ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಗೆ ಸ್ಫೂರ್ತಿಯಂತೆ ಚಾಯ್ ವಾಲಾ ಮಹಬೂಬ್ ಮಲಿಕ್...

Update: 2019-11-07 12:13 GMT

ಹೊಸದಿಲ್ಲಿ, ನ.7: ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಬುಧವಾರ ಟ್ವಿಟರ್ ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿ ತಾವು `ಸ್ಫೂರ್ತಿ' ಎಂದು ಪರಿಗಣಿಸುವ ವ್ಯಕ್ತಿಯ ಬಗ್ಗೆ ಬರೆದಿದ್ದಾರೆ. ಆ ವ್ಯಕ್ತಿ ಕಾನ್ಪುರದ 29 ವರ್ಷ ವಯಸ್ಸಿನ ಚಹಾ ಮಾರಾಟಗಾರ ಮುಹಮ್ಮದ್ ಮಹಬೂಬ್ ಮಲಿಕ್.

ಒಂದು ಸಣ್ಣ ಟೀ ಸ್ಟಾಲ್ ನಡೆಸಿ ಗಳಿಸುವ ಆದಾಯದಿಂದ ಮಲಿಕ್ 40 ಮಕ್ಕಳ ಶಿಕ್ಷಣದ ವೆಚ್ಚ ಭರಿಸುತ್ತಾರೆಂದು ಲಕ್ಷ್ಮಣ್ ಬರೆದಿದ್ದಾರೆ. ತಮ್ಮ ಆದಾಯದ ಶೇ.80ರಷ್ಟು ಭಾಗವನ್ನು ಅವರು ಈ ಮಹತ್ಕಾರ್ಯಕ್ಕೆ ವಿನಿಯೋಗಿಸುತ್ತಿದ್ದಾರೆ.

ಮುಹಮ್ಮದ್ ಮಲಿಕ್ ತಮ್ಮ ಟೀ ಸ್ಟಾಲ್ ನಲ್ಲಿರುವ ಚಿತ್ರವನ್ನೂ ಲಕ್ಷ್ಮಣ್ ಶೇರ್ ಮಾಡಿದ್ದಾರೆ. ಮಲಿಕ್ ಬಡ ಕುಟುಂಬದ ಮಕ್ಕಳಿಗಾಗಿ ಕಾನ್ಪುರ್ ನಗರದ ಶಾರದಾನಗರ್ ಪ್ರದೇಶದಲ್ಲಿ ಒಂದು ಶಾಲೆ ನಡೆಸುತ್ತಿದ್ದಾರೆ. 2015ರಿಂದ ಈ ಶಾಲೆ ಸುಮಾರು 40 ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಿದೆ.

ಲಕ್ಷ್ಮಣ್ ಆವರ ಪೋಸ್ಟ್ ವೈರಲ್ ಆಗಿದ್ದು ಸಾವಿರಾರು ಲೈಕ್‍ ಗಳು ಹಾಗೂ ಕಮೆಂಟ್‍ ಗಳನ್ನು ಪಡೆದಿದೆ. ಹಲವರು ಮಲಿಕ್‍ ರನ್ನು ಭೇಟಿಯಾಗುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ತಾನು ಬಾಲ್ಯವನ್ನು ತೀವ್ರ ಬಡತನದಿಂದ ಕಳೆದಿದ್ದರಿಂದ ಹೈಸ್ಕೂಲ್ ತನಕ ಮಾತ್ರ ಶಿಕ್ಷಣ ಪಡೆದಿರುವುದಾಗಿ ಹೇಳುವ ಮಲಿಕ್ ಇದೇ ಕಾರಣದಿಂದ ಬಡ ಮಕ್ಕಳಿಗೆ ಶಾಲೆ ನಡೆಸುತ್ತಿದ್ದಾರೆ. ಎನ್‍ಜಿಒ ಮಾ ತುಜೇ ಸಲಾಂ ಫೌಂಡೇಶನ್ ಮೂಲಕ ಶಾಲೆಯನ್ನು ನಿರ್ವಹಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News