ಭಾರತೀಯತೆಯ ಹೆಮ್ಮೆ 'ಅಬುಲ್ ಕಲಾಂ ಆಝಾದ್'

Update: 2019-11-10 16:46 GMT

ಸ್ವತಂತ್ರ ಭಾರತದ ಮೊತ್ತ ಮೊದಲ ಶಿಕ್ಷಣ ಸಚಿವರಾಗಿ ಆಝಾದ್ ಆಯ್ಕೆಯಾದರು. ‘ಆಧುನಿಕ ಭಾರತದ ಶಿಕ್ಷಣದ ಶಿಲ್ಪಿ’ ಎಂದು ಗುರುತಿಸಲ್ಪಟ್ಟರು. 1958 ಫೆಬ್ರವರಿ 22ರಂದು ಅವರು ನಿಧನರಾದರು. ಅವರ ಹುಟ್ಟು ದಿನವನ್ನು ಭಾರತ ಶಿಕ್ಷಣ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. 1992ರಲ್ಲಿ ಅವರಿಗೆ ಮರಣೋತ್ತರ ಭಾರತರತ್ನ ನೀಡಲಾಯಿತು. ಆಝಾದ್ ಭಾರತೀಯರ ಪಾಲಿಗೆ ಎಂದೆಂದಿಗೂ ಆದರ್ಶವಾಗಿ ಉಳಿಯಬೇಕಾದವರು.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯ ಮುಸ್ಲಿಮರಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಎರಡು ಆದರ್ಶ ವ್ಯಕ್ತಿಗಳಿದ್ದರು. ಒಂದು ಮುಹಮ್ಮದ್ ಅಲಿ ಜಿನ್ನಾ ಆಗಿದ್ದರೆ ಇನ್ನೊಂದು ಅಬುಲ್ ಕಲಾಂ ಆಝಾದ್. ಇಬ್ಬರೂ ಮಹಾ ವಿದ್ವಾಂಸರು ಮತ್ತು ಹೋರಾಟಗಾರರೇ ಆಗಿದ್ದರು. ಆದರೆ ಮೂಲಭೂತವಾಗಿ ಅವರಲ್ಲಿ ಎರಡು ಸ್ಪಷ್ಟ ಭಿನ್ನತೆಗಳಿದ್ದವು. ಅಬುಲ್ ಕಲಾಂ ಆಝಾದ್ ಅವರು ಮದರಸದಿಂದ ಬೆಳೆದ ವಿದ್ಯಾರ್ಥಿಯಾಗಿದ್ದರೆ, ಜಿನ್ನಾ ಅವರು ಪಾಶ್ಯಾತ್ಯ ಶಿಕ್ಷಣದಿಂದ ರೂಪುಗೊಂಡವರು. ಜಿನ್ನಾ ಅವರು ಖ್ಯಾತ ವಕೀಲರಾಗಿದ್ದರೆ, ಮೌಲಾನ ಅವರು ಖ್ಯಾತ ವಿದ್ವಾಂಸರಾಗಿದ್ದರು. ಫಿಕ್ಹ್, ಶರೀಯತ್, ಗಣಿತ, ತತ್ವಶಾಸ್ತ್ರ, ವಿಶ್ವಚರಿತ್ರೆ, ವಿಜ್ಞಾನ ಹೀಗೆ ಅವರ ಆಸಕ್ತಿಯ ಕ್ಷೇತ್ರಗಳ ಹರವು ಬಹುದೊಡ್ಡದು. ವಿಪರ್ಯಾಸ ಗಮನಿಸಿ. ಪಾಶ್ಚಾತ್ಯ ಬದುಕನ್ನು ಅಳವಡಿಸಿಕೊಂಡ ಜಿನ್ನಾ ಅವರು ಧರ್ಮಾಧಾರಿತ ಪಾಕಿಸ್ತಾನವನ್ನು ಬೆಂಬಲಿಸಿದರೆ, ಮದ್ರಸದಿಂದ ಬಂದ ಬಹುದೊಡ್ಡ ವಿದ್ವಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಆಝಾದ್ ಬಹುಸಂಸ್ಕೃತಿಯ ಭಾರತವನ್ನು ಆರಿಸಿಕೊಂಡರು. ಜಿನ್ನಾ ಅವರು ಮಹಾತ್ಮಾ ಗಾಂಧೀಜಿಯ ಕಟು ಟೀಕಾಕಾರರಾದರೆ ಆಝಾದ್, ಗಾಂಧೀಜಿಯ ಬೆನ್ನಿಗೆ ಬಲವಾಗಿ ನಿಂತವರು.

ಭಾರತೀಯ ಮುಸ್ಲಿಮರನ್ನು ಪ್ರತಿನಿಧಿಸುವ ಎರಡು ಕವಲುಗಳು ಜಿನ್ನಾ ಮತ್ತು ಆಝಾದ್. ಅಬುಲ್ ಕಲಾಂ ಆಝಾದ್ 1888 ನವೆಂಬರ್ 11ರಂದು ಜನಿಸಿದರು. ಅಬುಲ್ ಕಲಾಂ ಗುಲಾಂ ಮುಹಿಯುದ್ದೀನ್ ಎಂಬುದು ಇವರ ನಿಜನಾಮಧೇಯ. ಆಝಾದ್ ಅವರ ಉಪನಾಮ. ಮುಂದೆ ಭಾರತದ ಸ್ವಾತಂತ್ರ ಹೋರಾಟಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಡುವ ಮೂಲಕ ಅವರು ಆಝಾದ್ ಉಪನಾಮವನ್ನು ಅರ್ಥಪೂರ್ಣಗೊಳಿಸಿದರು. ಆಝಾದ್ ಅವರದು ಉಲಮಾಗಳ ಮನೆತನ. ಅವರ ತಂದೆ ಮೌಲಾನ ಖೈರುದ್ದೀನ್. ತಾಯಿಯದು ಅರೇಬಿಯನ್ ಮೂಲ. ಅವರ ಬದುಕು ಅರಳಿದ್ದೇ ಬಹುವೈವಿಧ್ಯ ಭಾಷೆಗಳ ನಡುವೆ. ಪಶೋತಿ, ಉರ್ದು, ಅರೇಬಿಕ್, ಬಂಗಾಲಿ, ಹಿಂದಿ, ಇಂಗ್ಲಿಷ್ ಹೀಗೆ ಹಲವು ಭಾಷೆಗಳನ್ನು ತನ್ನದಾಗಿಸಿಕೊಳ್ಳುತ್ತಾ, ಆ ಭಾಷೆಯ ಕೀಲಿ ಕೈಯ ಮೂಲಕವೇ ವಿದ್ವತ್ತಿನ ಪೆಟ್ಟಿಗೆಗಳನ್ನು ತೆರೆದರು. ಆಧುನಿಕ ಸಾಹಿತ್ಯ ಮತ್ತು ಸಮಾಜವನ್ನು ಅಧ್ಯಯನ ಮಾಡಿದರು. ಪಾಶ್ಚಿಮಾತ್ಯ ತತ್ವಶಾಸ್ತ್ರ, ಇತಿಹಾಸ ಮತ್ತು ಸಮಕಾಲೀನ ರಾಜಕಾರಣಗಳತ್ತಲೂ ಆಸಕ್ತಿ ಬೆಳೆಸಿಕೊಂಡರು. ಆಝಾದ್ ಉರ್ದು ಭಾಷೆಯಲ್ಲಿ ಕಾವ್ಯವನ್ನು ಬರೆಯ ತೊಡಗಿದರು.

ಅವರ ಉರ್ದು ಲೇಖನಗಳಲ್ಲಿ ಕಾವ್ಯ ಲಕ್ಷಣಗಳಿವೆ. ಅವರ ಲೇಖನಗಳೆಂದರೆ ಬೃಹತ್ ಉಪಮೆಗಳ ಸಂಗ್ರಹವೆನ್ನುವುದು ಉರ್ದು ಪಂಡಿತರ ಅಭಿಪ್ರಾಯ. ತನ್ನ ಎಳವೆಯಲ್ಲಿ ಉರ್ದು ವಿದ್ವಾಂಸರ ರಾಷ್ಟ್ರೀಯ ಸಮ್ಮೇಳನದಲ್ಲಿ ಎರಡು ಗಂಟೆಗಳ ಕಾಲ ಆಶುಭಾಷಣ ಮಾಡಿ ಬೆರಗು ಗೊಳಿಸಿದ್ದರು. 1908ರ ಹೊತ್ತಿನಲ್ಲಿ ಇರಾಕ್, ಸಿರಿಯಾ, ಈಜಿಪ್ಟ್, ಟರ್ಕಿ ಮೊದಲಾದ ದೇಶಗಳನ್ನು ಸಂದರ್ಶಿಸಿದರು ಮತ್ತು ಅಲ್ಲಿನ ಸಾಮಾಜಿಕ ರಾಜಕೀಯ ಬೆಳವಣಿಗೆಗಳನ್ನು ಅಧ್ಯಯನ ನಡೆಸಿದರು. ಮುಸ್ಲಿಮರು ರಾಜಕೀಯವಾಗಿ ಜಾಗೃತಗೊಳ್ಳುವ ಮತ್ತು ಭಾರತೀಯ ಮುಸ್ಲಿಮರ ರಾಜಕೀಯ ಚಿಂತನೆಗಳು ಸಾಗಬೇಕಾದ ದಿಕ್ಕಿನ ಕುರಿತಂತೆ ಅವರು ಸ್ಪಷ್ಟತೆಯನ್ನು ಪಡೆದುಕೊಳ್ಳತೊಡಗಿದರು. ಅವರ ‘ಅಲ್ ಹಿಲಾಲ್’ ಪತ್ರಿಕೆ ಹುಟ್ಟಿದ್ದೂ ಈ ಪರಿಕಲ್ಪನೆಯಲ್ಲೇ. ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ಮುಸ್ಲಿಮರನ್ನು ಮೇಲೆತ್ತುವ ಕೆಲಸವನ್ನು ಅವರು ಜೊತೆ ಜೊತೆಯಾಗಿ ಆರಿಸಿಕೊಂಡರು. ಅವರೆಡೂ ಬೇರೆ ಬೇರೆ ಕೆಲಸ ಎಂದು ಅವರಿಗೆ ಅನ್ನಿಸಲೇ ಇಲ್ಲ. ಬಹುಶಃ ಗಾಂಧಿ ಮತ್ತು ಆಝಾದ್ ಚಿಂತನೆಗಳು ಪರಸ್ಪರ ಬೆಸೆದುಕೊಳ್ಳುವುದು ಇಲ್ಲಿ. ಅವರ ಅಲ್ ಹಿಲಾಲ್ ಪತ್ರಿಕೆ ಬ್ರಿಟಿಷರ ಕೆಂಗಣ್ಣಿಗೆ ಬಿತ್ತು. ಹಲವು ಬಾರಿ ಭಾರೀ ದಂಡವನ್ನು ಅದು ಎದುರಿಸಿತು. ಅಷ್ಟೇ ಅಲ್ಲ, ಎರಡೇ ವರ್ಷದಲ್ಲಿ ಬ್ರಿಟಿಷರ ಕಾರಣದಿಂದ ಪತ್ರಿಕೆ ಮುಚ್ಚಬೇಕಾಯಿತು. ಆಗ ಆಝಾದ್ ಬೇರೆಯೇ ತಲೆಬರಹದೊಂದಿಗೆ ಹೊಸ ಪತ್ರಿಕೆಯನ್ನು ಆರಂಭಿಸಿದರು. ಆಝಾದ್‌ರನ್ನು ಬ್ರಿಟಿಷರು ಈಗ ಕೋಲ್ಕತಾದಿಂದಲೇ ಹೊರ ಹಾಕಿದರು. ಜೊತೆ ಜೊತೆಗೇ ಪತ್ರಿಕೆಯೂ ಮುಚ್ಚಿತು. ಕ್ವಿಟ್ ಇಂಡಿಯಾ ಚಳವಳಿಯ ನೇತೃತ್ವ ಅವರನ್ನು ಜೈಲು ಸೇರುವಂತೆ ಮಾಡಿತು. ಈ ಸಂದರ್ಭದಲ್ಲೇ ಅವರ ನಾಲ್ಕು ವರ್ಷದ ಮಗು ತೀರಿ ಹೋಯಿತು.

ಆಝಾದ್ ಜೈಲಿನಲ್ಲೇ ಅವರ ಮಹತ್ವದ ‘ಗುಅರ್ ಇ ಖಾತಿರ್’ ಕೃತಿಯನ್ನು ರಚಿಸಿದರು. ಆಝಾದ್ ಧರ್ಮ ಮತ್ತು ತತ್ವಶಾಸ್ತ್ರದ ಬಗ್ಗೆ ಗ್ರಂಥಗಳನ್ನು ರಚಿಸಿದ್ದರು. ಪತ್ರಕರ್ತರಾಗಿ ತಮ್ಮ ಬರಹಗಳ ಮೂಲಕ ಪ್ರಖ್ಯಾತಿ ಪಡೆದ ಇವರು ಬ್ರಿಟಿಷ್ ಆಡಳಿತದ ಕುರಿತ ವಿಮರ್ಶಾತ್ಮಕ ಲೇಖನದ ಜೊತೆಗೆ, ಭಾರತೀಯ ರಾಷ್ಟ್ರೀಯತೆಯ ಅಭಿಯಾನವನ್ನು ಸಮರ್ಥಿಸುವ ಬರಹಗಳನ್ನು ಪ್ರಕಟಿಸಿದ್ದಾರೆ. ಆಝಾದ್‌ರ ವಿದ್ವತ್ತನ್ನು ಸರೋಜಿನಿ ನಾಯ್ಡು ಒಂದೇ ಸಾಲಿನಲ್ಲಿ ಹೀಗೆ ಬಣ್ಣಿಸಿದ್ದರು ‘‘ಆಝಾದ್ ಹುಟ್ಟುವಾಗಲೇ ಅವರಿಗೆ 50 ವರ್ಷವಾಗಿತ್ತು’’. 1923ರಲ್ಲಿ , ತಮ್ಮ 35ನೇ ವಯಸ್ಸಿನಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಈ ಹುದ್ದೆಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾದರು. 1919ರಿಂದ 1926ರ ವರೆಗೆ ನಡೆದ ಖಿಲಾಫತ್ ಚಳವಳಿಯ ಮುಖಂಡರಾಗಿ ಗುರುತಿಸಿಕೊಂಡ ಆಝಾದ್, ಈ ಸಂದರ್ಭ ಮಹಾತ್ಮಾ ಗಾಂಧೀಜಿಯವರ ನಿಕಟ ಸಂಪರ್ಕಕ್ಕೆ ಬಂದರು. ಬ್ರಿಟಿಷರ ವಿರುದ್ಧದ ಖಿಲಾಫತ್ ಚಳವಳಿಯನ್ನು ಗಾಂಧೀಜಿಯ ಸ್ವಾತಂತ್ರ ಹೋರಾಟಕ್ಕೆ ಬೆಸೆಯುವಲ್ಲೂ ಆಝಾದ್ ಪಾತ್ರ ದೊಡ್ಡದಿದೆ. ಧರ್ಮದ ಆಧಾರದಲ್ಲಿ ದೇಶ ವಿಭಜನೆಯನ್ನು ಕಟುವಾಗಿ ವಿರೋಧಿಸಿದವರು ಆಝಾದ್. ‘ಆಝಾದ್‌ರ ದೇಶ ನಿಷ್ಠೆ ಅವರ ಧರ್ಮ ನಿಷ್ಠೆಯಷ್ಟೇ ಅಛಲ’ ಎಂದು ಗಾಂಧೀಜಿಯವರು ಆಝಾದ್‌ರನ್ನು ಬಣ್ಣಿಸಿದ್ದರು. ವಲ್ಲಭಭಾಯಿ ಪಟೇಲ್ ಅವರು ದೇಶವಿಭಜನೆಯ ಕುರಿತಂತೆ ಮೃದು ಮಾತುಗಳನ್ನಾಡಿದ್ದರು. ‘ನಾವು ಇಷ್ಟಪಟ್ಟರೂ, ಪಡದಿದ್ದರೂ ಭಾರತದಲ್ಲಿ ಎರಡು ರಾಷ್ಟ್ರಗಳಿವೆ’’ ಎಂದು ಪಟೇಲ್ ಮಾತನಾಡಿದ್ದರು. ದೇಶವಿಭಜನೆಯ ವಿರುದ್ಧದ ನಿಲುವಿನಿಂದ ಹಿಂದೆ ಸರಿಯಲು ಪಟೇಲರು ಆಝಾದ್ ಅವರಿಗೆ ಒತ್ತಡ ಹಾಕಿದ್ದರು. ಮಾರ್ಚ್ 21ರಂದು ಆಝಾದ್ ಗಾಂಧೀಜಿಯನ್ನು ಭೇಟಿ ಮಾಡಿದರು. ಆಗ ಆಝಾದ್ ಗಾಂಧಿಯ ಜೊತೆಗೆ ಅಕ್ಷರಶಃ ಅಳುತ್ತಲೇ ಕೇಳಿದ್ದರು‘‘ ದೇಶದ ವಿಭಜನೆ ಈಗ ದೊಡ್ಡ ಬೆದರಿಕೆಯಾಗಿದೆ. ಪಟೇಲ್ ಮತ್ತು ನೆಹರೂ ಈ ವಿಭಜನೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನೀವು ನನ್ನೊಡನೆ ಇರುವಿರಾ, ಇಲ್ಲಾ ಬದಲಾಗುವಿರಾ?’’

‘‘ಎಂತಹ ಪ್ರಶ್ನೆಯನ್ನು ಕೇಳುತ್ತಿದ್ದೀರಿ? ಕಾಂಗ್ರೆಸ್ ದೇಶ ವಿಭಜನೆಯನ್ನು ಒಪ್ಪುವುದಾದರೆ ಅದು ನನ್ನ ಮೃತದೇಹದ ಮೇಲಷ್ಟೇ’’. ಆದರೆ ಬಳಿಕ ಗಾಂಧೀಜಿಯೂ ಅನಿವಾರ್ಯವಾಗಿ ತಮ್ಮ ನಿಲುವನ್ನು ಬದಲಿಸಿದರು. ‘ಇಂಡಿಯಾ ವಿನ್ಸ್ ಫ್ರೀಡಂ’ನಲ್ಲಿ ಈ ಕುರಿತಂತೆ ತಮ್ಮ ತೀವ್ರ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿ ಗಾಂಧೀಜಿಯನ್ನೂ ಅವರು ಮೃದುವಾಗಿ ಟೀಕಿಸಿದ್ದಾರೆ. ಭಾರತ ವಿಭಜನೆಗೊಂಡಾಗ, ಪಾಕಿಸ್ತಾನಕ್ಕೆ ತೆರಳಬೇಡಿ ಎಂದು ಅವರು ದೇಶದ ಮುಸ್ಲಿಮರನ್ನು ಕೈಯೊಡ್ಡಿ ಬೇಡಿಕೊಂಡರು. ನೂರಾರು ಸಭೆಗಳಲ್ಲಿ ಮಾತನಾಡಿದರು. ಸಂತ್ರಸ್ತರ ಸೇವೆಗಾಗಿ ಬೀದಿಗಿಳಿದರು. ಸ್ವತಂತ್ರ ಭಾರತದ ಮೊತ್ತ ಮೊದಲ ಶಿಕ್ಷಣ ಸಚಿವರಾಗಿ ಆಝಾದ್ ಆಯ್ಕೆಯಾದರು. ‘ಆಧುನಿಕ ಭಾರತದ ಶಿಕ್ಷಣದ ಶಿಲ್ಪಿ’ ಎಂದು ಗುರುತಿಸಲ್ಪಟ್ಟರು. 1958 ಫೆಬ್ರವರಿ 22ರಂದು ಅವರು ನಿಧನರಾದರು. ಅವರ ಹುಟ್ಟು ದಿನವನ್ನು ಭಾರತ ಶಿಕ್ಷಣ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. 1992ರಲ್ಲಿ ಅವರಿಗೆ ಮರಣೋತ್ತರ ಭಾರತರತ್ನ ನೀಡಲಾಯಿತು. ಆಝಾದ್ ಭಾರತೀಯರ ಪಾಲಿಗೆ ಎಂದೆಂದಿಗೂ ಆದರ್ಶವಾಗಿ ಉಳಿಯಬೇಕಾದವರು.

Writer - ಶಾಂತನೂರು ಶಿವಣ್ಣ, ಮಂಡ್ಯ

contributor

Editor - ಶಾಂತನೂರು ಶಿವಣ್ಣ, ಮಂಡ್ಯ

contributor

Similar News