ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ನಿಧನ

Update: 2019-11-10 18:52 GMT

ಹೊಸದಿಲ್ಲಿ,ನ.10: ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಟಿ.ಎನ್.ಶೇಷನ್ (86) ಅವರು ರವಿವಾರ ಸಂಜೆ ಚೆನ್ನೈನ ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ತಿರುನೆಲ್ಲೈನಲ್ಲಿ 1932,ಡಿ.15ರಂದು ಜನಿಸಿದ್ದ ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್ ಅವರು ತನ್ನ ಚುನಾವಣಾ ಸುಧಾರಣೆಗಳಿಂದಾಗಿ ಖ್ಯಾತನಾಮರಾಗಿದ್ದರು.

1990-1996ರ ನಡುವೆ ಭಾರತದ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದ ಶೇಷನ್ ದೇಶದಲ್ಲಿ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಚುನಾವಣೆಗಳಲ್ಲಿ ಹಣಬಲ ಮತ್ತು ತೋಳ್ಬಲಗಳೇ ಮುಖ್ಯವಾಗಿದ್ದ ಆ ಕಾಲದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ಮಾಡುವುದು ಚುನಾವಣಾ ಆಯೋಗದ ಸಾಮರ್ಥ್ಯಕ್ಕೆ ಮೀರಿತ್ತು. ಅಂತಹ ಸಂದರ್ಭದಲ್ಲಿ ಆಯೋಗದ ಚುಕ್ಕಾಣಿಯನ್ನು ವಹಿಸಿಕೊಂಡಿದ್ದ ಶೇಷನ್ ಪ್ರಮುಖ ಬದಲಾವಣೆಗಳನ್ನು ತರುವ ಮೂಲಕ ಆಯೋಗದ ಸ್ವರೂಪವನ್ನೇ ಬದಲಿಸಿದ್ದರು.

ಶೇಷನ್ ಅವರು ನಿಜವಾದ ದಂತಕಥೆಯಾಗಿದ್ದರು ಮತ್ತು ತನ್ನ ಎಲ್ಲ ಉತ್ತರಾಧಿಕಾರಿಗಳಿಗೆ ಮಾರ್ಗದರ್ಶಕ ಶಕ್ತಿಯಾಗಿದ್ದರು ಎಂದು ಮಾಜಿ ಸಿಇಸಿ ಎಸ್.ವೈ.ಕುರೇಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News