ಜಾರ್ಖಂಡ್: ಅಭ್ಯರ್ಥಿಗಳ ಪಟ್ಟಿಯಲ್ಲಿ ‘ಭ್ರಷ್ಟಾಚಾರ ವಿರೋಧಿ’ ಬಿಜೆಪಿಯ ಬಂಡವಾಳ ಬಯಲು

Update: 2019-11-11 17:42 GMT

ರಾಂಚಿ, ನ.11: ಜಾರ್ಖಂಡ್ ವಿಧಾನಸಭೆಯ 81 ಸ್ಥಾನಗಳಿಗೆ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಇದರಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿರುವ ಹಲವರ ಹೆಸರು ಇರುವುದು ಗಮನಾರ್ಹವಾಗಿದೆ.

ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಹೇಳಿಕೊಳ್ಳುತ್ತಿದ್ದರೂ, ಅಭ್ಯರ್ಥಿಗಳ ಪ್ರಥಮ ಪಟ್ಟಿಯಲ್ಲಿ 130 ಕೋಟಿ ರೂ. ಮೊತ್ತದ ಔಷಧಿ ಹಗರಣದ ಆರೋಪಿ ಭಾನುಪ್ರತಾಪ್ ಸಾಹಿ ಹೆಸರು ಸೇರಿದ್ದರೆ, ಹಲವು ಹಗರಣಗಳನ್ನು ಬಯಲಿಗೆಳೆದ ಹಿರಿಯ ಸಚಿವ ಸರಯೂ ರಾಯ್ ಹೆಸರು ಪಟ್ಟಿಯಲ್ಲಿಲ್ಲ.

2006ರಿಂದ 2008ರವರೆಗೆ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿದ್ದ ಮಧು ಕೋಡಾ ಸರಕಾರದಲ್ಲಿ ಭಾನುಪ್ರತಾಪ್ ಸಾಹಿ ಆರೋಗ್ಯ ಸಚಿವರಾಗಿದ್ದರು. ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಂದ ಮಾತ್ರ ಔಷಧ ಖರೀದಿಸಬೇಕು ಎಂಬ ನಿಯಮವನ್ನು ಮೀರಿ 19 ಖಾಸಗಿ ಸಂಸ್ಥೆಗಳಿಂದ ದುಬಾರಿ ಬೆಲೆ ತೆತ್ತು ಔಷಧಿ ಖರೀದಿಸಿದ ಆರೋಪ ಸಾಹಿ ವಿರುದ್ಧವಿದೆ.ಈ ಪ್ರಕರಣದಲ್ಲಿ ಅವರು ಭಾರೀ ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿದೆ. 2011ರಲ್ಲಿ ಸಾಹಿಯನ್ನು ಬಂಧಿಸಿದ್ದು 2013ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೊತೆಗೆ, 4000 ಕೋಟಿ ರೂ. ಮೊತ್ತದ ಅಕ್ರಮ ಹಣ ವರ್ಗಾವಣೆ ಮತ್ತು ಲಂಚ ಪ್ರಕರಣದಲ್ಲೂ ಸಾಹಿ ಆರೋಪಿಯಾಗಿದ್ದಾರೆ. 2014ರಲ್ಲಿ ಇವರ ಹೆಸರಲ್ಲಿದ್ದ 7.98 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು.

 ಇನ್ನೊಂದೆಡೆ, ಅವಿಭಜಿತ ಬಿಹಾರದಲ್ಲಿ ಮೇವು ಹಗರಣ ಮತ್ತು ಗಣಿ ಅಕ್ರಮ ಹಂಚಿಕೆ ಪ್ರಕರಣವನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸರಯೂ ರಾಯ್‌ಗೆ ಪಕ್ಷ ಟಿಕೆಟ್ ನಿರಾಕರಿಸಿದೆ. ಮುಖ್ಯಮಂತ್ರಿ ರಘುಬರ್ ದಾಸ್ ಜೊತೆ ರಾಯ್ ಉತ್ತಮ ಬಾಂಧವ್ಯ ಹೊಂದಿಲ್ಲ ಮತ್ತು ಸರಕಾರದ ಕೆಲವು ಕ್ರಮಗಳನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಪಕ್ಷಕ್ಕೆ ಮುಜುಗುರ ತರುತ್ತಿದ್ದಾರೆ. ಅಲ್ಲದೆ ಸಂಪುಟ ಸಭೆಗಳಲ್ಲೂ ಪಾಲ್ಗೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನಿರಾಕರಿಸಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News