ಅಯೋಧ್ಯೆ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ

Update: 2019-11-11 18:21 GMT

ಚೆನ್ನೈ, ನ.11: ಸುಪ್ರೀಂಕೋರ್ಟ್ ಶನಿವಾರ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ತೀರ್ಪು ಪ್ರಕಟಿಸಿದ ಬಳಿಕ ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಏಕೈಕ ಅಲ್ಪಸಂಖ್ಯಾತೇತರ ಸಂಸದ ತಿರುಮವಲವನ್, ತೀರ್ಪು ಹೊರಬಿದ್ದ ಬಳಿಕ ಸುಪ್ರೀಂಕೋರ್ಟ್‌ನ ಮೇಲಿದ್ದ ವಿಶ್ವಾಸ ನುಚ್ಚುನೂರಾಗಿದೆ ಎಂದು ಹೇಳಿದ್ದಾರೆ.

ಲಿಬರೇಷನ್ ಪ್ಯಾಂಥರ್ಸ್ ಪಾರ್ಟಿ(ವಿಡುಥಲೈ ಚಿರುಥೈಗಲ್ ಕಚ್ಚಿ) ಮುಖಂಡರಾಗಿರುವ ತಮಿಳುನಾಡಿನ ದಲಿತ ಮುಖಂಡ ತಿರುಮವಲವನ್ ತಮಿಳುನಾಡಿನ ಚಿದಂಬರಂ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ.     ಐವರು ನ್ಯಾಯಪೀಠ ತೀರ್ಪು ನೀಡಿದ್ದರೂ ತೀರ್ಪನ್ನು ಬರೆದ ನ್ಯಾಯಾಧೀಶರ ಹೆಸರು ಬಹಿರಂಗಗೊಂಡಿಲ್ಲ. ಇದನ್ನು ಗಮನಿಸಿದರೆ ನ್ಯಾಯಾಧೀಶರಿಗೂ ಈ ತೀರ್ಪಿನ ಪ್ರಾಮಾಣಿಕತೆಯ ಬಗ್ಗೆ ಸಂದೇಹವಿರುವಂತೆ ಕಾಣುತ್ತದೆ. ರಾಮಮಂದಿರವನ್ನು ನೆಲಸಮಗೊಳಿಸಿ ಬಾಬರಿ ಮಸೀದಿ ನಿರ್ಮಿಸಿರುವ ವಾದವನ್ನು ಸಮರ್ಥಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ತೀರ್ಪಿನಲ್ಲಿ ಹೇಳುವ ಮೂಲಕ, ಈ ಪ್ರಕರಣದ ದಾವೆದಾರರಲ್ಲಿ ಒಬ್ಬರಾಗಿರುವ ಮುಸ್ಲಿಮರು ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಸಿಲ್ಲ ಎಂದು ನ್ಯಾಯಪೀಠ ದೃಢಪಡಿಸಿದೆ.

ಇನ್ನೊಂದೆಡೆ, ಬಾಬರಿ ಮಸೀದಿಯ ಒಳಗಡೆ ರಾಮನ ಮೂರ್ತಿಯನ್ನು ಇರಿಸಿರುವುದು ಮತ್ತು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿರುವುದು ಕಾನೂನಬಾಹಿರ ಕೃತ್ಯ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಹೀಗೆ ಹೇಳಿದ ಸುಪ್ರೀಂಕೋರ್ಟ್, ತಪ್ಪಿತಸ್ತರಿಗೆ ಉದಾರವಾಗಿ ಆ ಜಮೀನನ್ನು ಕೊಡುಗೆ ನೀಡಿದೆ. ಸುಪ್ರೀಂಕೋರ್ಟ್ ಪ್ರಸ್ತಾವದ ನ್ಯಾಯಬದ್ಧತೆ ಪ್ರಶ್ನಾರ್ಹವಾಗಿದೆ ಎಂದು ತಿರುಮವಲವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News