ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಮತ್ತೆ ಅವಕಾಶ?

Update: 2019-11-10 17:21 GMT

ವಾಶಿಂಗ್ಟನ್, ನ. 10: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡುವ ಒಬಾಮ ಕಾಲದ ಕಾನೂನೊಂದನ್ನು ತಕ್ಷಣಕ್ಕೆ ರದ್ದುಪಡಿಸಲು ಅಮೆರಿಕದ ನ್ಯಾಯಾಲಯವೊಂದು ನಿರಾಕರಿಸಿದೆ. ಇದರಿಂದ ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ಭಾರತೀಯರಿಗೆ ತಾತ್ಕಾಲಿಕ ನೆಮ್ಮದಿ ದೊರೆತಂತಾಗಿದೆ.

ಎಚ್-1ಬಿ ವೀಸಾವು ನಿರ್ದಿಷ್ಟ ಉದ್ಯೋಗಳಿಗೆ ವಿದೇಶಿ ಕೆಲಸಗಾರರನ್ನು ನೇಮಿಸಲು ಅಮೆರಿಕದ ಕಂಪೆನಿಗಳಿಗೆ ಅವಕಾಶ ನೀಡುತ್ತದೆ.

ಈಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪೂರ್ವಾಧಿಕಾರಿ ಬರಾಕ್ ಒಬಾಮ 2015ರಲ್ಲಿ ಈ ಕಾನೂನನ್ನು ಜಾರಿಗೆ ತಂದಿದ್ದರು. ಈ ಕಾನೂನು ನಿರ್ದಿಷ್ಟ ಎಚ್-4 ವೀಸಾ ಮಾದರಿಗಳನ್ನು ಹೊಂದಿದವರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಸಾಧ್ಯವಾಗುವಂತೆ ಉದ್ಯೋಗ ಪರ್ಮಿಟ್‌ಗಳನ್ನು ನೀಡಲು ಅವಕಾಶ ನೀಡುತ್ತದೆ. ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಪ್ರಮುಖವಾಗಿ ಎಚ್-4 ವೀಸಾಗಳನ್ನು ನೀಡಲಾಗುತ್ತದೆ.

ಭಾರತೀಯರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಈ ಕಾನೂನಿನ ಪ್ರಮುಖ ಫಲಾನುಭವಿಗಳಾಗಿದ್ದಾರೆ.

ಈ ಕಾನೂನನ್ನು ಹಲವಾರು ಅಮೆರಿಕನ್ ಕೆಲಸಗಾರರು ಪ್ರಶ್ನಿಸಿದ್ದಾರೆ ಹಾಗೂ ಅವರಿಗೆ ಡೊನಾಲ್ಡ್ ಟ್ರಂಪ್ ಆಡಳಿತ ಬೆಂಬಲ ನೀಡಿದೆ. ಈ ಕಾನೂನನ್ನು ರದ್ದುಪಡಿಸಲು ಬಯಸುವುದಾಗಿ ಟ್ರಂಪ್ ಹೇಳುತ್ತಾ ಬಂದಿದ್ದಾರೆ.

ಕೊಲಂಬಿಯ ಜಿಲ್ಲಾ ಸರ್ಕೀಟ್‌ಗಾಗಿನ ಮೇಲ್ಮನವಿ ನ್ಯಾಯಾಲಯದ ಮೂವರು ನ್ಯಾಯಾಧೀಶರ ಪೀಠವೊಂದು ಶುಕ್ರವಾರ ಮೊಕದ್ದಮೆಯನ್ನು ಕೆಳಗಿನ ನ್ಯಾಯಾಲಯಕ್ಕೆ ಹಿಂದಿರುಗಿಸಿತು. ಪ್ರಕರಣದ ಅರ್ಹತೆಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರಕ್ಕೆ ಬರಲು ಜಿಲ್ಲಾ ನ್ಯಾಯಾಲಯಕ್ಕೆ ಇನ್ನೊಂದು ಅವಕಾಶ ನೀಡಲಾಗುತ್ತಿದೆ ಎಂದು ಮೇಲ್ಮನವಿ ನ್ಯಾಯಾಲಯ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News