ಪ್ರಪ್ರಥಮ ಇಲೆಕ್ಟ್ರಿಕ್ ವಿಮಾನ ಪ್ರದರ್ಶಿಸಿದ ನಾಸಾ

Update: 2019-11-09 16:41 GMT
Photo: Mike Blake, Reuters

ಕ್ಯಾಲಿಫೋರ್ನಿಯಾ, ನ.9: ಅಭಿವೃದ್ಧಿ ಹಂತದಲ್ಲಿರುವ ತನ್ನ ಪ್ರಪ್ರಥಮ ವಿದ್ಯುತ್‌ಚಾಲಿತ ವಿಮಾನ ಎಕ್ಸ್-57 ಮ್ಯಾಕ್ಸ್‌ವೆಲ್ ಅನ್ನು ಅಮೆರಿಕದ ‘ನ್ಯಾಷನಲ್ ಏರೊನ್ಯಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್’(ನಾಸಾ) ಕ್ಯಾಲಿಫೋರ್ನಿಯಾದ ವೈಮಾನಿಕ ಪ್ರಯೋಗಶಾಲೆಯಲ್ಲಿ ಪ್ರದರ್ಶಿಸಿದೆ.

ಈ ವಿದ್ಯುತ್ ಚಾಲಿತ ವಿಮಾನ 2020ರ ವೇಳೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಇಟಲಿ ನಿರ್ಮಿತ ಟೆಕ್ನಾಮ್ ಪಿ2006ಟಿ ಅವಳಿ ಇಂಜಿನ್ ಅಳವಡಿಸಲಾಗಿರುವ ಎಕ್ಸ್-57 ವಿಮಾನವು 2015ರಿಂದಲೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿದೆ.

  ನಾಸಾ ತಯಾರಿಸಲಿರುವ ಪ್ರಪ್ರಥಮ ವಿದ್ಯುತ್ ವಿಮಾನ ಇದಾಗಿದೆ. ಹಲವು ಖಾಸಗಿ ಸಂಸ್ಥೆಗಳೂ ವಿದ್ಯುತ್‌ ಚಾಲಿತ ವಿಮಾನಗಳನ್ನು ವಿನ್ಯಾಸಗೊಳಿಸುತ್ತಿವೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ ಲಿಥಿಯಂ ಇಯಾನ್ ಬ್ಯಾಟರಿಗಳಿಂದ ಸಜ್ಜುಗೊಂಡಿರುವ ವಿಮಾನವನ್ನು ಆರಂಭಿಕ ಹಂತದಲ್ಲಿ ಹತ್ತಿರದ ಪ್ರಯಾಣಕ್ಕೆ ಮಾತ್ರ ಬಳಸಬಹುದಾಗಿದೆ. ಆರಂಭಿಕ ಹಂತದಲ್ಲಿ ಏರ್‌ಟ್ಯಾಕ್ಸಿಯ ರೂಪದಲ್ಲಿ ಅಥವಾ ಕಡಿಮೆ ಪ್ರಯಾಣಿಕರು ಪ್ರಯಾಣಿಸುವ ವಿಮಾನವಾಗಿ ಬಳಸಬಹುದಾಗಿದೆ. ಬ್ಯಾಟರಿ ತಂತ್ರಜ್ಞಾನವನ್ನು ಸುಧಾರಿಸುವ ಸವಾಲು ನಮ್ಮೆದುರಿಗಿದೆ. ಕ್ಷಿಪ್ರವಾಗಿ ಬ್ಯಾಟರಿ ರಿಚಾರ್ಜ್ ಆಗುವಂತೆ ಮತ್ತು ಸುರ್ದೀಘಾವಧಿಯವರೆಗೆ ಬ್ಯಾಟರಿ ಶಕ್ತಿ ಉಳಿಯುವಂತೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ನಾಸಾದ ಅಧಿಕಾರಿಗಳು ಹೇಳಿದ್ದಾರೆ.

   ಒಟ್ಟು 14 ಕಡಿಮೆ ತೂಕದ ಇಂಜಿನ್‌ಗಳನ್ನು ಈ ವಿಮಾನ ಹೊಂದಲಿದೆ. ವಿಮಾನದ ಎರಡು ರೆಕ್ಕೆಯಲ್ಲಿ ತಲಾ 6 ಸಣ್ಣ ಇಂಜಿನ್‌ಗಳಿದ್ದು ಇವು ವಿಮಾನವನ್ನು ಮೇಲೆತ್ತಲು ನೆರವಾಗುತ್ತದೆ. ವಿಮಾನದ ಎರಡೂ ರೆಕ್ಕೆಯ ತುದಿಯಲ್ಲಿ ಒಂದೊಂದು ದೊಡ್ಡ ಇಂಜಿನ್‌ಗಳಿದ್ದು ಇವು ವಿಮಾನ ಮುಂದಕ್ಕೆ ಚಲಿಸಲು ನೆರವಾಗುತ್ತವೆ. ಸಣ್ಣ ಇಂಜಿನ್‌ಗಳು ವಿಮಾನ ಟೇಕ್ ಆಫ್ ಮಾಡಲು ಮತ್ತು ಲ್ಯಾಂಡಿಂಗ್‌ಗೆ ನೆರವಾಗಿ, ವಿಮಾನ ಹಾರುವ ಹಂತದಲ್ಲಿರುವಾಗ ಒಳಗೆ ಮಡಚಿಕೊಳ್ಳುತ್ತದೆ. ಆಂತರಿಕ ದಹನಕಾರಿ ಇಂಜಿನ್‌ಗಿಂತ ಇಲೆಕ್ಟ್ರಿಕ್ ಇಂಜಿನ್‌ಗಳು ಹೆಚ್ಚು ಸಾಂದ್ರವಾಗಿರುವುದರಿಂದ ಇದರ ನಿರ್ವಹಣೆ ಸರಳವಾಗಿದೆ ಮತ್ತು ಕಡಿಮೆ ತೂಕವನ್ನು ಹೊಂದಿದೆ. ವಿಮಾನದ ಹಾರಾಟಕ್ಕೆ ಕಡಿಮೆ ಇಂಧನ ಸಾಕಾಗುತ್ತದೆ. ಅಲ್ಲದೆ ನಿಶ್ಯಬ್ದವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಾಸಾದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News