ಹಾಂಕಾಂಗ್: ವಿದ್ಯಾರ್ಥಿಯ ಎದೆಗೆ ಗುಂಡು ಹಾರಿಸಿದ ಪೊಲೀಸರು

Update: 2019-11-11 17:14 GMT

ಹಾಂಕಾಂಗ್, ನ. 11: ಹಾಂಕಾಂಗ್‌ನಲ್ಲಿ ಸೋಮವಾರ ಬೆಳಗ್ಗೆ ಮುಖವಾಡ ಧರಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಗುಂಡು ಹಾರಿಸಿದ್ದು, ಕನಿಷ್ಠ ಒಬ್ಬ ವಿದ್ಯಾರ್ಥಿಯ ಎದೆಗೆ ಗುಂಡು ಬಡಿದಿದೆ. ನಿಬಿಡ ಅವಧಿಯಲ್ಲಿ ನಡೆದ ಪ್ರತಿಭಟನೆಯು ಫೇಸ್‌ಬುಕ್‌ನಲ್ಲಿ ನೇರಪ್ರಸಾರಗೊಂಡಿತು.

ಸೈ ವಾನ್ ಹೊ ಜಿಲ್ಲೆಯ ರಸ್ತೆ ಸಂಧಿಯೊಂದರಲ್ಲಿ ತಡೆಯೊಡ್ಡಿದ ಪ್ರತಿಭಟನಕಾರರ ಪೈಕಿ ಒಬ್ಬರನ್ನು ಬಂಧಿಸಲು ಪ್ರಯತ್ನಿಸಿದ ವೇಳೆ, ಪೊಲೀಸ್ ಅಧಿಕಾರಿಯೊಬ್ಬರು ಸೊಂಟದಲ್ಲಿರುವ ಪಿಸ್ತೂಲನ್ನು ಎಳೆಯುತ್ತಿರುವುದು ವೀಡಿಯೊದಲ್ಲಿ ಕಾಣುತ್ತದೆ.

ಆಗ ಮುಖವಾಡ ಧರಿಸಿದ ಇನ್ನೋರ್ವ ಪ್ರತಿಭಟನಕಾರ ಪೊಲೀಸ್ ಅಧಿಕಾರಿಯ ಎದುರು ಹೋಗುತ್ತಾರೆ. ಅವರ ಎದೆ ಪ್ರದೇಶಕ್ಕೆ ಪೊಲೀಸ್ ಅಧಿಕಾರಿಯು ಗುಂಡು ಹಾರಿಸುವುದು ವೀಡಿಯೊದಲ್ಲಿ ಕಾಣಿಸುತ್ತದೆ. ಆಗ ಪ್ರತಿಭಟನಕಾರನು ಎಡ ಭಾಗದ ಎದೆಯ ಮೇಲೆ ಕೈಯಿಡುತ್ತಾ ಕೆಳಗೆ ಬೀಳುತ್ತಾರೆ. ಅವರ ಪರಿಸ್ಥಿತಿ ಏನಾಯಿತು ಎನ್ನುವುದು ಸ್ಪಷ್ಟವಾಗಿಲ್ಲ.

ಸ್ವಲ್ಪವೇ ಹೊತ್ತಿನಲ್ಲಿ, ಪ್ರತಿಭಟನಕಾರರೊಂದಿಗೆ ನಡೆದ ಘರ್ಷಣೆಯ ವೇಳೆ, ಅದೇ ಪೊಲೀಸ್ ಅಧಿಕಾರಿಯ ಪಿಸ್ತೂಲಿನಿಂದ ಇನ್ನೂ ಎರಡು ಗುಂಡುಗಳು ಹಾರುತ್ತವೆ ಹಾಗೂ ಇನ್ನೋರ್ವ ಮುಖವಾಡಧಾರಿ ನೆಲಕ್ಕೆ ಉರುಳುತ್ತಾರೆ. ಆದರೆ, ಅವರಿಗೆ ಗುಂಡು ತಗುಲಿದೆಯೇ ಎನ್ನುವುದು ವೀಡಿಯೊದಿಂದ ಸ್ಪಷ್ಟವಾಗಿಲ್ಲ.

ಸತತ 24ನೇ ವಾರಾಂತ್ಯವೂ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರು ಬೀದಿಗಿಳಿದರು ಹಾಗೂ ಅವರೊಂದಿಗೆ ಪೊಲೀಸರು ಘರ್ಷಣೆಗಿಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News