ವರ್ಜಿನಿಯಾ ಸ್ಟೇಟ್ ಸೆನೆಟ್ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಹಶ್ಮಿ

Update: 2019-11-07 17:13 GMT
ಸುಹಾಸ್ ಸುಬ್ರಮಣ್ಯಂ (ಎಡ), ಗಜಲಾ ಹಶ್ಮಿ, ಡಿಂಪಲ್ ಅಜ್ಮೇರಾ (Photo: Twitter/@SuhasforVA | AP | Twitter/@DimpleAjmera)

ವಾಶಿಂಗ್ಟನ್, ನ. 7: ಓರ್ವ ಮುಸ್ಲಿಮ್ ಮಹಿಳೆ ಸೇರಿದಂತೆ ನಾಲ್ವರು ಭಾರತೀಯ ಅಮೆರಿಕನ್ನರು ಅಮೆರಿಕದಲ್ಲಿ ಮಂಗಳವಾರ ನಡೆದ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಜಯ ಗಳಿಸಿದ್ದಾರೆ.

ಸಮುದಾಯ ಕಾಲೇಜೊಂದರ ಮಾಜಿ ಪ್ರೊಫೆಸರ್ ಆಗಿರುವ ಭಾರತೀಯ-ಅಮೆರಿಕನ್ ಗಝಾಲಾ ಹಶ್ಮಿ, ವರ್ಜೀನಿಯ ರಾಜ್ಯದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಮ್ ಮಹಿಳೆಯಾಗಿ ಇತಿಹಾಸ ನಿರ್ಮಿಸಿದರು.

ಅದೇ ವೇಳೆ, ಮಾಜಿ ಅಧ್ಯಕ್ಷ ಬರಾಕ್ ಒಬಾಮಗೆ ಶ್ವೇತಭವನದ ತಂತ್ರಜ್ಞಾನ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಸುಹಾಸ್ ಸುಬ್ರಮಣ್ಯಮ್ ವರ್ಜೀನಿಯ ರಾಜ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾಗಿದ್ದಾರೆ. ಅವರು ಭಾರತೀಯ-ಅಮೆರಿಕನ್ನರೇ ಹೆಚ್ಚಾಗಿರುವ ಲೌಡನ್ ಮತ್ತು ಪ್ರಿನ್ಸ್ ವಿಲಿಯಮ್ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ಕ್ಯಾಲಿಫೋರ್ನಿಯದಲ್ಲಿ ಭಾರತೀಯ ಅಮೆರಿಕನ್ ಮನೋರಾಜು ಆಯ್ಕೆಯಾಗಿದ್ದು, ಸ್ಯಾನ್‌ಫ್ರಾನ್ಸಿಸ್ಕೊದ ಪಬ್ಲಿಕ್ ಡಿಫೆಂಡರ್ ಆಗಿ ಮುಂದುವರಿಯಲಿದ್ದಾರೆ.

ನಾರ್ತ್ ಕ್ಯಾರಲೈನದಲ್ಲಿ, ಶಾರ್ಲಟ್ ನಗರ ಸಭೆಗೆ ಭಾರತೀಯ ಅಮೆರಿಕನ್ ಡಿಂಪಲ್ ಅಜ್ಮೇರ ಪುನರಾಯ್ಕೆಯಾಗಿದ್ದಾರೆ.

ನನ್ನ ವಿಜಯ ಧ್ವನಿಯಿಲ್ಲದವರ ವಿಜಯ: ಗಝಾಲಾ

ತನ್ನ ಪ್ರಥಮ ಚುನಾವಣೆಯನ್ನು ಎದುರಿಸಿದ ಡೆಮಾಕ್ರಟಿಕ್ ಪಕ್ಷದ ಗಝಾಲಾ ಹಶ್ಮಿ ರಿಪಬ್ಲಿಕನ್ ಪಕ್ಷದ ಹಾಲಿ ಸೆನೆಟರ್ ಗ್ಲೆನ್ ಸ್ಟರ್ಟವಾಂಟ್‌ರನ್ನು ಸೋಲಿಸಿದರು.

 ‘‘ಈ ವಿಜಯ ನನಗೆ ಮಾತ್ರ ಸೇರಿದ್ದಲ್ಲ. ವರ್ಜಿನಿಯದಲ್ಲಿ ಅಭಿವೃದ್ಧಿಪರ ಬದಲಾವಣೆಯನ್ನು ಮಾಡಬೇಕಾದ ಅಗತ್ಯವನ್ನು ಮನಗಂಡ ಎಲ್ಲರಿಗೂ ಅದು ಸೇರಿದೆ. ತಮಗೆ ಧ್ವನಿಯಿಲ್ಲ ಎಂದು ಭಾವಿಸಿ ಜನರಲ್ ಅಸೆಂಬ್ಲಿಯಲ್ಲಿ ನಿಮ್ಮನ್ನು ಪ್ರತಿನಿಧಿಸಲು ನನ್ನನ್ನು ಚುನಾಯಿಸಿದ ಎಲ್ಲರಿಗೂ ಅದು ಸೇರಿದೆ’’ ಎಂದು ಐತಿಹಾಸಿಕ ವಿಜಯದ ಬಳಿಕ ಮಾತನಾಡಿದ ಗಝಾಲಾ ಹೇಳಿದರು.

ಅವರ ವಿಜಯಕ್ಕೆ ಮೊದಲ ಮಹಿಳಾ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅಭಿನಂದನೆ ಸಲ್ಲಿಸಿದ್ದಾರೆ.

 ಗಝಾಲಾ 50 ವರ್ಷಗಳ ಹಿಂದೆ ಎಳೆಯ ಬಾಲಕಿಯಾಗಿದ್ದಾಗ ಕುಟುಂಬದ ಜೊತೆ ಭಾರತದಿಂದ ಅಮೆರಿಕಕ್ಕೆ ಹೋದವರು.

 ಗಝಾಲಾ ಜಾರ್ಜಿಯ ಎಂಬ ಸಣ್ಣ ಪಟ್ಟಣದಲ್ಲಿ ಬೆಳೆದರು. ಅವರು 25 ವರ್ಷಗಳನ್ನು ವರ್ಜೀನಿಯದ ಕಾಲೇಜು ಮತ್ತು ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಪ್ರಧಾನಿ ಶಿಕ್ಷಕಿಯಾಗಿ ಕಳೆದರು. ಪ್ರಸಕ್ತ ಅವರು ರಿನಾಲ್ಡ್ಸ್ ಕಮ್ಯುನಿಟಿ ಕಾಲೇಜಿನಲ್ಲಿ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಟೀಚಿಂಗ್ ಆ್ಯಂಡ್ ಲರ್ನಿಂಗ್ (ಸಿಇಟಿಎಲ್)ನ ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News