12 ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದ ವಿದ್ಯುಚ್ಛಕ್ತಿ ಬೇಡಿಕೆ

Update: 2019-11-11 15:53 GMT
ಪೋಟೊ: moneycontrol.com

ಹೊಸದಿಲ್ಲಿ, ನ.11: ದೇಶದಲ್ಲಿ ವಿದ್ಯುಚ್ಛಕ್ತಿಯ ಬೇಡಿಕೆ ತೀವ್ರಗತಿಯಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ(ಸಿಇಎ)ದ ವರದಿ ತಿಳಿಸಿದ್ದು ಭಾರತದ ಆರ್ಥಿಕ ಅಭಿವೃದ್ಧಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ವಿದ್ಯುಚ್ಛಕ್ತಿಗೆ ಬೇಡಿಕೆ ವರ್ಧಿಸುವುದು ಆರ್ಥಿಕ ಚಟುವಟಿಕೆ ಸಕ್ರಿಯವಾಗಿರುವ ದ್ಯೋತಕವಾಗಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಆದರೆ ಈ ಕ್ಷೇತ್ರದ ಬೇಡಿಕೆ ಕಳೆದ 6 ವರ್ಷದಿಂದ ಸತತ ಇಳಿಮುಖವಾಗುತ್ತಾ ಬಂದಿದೆ ಎಂದು ವರದಿ ತಿಳಿಸಿದೆ.

  ಅಕ್ಟೋಬರ್ ತಿಂಗಳಿನಲ್ಲಿ ವಿದ್ಯುಚ್ಛಕ್ತಿಯ ಬೇಡಿಕೆಯಲ್ಲಿ 13.2% ಇಳಿಕೆಯಾಗಿದ್ದು ಕಳೆದ 12 ವರ್ಷಗಳಲ್ಲೇ ಇದು ಅತ್ಯಂತ ತೀವ್ರಪ್ರಮಾಣದ ಇಳಿಕೆಯಾಗಿದೆ. ದೇಶದಲ್ಲಿ ಆರ್ಥಿಕ ಚಟುವಟಿಕೆ ವಿಸ್ತರಿಸಲು ವಿದ್ಯುಚ್ಛಕ್ತಿಯ ಪೂರೈಕೆಯ ಅಗತ್ಯವಿದೆ. ವಿದ್ಯುಚ್ಛಕ್ತಿಗೆ ಬೇಡಿಕೆ ಕುಸಿದಿರುವುದು ಕೈಗಾರಿಕೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಅಥವಾ ಕೆಲವು ಕೈಗಾರಿಕೆಗಳು ಸ್ಥಗಿತಗೊಂಡಿರುವುದರ ಸೂಚಕವಾಗಿದೆ. ಸತತ ಮೂರನೇ ತಿಂಗಳೂ ವಿದ್ಯುಚ್ಛಕ್ತಿಗೆ ಬೇಡಿಕೆ ಕುಸಿದಿರುವುದು 2024ರ ವೇಳೆಗೆ 5 ಟ್ರಿಲಿಯನ್ ಅರ್ಥವ್ಯವಸ್ಥೆ ಹೊಂದಿರುವ ದೇಶವಾಗುವ ಭಾರತದ ಆಶಯಕ್ಕೆ ತೊಡಕಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಹಕರ ಬೇಡಿಕೆ ಕುಸಿದಿರುವುದರಿಂದ ಜೂನ್‌ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿಯ ಬೆಳವಣಿಗೆ ಅತ್ಯಂತ ಮಂದಗತಿಯಲ್ಲಿರುವಂತೆಯೇ, ವಿದ್ಯುಚ್ಛಕ್ತಿಯ ಬೇಡಿಕೆ ಕುಸಿದಿರುವುದು ಇನ್ನಷ್ಟು ಮಂದಗತಿಯ ಸೂಚನೆಯಾಗಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೈಗಾರಿಕಾ ವಲಯದಲ್ಲಿ ಕಾರ್ಯಚಟುವಟಿಕೆ ಮಂದಗತಿಯಲ್ಲಿರುವುದು ಆರ್ಥಿಕ ಅಭಿವೃದ್ಧಿಯ ಮಂದಗತಿಗೆ ಪ್ರಮುಖ ಕಾರಣವಾಗಿದೆ. ಅತ್ಯಧಿಕ ಕೈಗಾರಿಕೆಗಳಿರುವ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ವಿದ್ಯುಚ್ಛಕ್ತಿಯ ಬೇಡಿಕೆ ಕುಸಿದಿರುವುದು ಗಮನಾರ್ಹವಾಗಿದೆ. ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ವಿದ್ಯುತ್ ಬೇಡಿಕೆ 22%, ಗುಜರಾತ್‌ನಲ್ಲಿ 18.8% ಕುಸಿದಿದೆ . ಉತ್ತರಪ್ರದೇಶದಲ್ಲಿ 8.3%, ಮಧ್ಯಪ್ರದೇಶದಲ್ಲಿ 4%ಕ್ಕೂ ಹೆಚ್ಚು ಬೇಡಿಕೆ ಕುಸಿದಿದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ(ಸಿಇಎ)ದ ಅಂಕಿಅಂಶ ತಿಳಿಸಿದೆ. ಉತ್ತರ ಮತ್ತು ಪೂರ್ವದ ನಾಲ್ಕು ಸಣ್ಣರಾಜ್ಯಗಳನ್ನು ಹೊರತುಪಡಿಸಿ ದೇಶದಾದ್ಯಂತ ವಿದ್ಯುತ್‌ಚ್ಛಕ್ತಿಗೆ ಬೇಡಿಕೆ ಕುಸಿದಿದೆ ಎಂದು ವರದಿ ತಿಳಿಸಿದೆ.

ಕಳೆದ ಕೆಲವು ತಿಂಗಳಿನಿಂದ ಬೇಡಿಕೆಯನ್ನು ಪುನಶ್ಚೇತನಗೊಳಿಸಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡ ಹೊರತಾಗಿಯೂ, ಸೆಪ್ಟೆಂಬರ್‌ನಲ್ಲಿ ಮೂಲಸೌಕರ್ಯ ಉತ್ಪಾದನೆ 5.2% ಕುಸಿದಿದ್ದು ಕಳೆದ 14 ವರ್ಷದಲ್ಲೇ ಇದು ಕಳಪೆ ಸಾಧನೆಯಾಗಿದೆ.

 ಗ್ರಾಹಕರ ಬೇಡಿಕೆ ಕುಸಿದಿರುವುದು ಮತ್ತು ಹೂಡಿಕೆಯೂ ಕಡಿಮೆಯಾಗಿರುವುದರಿಂದ ಪ್ರಗತಿ ದರ 5.8%ದಷ್ಟು ಕನಿಷ್ಟ ಮಟ್ಟಕ್ಕೆ ಇಳಿಯುವ ಸಾಧ್ಯತೆಯಿದೆ. ಆದರೆ ಸರಕಾರ ಈ ವಿತ್ತೀಯ ವರ್ಷದಲ್ಲಿ 6% ಪ್ರಗತಿ ದರ ಸಾಧಿಸುವ ನಿರೀಕ್ಷೆಯಲ್ಲಿದೆ. ಆದರೆ ಕೈಗಾರಿಕಾ ಕ್ಷೇತ್ರಕ್ಕೆ ಪುನಶ್ಚೇತನ ನೀಡದಿದ್ದರೆ ಪ್ರಗತಿ ದರ ಹೆಚ್ಚುವ ಸಾಧ್ಯತೆಯಿಲ್ಲ ಎಂದು ದಿಲ್ಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್‌ನ ಪ್ರೊಫೆಸರ್ ಎನ್ ಆರ್ ಭಾನುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News