ವಿಜ್ಞಾನ ವರ್ಸಸ್ ಮಿಥ್‌ಗಳು

Update: 2019-11-07 18:35 GMT

ಇತಿಹಾಸದಲ್ಲಿ ಸುಮಾರು 1,200 ವರ್ಷಗಳ ಹಿಂದೆ ರಜಪೂತರು ಈಗ ರಾಜಸ್ಥಾನ, ದಿಲ್ಲಿ, ಹರ್ಯಾಣ, ಪಶ್ಚಿಮ ಗಂಗಾ ನದಿ ತೀರ ಹಾಗೂ ಬುಂದೇಲ್ ಖಂಡ ಎಂದು ಕರೆಯುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಲೆಮಾರುಗಳಿಂದ ಅವರು ಕಾವ್ಯ, ಜಾನಪದ ಹಾಗೂ ಹಾಡುಗಳ ಮೂಲಕ ತಾವು ಅನುಭವಿಸಿದ ಸೋಲುಗಳನ್ನು ನೈತಿಕ ಗೆಲುವುಗಳನ್ನಾಗಿ ಮಾಡಿಕೊಂಡಿದ್ದಾರೆ. ರಜಪೂತರು ಘಜನಿ, ಘೋರಿ, ಖಿಲ್ಜಿ, ಬಾಬರ್ ಮತ್ತು ಅಕ್ಬರ್ ಎದುರು ಯುದ್ಧಗಳಲ್ಲಿ ಸೋತಿದ್ದರು. ಆದರೂ ನಾವು ನೆನಪಿನಲ್ಲಿಟ್ಟುಕೊಂಡಿರುವುದು ಅವರ ಸೋಲುಗಳನ್ನಲ್ಲ. ಬದಲಾಗಿ ಅವರ ಧೈರ್ಯ, ಸಾಹಸ, ಹೆಮ್ಮೆ, ರಣರಂಗದಲ್ಲಿ ಅವರು ಯುದ್ಧ ದೇವತೆಗೆ ತಮ್ಮ ತಲೆಗಳನ್ನು ಒಪ್ಪಿಸುವುದು, ಶತ್ರುಗಳಿಗೆ ಶರಣಾಗುವುದಕ್ಕೆ ಬದಲಾಗಿ ಅವರ ವೀರ ಪತ್ನಿಯರು ಚಿತೆಯಲ್ಲಿ ಭಸ್ಮ ಆಗುವುದು ನಮ್ಮ ಮನಸ್ಸಿನಲ್ಲಿ ಬರುವ ಚಿತ್ರಗಳು.

ಘಟನೆಗಳು ನಡೆದು ಶತಮಾನಗಳು ಕಳೆದ ಬಳಿಕ ಅವರ ಧೈರ್ಯದ ಬಗ್ಗೆ ಕವಿಗಳು ರಚಿಸಿದ ಲೆಜೆಂಡ್ (ದಂತಕತೆ)ಗಳು ನಮ್ಮ ಮಕ್ಕಳು ಓದುವ ಪಠ್ಯಪುಸ್ತಕಗಳ ವಿಷಯವಾಗಬೇಕು. ಅವರ ಸೋಲಿನ ಬಗ್ಗೆ ಇತಿಹಾಸಕಾರರು ಸಂಗ್ರಹಿಸಿರುವ ವಿವರಗಳಲ್ಲ ಎನ್ನಲಾಗುತ್ತದೆ. ಮುಂದಿನ ತಲೆಮಾರುಗಳ ದೇಶಭಕ್ತರನ್ನು ಸೃಷ್ಟಿಸಲು ಪಠ್ಯಪುಸ್ತಕಗಳು ಸಾಧನಗಳಾಗ ಬೇಡವೇ- ಸಂಪ್ರದಾಯಗಳನ್ನು ಮುಂದುವರಿಸಲು ಸಂತರ ಜೀವನ ಕಥೆಗಳ ಹಾಗೆ? ಈ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಆದರೆ ಅವರು ರಾಜಕಾರಣಿಗಳ ಮುಂದೆ ಅಶಕ್ತರು. ರಾಜಕಾರಣಿಗಳು ರಾಜರನ್ನು ಒಂದೇ ಕಥಾನಕದಿಂದ ಬಂಧಿಸಲು ಬಯಸುತ್ತಾರಾದ್ದರಿಂದ ಅವರಿಗೆ ಮಿತ್ ಮತ್ತು ಲೆಜೆಂಡ್‌ಗಳಲ್ಲಿರುವಷ್ಟು ಆಸಕ್ತಿ ಸತ್ಯದಲ್ಲಿಲ್ಲ.

ವಿಜ್ಞಾನದ ಅಳತೆ ಮತ್ತು ಸಾಕ್ಷಿ/ಪುರಾವೆಗಳ ತತ್ವಗಳನ್ನಾಧರಿಸಿದ ಒಂದು ವಿಷಯವಾಗಿ ಇತಿಹಾಸ ಸುಮಾರು ನೂರೈವತ್ತು ವರ್ಷಗಳಷ್ಟೇ ಹಳೆಯದು. ಜನರ ಸಂವಾದವನ್ನು ನಿಯಂತ್ರಿಸಲು ಬಯಸುವ ಜನರ ಕೈಯಲ್ಲಿ ಅದು ಅಲ್ಪಾವಧಿಯಲ್ಲಿ ಒಂದು ಗಂಭೀರ ಶಕ್ತಿಯಾಗಿ ಬಿಟ್ಟಿದೆ. ಮೊದಲು ಹೀಗೆ ನಿಯಂತ್ರಿಸಿದ ಧಾರ್ಮಿಕ ಅನುಭಾವಿ ಹಾಗೂ ಮಾಂತ್ರಿಕ ಶಕ್ತಿಗಳ ಪ್ರೀಸ್ಟ್; ಬಳಿಕ ಮಿಲಿಟರಿ ಬಲ ಹೊಂದಿದ್ದ ರಾಜ, ಬಳಿಕ ಪ್ರಜಾಸತ್ತಾತ್ಮಕ ಅಧಿಕಾರ, ನಂತರ ವ್ಯಾಪಾರಿ, ಉದ್ಯಮಿ, ಆರ್ಥಿಕ ಶಕ್ತಿಯ ಮೇಲೆ ನಿಯಂತ್ರಣ ಹೊಂದಿದ್ದ ಹೂಡಿಕೆದಾರ ಹಾಗೂ ತಾಂತ್ರಿಕಶಾಹಿ (ಟೆಕ್ನೊಕ್ರಾಟ್), ಬಳಿಕ ಆಡಳಿತವನ್ನು ಬದಲಿಸಬಲ್ಲಷ್ಟು ಸಂಖ್ಯಾಬಲ ಹೊಂದಿದ್ದ ಕಾರ್ಮಿಕರು, ಕೆಲಸಗಾರರು. ಈಗ ವಿಜ್ಞಾನಿ, ವಸ್ತುನಿಷ್ಠ ಸತ್ಯಗಳನ್ನು ನಮ್ಮ ಮುಂದಿಡಲು ಅಳತೆಯನ್ನು ಬಳಸುವ ವಿಜ್ಞಾನಿ. ಆದ್ದರಿಂದ ಪುರೋಹಿತಶಾಹಿಗಳು (ಪ್ರೀಸ್ಟ್ ಗಳು), ರಾಜಕಾರಣಿಗಳು ಹಾಗೂ ಟೆಕ್ನೊಕ್ರಾಟ್‌ಗಳು ವಿಜ್ಞಾನಿಗಳನ್ನು ದ್ವೇಷಿಸುವುದು ಸಹಜ. ಇವರೆಲ್ಲ ಗತ ಕಾಲದ ಕವಿಗಳ ಕಡೆಗೆ ನೋಡುತ್ತಾರೆ. ಆ ಕವಿಗಳ ರಚನೆಗಳಿಗಾಗಿ ಹಂಬಲಿಸುತ್ತಾರೆ.

ಭಾಷೆಯ ಇತಿಹಾಸವನ್ನು ಗಮನಿಸಿದರೆ ಕಾಲಾನುಕ್ರಮದಲ್ಲಿ ಶಬ್ದಗಳ ಅರ್ಥಗಳು ಹೇಗೆ ಬದಲಾಗುತ್ತವೆಂದು ತಿಳಿಯುತ್ತದೆ. ಹತ್ತೊಂಬತ್ತನೇ ಶತಮಾನದಲ್ಲಿ ‘ಮಿತ್’ ಎಂಬ ಪದ ಬಹುದೇವತಾವಾದ, ಬಹು ಆರಾಧಕ ಧರ್ಮ ಹಾಗೂ ಮೂರ್ತಿ ಪೂಜೆಯನ್ನು ಉಲ್ಲೇಖಿಸುವ ಪದವಾಗಿತ್ತು. ಆದರೆ ಇವತ್ತು ಅದು ಒಂದು ಜನಸಮುದಾಯದ ಸಾಂಸ್ಕೃತಿಕ ಸತ್ಯವೆಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ. ಸಂಸ್ಕೃತ ಶಬ್ದವಾಗಿರುವ ‘ನ್ಯಾಯ’ಕ್ಕೆ 2000 ವರ್ಷಗಳ ಹಿಂದೆ ಜ್ಞಾನ ಶಾಸ್ತ್ರ ಎಂಬ ಅರ್ಥವಿತ್ತು. ಈಗ ಹಿಂದಿಯಲ್ಲಿ ಇದಕ್ಕೆ ನ್ಯಾಯಾಲಯಗಳು ನೀಡುವ ‘ನ್ಯಾಯ’ ಎಂಬ ಅರ್ಥ. ಹಿಂದಿಯಲ್ಲಿ ಈಗ ಇತಿಹಾಸ (ಹಿಸ್ಟರಿ) ಎಂಬ ಅರ್ಥದಲ್ಲಿ ಬಳಕೆಯಾಗುವ ಶಬ್ದಕ್ಕೆ ಹಿಂದೆ ರಾಮಾಯಣ ಹಾಗೂ ಮಹಾಭಾರತದಂತಹ ಕಥಾನಕಗಳು ಎಂಬ ಅರ್ಥವಿತ್ತು. ಅಲ್ಲಿ ಲೇಖಕರು ವಾಲ್ಮೀಕಿ ಮತ್ತು ವ್ಯಾಸ ಕಥೆಯ ಒಂದು ಭಾಗ ಮತ್ತು ಆದ್ದರಿಂದ ಅವರು ವಿಶ್ವಾಸದಿಂದ ‘‘ಇದು ಹೀಗೆ ನಿಜವಾಗಿಯೂ ನಡೆದಿತ್ತು’’ ಅಥವಾ ಇದು ‘‘ಇತಿಹಾಸ’’ ಎಂದು ಹೇಳಬಹುದಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಪುರಾಣ ಇದೆ. ಪುರಾಣಗಳು ದೇವರ, ರಾಜರ ಹಾಗೂ ಸಾಧು ಸಂತರ ಕಾಲನುಕಾಲದ ಕಥಾನಕಗಳು. ಇವುಗಳನ್ನು ಲೇಖಕರು ಕಣ್ಣಾರೆ ಕಾಣಲಿಲ್ಲ. ಬದಲಾಗಿ ಇತರರಿಂದ ಕೇಳಿಸಿಕೊಂಡರು.

ಆದರೆ ಮಿತ್‌ಗಳಿಗೆ, ಲೆಜೆಂಡ್‌ಗಳಿಗೆ ಆದ್ಯತೆ ಕೊಡುವವರಿಗೆ ಪೃಥ್ವಿರಾಜ ಚೌಹಾನನ ಕಥೆ ಹೇಳುವ ‘ಪೃಥ್ವಿರಾಜ ರಾಸೋ’ದ ಹಾಗೆಯೆ ರಾಮಾಯಣವು ಇತಿಹಾಸ. ಪೃಥ್ವಿರಾಜ ಮುಹಮ್ಮದ್ ಘೋರಿಯಿಂದ ಯುದ್ಧ ಭೂಮಿಯಲ್ಲಿ ಸೋಲಿಸಲ್ಪಟ್ಟ. ಸೆರೆಮನೆಯಲ್ಲಿ ಆತ ಕುರುಡನಾಗಿಯೂ ತನ್ನನ್ನು ಸೆರೆ ಹಿಡಿದವರನ್ನು ತನ್ನ ಅಸಾಮಾನ್ಯವಾದ ಬಿಲ್ಲುವಿದ್ಯೆ ಕೌಶಲ್ಯದ ಮೂಲಕ ಕೊಂದು ಹಾಕಿದ. ಈ ಘಟನೆ ನಡೆದು 400 ವರ್ಷಗಳ ಬಳಿಕ ‘ಪೃಥ್ವಿರಾಜ ರಾಸೋ’ ರಚಿಸಲ್ಪಟ್ಟಿತೆಂಬುದು ಅಮುಖ್ಯ...

ಇವತ್ತು ಪೃಥ್ವಿರಾಜ ರಾಸೋ ಹೇಳುವ ವಿವರಗಳಿಗೆ ಯಾವುದು ಹೊಂದಿಕೆಯಾಗುವುದಿಲ್ಲವೋ ಅದನ್ನು ಸುಳ್ಳು ಎಂದು ಪರಿಗಣಿಸಲಾಗುತ್ತದೆ. ‘ಪದ್ಮಾವತ್’ ವಿವಾದದ ವೇಳೆ ಪ್ರತಿಭಟನೆ ಮಾಡಿದ ಕರ್ಣಿಸೇನೆ ನಿಮ್ಮ ಮನೆ ಬಾಗಿಲಿಗೆ ಬಂದು ಬಿಡಬಹುದು-ರಾಸೋದಲ್ಲಿ ಹೇಳಲಾದ ಘಟನೆಗಳಿಗೆ ವ್ಯತಿರಿಕ್ತವಾದ ಯಾವುದೇ ವಾದವನ್ನು ನೀವು ಹೂಡಿದಲ್ಲಿ. ಪೃಥ್ವಿರಾಜ ಚೌಹಾನನ ಬಗ್ಗೆ ಒಂದಕ್ಕೊಂದು ವಿರುದ್ಧವಾದ ಹಲವು ಕಥೆಗಳಿವೆ. ಯಾಕೆ ಇವೆ? ಅವು ಹೇಗೆ ಬಂದವೆಂದು ಯಾವುದೇ ಪಠ್ಯಪುಸ್ತಕ ನಮಗೆ ಹೇಳುವುದಿಲ್ಲ. ಉದಾಹರಣೆಗೆ, ಪೃಥ್ವಿರಾಜನ ಮಗಳು ಬೇಲಾ ಮಹೋಬಾದ ರಾಜಕುಮಾರ ಬ್ರಹ್ಮನನ್ನು ಮದುವೆಯಾಗ ಬಯಸಿದ್ದಳು. ಆದರೆ ಅದಕ್ಕೆ ಪೃಥ್ವಿ ರಾಜ ಒಪ್ಪಿಗೆ ನೀಡಿರಲಿಲ್ಲ ಎಂಬುದು ನಮ್ಮಲ್ಲಿ ಎಷ್ಟು ಮಂದಿಗೆ ಗೊತ್ತಿದೆ? ಈ ಕಥೆ ಬಂದಿರುವುದು ಬುಂದೇಲ್‌ಖಂಡದಲ್ಲಿ ಇಂದಿಗೂ ಜನಪ್ರಿಯವಾಗಿರುವ ಶ್ರೇಷ್ಠ ಮಹಾಕಾವ್ಯ ‘ಅಲ್ಹಾ’ದಿಂದ. ಅಲ್ಲಿ ಕನೌಜ್‌ನ ರಾಜ ಜಯಚಂದ. ಆತ ಹಿಂದುತ್ವ ಇತಿಹಾಸ ಒತ್ತಿ ಹೇಳುವಂತೆ ‘ದೇಶದ್ರೋಹಿ/ವಿಶ್ವಾಸದ್ರೋಹಿ’ ಅಲ್ಲ. ರಜಪೂತರು ತಮ್ಮ ತಮ್ಮ ನಡುವೆಯೇ ಹೇಗೆ ಕಾದಾಡುತ್ತಿದ್ದರು, ಆಗ ಪ್ರತಿಭೆಯನ್ನೂ ಮೀರಿ ಜಾತಿ ಹೇಗೆ ಒಂದು ಪ್ರಮುಖ ಪಾತ್ರ ವಹಿಸಿತ್ತು ಎಂಬುದನ್ನು ‘ಅಲ್ಹಾ’ ಹೇಳುತ್ತದೆ. ಅದು ಪೃಥ್ವಿರಾಜನನ್ನು ಒಬ್ಬ ತಂದೆಯಾಗಿ ಅಥವಾ ಒಬ್ಬ ನಾಯಕನಾಗಿ ಹಾಡಿ ಹೊಗಳುವುದಿಲ್ಲ ಮತ್ತು ಪ್ರಾಯಶ ರಜಪೂತರ ಒಳಜಗಳಗಳು ಒಳ ಕಾದಾಟಗಳು ವಿದೇಶಿ ಆಕ್ರಮಣಕಾರರಿಗೆ ಭಾರತದ ಮೇಲೆ ದಾಳಿ ನಡೆಸಲು ಹೇಗೆ ನೆರವಾಯಿತು ಎಂಬುದನ್ನು ವಿವರಿಸುತ್ತದೆ. ಆದರೆ ಇಂತಹ ವಿಷಯಗಳನ್ನು ಹೇಳುವ ಇತಿಹಾಸಕಾರರ ಹಾಗೂ ಕವಿಗಳ ಬಾಯಿ ಮುಚ್ಚಿಸಲಾಗುತ್ತದೆ. ಯಾಕೆಂದರೆ ನಮ್ಮ ಗತಕಾಲ, ಗತ ಇತಿಹಾಸ ಏನಾಗಿರಬೇಕು ಎಂಬುದನ್ನು ಈಗ ಒಬ್ಬ ದೊರೆ ನಿರ್ಧರಿಸುತ್ತಾನೆ, ಪ್ರಭುತ್ವ ನಿರ್ಧರಿಸುತ್ತದೆ.

(ಲೇಖಕರು ಆಧುನಿಕ ಕಾಲದಲ್ಲಿ ಮಿತಾಲಜಿ ಬಗ್ಗೆ ಬರೆಯುತ್ತಾರೆ ಮತ್ತು ಉಪನ್ಯಾಸಗಳನ್ನು ನೀಡುತ್ತಾರೆ.)
ಕೃಪೆ: ದಿ ಹಿಂದೂ  

Writer - ದೇವದತ್ತ ಪಟ್ಟನಾಕ್

contributor

Editor - ದೇವದತ್ತ ಪಟ್ಟನಾಕ್

contributor

Similar News