‘ಶಾಂತಿ’ಗಾಗಿ ‘ನ್ಯಾಯ’ದ ತ್ಯಾಗ

Update: 2019-11-11 06:02 GMT

ಈ ದೇಶದಲ್ಲಿ ನ್ಯಾಯ ಮತ್ತು ಸೌಹಾರ್ದ ಜೊತೆ ಜೊತೆಯಾಗಿ ಹೆಜ್ಜೆಯಿಟ್ಟಿದ್ದು ಕಡಿಮೆ. ‘ನ್ಯಾಯ’ ಮಾತನಾಡುವುದಕ್ಕೆ ಶುರು ಮಾಡಿದಂತೆಯೇ ಸೌಹಾರ್ದ ಮುನಿಸ ತೊಡಗುತ್ತದೆ. ‘‘ಹಿಂದೆಲ್ಲ ದನಿ ಮತ್ತು ಒಕ್ಕಲುಗಳ ನಡುವೆ ಸೌಹಾರ್ದವಿತ್ತು. ದಲಿತರು ಸಮಾಜದ ಶಾಂತಿಗೆ ಪೂರಕವಾಗಿದ್ದರು. ಈಗ ಮಾತು ಮಾತಿಗೂ ಸಂಘರ್ಷ...’’ ಎಂಬ ಅಸಮಾಧಾನದ ಮಾತುಗಳು, ಅಸಹನೆಯ ಮಾತುಗಳು ಆಗಾಗ ಹೊರ ಬೀಳುವುದಿದೆ. ಈ ದೇಶದಲ್ಲಿ ಸೌಹಾರ್ದ ಗೆಲ್ಲಬೇಕಾದರೆ ನ್ಯಾಯ ಸೋಲಲೇ ಬೇಕಾಗುತ್ತದೆ. ಅದು ‘ಅಯೋಧ್ಯೆ-ಬಾಬರಿ ಮಸೀದಿ-ರಾಮಮಂದಿರ’ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಸುಪ್ರೀಂಕೋರ್ಟ್‌ನ ತೀರ್ಪು ಒಂದು ರೀತಿಯಲ್ಲಿ ಸೌಹಾರ್ದಕ್ಕಾಗಿ ತನ್ನನ್ನು ತಾನೇ ಆತ್ಮಾಹುತಿಗೆ ಒಡ್ಡಿಕೊಂಡಂತಿದೆ. ಈ ದೇಶದ ಶಾಂತಿ, ಸೌಹಾರ್ದಕ್ಕಾಗಿ ಈ ದೇಶದ ಸಂವಿಧಾನ ಪರ, ಪ್ರಜಾಸತ್ತಾತ್ಮಕ ಪರವಾಗಿರುವ ದೊಡ್ಡ ಬಹುಸಂಖ್ಯಾತರು ಸುಪ್ರೀಂಕೋರ್ಟ್‌ನ ಈ ಬಲಿದಾನವನ್ನು ಗೌರವಿಸಿದ್ದಾರೆ ಮತ್ತು ತಲೆ ಬಾಗಿದ್ದಾರೆ. ದೇಶದ ಒಳಿತಿಗಾಗಿ ನಡೆದ ಮಹಾತ್ಯಾಗವಿದು. ನಾವಿಂದು ತಕ್ಷಣದ ಶಾಂತಿಯನ್ನು ಉಳಿಸಿಕೊಳ್ಳದೇ ಇದ್ದರೆ ಈ ದೇಶವನ್ನು ಉಳಿಸಿಕೊಳ್ಳಲಾರೆವು ಎನ್ನುವ ಮಹತ್ತರವಾದ ಸಂದೇಶ ಈ ತ್ಯಾಗದ ಹಿಂದಿದೆ. ‘ಒಂದು ಸಮುದಾಯದ ನಂಬಿಕೆಗೆ ಬೆಲೆ ಕೊಟ್ಟು ಈ ತೀರ್ಪು ನೀಡಲಾಗಿದೆ’ ಎನ್ನುವುದನ್ನು ಸುಪ್ರೀಂಕೋರ್ಟ್ ತೀರ್ಪು ಸ್ಪಷ್ಟವಾಗಿಯೇ ಹೇಳಿದೆ. ಇದೇ ಸಂದರ್ಭದಲ್ಲಿ 1992ರಲ್ಲಿ ಸಂಘಪರಿವಾರದ ಸಂಘಟನೆಗಳು ಮಸೀದಿ ಉರುಳಿಸುವ ಮೂಲಕ ಕಾನೂನಿಗೆ ಭಂಗ ತಂದವು ಎನ್ನುವುದನ್ನು ಕೋರ್ಟ್ ಒಪ್ಪಿದೆ. ವಿವಾದಾಸ್ಪದ ಜಾಗದಲ್ಲಿ ಅಕ್ರಮವಾಗಿ ರಾಮಲಲ್ಲಾ ಮೂರ್ತಿಗಳನ್ನು ತಂದಿಟ್ಟಿರುವುದನ್ನೂ ನಿಜವೆಂದಿದೆ. ಆದರೂ ಈ ಎಲ್ಲ ಅಕ್ರಮಗಳನ್ನು ಒಪ್ಪುತ್ತ, ಅಕ್ರಮ ನಡೆಸಿದವರಿಗೆ ನಂಬಿಕೆ ಆಧಾರದಲ್ಲಿ ಜಾಗದ ಒಡೆತನ ಬಿಟ್ಟುಕೊಟ್ಟಿದೆ.

ಅಂತಿಮ ತೀರ್ಪನ್ನು ಘೋಷಿಸುವ ಮುನ್ನ ಅದು ಒಟ್ಟು ಪ್ರಕರಣದ ಬಗ್ಗೆ ನೀಡಿದ ಅಭಿಪ್ರಾಯ ಒಂದು ತಪ್ಪೊಪ್ಪಿಗೆಯಂತಿದೆ. ಒಂದು ರೀತಿಯಲ್ಲಿ ಬಾಬರಿ ಮಸೀದಿ ಸಂತ್ರಸ್ತರಲ್ಲಿ, ‘ನನಗೆಲ್ಲವೂ ಗೊತ್ತು, ಆದರೆ ನಾನೇನು ಮಾಡಲಾರೆ, ದಯವಿಟ್ಟು ಈ ತೀರ್ಪನ್ನು ಒಪ್ಪಿಕೊಳ್ಳಿ’ ಎಂಬ ವಿನೀತ ಮನವಿಯಂತಿದೆ. ‘ಬಾಬರಿ ಮಸೀದಿಯನ್ನು ಖಾಲಿ ಜಮೀನಿನ ಮೇಲೆ ಕಟ್ಟಲಾಗಿಲ್ಲ ಹಾಗೂ ಅದರ ಕೆಳಗಿರುವ ಕಟ್ಟಡವು ಇಸ್ಲಾಮಿಕ್ ಮೂಲದ್ದಲ್ಲ’ ಎಂಬ ಎಎಸ್‌ಐ ವರದಿಯ ಒಂದು ಎಳೆಯನ್ನು ಹಿಡಿದುಕೊಂಡು ಸುಪ್ರೀಂಕೋರ್ಟ್ ತನ್ನನ್ನು ತಾನು ಉಳಿಸಿಕೊಳ್ಳಲು ಯತ್ನಿಸಿದೆ. ಯಾಕೆಂದರೆ, ಮಸೀದಿಯ ಕೆಳಗಿರುವ ಕಟ್ಟಡವು ಹಿಂದೂ ದೇವಾಲಯವೇ ಎನ್ನುವುದನ್ನು ಎಎಸ್‌ಐ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎನ್ನುವುದನ್ನೂ ನ್ಯಾಯಾಲಯ ಹೇಳುತ್ತದೆ. ಇದೇ ಸಂದರ್ಭದಲ್ಲಿ, 1949ರಲ್ಲಿ ರಾಮ-ಸೀತೆಯ ವಿಗ್ರಹಗಳನ್ನು ಅಕ್ರಮವಾಗಿ ತಂದಿರಿಸಿದ್ದನ್ನು ಮತ್ತು ಬಾಬರಿ ಮಸೀದಿ ಧ್ವಂಸಗೊಳಿಸಿರುವುದನ್ನು ಅಂದು ಒಪ್ಪಿಕೊಳ್ಳುತ್ತದೆ ಮಾತ್ರವಲ್ಲ ಅದು ಕಾನೂನಿನ ತೀವ್ರ ಉಲ್ಲಂಘನೆ, ಅದಕ್ಕೆ ಪರಿಹಾರ ಅಗತ್ಯ ಎಂದು ಅಭಿಪ್ರಾಯ ಪಡುತ್ತದೆ. ಆದರೆ ಇದೇ ಸಂದರ್ಭದಲ್ಲಿ ಆ ಕಟ್ಟಡವನ್ನು ಯಾವ ಕಾರಣಕ್ಕಾಗಿ ಕೆಡವಲಾಗಿತ್ತೋ, ಯಾವ ದುರುದ್ದೇಶದಿಂದ ಅಲ್ಲಿ ವಿಗ್ರಹಗಳನ್ನು ತಂದು ಇರಿಸಲಾಗಿತ್ತೋ ಆ ದುರುದ್ದೇಶಕ್ಕೆ ತನ್ನ ಸಮ್ಮತಿಯನ್ನು ನೀಡುತ್ತದೆ.

ಸುಪ್ರೀಂಕೋರ್ಟ್ ಅದೆಂತಹ ನೂಲಿನ ನಡಿಗೆಯನ್ನು ಇಟ್ಟಿತು ಎಂದರೆ, ‘ಮಸೀದಿಯ ಕೆಳಗಡೆ ಕಟ್ಟಡವೊಂದು ಇದ್ದ ಮಾತ್ರಕ್ಕೆ ಹಾಗೂ ಆ ಕಟ್ಟಡವು ಹಿಂದೂ ಮೂಲವಾಗಿದ್ದರೂ ಆ ಜಮೀನಿನ ಒಡೆತನವನ್ನು ಈಗ ಹಿಂದೂಗಳಿಗೆ ನೀಡಲು ಸಾಧ್ಯವಿಲ್ಲ’ ಎಂದು ಹೇಳುತ್ತದೆ ಹಾಗೂ, ಅಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಮತ್ತು ಅದರ ಹೊಣೆಯನ್ನು ಸರಕಾರ ಹೊರಬೇಕು ಎಂದು ಆದೇಶ ನೀಡುತ್ತದೆ. ಒಟ್ಟಿನಲ್ಲಿ ‘ಅದೇ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗದೇ ಇದ್ದರೆ ವಿವಾದ ಪರಿಹಾರವಾಗುವುದಿಲ್ಲ. ವಿವಾದ ಪರಿಹಾರವಾಗದೇ ಇದ್ದರೆ ಸೌಹಾರ್ದಕ್ಕೆ ಪದೇ ಪದೇ ಧಕ್ಕೆಯಾಗುತ್ತದೆ’ ಎನ್ನುವ ದೂರದೃಷ್ಟಿಯಿಂದ, ಅನಿವಾರ್ಯವೆನ್ನುವ ಪರಿಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ‘ನಿಮಗೆ ಮಂದಿರ-ಅವರಿಗೆ ಮಸೀದಿ’ ಎಂಬ ಸೂತ್ರದ ಮೂಲಕ ಪರಿಹಾರವನ್ನು ನೀಡಿದೆ. ಹಿಂದೂಗಳ ಪ್ರತಿನಿಧಿಗಳೆಂದು ಕರೆಸಿಕೊಂಡವರಿಗೆ ಅವರು ಬಯಸಿದ ಜಾಗದಲ್ಲೇ ಮಂದಿರ ನಿರ್ಮಾಣವಾದಂತಾಯಿತು, ಜೊತೆಗೆ ಮುಸ್ಲಿಮರ ಪ್ರತಿನಿಧಿಗಳೆಂದು ಕರೆಸಿಕೊಂಡವರಿಗೆ ಈಗ ಇರುವುದಕ್ಕಿಂತಲೂ ದೊಡ್ಡ ಜಮೀನಿನಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ಸಿಕ್ಕಿದಂತಾಯಿತು.

 ‘ಮುಸ್ಲಿಮರನ್ನು ಪ್ರತಿನಿಧಿಸುವ ಗುಂಪು ಈ ತೀರ್ಪನ್ನು ಒಪ್ಪಿಕೊಂಡರೆ ವಿವಾದ ಮುಗಿಯುತ್ತದೆ. ದೇಶದಲ್ಲಿ ಶಾಂತಿ ನೆಲೆಸುತ್ತದೆ’ ಎನ್ನುವ ವಾತಾವರಣವನ್ನು ತೀರ್ಪಿಗೆ ಮೊದಲೇ ಸಿದ್ಧಪಡಿಸಲಾಯಿತು. ಈ ಪ್ರಕರಣದಲ್ಲಿ ಅತ್ಯಂತ ಆಶಾದಾಯಕ ಸಂಗತಿ ಸುಪ್ರೀಂಕೋರ್ಟ್‌ನ ತೀರ್ಪಲ್ಲ. ನಮಗೆ ‘ನ್ಯಾಯ’ಕ್ಕಿಂತ ದೇಶದ ‘ಶಾಂತಿ’ ಮುಖ್ಯ ಎಂದು ಈ ತೀರ್ಪನ್ನು ಗೌರವಿಸಿದ ಒಂದು ಜನಸಮುದಾಯ. ನಾಳೆ, ಮುಸ್ಲಿಮರ ಪ್ರತಿನಿಧಿಗಳು ಎಂದು ಕರೆಸಿಕೊಂಡವರು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಆದರೆ ಈ ದೇಶದ ಮುಸ್ಲಿಮರು ಅಧಿಕೃತವಾಗಿ ಈ ತೀರ್ಪಿಗೆ ತಲೆಬಾಗಿದ್ದಾರೆ. ಒಂದು ರೀತಿಯಲ್ಲಿ ದೇವಸ್ಥಾನಕ್ಕಾಗಿ ಮಸೀದಿಯನ್ನು ತ್ಯಾಗ ಮಾಡಿದ್ದಾರೆ. ಮಸೀದಿಯನ್ನು ತ್ಯಾಗ ಮಾಡಿದ್ದಾರೆ ಎನ್ನುವುದಕ್ಕಿಂತ ಮಸೀದಿ ಧ್ವಂಸದ ಅನ್ಯಾಯಕ್ಕೆ ತಲೆಬಾಗಿದ್ದಾರೆ. ಸೌಹಾರ್ದಕ್ಕಾಗಿ ನ್ಯಾಯವನ್ನು ತ್ಯಾಗ ಮಾಡಿದ್ದಾರೆ. ಈ ತ್ಯಾಗಕ್ಕೆ ದೇಶದ ಕಾಳಜಿಯನ್ನು ಹೊರತು ಪಡಿಸಿದ ಇನ್ನಾವ ಕಾರಣವೂ ಅವರ ಬಳಿ ಇರಲಿಲ್ಲ. ಆ ತ್ಯಾಗವೇ ನಮ್ಮ ದೇಶದ ಭವಿಷ್ಯದ ಪಾಲಿನ ಆಶಾದಾಯಕ ಸಂಗತಿಯಾಗಿದೆ. ‘ಏನೋ ಸಂಭವಿಸುತ್ತದೆ’ ಎಂದು ಮಾಧ್ಯಮಗಳು ಹಸಿದ ತೋಳಗಳಂತೆ ಊಳಿಡುತ್ತಿರುವಾಗ ಒಂದು ಕಲ್ಲು ತೂರಾಟವೂ ನಡೆಯದಂತೆ ಶಾಂತಿಯನ್ನು ಕಾಪಾಡಿದ ಜನರೇ ಈ ದೇಶದ ನಿಜವಾದ ಭವಿಷ್ಯ. ಅವರು ಇಂದಿನ ದಿನ ಅಭಿನಂದನಾರ್ಹರು.

   ಮುಸ್ಲಿಮರನ್ನು-ಹಿಂದೂಗಳನ್ನು ಸುಪ್ರೀಂಕೋರ್ಟ್ ಸಮಾಧಾನಿಸಿದೆ. ಆದರೆ ತನಗೆ ತಾನೇ ಮಾಡಿಕೊಂಡ ಹಾನಿಯನ್ನು ಅದು ಹೇಗೆ ಸರಿಪಡಿಸಿಕೊಳ್ಳುತ್ತದೆ ಎನ್ನುವುದನ್ನು ನ್ಯಾಯಾಂಗದ ಹಿರಿಯರೇ ಹೇಳಬೇಕು. ಬಾಬರಿ ಮಸೀದಿ ಧ್ವಂಸ ನ್ಯಾಯವ್ಯವಸ್ಥೆಗೆ ಮಾಡಿದ ವಂಚನೆಯಾಗಿತ್ತು. ಅದೊಂದು ಬೃಹತ್ ಅಪರಾಧ ಎಂದು ಒಪ್ಪಿಕೊಳ್ಳುವ ನ್ಯಾಯವ್ಯವಸ್ಥೆ, ಎಲ್ಲಿಯವರೆಗೆ ಆ ಅಪರಾಧ ಎಸಗಿದವರಿಗೆ ಶಿಕ್ಷೆಯನ್ನು ನೀಡುವುದಿಲ್ಲವೋ ಅಲ್ಲಿಯವರೆಗೆ ಅಯೋಧ್ಯೆಯ ತೀರ್ಪು ಪೂರ್ತಿಯಾಗುವುದಿಲ್ಲ. ಸ್ವತಃ ತನ್ನ ಮೇಲೆ ನಡೆದ ದಾಳಿಗೆ ನ್ಯಾಯವನ್ನು ನೀಡಲಾಗದ ಸುಪ್ರೀಂಕೋರ್ಟ್ ‘ಇನ್ನಷ್ಟು ಅಪರಾಧ’ಗಳಿಗೆ ಹೆಬ್ಬಾಗಿಲನ್ನು ತೆರೆದುಕೊಟ್ಟಂತೆೆ. ಇನ್ನಷ್ಟು ಧ್ವಂಸಗಳಿಗೆ, ಅಪರಾಧಗಳಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಸುಪ್ರೀಂಕೋರ್ಟ್‌ನ ದೌರ್ಬಲ್ಯ ಇನ್ನಷ್ಟು ಅಪರಾಧಿಗಳನ್ನು ಸೃಷ್ಟಿಸುತ್ತದೆ. ಸುದೀರ್ಘವಾದ ಒಂದು ವಿವಾದವನ್ನು ಪರಿಹರಿಸಿದೆ ಎಂದು ಸಂಭ್ರಮಪಡುತ್ತಿರುವ ಸುಪ್ರೀಂಕೋರ್ಟ್, ಅದಕ್ಕಿಂತಲೂ ದೊಡ್ಡದಾದ ಅಪರಾಧವೊಂದಕ್ಕೆ ‘ಶಿಲಾನ್ಯಾಸ’ ಮಾಡಿದಂತಾಗಬಹುದು. ಈ ತೀರ್ಪು ಈ ದೇಶದ ಪ್ರಜಾಸತ್ತೆು ಅಡಿಗಲ್ಲನ್ನೇ ಅಲುಗಾಡಿಸಲೂಬಹುದು.

ಆದುದರಿಂದ, ದೇಶದ ಪ್ರಜಾಸತ್ತೆಯ ಮೇಲೆ, ದೇಶದ ಮೇಲೆ ಕಾಳಜಿ ಇರುವ ಬಹುಸಂಖ್ಯಾತರ ಈ ‘ತ್ಯಾಗ’ವನ್ನು ಗೌರವಿಸಿ, ಸುಪ್ರೀಂಕೋರ್ಟ್ ಬಾಬರಿ ಮಸೀದಿ ಧ್ವಂಸಗೈದ ಅಪರಾಧಿಗಳನ್ನು ಗುರುತಿಸಿ ಅವರಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಮುಂದಡಿ ಇಡಬೇಕಾಗಿದೆ. ಮುಂದೆ ಇಂತಹ ಅಪರಾಧಗಳು ನಡೆಯದಂತೆ ತಡೆಯುವುದಕ್ಕೆ ಅದು ಸಹಾಯವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News