ಸೆಲ್ಯುಲೈಟಿಸ್ ಬಗ್ಗೆ ನಿಮಗೆಷ್ಟು ಗೊತ್ತು?

Update: 2019-11-07 15:28 GMT

ಸೋಂಕುಗಳ ವಿರುದ್ಧ ರಕ್ಷಣೆ ನೀಡುವುದು ನಮ್ಮ ಶರೀರದ ಬಹು ದೊಡ್ಡ ಅಂಗವಾಗಿರುವ ಚರ್ಮದ ಮುಖ್ಯ ಕೆಲಸವಾಗಿದೆ. ಆದರೆ ಕೆಲವೊಮ್ಮೆ ಬ್ಯಾಕ್ಟೀರಿಯಾ,ವೈರಸ್ ಅಥವಾ ಶಿಲೀಂಧ್ರದಂತಹ ರೋಗಕಾರಕಗಳು ಚರ್ಮದ ಮೇಲೆ ದಾಳಿ ನಡೆಸಿದಾಗ ಅದೇ ಸೋಂಕಿಗೊಳಗಾಗುತ್ತದೆ.

ಸೆಲ್ಯುಲೈಟಿಸ್ ಅಥವಾ ಜೀವಕೋಶಗಳ ಉರಿಯೂತ ಸಾಮಾನ್ಯವಾಗಿ ಕಾಲುಗಳ ಕೆಳಭಾಗದ ಚರ್ಮವನ್ನು ಕಾಡುವ ಯಾತನಾದಾಯಕ ಬ್ಯಾಕ್ಟೀರಿಯಾ ಸೋಂಕು ಆಗಿದೆ,ಆದರೆ ಮುಖ, ತೋಳುಗಳು ಅಥವಾ ಶರೀರದ ಇತರ ಯಾವುದೇ ಭಾಗವೂ ಈ ಸೋಂಕಿಗೊಳಗಾಗಬಹುದು. ಸೋಂಕಿಗೊಳಗಾದ ಚರ್ಮ ಕೆಂಪು ಬಣ್ಣಕ್ಕೆ ತಿರುಗಿ ಬಾತುಕೊಂಡಿರುತ್ತದೆ ಮತ್ತು ಸಾಕಷ್ಟು ನೋವನ್ನುಂಟು ಮಾಡುತ್ತದೆ. ಪೀಡಿತ ಭಾಗವನ್ನು ಸ್ಪರ್ಶಿಸಿದರೆ ಬೆಚ್ಚಗಿರುತ್ತದೆ.

 ಸೆಲ್ಯುಲೈಟಿಸ್ ಸಾಮಾನ್ಯವಾಗಿ ಚರ್ಮದ ಮೇಲ್ಮೈಯಲ್ಲಿ ಉಂಟಾಗುತ್ತದೆ,ಆದರೆ ಅದು ಚರ್ಮದ ಅಡಿಯಲ್ಲಿರುವ ಮೃದು ಅಂಗಾಂಶಗಳನ್ನೂ ಬಾಧಿಸಬಹುದು ಮತ್ತು ದುಗ್ಧಗ್ರಂಥಿಗಳು ಹಾಗೂ ರಕ್ತಕ್ಕೂ ಹರಡಬಹುದು.

►ಸೆಲ್ಯುಲೈಟಿಸ್‌ನ ಕಾರಣಗಳು

ಗಾಯ,ಗೀರು ಅಥವಾ ಶಸ್ತ್ರಚಿಕಿತ್ಸೆಯ ಗಾಯದ ಮೂಲಕ ಸ್ಟಾಫಿಲೊಕಾಕಸ್ ಮತ್ತು ಸ್ಟ್ರೆಪ್ಟೊಕಾಕಸ್‌ನಂತಹ ಕೆಲವು ವಿಧಗಳ ಬ್ಯಾಕ್ಟೀರಿಯಾ ಚರ್ಮದ ಸಂಪರ್ಕಕ್ಕೆ ಬಂದಾಗ ಸೆಲ್ಯುಲೈಟಿಸ್ ಉಂಟಾಗುತ್ತದೆ. ಪ್ರಾಣಿಗಳ ಕಡಿತವೂ ಸೆಲ್ಯುಲೈಟಿಸ್‌ಗೆ ಕಾರಣವಾಗಬಲ್ಲದು.

►ವಿಧಗಳು

ಬ್ರೆಸ್ಟ್ ಸೆಲ್ಯುಲೈಟಿಸ್: ಸ್ತನ ಕ್ಯಾನ್ಸರ್‌ಗೆ ವಿಕಿರಣ ಚಿಕಿತ್ಸೆಯನ್ನು ನೀಡಿದ ಬಳಿಕ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಪೆರಿಆರ್ಬಿಟಲ್ ಸೆಲ್ಯುಲೈಟಿಸ್: ಈ ವಿಧದ ಸೆಲ್ಯುಲೈಟಿಸ್ ಕಣ್ಣುಗಳ ಸುತ್ತ ಉಂಟಾಗುತ್ತದೆ.

ಫೇಸಿಯಲ್ ಸೆಲ್ಯುಲೈಟಿಸ್: ಈ ಸೋಂಕು ಮೂಗು,ಕೆನ್ನೆಗಳು ಮತ್ತು ಕಣ್ಣುಗಳ ಸುತ್ತ ಹರಡುತ್ತದೆ

ಪೆರಿಏನಲ್ ಸೆಲ್ಯುಲೈಟಿಸ್: ಈ ವಿಧದ ಸೋಂಕು ಗುದದ್ವಾರ ಮತ್ತು ಗುದನಾಳವನ್ನು ಕಾಡುತ್ತದೆ.

►ಸೆಲ್ಯುಲೈಟಿಸ್ ಲಕ್ಷಣಗಳು

ಚರ್ಮದ ಊತ ಮತ್ತು ಕೆಂಪಗಾಗುವಿಕೆ,ಮೃದುತ್ವ ಮತ್ತು ನೋವು,ಪೀಡಿತ ಭಾಗದಲ್ಲಿ ಬಿಸಿಯ ಅನುಭವ,ಜ್ವರ, ವಾಕರಿಕೆ,ನಡುಕ,ಚಳಿ ಮತ್ತು ತಂಪು ಬೆವರು,ಬಳಲಿಕೆ,ಕೀವು ತುಂಬಿದ ಚರ್ಮದ ಹುಣ್ಣು,ತಲೆ ಸುತ್ತುವಿಕೆ,ತಲೆ ಹಗುರವಾಗುವಿಕೆ,ಸ್ನಾಯು ನೋವು ಇವು ಸೆಲ್ಯುಲೈಟಿಸ್‌ನ ಲಕ್ಷಣಗಳಲ್ಲಿ ಸೇರಿವೆ.

►ಸೆಲ್ಯುಲೈಟಿಸ್ ಉಂಟು ಮಾಡುವ ಅಪಾಯದ ಅಂಶಗಳು

ಇತಿಹಾಸ: ನೀವು ಹಿಂದೆ ಸೆಲ್ಯುಲೈಟಿಸ್‌ನಿಂದ ಪೀಡಿತರಾಗಿದ್ದರೆ ಅದು ಮರುಕಳಿಸುವ ಅಪಾಯ ಶೇ.8ರಿಂದ 20ರಷ್ಟಿರುತ್ತದೆ.

ಬೊಜ್ಜು: ಬೊಜ್ಜುದೇಹಿಗಳು ಸೆಲ್ಯುಲೈಟಿಸ್‌ಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಗಾಯ: ಗಾಯ,ಸುಟ್ಟಗಾಯ ಮತ್ತು ಮೂಳೆ ಮುರಿತದ ಗಾಯಗಳು ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾ ಶರೀರವನ್ನು ಪ್ರವೇಶಿಸಲು ಅವಕಾಶ ನೀಡುತ್ತವೆ.

ಚರ್ಮರೋಗಗಳು: ಕಜ್ಜಿ,ಅಥ್ಲೀಟ್ಸ್ ಫೂಟ್ ಮತ್ತು ಸರ್ಪಸುತ್ತುಗಳು ಚರ್ಮದಲ್ಲಿ ಬಿರುಕುಗಳನ್ನುಂಟು ಮಾಡುತ್ತವೆ ಮತ್ತು ಬ್ಯಾಕ್ಟೀರಿಯಾ ಪ್ರವೇಶವನ್ನು ಸುಲಭವಾಗಿಸುತ್ತವೆ.

ದುರ್ಬಲ ನಿರೋಧಕ ಶಕ್ತಿ: ಮಧುಮೇಹ,ಎಚ್‌ಐವಿ/ಏಡ್ಸ್ ಮತ್ತು ರಕ್ತಕ್ಯಾನ್ಸರ್‌ನಿಂದ ಬಳಲುತ್ತಿರುವವರು ಸೆಲ್ಯುಲೈಟಿಸ್‌ಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಲಿಂಫೆಡೆಮಾ: ಇದು ಚರ್ಮದ ಊತಕ್ಕೆ ಮತ್ತು ಮತ್ತು ಬಿರುಕಿಗೆ ಕಾರಣವಾಗುತ್ತದೆ ಮತ್ತು ಬ್ಯಾಕ್ಟೀರಿಯಾ ಶರೀರವನ್ನು ಪ್ರವೇಶಿಸಲು ಅನುಕೂಲ ಕಲ್ಪಿಸುತ್ತದೆ.

►ಸೆಲ್ಯುಲೈಟಿಸ್‌ನ ತೊಂದರೆಗಳು

ಸೆಲ್ಯುಲೈಟಿಸ್ ದುಗ್ಧರಸ ಹರಿವಿನ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದರಿಂದ ದುಗ್ಧರಸ ಶೇಖರಣೆಗೊಂಡು ಪೀಡಿತ ಕಾಲು ಬಾತುಕೊಳ್ಳುವಂತಾಗುತ್ತದೆ. ಅದು ರಕ್ತ ಸೋಂಕು ಮತ್ತು ಗಾಯಗಳಲ್ಲಿ ನಂಜನ್ನುಂಟು ಮಾಡುತ್ತದೆ. ಅಪರೂಪದ ಪ್ರಕರಣಗಳಲ್ಲಿ ಸೆಲ್ಯುಲೈಟಿಸ್ ಸ್ನಾಯುಗಳು,ಮೂಳೆಗಳು ಅಥವಾ ಹೃದಯ ಕವಾಟಗಳು ಸೇರಿದಂತೆ ಶರೀರದ ಇತರ ಭಾಗಗಳಿಗೂ ಹರಡುತ್ತದೆ.

►ವೈದ್ಯರನ್ನು ಯಾವಾಗ ಕಾಣಬೇಕು?

ಸೆಲ್ಯುಲೈಟಿಸ್ ಸುಲಭವಾಗಿ ಶರೀರದಾದ್ಯಂತ ಹರಡಬಲ್ಲದು,ಹೀಗಾಗಿ ಅದಕ್ಕೆ ಶೀಘ್ರ ಚಿಕಿತ್ಸೆ ಅಗತ್ಯವಿದೆ. ನಿಮ್ಮ ಚರ್ಮದಲ್ಲಿ ತ್ವರಿತವಾಗಿ ಬದಲಾಗುತ್ತಿರುವ ಕೆಂಪುಬಣ್ಣದ,ಊದಿಕೊಂಡ ಮೃದುವಾದ ದದ್ದುಗಳು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರ ಸಲಹೆ ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News