ಎನ್‌ಎಸ್‌ಎ ದೋವಲ್ ಭೇಟಿ: ಶಾಂತಿ-ಸೌಹಾರ್ದಕ್ಕೆ ಬದ್ಧತೆ ವ್ಯಕ್ತಪಡಿಸಿದ ಹಿಂದು, ಮುಸ್ಲಿಂ ನಾಯಕರು

Update: 2019-11-10 18:01 GMT

ಹೊಸದಿಲ್ಲಿ,ನ.10: ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಾಯಕರು ರವಿವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳುವಲ್ಲಿ ಸಹಕಾರದ ಬದ್ಧತೆಯನ್ನು ವ್ಯಕ್ತಪಡಿಸಿದರಲ್ಲದೆ, ಅಯೋಧ್ಯೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿಧೇಯರಾಗಿರುವಂತೆ ಮತ್ತು ಅದನ್ನು ಗೌರವಿಸುವಂತೆ ಎಲ್ಲ ದೇಶವಾಸಿಗಳಿಗೆ ಮನವಿಯಲ್ಲಿ ಧ್ವನಿಗೂಡಿಸಿದ್ದಾರೆ.

ಸಂವಾದಕ್ಕೆ ಆಹ್ವಾನಿಸಲಾಗಿದ್ದ 18 ಹಿಂದು ನಾಯಕರಲ್ಲಿ ಬಾಬಾ ರಾಮದೇವ್ ಮತ್ತು ನಾಲ್ವರು ವಿಹಿಂಪ ಪ್ರತಿನಿಧಿಗಳು ಸೇರಿದ್ದರು. ಶಿಯಾ ನಾಯಕ ಮೌಲಾನಾ ಕಲ್ಬೆ ಜಾವದ್, ನಿಝಾಮುದ್ದೀನ್ ಔಲಿಯಾ ದರ್ಗಾದ ಪೀರ್ ಫರೀದ್ ಅಹ್ಮದ್ ನಿಝಾಮಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಹಮ್ಮದ್ ಇಂಜಿನಿಯರ್ ಸಲೀಂ ಸೇರಿದಂತೆ ಒಂದು ಡಝನ್ ಮುಸ್ಲಿಂ ಧಾರ್ಮಿಕ ನಾಯಕರು ಮತ್ತು ಬುದ್ಧಿಜೀವಿಗಳೂ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ,ಎಲ್ಲ ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಕಾಯ್ದುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಉನ್ನತ ಧಾರ್ಮಿಕ ನಾಯಕರ ನಡುವೆ ಸಂವಹನಗಳನ್ನು ಬಲಪಡಿಸುವುದು ಸಂವಾದ ಕಾರ್ಯಕ್ರಮದ ಉದ್ದೇಶವಾಗಿತ್ತು ಎಂದು ಅಧಿಕಾರಿಯೋರ್ವರು ತಿಳಿಸಿದರು.

ದೋವಲ್ ಜೊತೆ ಚರ್ಚೆಗಳ ಸಂದರ್ಭ ಧಾರ್ಮಿಕ ನಾಯಕರು ಕಾನೂನಿನ ಆಡಳಿತ ಮತ್ತು ಭಾರತದ ಸಂವಿಧಾನದಲ್ಲಿ ಸಂಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದರು. ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ಗೌರವಿಸಲು ನಿರ್ಣಯಿಸಿದರಲ್ಲದೆ, ಅದಕ್ಕೆ ವಿಧೇಯರಾಗಿರಲು ಎಲ್ಲ ದೇಶವಾಸಿಗಳನ್ನು ಕೋರಿಕೊಂಡರು. ಸಮುದಾಯ ನಾಯಕರು ಶಾಂತಿ,ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ಮತ್ತು ಕಾನೂನಿನ ಆಡಳಿತವನ್ನು ಎತ್ತಿಹಿಡಿಯಲು ಸರಕಾರಕ್ಕೆ ತಮ್ಮ ಸಂಪೂರ್ಣ ಸಹಕಾರದ ಭರವಸೆಯನ್ನು ನೀಡಿದರು ಎಂದು ಅಧಿಕಾರಿ ತಿಳಿಸಿದರು.

 ನ್ಯಾಯಾಲಯದ ತೀರ್ಪನ್ನು ಸ್ವೀಕರಿಸುವಲ್ಲಿ ಉಭಯ ಸಮುದಾಯಗಳಿಗೆ ಸೇರಿದ ಕೋಟ್ಯಂತರ ಭಾರತೀಯರು ಅಸಾಮಾನ್ಯ ಹೊಣೆಗಾರಿಕೆ,ಸಂವೇದನಾಶೀಲತೆ ಮತ್ತು ಸಂಯಮವನ್ನು ಪ್ರದರ್ಶಿಸಿದ್ದಾರೆ ಎಂದು ಈ ಧಾರ್ಮಿಕ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಎಂದೂ ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News