯವಾಗಿದೆ ಎಂದು ಅವರು ವಿವರಿಸಿದ್ದಾರೆ.

ಮಹಾ ಚಂಡಮಾರುತದ ಪರಿಣಾಮವಾಗಿ ಮಹಾರಾಷ್ಟ್ರ ಹಾಗೂ ಗುಜರಾತ್‌ನ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ನ. 9ರಿಂದ 11ರವರೆಗೆ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಳೆಯಾಗಲಿದೆ. ಈ ಮಳೆಯು ಉತ್ತರ ಭಾರತ ಮತ್ತು ಪೂರ್ವ ಹಾಗೂ ಕೇಂದ್ರ ಭಾರತದಲ್ಲಿ ವಾಯು ಮಾಲಿನ್ಯ ಕಡಿಮೆಯಾಗಲು ಕಾರಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News