ಏನಿದೆ ಅಯೋಧ್ಯೆ ತೀರ್ಪಿನಲ್ಲಿ?: ಇಲ್ಲಿದೆ ಅದರ ಸಂಕ್ಷಿಪ್ತ ವಿಶ್ಲೇಷಣೆ

Update: 2019-11-09 14:53 GMT

ಹೊಸದಿಲ್ಲಿ,ನ.9: ಸರ್ವೋಚ್ಚ ನ್ಯಾಯಾಲಯವು ಶನಿವಾರ ಅಯೋಧ್ಯೆಯ ವಿವಾದಿತ ನಿವೇಶನವನ್ನು ಹಿಂದುಗಳಿಗೆ ಒಪ್ಪಿಸುವ ಮೂಲಕ ಅಲ್ಲಿ ರಾಮಮಂದಿರ ನಿರ್ಮಾಣದ ಮಾರ್ಗವನ್ನು ಸುಗಮಗೊಳಿಸಿದೆ. ಮಸೀದಿಯನ್ನು ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ ಬೇರೆ ಕಡೆ ನಿವೇಶನವನ್ನು ನೀಡುವಂತೆ ಅದು ಸರಕಾರಕ್ಕೆ ಆದೇಶಿಸಿದೆ. ತೀರ್ಪಿನ ಸಾರಾಂಶವಿಲ್ಲಿದೆ:

ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿದ್ದು ಏನನ್ನು ?

 ವಿವಾದಿತ ನಿವೇಶನವನ್ನು ಕೇಂದ್ರ ಸರಕಾರದ ನಿರ್ವಹಣೆಯ ಟ್ರಸ್ಟ್‌ವೊಂದಕ್ಕೆ ಹಸ್ತಾಂತರಿಸಲು ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿದೆ. ರಾಮ ಮಂದಿರ ನಿರ್ಮಾಣ ಸೇರಿದಂತೆ ಎಲ್ಲ ಚಟುವಟಿಕೆಗಳ ಉಸ್ತುವಾರಿಯನ್ನು ಈ ಟ್ರಸ್ಟ್ ನೋಡಿಕೊಳ್ಳಲಿದೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಕಾನೂನುಬಾಹಿರವಾಗಿತ್ತು ಎನ್ನುವುದನ್ನು ಒತ್ತಿ ಹೇಳಿರುವ ನ್ಯಾಯಾಲಯವು, ಮಸೀದಿಯನ್ನು ನಿರ್ಮಿಸಲು ಪರ್ಯಾಯ ನಿವೇಶನವೊಂದನ್ನು ಸರಕಾರವು ಸ್ವಾಧೀನ ಪಡಿಸಿಕೊಳ್ಳಬೇಕು ಎಂದಿದೆ. ವಿವಾದಿತ ನಿವೇಶನವನ್ನು ಪ್ರಕರಣದಲ್ಲಿಯ ಹಿಂದು ಮತ್ತು ಮುಸ್ಲಿಂ ಕಕ್ಷಿದಾರರಿಗೆ ಹಂಚಿಕೆ ಮಾಡಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ‘ತರ್ಕರಹಿತ ’ವಾಗಿತ್ತು ಎಂದು ನ್ಯಾಯಾಲಯವು ಹೇಳಿದೆ.

ಏನಿದರ ಅರ್ಥ?

ಸರ್ವೋಚ್ಚ ನ್ಯಾಯಾಲಯದ ಆದೇಶವು ಹಿಂದುತ್ವ ಸಂಘಟನೆಗಳು ಮತ್ತು ಬಿಜೆಪಿಯ ದೀರ್ಘಕಾಲಿಕ ಬೇಡಿಕೆಯಂತೆ, 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮಾರ್ಗವನ್ನು ಸುಗಮಗೊಳಿಸುತ್ತದೆ. ಏನಿದು ವಿವಾದ?

 1949ರಲ್ಲಿ,16ನೇ ಶತಮಾನದಲ್ಲಿ ಬಾಬರ್ ಆಡಳಿತದಡಿ ಮುಘಲ್‌ರಿಂದ ನಿರ್ಮಾಣಗೊಂಡಿತ್ತು ಎನ್ನಲಾಗಿರುವ ಬಾಬರಿ ಮಸೀದಿಯ ಪ್ರಮುಖ ಗುಮ್ಮಟದಡಿ ಶ್ರೀರಾಮನ ವಿಗ್ರಹವನ್ನು ಇರಿಸಿದಾಗಿನಿಂದ ನಡೆದಿರುವ ಘಟನಾವಳಿಗೆ ಸಂಬಂಧಿತ ಕಾನೂನು ವಿಷಯಗಳನ್ನು ನಿರ್ಧರಿಸಲಾಗುತ್ತಿದೆಯಾದರೂ 19ನೇ ಶತಮಾನದಲ್ಲಿ ಬ್ರಿಟಿಷ್‌ರ ಆಡಳಿತವಿದ್ದಾಗಲೇ ನ್ಯಾಯಾಲಯದಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ವಿವಾದಿತ ಆವರಣಗಳಲ್ಲಿ ಒಡೆತನ ಮತ್ತು ಆರಾಧನೆಯ ಅಧಿಕಾರಕ್ಕಾಗಿ ಹಿಂದು ಮತ್ತು ಮುಸ್ಲಿಂ ಕಕ್ಷಿದಾರರು ಹಕ್ಕುಗಳನ್ನು ಮಂಡಿಸಿದ್ದರು.

1980ರ ದಶಕದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ದೇಶಾದ್ಯಂತ ಬೃಹತ್, ಕೋಮು ವಿಭಜನಕಾರಿ ಅಭಿಯಾನವನ್ನು ಹುಟ್ಟುಹಾಕಲು ರಾಮ ಮಂದಿರ ನಿರ್ಮಾಣದ ಬೇಡಿಕೆಯನ್ನು ಬುನಾದಿಯನ್ನಾಗಿ ಬಳಸಿಕೊಂಡಿದ್ದವು. ಇದು ದಂಗೆಗಳು ಮತ್ತು ಸಾವುಗಳಿಗೆ,ನಂತರ 1992ರಲ್ಲಿ ಹಿಂದುತ್ವ ಗುಂಪುಗಳು ಮಸೀದಿಯನ್ನು ಧ್ವಂಸಗೊಳಿಸಲು ಕಾರಣವಾಗಿತ್ತು.

ಏನಿದು ಪ್ರಕರಣ?

ಇದನ್ನು ವಿವಾದವೆಂದು ಹೇಳಬಹುದಾದರೂ ತಾಂತ್ರಿಕವಾಗಿ ಇದು ಒಡೆತನ ನಿರ್ಧಾರಕ್ಕಾಗಿ ದಾಖಲಾದ ಪ್ರಕರಣವಾಗಿತ್ತು ಮತ್ತು ಬಾಬರಿ ಮಸೀದಿ ಇದ್ದ 2.77 ಎಕರೆ ನಿವೇಶನ ಯಾರಿಗೆ ಸೇರಿದ್ದು ಎನ್ನುವ ಪ್ರಶ್ನೆ ಇದರಲ್ಲಿ ಅಡಕವಾಗಿತ್ತು. ವಾಸ್ತವಿಕವಾಗಿ ಪ್ರಕರಣವು ಧಾರ್ಮಿಕ ಸಮುದಾಯಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಿರಲಿಲ್ಲವಾದರೂ ವ್ಯಕ್ತಿಗತ ಕಕ್ಷಿದಾರರನ್ನು ಹಿಂದು ಮತ್ತು ಮುಸ್ಲಿಂ ಪಕ್ಷಗಳೆಂದು ನೋಡಲಾಗುತ್ತಿತ್ತು. ನ್ಯಾಯಾಲಯದ ಮುಂದಿರಿಸಲಾಗಿದ್ದ ಮುಖ್ಯ ಸಾಕ್ಷಾಧಾರವು ಇದು ಕೋಟ್ಯಂತರ ಹಿಂದುಗಳ ನಂಬಿಕೆಯಾಗಿದೆ ಎನ್ನುವುದಾಗಿತ್ತಾದರೂ ಹಿಂದು ಪಕ್ಷಗಳು,ಪ್ರಮುಖವಾಗಿ ಖುದ್ದು ಶ್ರೀರಾಮನನ್ನು ಪ್ರತಿನಿಧಿಸಿದ್ದ ರಾಮ ಲಲ್ಲಾ ವಿರಾಜಮಾನ ಮತ್ತು ನಿರ್ಮೋಹಿ ಅಖಾಡಾ ವಿವಾದಿತ ನಿವೇಶನವು ಶ್ರೀರಾಮನ ಜನ್ಮಸ್ಥಳವಾಗಿರುವುದರಿಂದ ಪವಿತ್ರವಾಗಿದೆ ಮತ್ತು ಅದು ಹಿಂದುಗಳಿಗೇ ಸೇರಬೇಕಿದೆ ಎಂದು ಪ್ರತಿಪಾದಿಸಿದ್ದವು.

ಮುಸ್ಲಿಂ ಕಡೆಯಿಂದ ಪ್ರಮುಖ ಕಕ್ಷಿಯಾಗಿದ್ದ ಸುನ್ನಿ ವಕ್ಫ್ ಮಂಡಳಿಯು ನಿವೇಶನವು ಶ್ರೀರಾಮನ ಜನ್ಮಸ್ಥಳವಾಗಿತ್ತು ಅಥವಾ ಅಲ್ಲಿ ಮೊದಲು ದೇವಸ್ಥಾನವಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ವಾದಿಸಿತ್ತು.

ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುವ ಮುನ್ನ ಹಿಂದಿನ ನ್ಯಾಯಾಲಯಗಳು ನಿರ್ಧರಿಸಿದ್ದೇನು?

 19ನೇ ಶತಮಾನದಲ್ಲಿ ನ್ಯಾಯಾಲಯದಲ್ಲಿ ಮೊದಲ ಬಾರಿ ಪ್ರಕರಣ ದಾಖಲಾಗಿದ್ದಾಗ,ಮಸೀದಿಗೆ ತಾಗಿಕೊಂಡೇ ಅದರ ಹೊರಗೆ ಮಂದಿರವನ್ನು ನಿರ್ಮಿಸುವಂತಿಲ್ಲ,ಹಾಗೆ ಮಾಡಿದರೆ ಅದು ಕೋಮು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನಿರ್ಧರಿಸಲಾಗಿತ್ತು. ಆಗಿನಿಂದಲೂ ವಿವಿಧ ಸ್ಥಳೀಯ ನ್ಯಾಯಾಲಯಗಳು ಈ ಬಗ್ಗೆ ವಿಚಾರಣೆ ನಡೆಸಿ ಆದೇಶಗಳನ್ನು ನೀಡಿದ್ದವು ಮತ್ತು ಅಲಹಾಬಾದ್ ಉಚ್ಚ ನ್ಯಾಯಾಲಯದ ವಿಶೇಷ ಪೂರ್ಣ ಪೀಠವನ್ನು ತಲುಪುವವರೆಗೆ ಪ್ರಕರಣಗಳು ಮುಂದುವರಿದುಕೊಂಡೇ ಬಂದಿದ್ದವು. ಅಲಹಾಬಾದ್ ಉಚ್ಚ ನ್ಯಾಯಾಲಯವು 2010ರಲ್ಲಿ ವಿವಾದಿತ ನಿವೇಶನವು ಪ್ರಮುಖ ಕಕ್ಷಿದಾರರಾದ ರಾಮ ಲಲ್ಲಾ ವಿರಾಜಮಾನ,ನಿರ್ಮೋಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಸಮಾನವಾಗಿ ಹಂಚಿಕೆಯಾಗಬೇಕು ಎಂದು ತೀರ್ಪು ನೀಡಿತ್ತು.

ಇದಕ್ಕೆ ಒಪ್ಪದ ಮೂರೂ ಕಕ್ಷಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಗಳನ್ನು ಸಲ್ಲಿಸಿದ್ದವು ಮತ್ತು ಅದು ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿತ್ತು. ಸರ್ವೋಚ್ಚ ನ್ಯಾಯಾಲಯವು ಮೇಲ್ಮನವಿಗಳ ವಿಚಾರಣೆ ನಡೆಸುತ್ತಿದ್ದರೆ ಇತ್ತ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಮಧ್ಯಸ್ಥಿಕೆಯ ವಿವಿಧ ಪ್ರಯತ್ನಗಳು ನಡೆದಿದ್ದವು,ಆದರೆ ಎಲ್ಲ ಕಕ್ಷಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಂಧಾನಕಾರರಿಗೆ ಸಾಧ್ಯವಾಗಿರಲಿಲ್ಲ. ತಾಂತ್ರಿಕವಾಗಿ ಹೇಳುವುದಾದರೆ ಆಗ ಸರ್ವೋಚ್ಚ ನ್ಯಾಯಾಲಯವು ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಸರಿಯಾಗಿದೆಯೇ ಎನ್ನುವುದನ್ನು ಪರಿಶೀಲಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News