ನೋಟು ನಿಷೇಧಕ್ಕೆ 3 ವರ್ಷ !: ಜನರ ಅನಿಸಿಕೆಗಳೇನು ?

Update: 2019-11-08 09:56 GMT

2 ಸಾವಿರ ಮುಖಬೆಲೆಯ ನೋಟು ಬದುಕನ್ನೇ ಕಸಿದಿದೆ

ಪ್ರಭುತ್ವದ ವಿರುದ್ಧ ಮಾತನಾಡಿದರೆ...

ನೋಟು ನಿಷೇಧದಿಂದಾಗಿ ಕಳೆದ ಮೂರು ವರ್ಷಗಳಿಂದ ಆಗಿರುವ ಅನುಭವವನ್ನು ಕೇಳಿದೊಡನೆ ಜನತೆ ತಮ್ಮ ಅನುಭವದ ಯಾತನೆಯನ್ನು ಆಕ್ರೋಶದಿಂದ ಹೇಳಲು ಮುಂದಾಗುತ್ತಿದ್ದರು. ಆದರೆ, ಅವರ ಮಾತುಗಳನ್ನು ವೀಡಿಯೊ ಮಾಡಲು ಮುಂದಾದಾಗ ಅವರು ಭಯಭೀತರಾಗಿ ವೀಡಿಯೊ ಚಿತ್ರೀಕರಣ ಬೇಡವೆಂದು ಮನವಿ ಮಾಡಿದ ಪ್ರಸಂಗವೂ ಸಾಮಾನ್ಯವಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಇವತ್ತಿನ ಪ್ರಭುತ್ವ ಪ್ರಶ್ನೆ ಮಾಡುವ ದೊಡ್ಡ ದೊಡ್ಡ ವ್ಯಕ್ತಿಗಳನ್ನೇ ಜೈಲಿಗೆ ಕಳುಹಿಸುತ್ತಿದೆ. ಇನ್ನು ನಮ್ಮಂತಹ ಜನಸಾಮಾನ್ಯರನ್ನು ಸುಮ್ಮನೆ ಬಿಡುತ್ತಾರೆಯೇ? ಬಡವರ ನೋವು ದವಡೆಗೆ ಮೂಲ ಅಂತಾರಲ್ಲಾ ಹಾಗೆ ನಮ್ಮ ಬದುಕಾಗಿದೆ. ಎಷ್ಟೇ ಸಂಕಷ್ಟ ಎದುರಾದರು ನಮ್ಮನ್ನೇ ನಂಬಿಕೊಂಡು ವಯಸ್ಸಾದ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ಇದ್ದಾರಲ್ಲಾ ಅವರಿಗಾಗಿ ಎಲ್ಲ ಸಂಕಷ್ಟಗಳನ್ನು, ಅವಮಾನಗಳನ್ನು ನುಂಗಿಕೊಂಡು ಜೀವನ ಸಾಗಿಸುತ್ತಿದ್ದೇವೆ.

ಕಬ್ಬನ್ ಪೇಟೆಯ ಅನುಭವ: ಇಲ್ಲಿ ಕೇವಲ ನಾಲ್ಕು ಅಡಿ ಸುತ್ತಳತೆ ಗಾತ್ರದ ಚಿಲ್ಲರೆ ಅಂಗಡಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಒಂದು ಚಿಲ್ಲರೆ ಅಂಗಡಿ ಕಳೆದ 80 ವರ್ಷದಿಂದ ಇದ್ದು, ಅಪ್ಪನ ನಂತರ ಮಗ ಆ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಮಾತಲ್ಲಿ ಹೇಳುವುದಾದರೆ ‘‘ನಮ್ಮಪ್ಪ ನಡೆಸುತ್ತಿದ್ದ ಅಂಗಡಿಯನ್ನು ನಾನು ಮುಂದುವರಿಸುತ್ತಿದ್ದೇನೆ. ನನಗೀಗ 50 ವರ್ಷ. ನೋಟು ನಿಷೇಧಕ್ಕೂ ಮೊದಲು, ನನ್ನ ಅಂಗಡಿ ಲಾಭದಾಯಕವಾಗಿತ್ತು. ನಷ್ಟ ಆಗುತ್ತದೆ ಎಂದು ಕನಸು ಮನಸಿನಲ್ಲೂ ನೆನೆಸಿದವನಲ್ಲ. ಆದರೆ, ಈಗ 80 ವರ್ಷಗಳಿಂದ ಇದ್ದ ಅಂಗಡಿಯನ್ನು ಯಾವಾಗ ಬೇಕಾದರೂ ಮುಚ್ಚಿಬಿಡುವ ಸಂದರ್ಭ ಎದುರಾಗಿದೆ’’ ಎಂದು ಆತಂಕ ವ್ಯಕ್ತಪಡಿಸಿದರು.

ಆಟೊ ಚಾಲಕನ ಮಾತು: ‘‘ಸರಕಾರ ಬಿಟ್ಟಿರುವ ಎರಡು ಸಾವಿರ ನೋಟನ್ನು ನಮ್ಮಂತಹ ಆಟೊ ಚಾಲಕರಾಗಲಿ, ಬೀದಿ ವ್ಯಾಪಾರಿಗಳಾಗಲಿ ವಹಿವಾಟು ಮಾಡುವುದಕ್ಕೆ ಆಗುವುದಿಲ್ಲ. ಹಾಗಾದರೆ, ಈ ನೋಟಿಗೆ ಯಾವ ಮಾನ್ಯತೆ ಇದೆ.? ಎರಡು ಸಾವಿರಕ್ಕೆ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ದಿನನಿತ್ಯ ಎಷ್ಟೋ ಪ್ರಯಾಣಿಕರು ಕೈತಪ್ಪಿ, ಆಟೋ ನಿಲ್ದಾಣದಲ್ಲಿಯೇ ಸಮಯ ವ್ಯರ್ಥ ಮಾಡಿರುವ ಸಂದರ್ಭಗಳು ಇವೆ. ಇವೆಲ್ಲವೂ ಯಾವಾಗ ಸರಿಹೋಗುತ್ತೋ, ನಾವು ಪುನಃ ಮೊದಲಿನ ರೀತಿಯಲ್ಲಿ ಬದುಕಲು ಸಾಧ್ಯವಾಗುತ್ತದೆಯೇ ಎಂಬುದನ್ನು ನಿರೀಕ್ಷಿಸುತ್ತಿದ್ದೇವೆ’’ ಎಂದು ಆಟೊ ಚಾಲಕ ಪ್ರಕಾಶ್ ಹೇಳುತ್ತಾರೆ.

ಪಾದರಕ್ಷೆ ವ್ಯಾಪಾರಿ ಹೇಳುವುದು: ‘‘ಕೇಂದ್ರ ಸರಕಾರ ಯಾರ ಹಿತಾಸಕ್ತಿಗಾಗಿ ನೋಟು ನಿಷೇಧ ಮಾಡಿತೋ ಗೊತ್ತಿಲ್ಲ. ನಾನಂತೂ ಕಳೆದ ಮೂರು ವರ್ಷಗಳಿಂದ ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕುತ್ತಿದ್ದೇನೆ. ಇದರಿಂದ ನನ್ನ ಮೊದಲ ಕಹಿ ಘಟನೆಯನ್ನು ಮರೆಯಲು ಪ್ರಯತ್ನಿಸಿದರೂ ಮರೆಯಲು ಸಾಧ್ಯವಾಗುತ್ತಿಲ್ಲ.

ನೋಟು ನಿಷೇಧದ ಸಂದರ್ಭದಲ್ಲಿಯೇ ನನ್ನ ಮದುವೆ ಇತ್ತು. ನನ್ನ ಬ್ಯಾಂಕ್ ಅಕೌಂಟ್‌ನಲ್ಲಿ ಮದುವೆಯ ಖರ್ಚಿಗಾಗಿ ಹಲವಾರು ವರ್ಷ ಬೆವರು ಸುರಿಸಿ ಅಗತ್ಯವಾದ ಹಣವನ್ನು ಸಂಗ್ರಹಿಸಿದ್ದೆ. ಆದರೆ, ಆ ಹಣವನ್ನು ಪಡೆಯಲು ಸಾಧ್ಯವೇ ಆಗಲಿಲ್ಲ. ಕಿಲೋಮೀಟರ್‌ಗಟ್ಟಲೆ ಇದ್ದ ಸಾಲಿನಲ್ಲಿ ನಿಂತು ನಿಂತು ಸಾಕಾಯಿತೇ ಹೊರತು, ಮದುವೆಗೆ ಬೇಕಾದ ಹಣವನ್ನು ಪಡೆಯಲು ಸಾಧ್ಯವೇ ಆಗಲಿಲ್ಲ. ಇದರಿಂದ ನಾನು ಅನಾರೋಗ್ಯಕ್ಕೆ ತುತ್ತಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಯಿತು. ಮೂರು ವರ್ಷಗಳ ಹಿಂದೆ ನನ್ನ ಅಂಗಡಿಯಲ್ಲಿ ಸಹಾಯಕನಾಗಿ ಒಬ್ಬನನ್ನು ನೇಮಿಸಿಕೊಂಡಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ವ್ಯಾಪಾರ ಕುಸಿದು ಆ ಕೆಲಸಗಾರನಿಗೆ ಸಂಬಳ ಕೊಡಲು ಸಾಧ್ಯವಾಗದೆ ಅನಿವಾರ್ಯವಾಗಿ ಕೆಲಸದಿಂದ ತೆಗೆದುಹಾಕಬೇಕಾಯಿತು. ಈಗ ನಾನೊಬ್ಬನೇ ಅಂಗಡಿ ನಡೆಸುತ್ತಿದ್ದೇನೆ’’ ಎಂದು ಪಾದರಕ್ಷೆ ವ್ಯಾಪಾರಿ ಶಬ್ಬೀರ್ ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

ಕಳೆದ ಮೂರು ವರ್ಷಗಳ ಹಿಂದೆ ಚಿಕ್ಕಪೇಟೆಯಲ್ಲಿ ಬಾಡಿಗೆ ಅಂಗಡಿಯನ್ನು ಪಡೆಯಲು ಎಷ್ಟೇ ಪ್ರಯತ್ನಿಸಿದರೂ, ಮಾಲಕರು ಕೇಳಿದಷ್ಟು ಬಾಡಿಗೆ ಹಣ ಕೊಡಲು ಸಿದ್ಧವಾಗಿದ್ದರೂ ಅಂಗಡಿ ಸಿಗುತ್ತಿರಲಿಲ್ಲ. ಈಗ ಎಲ್ಲೆಂದರಲ್ಲಿ ಬಾಡಿಗೆ ಅಂಗಡಿ ಬೇಕಾದವರು ಸಂಪರ್ಕಿಸಬಹುದು ಎಂದು ನಾಮಫಲಕಗಳು ನೇತಾಡುತ್ತಿವೆ. ದಿನೇ ದಿನೇ ಒಂದೊಂದೇ ಅಂಗಡಿಗಳು ಬಾಗಿಲು ಮುಚ್ಚುತ್ತಿವೆ. ಹೀಗೆ ಪ್ರತಿ ಚಿಲ್ಲರೆ ಅಂಗಡಿ, ಬೀದಿ ವ್ಯಾಪಾರಿ, ಬಟ್ಟೆ ಅಂಗಡಿಯಿಂದ ಪ್ರಾರಂಭಗೊಂಡು ಎಲ್ಲರ ಬದುಕು ದುಸ್ತರವಾಗಿದೆ ಎಂದು ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡರು.

-------------------------

ಮೂರನೇ ದರ್ಜೆಯ ರಾಜಕೀಯ ಲೆಕ್ಕಾಚಾರ

ಪ್ರೊ. ಹುಲ್ಕೆರೆ ಮಹಾದೇವ, ಮಂಡ್ಯ

►  2016ರಲ್ಲಿ ಹಳೆಯ ನೋಟುಗಳನ್ನು ಏಕಪಕ್ಷೀಯವಾಗಿ ರದ್ದುಪಡಿಸಿದ್ದು, ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿ ಬಂಡವಾಳಶಾಹಿಗಳು ಹಿಡಿತ ಸಾಧಿಸುವ ಮಹಾನ್ ತಂತ್ರಗಾರಿಕೆಯ ಭಾಗ ಮಾತ್ರ. ಆ ಹೊತ್ತಿನಲ್ಲಿ ಉತ್ತರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯುವುದಿತ್ತು. ಅಂದರೆ, ಬಿಜೆಪಿಯೇತರ ಪಕ್ಷಗಳು ಹಣಕಾಸಿನ ಮುಗ್ಗಟ್ಟಿನಿಂದ ಚುನಾವಣೆಯಲ್ಲಿ ಸಂಕಷ್ಟ ಎದುರಿಸಬೇಕು ಮತ್ತು ಆ ಮೂಲಕ ಬಿಜೆಪಿ ಗೆಲುವಿಗೆ ಪೂರಕವಾಗಬೇಕೆಂಬ ಮೂರನೇದರ್ಜೆ ರಾಜಕೀಯ ಲೆಕ್ಕಾಚಾರವಾಗಿದೆ. * ನೋಟು ರದ್ದತಿಯಿಂದ ಬಿಜೆಪಿಯ ಬೆಂಬಲಿಗರಾದ ಉದ್ಯಮಿಗಳು, ವ್ಯಾಪಾರಿಗಳು, ಅಕ್ರಮ ಲೂಟಿಕೋರರು ಮತ್ತು ಬೆಂಬಲಿಗರು ಗರಿಷ್ಠ ಪ್ರಯೋಜನ ಪಡೆದಿದ್ದಾರೆ. ಉತ್ತರಪ್ರದೇಶದಲ್ಲಿ ನೋಟು ರದ್ದತಿಯ ಘೋಷಣೆಗೆ ಮುಂಚೆಯೇ ಕೋಟ್ಯಂತರ ಮೌಲ್ಯದ ಹೊಸ ನೋಟುಗಳು ಬಿಜೆಪಿ ಮುಖಂಡರ ಮನೆಯಲ್ಲಿ ಸಂಗ್ರಹವಾಗಿದ್ದ ಘಟನೆಯು, ಮೋದಿ ಆಡಳಿತ ತನ್ನ ಪಕ್ಷದವರಿಗೆ ಹೇಗೆ ಪೂರಕವಾಗಿತ್ತು ಎಂಬುದರ ಸ್ಪಷ್ಟ ಉದಾಹರಣೆ.

ಸಾಮಾನ್ಯ ಜನತೆ ನೋಟು ಬದಲಾವಣೆಗಾಗಿ ಮತ್ತು ತಮ್ಮ ಖಾತೆಯಿಂದ ಹಣ ಡ್ರಾ ಮಾಡಲು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತರು, ಬಸವಳಿದರು; ನೂರಾರು ಅಮಾಯಕರು ವಿನಾಕಾರಣ ಜೀವಕಳೆದುಕೊಂಡರು. ಮೋದಿ ಆಡಳಿತ ಸತ್ತವರ ಬಗ್ಗೆ ಕನಿಷ್ಠ ಸಂತಾಪ ಸೂಚಿಸಲಿಲ್ಲ ಎಂಬುದು ಅಕ್ಷಮ್ಯ ಅಪರಾಧ.

ಪ್ರಮುಖವಾಗಿ ಮಧ್ಯಮ ವರ್ಗದವರನ್ನೂ ಒಳಗೊಂಡಂತೆ ಖಾಯಂ ನೌಕರರ ಹೊರತಾಗಿ ಇಂದಿಗೂ ಸಾಮಾನ್ಯ ಜನತೆ ಹಣದ ಸರಾಗ ಚಲಾವಣೆಯಿಲ್ಲದೆ ಹಲವು ರೀತಿಯಲ್ಲಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಕುಸಿಯಲು ಈ ನೋಟು ರದ್ದತಿಯೇ ನೇರ ಕಾರಣ.

► ಕಪ್ಪುಹಣ ಸಿಕ್ಕಿದ್ದೆಷ್ಟು? ಮರಳಿ ಸಲ್ಲಿಕೆಯಾದ ಹಳೆಯ ನೋಟುಗಳು ಶೇ.97ಕ್ಕಿಂತ ಹೆಚ್ಚು ಪ್ರಮಾಣದಲ್ಲಿತ್ತು. ಈ ಬಗ್ಗೆ ಆರ್‌ಬಿಐ ಇದುವರೆಗೂ ಸಂಪೂರ್ಣ ವಿವರಗಳನ್ನು ದೇಶದ ಮುಂದೆ ಇಟ್ಟಿರುವುದಿಲ್ಲ. ಭಯೋತ್ಪಾದನೆ ಎಲ್ಲಿ ನಿಂತಿದೆ. ಆಶ್ಚರ್ಯವೆಂದರೆ ಹೊಸ ನೋಟುಗಳನ್ನು ಕಲರ್ ಝೆರಾಕ್ಸ್ ನೋಟುಗಳನ್ನು ಜನತೆಗೆ ನೀಡಿ, ಪಂಗನಾಮ ಹಾಕುತ್ತಿರುವ ವರದಿಯಾಗುತ್ತಿವೆ. ಕಪ್ಪುಹಣದ ಖದೀಮರು ಬಹುಪಾಲು ಬಿಜೆಪಿಯ ಅವಿಭಾಜ್ಯ ಅಂಗವಾಗಿದ್ದಾರೆ. ‘‘ಕಪ್ಪುಹಣ ವಶಪಡಿಸಿಕೊಂಡೆ, ನಿಲ್ಲಿಸಿದೆ’’ ಎನ್ನುವುದು ಬರೀ ಭ್ರಾಂತಿ ಅಷ್ಟೆ.

► ಭ್ರಷ್ಟಾಚಾರ ನಿಲ್ಲಿಸಲು ಯಾವುದೇ ಸಂವಿಧಾನತ್ಮಕ ಕ್ರಮಗಳಿಲ್ಲ. ಕೇಂದ್ರದಲ್ಲಾಗಲೀ, ರಾಜ್ಯಗಳಲ್ಲಾಗಲೀ ಲೋಕಾಯುಕ್ತರ ಅಧಿಕಾರವನ್ನು ನಿಯಂತ್ರಿಸಲಾಗುತ್ತಿದೆ. ಕೇವಲ ನೋಟು ರದ್ದತಿಯಿಂದ ಸಾಧ್ಯವೇ ಇಲ್ಲ. ವಿಶೇಷವಾಗಿ ಈ ದೇಶದ ನೌಕರಶಾಹಿ ಮತ್ತು ಜಾತಿಬಲವುಳ್ಳವರು ಭ್ರಷ್ಟಾಚಾರದಿಂದ ಹೊರಗೆ ಬರುತ್ತಾರೆನ್ನುವುದು ಹಸೀ ಸುಳ್ಳು. ಅಂತಹ ನೈತಿಕ ಪ್ರಜ್ಞೆ ಬೆಳೆಸುವ ‘ನೈತಿಕತೆ’ ಬಿಜೆಪಿ ಪರಿವಾರಕ್ಕೆ ಎಲ್ಲಿದೆ? ಚುನಾವಣೆಗಳಲ್ಲಿ ಬಿಜೆಪಿ ಅಕ್ರಮಗಳನ್ನು ಮಾಡುತ್ತಿಲ್ಲವೇ?

► ದೇಶದ ಸಮಸ್ತ ದುಡಿಯುವ ಜನ ಸಮುದಾಯಗಳು ಇಂದಿಗೂ ಹಣಕಾಸಿನ ಮುಗ್ಗಟ್ಟಿನಿಂದ ನರಳುತ್ತಿವೆ. ದೈನಂದಿನ ವೆಚ್ಚಗಳಿಗೆ, ತುರ್ತು ಸನ್ನಿವೇಶಗಳಲ್ಲಿ ಸಾಲದ ಸುಳಿಗೆ ಸಿಲುಕುವುದು ತಪ್ಪಿಲ್ಲ. ಲಕ್ಷಾಂತರ ರೈತರ ಆತ್ಮಹತ್ಯೆಯೇ ಇದಕ್ಕೆ ಸಾಕ್ಷಿ. * ಇತ್ತೀಚೆಗೆ ಉತ್ಪಾದನಾ ಕ್ಷೇತ್ರದಲ್ಲಿ ಕೆಲಸ ಕಳೆದುಕೊಳ್ಳುತ್ತಿರುವವರ ಬೃಹತ್ ಸಂಖ್ಯೆಯನ್ನು ನೋಡಿದರೆ ಗಾಬರಿಯಾಗುತ್ತದೆ. ದುಡಿಯುವ ಜನಸಮುದಾಯಗಳ ಭವಿಷ್ಯದ ಬದುಕು ಶೋಚನೀಯವಾಗಿದೆ. ಕೇಂದ್ರದ ಆರ್ಥಿಕ ನೀತಿಗಳು ಎಂದಿಗೂ ದುಡಿಯುವ ಜನವರ್ಗಗಳ ಪರವಾಗಿರಲು ಸಾಧ್ಯವಿಲ್ಲ. ಬಿಜೆಪಿಯ ಆರ್ಥಿಕ ನೀತಿಗಳು ತ್ರಿಕಾಲಗಳಲ್ಲಿಯೂ ಸಮಸ್ಯೆಗಳನ್ನು ಹೆಚ್ಚು ಮಾಡುತ್ತಲೇ ಮೇಲ್ವರ್ಗದ ಹಿತಾಸಕ್ತಿಗಳನ್ನು ಸಂರಕ್ಷಿಸುವುದಾಗಿದೆ. ನೋಟು ರದ್ದತಿ ಉಂಟು ಮಾಡಿರುವ ಆರ್ಥಿಕ ಅನಾಹುತಗಳೆಷ್ಟು ಎನ್ನುವುದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿವೆಯೇ? ಎಂಬ ಬಗ್ಗೆ ಕುತೂಹಲಿಯಾಗಿದ್ದೇನೆ.

-------------------------

ಬಂಡವಾಳಶಾಹಿಗಳಿಗೆ ಮಾತ್ರ ಲಾಭವಾಗಿದೆ

ಶೇಖರ್ ಎಲ್. ಲಾಯಿಲ, ಬೆಳ್ತಂಗಡಿ

ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಏಕಪಕ್ಷೀಯವಾಗಿ ಕೈಗೊಂಡ ನೋಟ್‌ಬ್ಯಾನ್ ಸರ್ವಾಧಿಕಾರಿ ಆಡಳಿತದ ಪರಮಾವಧಿ. ಇದರಿಂದಾಗಿ ದೇಶದ ಆಗರ್ಭ ಶ್ರೀಮಂತರಿಗೆ, ಬಂಡವಾಳಶಾಹಿ, ಭೂಮಾಲಕರಿಗೆ ಮಾತ್ರ ಪ್ರಯೋಜನವಾಗಿದೆಯೇ ಹೊರತು ಸಾಮಾನ್ಯ ಜನರಿಗಲ್ಲ.

ನೋಟ್‌ಬ್ಯಾನ್‌ನಿಂದ ಯಾವುದೇ ಭಯೋತ್ಪಾದಕರಿಗೂ ನಷ್ಟ ಉಂಟಾಗಿಲ್ಲ. ನೋಟ್‌ಬ್ಯಾನ್ ಆಗಿದ್ದ ಕ್ಷಣದಿಂದ ಎಷ್ಟು ಭಯೋತ್ಪಾದಕ ದಾಳಿಯಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಲಿ. ಪುಲ್ವಾಮ ದಾಳಿ ಯಾವುದರ ಸಂಕೇತ? ನಮ್ಮ ದೇಶದ 40ಕ್ಕೂ ಹೆಚ್ಚು ಸೈನಿಕರ ಮೇಲೆ ನಡೆದ ದಾಳಿ ಯಾವುದು? ಭಯೋತ್ಪಾದಕ ದಾಳಿಯೇ? ಅಥವಾ ಕೇಂದ್ರ ಸರಕಾರ ಪ್ರಾಯೋಜಿತ ದಾಳಿಯೇ? ಯಾವುದೇ ದೇಶದ ಕರೆನ್ಸಿ ಬದಲಾವಣೆಯಿಂದ ಭಯೋತ್ಪಾದಕ ಚಟುವಟಿಕೆ ಸಂಪೂರ್ಣ ಪರಿಹಾರವಾಗುತ್ತದೆ ಎಂಬುದು ಜಗತ್ತಿನ ಮಹಾನ್ ಜೋಕ್ ಅಷ್ಟೇ.

ನೋಟ್‌ಬ್ಯಾನ್‌ನಿಂದ ಅತ್ಯಂತ ಹೆಚ್ಚು ಸಂಕಷ್ಟಕ್ಕೆ ಒಳಗಾದುದು ಬೆವರು ಸುರಿಸಿ ದುಡಿಯುವ ಸಾಮಾನ್ಯ ಜನರು ಮಾತ್ರ.

ಭ್ರಷ್ಟಾಚಾರಕ್ಕೆ ನೋಟ್‌ಬ್ಯಾನ್‌ನಿಂದ ಕಡಿವಾಣ ಬಿದ್ದಿದೆ ಎಂಬುದು ಮಹಾನ್ ಸುಳ್ಳುಗಳಲ್ಲಿ ಒಂದು. ಇದು ಅಮಾಯಕ ಜನರನ್ನು ಮೋಸ ಮಾಡುವ ತಂತ್ರ. ಸಣ್ಣ, ಮಧ್ಯಮ ವರ್ಗ ಅತ್ಯಂತ ದೊಡ್ಡ ಸಮಸ್ಯೆಯನ್ನು ಎದುರಿಸಿದ್ದು ಮಾತ್ರ ವಲ್ಲದೆ ಈಗಲೂ ಸಮಸ್ಯೆ ಎದುರಿಸುತ್ತಿದೆ. ಈ ಹಿಂದೆ ಜಗತ್ತಿನಾ ದ್ಯಂತ ಆರ್ಥಿಕತೆ ಕುಸಿತ ಕಂಡಾಗ ಕೂಡ ಭಾರತದ ಆರ್ಥಿಕತೆ ಸದೃಢವಾಗಿತ್ತು. ನೋಟ್‌ಬ್ಯಾನ್ ಬಳಿಕ ಭಾರತದ ಆರ್ಥಿಕತೆ ಜಗತ್ತಿನ ಮುಂದೆ ಬೆತ್ತಲೆಯಾಗಿದೆ. ಕೃಷಿ ಚಟುವಟಿಕೆ ಕುಂಠಿತ ಸೇರಿದಂತೆ ಮಿತಿಮೀರಿದ ನಿರುದ್ಯೋಗ ಹೆಚ್ಚಾಗಲು ನೋಟ್ ಬ್ಯಾನ್ ಕಾರಣ. ಇದರ ವಿರುದ್ಧ ಜನಸಾಮಾನ್ಯರ ಸಂಘಟಿತ ಹೋರಾಟ ಅಗತ್ಯವಿದೆ. ನೋಟ್‌ಬ್ಯಾನ್‌ನಿಂದ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರಿಗೆ ಯಾವುದೇ ರೀತಿಯ ನಷ್ಟ ಉಂಟಾಗಿಲ್ಲ. ಸಾಮಾನ್ಯ ದುಡಿಯುವ ವರ್ಗದ ಜನರು ಸಂಪೂರ್ಣ ಸೋತಿರುವುದು ಸ್ಪಷ್ಟ, ಮೋಸ ಹೋಗಿರುವುದಂತು ನಿಜ.

-------------------------

ನೋಟು ನಿಷೇಧ ಕ್ರಮ ಸ್ವಾಗತಾರ್ಹ

- ಶಿವರಾಜ್, ಮಂಗಳೂರು

ನೋಟು ನಿಷೇಧದಿಂದ ಕೆಲ ರಾಜಕಾರಣಿಗಳಿಗೆ ಭಾರೀ ಹೊಡೆತ ಬಿದ್ದಿದೆ. ಜೈಲುಪಾಲಾಗಿದ್ದ ನಿದರ್ಶನಗಳು ನಮ್ಮಲ್ಲಿವೆ. ಪ್ರಧಾನಿ ಒಳ್ಳೆಯವರು. ನಮಗೆ ದೇಶ ಮೊದಲು. ನೋಟು ನಿಷೇಧದ ಕ್ರಮ ಸ್ವಾಗತಾರ್ಹ.

ಪ್ರಧಾನಿಯಾಗಿ ಮೋದಿ ಅಧಿಕಾರ ವಹಿಸಿಕೊಂಡು ಕೇವಲ ಐದಾರು ವರ್ಷಗಳಷ್ಟೇ ಕಳೆದಿವೆೆ. ಹಿಂದಿನವರು ಅಭಿವೃದ್ಧಿ ಮಾಡಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಬೇಕಾದರೆ ಇನ್ನಷ್ಟು ವರ್ಷ ಮೋದಿಯೇ ಪ್ರಧಾನಿಯಾಗಿ ಮತ್ತೆ ಮತ್ತೆ ಆಯ್ಕೆಯಾಗಬೇಕು. ಕೇಂದ್ರದ ನೀತಿಗಳಿಂದ ಸಣ್ಣಪುಟ್ಟ ಕಿರಿಕಿರಿ ಆಗಿರಬಹುದು. ಆದರೆ ಭವಿಷ್ಯದಲ್ಲಿ ದೇಶಕ್ಕೆ ಒಳ್ಳೆಯದಾಗಲಿದೆ.

-------------------------

ಉದ್ದೇಶ ಒಳ್ಳೆಯದಾದರೂ...

ಐಸಾಕ್ ವಾಸ್ ಅಧ್ಯಕ್ಷರು, ಕೆನರಾ ಛೇಂಬರ್ ಆಫ್ ಕಾಮರ್ಸ್, ಮಂಗಳೂರು 

ನೋಟ್ ಬ್ಯಾನ್ ಮಾಡಿದ್ದು ತಪ್ಪು ಅಂತ ನಾನು ಹೇಳೋಲ್ಲ. ಸರಕಾರ ಒಳ್ಳೆಯ ಉದ್ದೇಶವಿಟ್ಟುಕೊಂಡು ನಿಷೇಧಿಸಿರಬಹುದು. ನೋಟ್‌ಬ್ಯಾನ್ ಜೊತೆಗೆ ಜಿಎಸ್‌ಟಿ ಜಾರಿಗೊಳಿಸಿದರಲ್ಲಾ... ಅದು ತೀರಾ ಅಸಮರ್ಪಕ ವ್ಯವಸ್ಥೆಯಾಗಿದೆ. ಅದನ್ನು ಪಾರದರ್ಶಕವಾಗಿ ಜಾರಿಗೊಳಿಸಿಲ್ಲ. ಹಾಗಾಗಿ ಬಂಡವಾಳ ಶಾಹಿಗಳು ಅದರ ಲಾಭ ಪಡೆದರೆ ಸಣ್ಣಪುಟ್ಟ ವ್ಯಾಪಾರಿಗಳು ಅದರ ಹೊಡೆತ ಅನುಭವಿಸಿದರು. ಆರ್ಥಿಕ ವ್ಯವಸ್ಥೆ ಎಂಬುದು ಚೈನ್ ಸಿಸ್ಟಮ್ ಇದ್ದಂತೆ. ಒಂದಕ್ಕೆ ಹೊಡೆತ ಬಿದ್ದರೆ ಅದು ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ. ದೇಶದೆಲ್ಲೆಡೆ ಯುವ ಜನತೆ ಎದುರಿಸುವ ನಿರುದ್ಯೋಗ ಭೀತಿ, ಆರ್ಥಿಕ ಕುಸಿತ ಇತ್ಯಾದಿ... ಹೇಳಬಹುದಾಗಿದೆ.

-------------------------

ಮಧ್ಯಮ ವರ್ಗಕ್ಕೆ ತೊಂದರೆ

ಜಿ. ಎ. ಕೋಟಿಯಾರ್, ಅಧ್ಯಕ್ಷರು, ಮಾಸ್ ಇಂಡಿಯಾ, ಕರ್ನಾಟಕ

ನೋಟ್‌ಬ್ಯಾನ್ ಮಾಡಿ ಮೂರು ವರ್ಷಗಳಾದರೂ ಇದರಿಂದ ಜನರಿಗೆ ಯಾವುದೇ ಪ್ರಯೋಜನ ಆಗಿಲ್ಲ. ನೋಟ್ ಬ್ಯಾನ್‌ನಿಂದ ಯಾರಿಗೂ ನಷ್ಟ ಆಗಿಲ್ಲ. ಆದರೆ ಆದಾಯ ತೆರಿಗೆಯವರಿಗೆ ತುಂಬಾ ಲಾಭ ಆಗಿದೆ. ಕಪ್ಪುಹಣ ದವರಿಗೆ, ಭಯೋತ್ಪಾದಕರಿಗೆ ಯಾವುದೇ ನಷ್ಟ ಆಗಿಲ್ಲ ಮತ್ತು ಈ ಸಮಸ್ಯೆ ಸಂಪೂರ್ಣವಾಗಿ ಪರಿಹಾರ ಕಂಡಿಲ್ಲ. ಸರಕಾರ ಈವರೆಗೆ ಕಪ್ಪು ಹಣದ ವಿಚಾರ ದಲ್ಲಿ ಏನು ಮಾಡಿದೆ ಎಂಬುದು ಯಾರಿಗೂ ಗೊತ್ತಿಲ್ಲ. ನೋಟ್‌ಬ್ಯಾನ್‌ನಿಂದ ಹಣ ಚಲಾವಣೆ ಸ್ಥಗಿತಗೊಂಡು ಉದ್ಯೋಗ ನಷ್ಟವಾಗಿದೆ. ಇದರಿಂದ ಅತ್ಯಂತ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಜನಸಾಮಾನ್ಯರು. ಅದರಲ್ಲೂ ಮಧ್ಯಮವರ್ಗದವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಬಡವರಿಗೆ ಇದರಿಂದ ಅಷ್ಟೊಂದು ಸಮಸ್ಯೆಯಾಗಿಲ್ಲ. ನೋಟ್‌ಬ್ಯಾನ್ ಆದ ನಂತರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ಬದಲು ಭ್ರಷ್ಟಾಚಾರ ಶೇ.100ರಷ್ಟು ಹೆಚ್ಚಾಗಿದೆ. ಇದರಲ್ಲಿ ಯಾವುದೇ ನಾವು ಪ್ರಗತಿ ಕಂಡಿಲ್ಲ. ಆ ಸಮಸ್ಯೆ ಇನ್ನೂ ಹಾಗೆ ಇದೆ. ಪುರಸಭೆ, ಗ್ರಾಪಂ, ಪೊಲೀಸ್ ಠಾಣೆಗಳಲ್ಲಿ ಇಂದಿಗೂ ಹಣ ಕೊಡದೆ ಯಾವುದೇ ಕೆಲಸಗಳು ಆಗುವುದಿಲ್ಲ. ಭ್ರಷ್ಟಾಚಾರ ಕಡಿಮೆ ಮಾಡಲು ರಾಜಕಾರಣಿಗಳಿಂದ ಸಾಧ್ಯವಿಲ್ಲ. ಜನ ಸಾಮಾನ್ಯರು ಎಚ್ಚೆತ್ತುಕೊಂಡರೆ ಒಂದು ದಿನದಲ್ಲಿ ಭ್ರಷ್ಟಾಚಾರವನ್ನು ನಿಲ್ಲಿಸ ಬಹುದು. ಇಂದು ನಮ್ಮ ಯುವ ಸಮುದಾಯವೇ ಹೆಚ್ಚು ಭ್ರಷ್ಟಾಚಾರಕ್ಕೆ ಒಳಗಾಗುತ್ತಿರುವುದು ದುರಂತ. ನಮ್ಮ ಆರ್ಥಿಕತೆ ಕುಸಿಯಲು ನೋಟು ಬ್ಯಾನ್ ಕಾರಣ ಆಗುವುದಿಲ್ಲ. ಇದಕ್ಕೆ ಕೇಂದ್ರ ಸರಕಾರದ ನೀತಿಯೇ ಮುಖ್ಯ ಕಾರಣವಾಗಿದೆ. ನಮ್ಮ ದೇಶದಲ್ಲಿ ಎಲ್ಲಿಯವರೆಗೆ ತೆರಿಗೆ ಕಡಿಮೆ ಮಾಡುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಆರ್ಥಿಕತೆ ಅಭಿವೃದ್ಧ್ದಿಯಾಗುವುದಿಲ್ಲ.

-------------------------

ಸಂಕಷ್ಟಕ್ಕೊಳಗಾದ ಮಹಿಳೆಯರು

ಪುಷ್ಪಾ ಅಮರನಾಥ್, ಅಧ್ಯಕ್ಷೆ, ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್

ನೋಟ್ ಬ್ಯಾನ್‌ನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಮಹಿಳೆಯರು. ಕಷ್ಟಪಟ್ಟು ದುಡಿದ ಹಣದಲ್ಲಿ ಒಂದಂಶವನ್ನು ಉಳಿಸಿಕೊಂಡವರು ನೋಟ್ ಬ್ಯಾನ್ ಬಳಿಕ ಅನಿವಾರ್ಯವಾಗಿ ಆ ಹಣವನ್ನು ಗಂಡಂದಿರ ಕೈಗೆ ಒಪ್ಪಿಸಬೇಕಾಯಿತು. ಯಾವ ಕ್ಷಣ ಯಾವ ನೋಟ್ ಬ್ಯಾನ್ ಆಗಬಹುದು? ಯಾವ ಕ್ಷಣ ಬ್ಯಾಂಕ್‌ನಲ್ಲಿದ್ದ ಹಣವನ್ನು ಸರಕಾರ ಸ್ವಾಧೀನಪಡಿಸಬಹುದು? ಎಂಬ ಆತಂಕ ಎಲ್ಲರಲ್ಲೂ ಇದೆ. ಹಾಗಾಗಿ ಹೆಚ್ಚಿನವರಲ್ಲಿ ಉಳಿತಾಯ ಮನೋಭಾವವೇ ದೂರವಾಗಿದೆ. ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದವರು ನಯಾಪೈಸೆಯನ್ನೂ ಹೊತ್ತು ತಂದಿಲ್ಲ. ಇದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ದೂರದೃಷ್ಟಿಯ ಕೊರತೆಯೇ ಕಾರಣವಾಗಿದೆ.

-------------------------

ನೋಟು ಅಮಾನ್ಯತೆಯಿಂದ ಕಾಳಧನಿಕರಿಗಷ್ಟೇ ಲಾಭ

ವಿದ್ಯಾಸಾಗರ್, ರೈತ ಸಂಘದ ಜಿಲ್ಲಾಧ್ಯಕ್ಷ, ಮೈಸೂರು

ನೋಟು ಅಮಾನ್ಯೀಕರಣದಿಂದ ಕಾಳಧನಿಕರಿಗಷ್ಟೇ ಹೆಚ್ಚು ಲಾಭವಾಗಿದ್ದು, ಬಡವರು, ಕೂಲಿಕಾರ್ಮಿಕರು, ಮಧ್ಯಮ ವರ್ಗದವರು, ರೈತರು, ಶೋಷಿತರಿಗೆ ಬಹುದೊಡ್ಡ ಹೊಡೆತ ಬಿದ್ದಿದೆ ಎಂದು ಕರ್ನಾಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ತಿಳಿಸಿದರು.

ನೋಟು ಅಮಾನ್ಯೀಕರಣಗೊಂಡು ಮೂರುವರ್ಷಗಳು ಕಂಡ ಹಿನ್ನ್ನ್ನೆಲೆಯಲ್ಲಿ ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ.

► ನೋಟ್ ಬ್ಯಾನ್ ನಿಂದ ಯಾವ ಪ್ರಯೋಜನನೂ ಆಗಿಲ್ಲ. ಬಡವರು, ರೈತರು ಮಧ್ಯಮ ವರ್ಗದವರನ್ನು ಬೀದಿಯಲ್ಲಿ ನಿಲ್ಲಿಸಿದ್ದು ಬಿಟ್ಟರೆ ಇನ್ಯಾವ ಪ್ರಯೋಜನವೂ ಆಗಿಲ್ಲ. ನೋಟ್ ಬ್ಯಾನ್ ನಿಂದ ಆರ್ಥಿಕತೆಗೆ ಸಾಕಷ್ಟು ತೊಂದರೆಯಾಗಿದೆ. ಇವರ ಸಾಧನೆ ಶೂನ್ಯ.

► ನೋಟ್‌ಬ್ಯಾನ್‌ನಿಂದ ಕಪ್ಪುಹಣ ಇಟ್ಟವರಿಗೆ ಅನುಕೂಲ ಆಗಿದೆ. ಕಾಳಧನಿಕರು ಕಪ್ಪುಹಣವನ್ನು ಪರೋಕ್ಷವಾಗಿ ಬಿಳಿ ಮಾಡಿಕೊಳ್ಳಲು ಅನುಕೂಲ ಆಗಿದೆ. ಸಾಮಾನ್ಯ ರೈತರು, ಕೂಲಿಕಾರ್ಮಿಕರು, ಮಧ್ಯಮವರ್ಗದವರು, ಬಡವರು ಮತ್ತು ಶೋಷಿತರಿಗೆ ಬಹಳ ನಷ್ಟ ಉಂಟಾಗಿದೆ.

► ನೋಟ್‌ಬ್ಯಾನ್‌ನಿಂದ ಭಯೋತ್ಪಾದನೆ ನಿಲ್ಲಿಸುತ್ತೇವೆ ಎಂದು ಹೇಳಿದ್ದು ನೆಪ ಮಾತ್ರ. ಅವರ ಉದ್ದೇಶ ಕಪ್ಪುಹಣ ಇಟ್ಟ ಕೆಲವು ಮಂದಿಗೆ ಪರೋಕ್ಷವಾಗಿ ಬಿಳಿ ಮಾಡಿಕೊಡುವುದಾಗಿತ್ತು. ಅದಕ್ಕಾಗಿ ಬೇರೆ ಬೇರೆ ಕಾರಣಗಳನ್ನು ನೀಡಿ ಜನರ ದೃಷ್ಟಿಯನ್ನು ಬೇರೆಡೆ ಸೆಳೆದರು.

► ನೋಟ್ ಬ್ಯಾನ್‌ನಿಂದ ರೈತರು, ಸಾಮಾನ್ಯ ಜನರು ಕಷ್ಟ ಅನುಭವಿಸಿದ್ದರು. ಬೇರೆ ಯಾರಿಗೂ ಕಷ್ಟವಾಗಲಿಲ್ಲ.

► ನೋಟ್ ಬ್ಯಾನ್‌ನಿಂದ ಭ್ರಷ್ಟಾಚಾರ ಹೆಚ್ಚಾಗಿದೆಯೇ ಹೊರತು, ಕಡಿಮೆಯಾಗಿಲ್ಲ. ಬಡವರ ಸಂಖ್ಯೆ ಜಾಸ್ತಿಯಾಗಿದೆ. ಅನ್ನ ಇಲ್ಲದವರ ಸಂಖ್ಯೆ ಜಾಸ್ತಿಯಾಗಿದೆ. ಹಾಗಿದ್ದ ಮೇಲೆ ಭ್ರಷ್ಟಾಚಾರ ಹೇಗೆ ಕಡಿಮೆಯಾಗಿದೆ?.

► ನೋಟ್ ಬ್ಯಾನ್ ಆದ ಮೇಲೆ ರೈತರು ಬಡವರು, ಮಧ್ಯಮವರ್ಗದವರು ಬೀದಿಗೆ ಬಿದ್ದರು. ಹಣ ಇಲ್ಲದೆ ಸಾಕಷ್ಟು ಸಮಸ್ಯೆಯನ್ನು ಎದುರಿಸಿದರು. ಇಂದಿನ ಆರ್ಥಿಕ ಕುಸಿತಕ್ಕೆ ನೋಟ್‌ಬ್ಯಾನ್ ಕೂಡಾ ಕಾರಣವಾಗಿದೆ.

► ನೋಟ್ ಬ್ಯಾನ್ ಮಾಡಿದಾಗಲೇ ನಮ್ಮ ದೇಶದ ಆರ್ಥಿಕತೆಗೆ ಸಂಕಷ್ಟ ಎದುರಾಯಿತು. ಜನರು ಹಣವಿಲ್ಲದೆ ಯಾವ ವ್ಯವಹಾರವನ್ನು ಮಾಡಲೂ ಸಾಧ್ಯವಾಗಲಿಲ್ಲ. ಬರೀ ದೊಡ್ಡ, ದೊಡ್ಡ ಉದ್ಯಮಿಗಳು ಮತ್ತು ಅವರಿಗೆ ಬೇಕಾದವರ ಅನುಕೂಲಕ್ಕೆ ನೋಟ್ ಬ್ಯಾನ್ ಮಾಡಲಾಯಿತು. ಬಹು ಸಂಖ್ಯಾತರ ರಾಷ್ಟ್ರದಲ್ಲಿ ಎಲ್ಲರಿಗೂ ಅನುಕೂಲ ಆಗುವ ರೀತಿ ನಿರ್ಧಾರ ಕೈಗೊಳ್ಳಬೇಕಾದ ಕೆಂದ್ರ ಸರಕಾರ, ದಿನಕ್ಕೊಂದು ಹೊಸ ಕಾನೂನನ್ನು ಜಾರಿಗೆ ತರುತ್ತಿದೆ. ಬ್ಯಾಂಕ್ ಖಾತೆ ಹೊಂದಿರುವವರು ಡಿಜಿಟಲ್ ಮೂಲಕ ಹಣ ಪಡೆಯಬೇಕು ಎಂದು ಹೇಳುತ್ತ�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News