ನ್ಯಾಯದಾನದ ರ‍್ಯಾಂಕಿಂಗ್ ಪಟ್ಟಿ: ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ

Update: 2019-11-07 15:49 GMT

ಹೊಸದಿಲ್ಲಿ,ನ.7: ನ್ಯಾಯದಾನ ಕುರಿತು ಭಾರತದ ಮೊಟ್ಟಮೊದಲ ರಾಜ್ಯಗಳ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಮಹಾರಾಷ್ಟ್ರವು ನ್ಯಾಯದಾನದಲ್ಲಿ ನಂ.1 ಸ್ಥಾನದಲ್ಲಿದೆ.

ಕೇರಳ ಮತ್ತು ತಮಿಳುನಾಡು ಮಹಾರಾಷ್ಟ್ರದ ನಂತರದ ಸ್ಥಾನಗಳಲ್ಲಿದ್ದರೆ, ಉತ್ತರ ಪ್ರದೇಶವು ಪಟ್ಟಿಯಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿದೆ. ಬಿಹಾರ ಕೊಂಚ ಉತ್ತಮ ಎನ್ನಬಹುದು,ಅದು ಉ.ಪ್ರದೇಶಕ್ಕಿಂತ ಒಂದು ಸ್ಥಾನ ಮೇಲಿದೆ.

ಸಣ್ಣ ರಾಜ್ಯಗಳ ಪೈಕಿ ಗೋವಾ ನಂ.1 ಆಗಿದ್ದರೆ,ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶ ಅದರ ನಂತರದ ಸ್ಥಾನಗಳಲ್ಲಿವೆ.

ಸೆಂಟರ್ ಫಾರ್ ಸೋಷಿಯಲ್ ಜಸ್ಟೀಸ್,ಕಾಮನ್ ಕಾಸ್,ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್, ದಕ್ಷ್,ಟಿಐಎಸ್‌ಎಸ್-ಪ್ರಯಾಸ್ ಮತ್ತು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಇವುಗಳ ಸಹಭಾಗಿತ್ವದಲ್ಲಿ ಟಾಟಾ ಟ್ರಸ್ಟ್ ಸಿದ್ಧಪಡಿಸಿರುವ ‘ಇಂಡಿಯಾ ಜಸ್ಟೀಸ್ ರಿಪೋರ್ಟ್ (ಐಜೆಆರ್)’ ಅನ್ನು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಮದನ್ ಬಿ.ಲೋಕೂರ್ ಅವರು ಬಿಡುಗಡೆಗೊಳಿಸಿದರು.

ನ್ಯಾಯದಾನ ವ್ಯವಸ್ಥೆಯ ಎಲ್ಲ ನಾಲ್ಕೂ ಸ್ತಂಭಗಳು ಒಂದಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು,ವರದಿಯ ಉದ್ದೇಶವು ನ್ಯಾಯದಾನದ ರಾಜ್ಯಗಳ ಸಾಮರ್ಥ್ಯದ ಮೌಲ್ಯಮಾಪನವಾಗಿದೆಯೇ ಹೊರತು ಗುಣಮಟ್ಟದ್ದಲ್ಲ ಎಂದರು.

ಪೊಲೀಸ್,ಬಂಧೀಖಾನೆಗಳು ಮತ್ತು ನ್ಯಾಯಾಂಗ ವ್ಯವಸ್ಥೆಗಳಲ್ಲಿ ಹುದ್ದೆಗಳು ಖಾಲಿಯಿರುವುದು ಸಮಸ್ಯೆಯಾಗಿದೆ ಮತ್ತು ಕಳೆದ ಐದು ವರ್ಷಗಳ ಅವಧಿಯಲ್ಲಿ ಅರ್ಧದಷ್ಟು ರಾಜ್ಯಗಳು ಮಾತ್ರ ಖಾಲಿ ಹುದ್ದೆಗಳ ಸಂಖ್ಯೆಯನ್ನು ತಗ್ಗಿಸಲು ಪ್ರಯತ್ನಿಸಿವೆ ಎಂದಿರುವ ವರದಿಯು,ದೇಶದಲ್ಲಿ ಒಟ್ಟು 18,200 ನ್ಯಾಯಾಧೀಶರು ಕರ್ತವ್ಯ ನಿರ್ವಹಿಸುತ್ತಿದ್ದು, ಶೇ.23ರಷ್ಟು ಮಂಜೂರಾದ ಹುದ್ದೆಗಳು ಖಾಲಿಯಿವೆ ಎಂದು ಬೆಟ್ಟು ಮಾಡಿದೆ.

 ನ್ಯಾಯದಾನ ವ್ಯವಸ್ಥೆಯ ಸ್ತಂಭಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಳಪೆಯಾಗಿದೆ ಎಂದಿರುವ ವರದಿಯು,ಪೊಲೀಸ್ ಇಲಾಖೆಯಲ್ಲಿ 2017ಕ್ಕೆ ಇದ್ದಂತೆ ಕೇವಲ ಶೇ.7ರಷ್ಟು ಮಹಿಳಾ ಸಿಬ್ಬಂದಿಗಳಿದ್ದರೆ,2016ರ ಅಂತ್ಯಕ್ಕೆ ಬಂಧೀಖಾನೆಗಳಲ್ಲಿ ಶೇ.10ರಷ್ಟು ಮಹಿಳಾ ಸಿಬ್ಬಂದಿಗಳಿದ್ದರು.ಉಚ್ಚ ನ್ಯಾಯಾಲಯಗಳು ಮತ್ತು ಅಧೀನ ನ್ಯಾಯಾಲಯಗಳಲ್ಲಿ ಶೇ.26.5 ರಷ್ಟು (2017-18) ಮಹಿಳೆಯರಾಗಿದ್ದಾರೆ ಎಂದು ಹೇಳಿದೆ.

ದೇಶದಲ್ಲಿಯ ಜೈಲುಗಳಲ್ಲಿ ಅವುಗಳ ಸಾಮರ್ಥ್ಯದ ಶೇ.114ರಷ್ಟು ಕೈದಿಗಳಿದ್ದಾರೆ ಮತ್ತು ಈ ಪೈಕಿ ಶೇ.68ರಷ್ಟು ಕೈದಿಗಳು ವಿಚಾರಣಾಧೀನರಾಗಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಶೇ.22 (1-1-2017ಕ್ಕೆ ಇದ್ದಂತೆ),ಬಂಧೀಖಾನೆಗಳಲ್ಲಿ ಶೇ.33ರಿಂದ ಶೇ.38.5(31-12-2016ಕ್ಕೆ ಇದ್ದಂತೆ) ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಶೇ.20ರಿಂದ ಶೇ.40 (2016-2017)ರಷ್ಟು ಹುದ್ದೆಗಳು ಖಾಲಿಯಿದ್ದವು. ಗುಜರಾತ್ ಐದು ವರ್ಷಗಳಲ್ಲಿ ಎಲ್ಲ ವಿಭಾಗಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆಗಳನ್ನು ಕಡಿಮೆ ಮಾಡಿರುವ ಏಕಮೇವ ರಾಜ್ಯವಾಗಿದೆ ಎಂದಿರುವ ವರದಿಯು,ಕೇವಲ ಒಂದು ಉಚ್ಚ ನ್ಯಾಯಾಲಯ ಮಾತ್ರ ಶೇ.20ಕ್ಕೂ ಕಡಿಮೆ ಖಾಲಿ ಹುದ್ದೆಗಳನ್ನು ಹೊಂದಿದೆ ಮತ್ತು ಯಾವುದೇ ರಾಜ್ಯದಲ್ಲಿ ಉಚ್ಚ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರ ಶೇಕಡಾವಾರು ಪ್ರಮಾಣ ಎರಡಂಕಿಯನ್ನು ದಾಟುವುದಿಲ್ಲ ಎಂದೂ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News