ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣ, ಮಸೀದಿ ನಿರ್ಮಾಣಕ್ಕೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ

Update: 2019-11-09 15:14 GMT

ಹೊಸದಿಲ್ಲಿ, ನ. 9: ಶತಮಾನಗಳ ಹಳೆಯ ಅಯೋಧ್ಯೆ ಜಮೀನು ವಿವಾದ ಪ್ರಕರಣದಲ್ಲಿ ಶನಿವಾರ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ವಿವಾದಕ್ಕೆ ಒಳಪಟ್ಟ ಸಂಪೂರ್ಣ 2.77 ಎಕರೆ ಜಮೀನನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ಹಸ್ತಾಂತರಿಸಬೇಕು ಎಂದು ಹೇಳಿದೆ.

ಅದೇ ವೇಳೆ, ಈ ವಿವಾದಾಸ್ಪದ ಜಮೀನಿನ ಹೊರಗೆ, ಆದರೆ ಅಯೋಧ್ಯೆ ಪಟ್ಟಣದಲ್ಲಿಯೇ ಪ್ರಮುಖ ಸ್ಥಳವೊಂದರಲ್ಲಿ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ಜಮೀನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಸಂವಿಧಾನದ 142ನೇ ವಿಧಿಯಡಿಯಲ್ಲಿ ಲಭ್ಯವಿರುವ ಅಧಿಕಾರವನ್ನು ಬಳಸಿ ನ್ಯಾಯಾಲಯವು ಈ ಸೂಚನೆಗಳನ್ನು ನೀಡಿದೆ.

1992ರಲ್ಲಿ ಬಾಬರಿ ಮಸೀದಿಯನ್ನು ಕೆಡವಿರುವುದು ಕಾನೂನಿನ ಉಲ್ಲಂಘನೆ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹಾಗೂ 1949ರಲ್ಲಿ ಮಸೀದಿಯ ಮಧ್ಯದ ಗುಮ್ಮಟದ ಕೆಳಗೆ ವಿಗ್ರಹಗಳನ್ನು ಇಟ್ಟಿರುವ ಕೃತ್ಯವು ‘ಅಪವಿತ್ರಗೊಳಿಸುವ ಕೃತ್ಯ’ವಾಗಿದೆ ಎಂಬುದಾಗಿಯೂ ಸರ್ವೋನ್ನತ ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ಎಸ್. ಎ. ಬೋಬ್ಡೆ, ನ್ಯಾಯಮೂರ್ತಿ ಎಸ್.ವೈ. ಚಂದ್ರಚೂಡ್, ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರನ್ನೊಳಗೊಂಡ ಐವರು ಸದಸ್ಯರ ಸುಪ್ರೀಮ್ ಕೋರ್ಟ್‌ನ ಸಂವಿಧಾನ ಪೀಠವು ಈ ಸರ್ವಾನುಮತದ ತೀರ್ಪು ನೀಡಿದೆ.

ದೇವಾಲಯ ನಿರ್ಮಾಣ ಯೋಜನೆಯೊಂದನ್ನು ಮೂರು ತಿಂಗಳಲ್ಲಿ ರೂಪಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸೂಚಿಸಿದೆ. ದೇವಸ್ಥಾನ ನಿರ್ಮಾಣಕ್ಕಾಗಿ ಟ್ರಸ್ಟಿಗಳ ಮಂಡಳಿಯೊಂದನ್ನು ರಚಿಸಬೇಕು ಹಾಗೂ ಟ್ರಸ್ಟ್‌ನಲ್ಲಿ ನಿರ್ಮೋಹಿ ಅಕಾರಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಆದಾಗ್ಯೂ, ವಿವಾದಾಸ್ಪದ ಜಮೀನಿನ ಒಡೆತನವನ್ನು ರಾಮ್ ಲಲ್ಲಾಗೆ ನೀಡುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಶರತ್ತುಗಳನ್ನು ವಿಧಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಕೋಮು ಸಾಮರಸ್ಯವನ್ನು ಕಾಪಾಡಿಕೊಂಡು ಬರಬೇಕೆನ್ನುವುದೇ ಶರತ್ತುಗಳಾಗಿವೆ.

ಅಲಹಾಬಾದ್ ಹೈಕೋರ್ಟ್ 2010 ಸೆಪ್ಟಂಬರ್ 30ರಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಮ್ ಬಣಗಳು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಬಳಿಕ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ವಿವಾದಾಸ್ಪದ 2.77 ಎಕರೆ ಜಮೀನನ್ನು ಮೂರು ಭಾಗಗಳನ್ನಾಗಿ ಮಾಡಿ ರಾಮ್ ಲಲ್ಲಾ (ಮಗು ರಾಮ), ನಿರ್ಮೋಹಿ ಅಖಾರ ಮತ್ತು ಸುನ್ನಿ ವಕ್ಫ್ ಮಂಡಳಿಗೆ ವಿತರಿಸಬೇಕು ಎಂಬುದಾಗಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

ಎರಡನೇ ಅತಿ ದೀರ್ಘ ವಿಚಾರಣೆ

ವಿವಾದದ ಬಗ್ಗೆ 40 ದಿನಗಳ ಕಾಲ ಸುದೀರ್ಘ ದೈನಂದಿನ ವಿಚಾರಣೆ ನಡೆಸಿದ ಬಳಿಕ, ಸುಪ್ರೀಂ ಕೋರ್ಟ್ ಅಕ್ಟೋಬರ್ 16ರಂದು ತೀರ್ಪನ್ನು ಕಾದಿರಿಸಿತ್ತು.

ಇದು ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲೇ ಎರಡನೇ ಅತಿ ದೀರ್ಘ ವಿಚಾರಣೆಯಾಗಿದೆ. ಇದಕ್ಕೂ ಮೊದಲು, ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಡೆಸಿದ ವಿಚಾರಣೆ ಅತಿ ದೀರ್ಘವಾಗಿತ್ತು. ಅದು 68 ದಿನಗಳ ಕಾಲ ನಡೆದಿತ್ತು.

 ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಎಫ್.ಎಂ. ಖಲೀಫುಲ್ಲಾ, ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಾಂಚು ಅವರನ್ನೊಳಗೊಂಡ ಸಮಿತಿ ನಡೆಸಿದ ಸಂಧಾನ ಮಾತುಕತೆಗಳು ವಿಫಲವಾಗಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಘೋಷಿಸಿದ ಬಳಿಕ, ಆಗಸ್ಟ್ 6ರಿಂದ ದೈನಂದಿನ ವಿಚಾರಣೆ ಆರಂಭಗೊಂಡಿತು.

ತೀರ್ಪಿನ ಮುಖ್ಯಾಂಶಗಳು

►ನಿರ್ಮೋಹಿ ಅಖಾರದ ವ್ಯಾಜ್ಯವು ಪ್ರಸಕ್ತವಾಗಿಲ್ಲ.

►ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ)ಯ ವರದಿಗಳನ್ನು ಊಹಾಪೋಹಗಳು ಎಂದು ತಳ್ಳಿಹಾಕುವಂತಿಲ್ಲ.

►ಬಾಬರಿ ಮಸೀದಿಯನ್ನು ಖಾಲಿ ಜಮೀನಿನ ಮೇಲೆ ಕಟ್ಟಲಾಗಿಲ್ಲ ಹಾಗೂ ಅದರ ಕೆಳಗಿರುವ ಕಟ್ಟಡವು ಇಸ್ಲಾಮಿಕ್ ಮೂಲದ್ದಲ್ಲ ಎಂದು ಎಎಸ್‌ಐ ವರದಿಗಳು ಹೇಳುತ್ತವೆ.

►ಮಸೀದಿಯ ಕೆಳಗಿರುವ ಕಟ್ಟಡವು ಹಿಂದೂ ದೇವಾಲಯವೇ ಎನ್ನುವ ಬಗ್ಗೆಯೂ ಎಎಸ್‌ಐ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

►ಮಸೀದಿಯ ಕೆಳಗಡೆ ಕಟ್ಟಡವೊಂದು ಇದ್ದ ಮಾತ್ರಕ್ಕೆ ಹಾಗೂ ಆ ಕಟ್ಟಡವು ಹಿಂದೂ ಮೂಲದ್ದಾಗಿದ್ದರೂ ಆ ಜಮೀನಿನ ಒಡೆತನವನ್ನು ಈಗ ಹಿಂದೂಗಳಿಗೆ ನೀಡಲು ಸಾಧ್ಯವಿಲ್ಲ.

►ಈ ಜಮೀನು ರಾಮನ ಜನ್ಮಸ್ಥಳ ಎಂಬ ಹಿಂದೂಗಳ ನಂಬಿಕೆ ವಿವಾದಾತೀತ.

►ರಾಮ ಜನ್ಮಭೂಮಿಯು ಯಾವುದೇ ಹಕ್ಕುಗಳು ಮತ್ತು ಕರ್ತವ್ಯಗಳು ಇರುವ ವ್ಯಕ್ತಿಯಲ್ಲ, ಆದರೆ ರಾಮ ಲಲ್ಲಾ ಹೌದು.

►ಸುನ್ನಿ ವಕ್ಫ್ ಮಂಡಳಿ ಸಲ್ಲಿಸಿರುವ ದಾವೆಯು ಸ್ವೀಕಾರಾರ್ಹ ಹಾಗೂ ಅದಕ್ಕೆ ಯಾವುದೇ ಮಿತಿ ಅನ್ವಯಿಸುವುದಿಲ್ಲ.

►ವಿವಾದಾಸ್ಪದ ಜಮೀನಿಗೆ 1857ರ ಹಿಂದೆಯೂ ಜನರು ಹೋಗುತ್ತಿದ್ದರು ಎನ್ನುವುದಕ್ಕೆ ಪುರಾವೆಯಿದೆ.

►ವಿವಾದಾಸ್ಪದ ಸ್ಥಳದ ಹೊರಾಂಗಣದಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿಯಿದೆ. ಆದರೆ, ಒಳಾಂಗಣವು 1857ರ ಹಿಂದೆಯೂ ತನ್ನ ವಶದಲ್ಲಿತ್ತು ಎನ್ನುವುದನ್ನು ತೋರಿಸಲು ಸುನ್ನಿ ವಕ್ಫ್ ಮಂಡಳಿಯು ಸಲ್ಲಿಸಿದ ದಾವೆಯಲ್ಲಿ ಪುರಾವೆಯಿಲ್ಲ.

►ವಿವಾದಾಸ್ಪದ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸುವ ಅಲಹಾಬಾದ್ ಹೈಕೋರ್ಟ್‌ನ ತೀರ್ಪು ಸರಿಯಲ್ಲ. ಅದು ಪಾಲು ವ್ಯಾಜ್ಯವಲ್ಲ.

ಅಲಹಾಬಾದ್ ಹೈಕೋರ್ಟ್ ತೀರ್ಪು ವಿರುದ್ಧ 14 ಮೇಲ್ಮನವಿ

2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಒಟ್ಟು 14 ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು. ನಾಲ್ಕು ಸಿವಿಲ್ ವ್ಯಾಜ್ಯಗಳ ವಿಚಾರಣೆ ನಡೆಸಿದ ಹೈಕೋರ್ಟ್, ಅಯೋಧ್ಯೆಯಲ್ಲಿರುವ ವಿವಾದಾಸ್ಪದ 2.77 ಎಕರೆ ಜಮೀನನ್ನು ಸಮಾನವಾಗಿ ವಿಂಗಡಿಸಿ ರಾಮ್ ಲಲ್ಲಾ, ಸುನ್ನಿ ವಕ್ಫ್ ಮಂಡಳಿ ಮತ್ತು ನಿರ್ಮೋಹಿ ಅಖಾರಗಳಿಗೆ ನೀಡಬೇಕು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News