ಈ ದೇಶದ ಹಸಿದವರಿಗೆ ಬೇಕು ಹೀಗೊಂದು ಮಂದಿರ

Update: 2019-11-12 06:59 GMT

ಈ ದೇಶದಲ್ಲಿ ಜನಸಾಮಾನ್ಯರಾರೂ ದೇವಸ್ಥಾನ, ಮಸೀದಿ, ಚರ್ಚುಗಳ ಕೊರತೆಯಿಂದ ನರಳಿದ ಉದಾಹರಣೆಗಳಿಲ್ಲ. ಪ್ರಾರ್ಥಿಸುವುದಕ್ಕೆ ಒಂದು ಗುಡಿಯೇ ಇಲ್ಲದ ಕಾರಣಕ್ಕಾಗಿ ಭಕ್ತರು ಬೀದಿಯಲ್ಲಿ ಬಿದ್ದಿರುವುದೋ, ಅಥವಾ ಗುಡಿ, ಮಸೀದಿಗಳಿಲ್ಲದ ಕಾರಣಕ್ಕೆ ದೇವರು ಬೇರೆ ದೇಶಗಳಿಗೆ ವಲಸೆ ಹೋಗಿರುವುದೋ ಉದಾಹರಣೆಗಳಿಲ್ಲ. ಭಾರತದ ಯಾವ ದೇವರುಗಳೂ ಅಪೌಷ್ಟಿಕತೆಯಿಂದ ನರಳುತ್ತಿರುವ ವರದಿಗಳು ಈವರೆಗೆ ಬಂದಿಲ್ಲ. ಇದೇ ಸಂದರ್ಭದಲ್ಲಿ ಭಾರತದಂತಹ ದೇಶದಲ್ಲಿ ‘ಅನ್ನ’ವನ್ನೇ ದೇವರೆಂದು ನಂಬುವವರಿದ್ದಾರೆ. ‘ಅನ್ನ ದೇವರಿಗಿಂತ ಅನ್ಯ ದೇವರಿಲ್ಲ’ ಎನ್ನುವ ಕವಿ ವಾಣಿಯ ಹಿಂದೆ, ಈ ದೇಶದ ಜ್ವಲಂತ ಸಮಸ್ಯೆಗಳ ಮೂಲವೇ ಅಡಗಿದೆ. ಹಸಿದವನಿಗೆ ಅನ್ನವೇ ದೇವರು. ಇಲ್ಲಿ ದೇವರ ಹೆಸರಲ್ಲಿ ಬಡವರ ಅನ್ನವನ್ನು ನಿರಂತರವಾಗಿ ಕಿತ್ತುಕೊಳ್ಳಲಾಗುತ್ತಿದೆ. ಆದರೆ ಅದು ರಾಷ್ಟ್ರೀಯ ಸಮಸ್ಯೆಯಾಗಿ ಚರ್ಚೆಯಾಗಿದ್ದು ಕಡಿಮೆ. ಈ ದೇಶದಲ್ಲಿ ದೇವರು, ಮಂದಿರ, ಮಸೀದಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಪೋಲು ಮಾಡಲಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಶನಿವಾರ ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪು, ದೇಶದ ಭಾರೀ ಸಮಸ್ಯೆಯೊಂದನ್ನು ಇತ್ಯರ್ಥ ಪಡಿಸಿತು ಎಂದು ಮಾಧ್ಯಮಗಳು ಸಂಭ್ರಮ ಪಡುತ್ತಿರುವಂತೆಯೇ, ಈ ದೇಶದ ಹಸಿವು ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಉರುಳಿದರೂ ಮಕ್ಕಳ, ಮಹಿಳೆಯರ ಮತ್ತು ವಂಚಿತ ಸಮುದಾಯಗಳ ಜೀವ ಮತ್ತು ಆರೋಗ್ಯಗಳನ್ನು ಅಪಾಯಕ್ಕೀಡುಮಾಡುತ್ತಿರುವ ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳಿಂದ ಮುಕ್ತಗೊಳಿಸಲು ಆಗಿಲ್ಲವೆಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ಜಾಗತಿಕ ಸೂಚ್ಯಂಕವು ಭಾರತವನ್ನು ಗಂಭೀರವಾದ ಹಸಿವಿನ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿರುವುದು ಭಾರತೀಯರಾರಿಗೂ ಅವಮಾನದ ವಿಷಯವಾಗಿ ಕಾಡಿಲ್ಲ. ವಿಶ್ವಸಂಸ್ಥೆಯ ಸಹಸ್ರಮಾನದ ಗುರಿಗಳಲ್ಲಿ 2030ರ ವೇಳೆಗೆ ಇಡೀ ಜಗತ್ತನ್ನು ಹಸಿವು ಮುಕ್ತಗೊಳಿಸಬೇಕೆಂಬುದೂ ಒಂದು. ಆದರೆ ಅದನ್ನು ಸಾಧಿಸಬೇಕೆಂದರೆ ಸರಕಾರ ಅದನ್ನು ಪ್ರಾಮಾಣಿಕವಾಗಿ ದೇಶದ ಅಗತ್ಯವೆನ್ನುವುದನ್ನು ಮೊದಲು ಒಪ್ಪಿಕೊಳ್ಳಬೇಕಾಗುತ್ತದೆ. ಈ ಗುರಿಯನ್ನು ಈಡೇರಿಸುವ ಉದ್ದೇಶದಿಂದಲೇ ಜಾಗತಿಕ ಹಸಿವು ಸೂಚ್ಯಂಕವು ವಿವಿಧ ದೇಶಗಳಲ್ಲಿರುವ ಹಸಿವನ್ನು ಮಾಪನ ಮಾಡುತ್ತದೆ. ಭಾರತದಲ್ಲಿ 2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ವತ್ತು ಆಹಾರ ಸಾಮಗ್ರಿಗಳ ದಾಸ್ತಾನುಗಳು ಏರುತ್ತಲೇ ಇವೆ. ಆದರೂ ಈ ವರದಿಯು ಸೂಚಿಸುವಂತೆ ಅಗತ್ಯವಿರುವಷ್ಟು ಆಹಾರವನ್ನು ಪಡೆದುಕೊಳ್ಳುವ ಹಕ್ಕಿನಿಂದ ಜನರು ವಂಚಿತರಾಗುತ್ತಲೇ ಇದ್ದಾರೆ. ವಿನಾಶಕಾರಿ ಹಸಿವು ಮುಂದುವರಿಯುತ್ತಲೇ ಇದೆ. ಆದರೆ ಇದೇ ಅವಧಿಯಲ್ಲಿ ದಕ್ಷಿಣ ಏಶ್ಯದ ನಮ್ಮ ನೆರೆಹೊರೆ ದೇಶಗಳು ಈ ವಿಷಯದಲ್ಲಿ ನಮಗಿಂತ ಉತ್ತಮ ಸಾಧನೆಯನ್ನು ತೋರಿವೆ.

ವರದಿಯ ಪ್ರಕಾರ ಭಾರತದ ಐದುವರ್ಷದೊಳಗಿನ ಮಕ್ಕಳಲ್ಲಿ ಎತ್ತರಕ್ಕೆ ಸರಿಯಾದಷ್ಟು ತೂಕವಿಲ್ಲದ ಮಕ್ಕಳು ಅಂದರೆ ಅತ್ಯಂತ ತೀವ್ರ ಅಪೌಷ್ಟಿಕತೆಗೆ ಗುರಿಯಾಗಿರುವ ಮಕ್ಕಳ ಸಂಖ್ಯೆ ಶೇ.28ರಷ್ಟು. ಇದು ವರದಿಯಲ್ಲಿ ಉಲ್ಲೇಖವಾಗಿರುವ ದೇಶಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ. ಹಾಗೂ ಐದು ವರ್ಷದೊಳಗಿನ ಮಕ್ಕಳಲ್ಲಿ ವಯಸ್ಸಿಗೆ ತಕ್ಕನಾದ ಎತ್ತರವಿಲ್ಲದಿರುವುದು ನಿರಂತರವಾಗಿ ಮುಂದುವರಿದಿರುವ ಅಪೌಷಿಕತೆಯ ಸೂಚನೆಯಾಗಿದ್ದು ಅಂತಹ ಮಕ್ಕಳ ಸಂಖ್ಯೆಯೂ ಭಾರತದಲ್ಲಿ ಶೇ. 37.9ರಷ್ಟಿದೆ. ಈ ವಿಭಾಗದಲ್ಲೂ ಸಹ ಭಾರತದ್ದೇ ದಾಖಲೆ. ಭಾರತದ ಮಕ್ಕಳ ಜೀವನವನ್ನು ಅಪಾಯಕ್ಕೊಡ್ಡುವ ಮಟ್ಟದಲ್ಲಿ ತೀವ್ರವಾದ ಅಪೌಷ್ಟಿಕತೆ ತಾಂಡವವಾಡುತ್ತಿದೆ ಎಂಬ ಸತ್ಯವನ್ನು ವಿಶ್ವಸಂಸ್ಥೆಯ ‘ಸ್ಟೇಟ್ ಆಫ್ ದಿ ವರ್ಲ್ಡ್ಸ್ ಚಿಲ್ಡ್ರನ್ (ಜಗತ್ತಿನ ಮಕ್ಕಳ ಪರಿಸ್ಥಿತಿ) ಎಂಬ ವರದಿಯೂ ಸಹ ಸಾಬೀತು ಮಾಡಿದೆ. ಈ ವರದಿಯು ಇತರ ಆರೋಗ್ಯ ಸಮಸ್ಯೆಗಳೊಂದಿಗೆ ನಿರ್ದಿಷ್ಟವಾಗಿ ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಉಬ್ಬುಹೊಟ್ಟೆಯಂಥ ಸಮಸ್ಯೆಗಳನ್ನು ಅಧ್ಯಯನ ಮಾಡಿದೆ ಮತ್ತು ಮಕ್ಕಳಿಗೆ ಸಿಗುತ್ತಿರುವ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶವಿಲ್ಲವೆಂಬ ಕಾರಣದಿಂದಲೇ ಅವರು ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಮಾಡಿದೆ.

ಭಾರತಲ್ಲಿ ಐದುವಯಸ್ಸಿನ ಒಳಗಿನ ಮಕ್ಕಳಲ್ಲಿ ಪ್ರತಿ ಸಾವಿರಕ್ಕೆ 37 ಮಕ್ಕಳು ಮಾತ್ರ ಸಾವನ್ನಪ್ಪುತ್ತಿದ್ದರೂ ಒಟ್ಟೂ ಸಾವಿನ ಸಂಖ್ಯೆಯನ್ನು ನೋಡಿದರೆ 2018ರಲ್ಲಿ ಭಾರತದಲ್ಲಿ 8,82,000 ಮಕ್ಕಳು ಸಾವನ್ನಪ್ಪಿವೆ. ಅದರಲ್ಲಿ ಶೇ. 62 ಮಕ್ಕಳು ಹುಟ್ಟಿದ ಕೂಡಲೇ ಮರಣಹೊಂದಿವೆ. ಹೀಗಾಗಿ ಐದುವರ್ಷದೊಳಗಿನ ಮಕ್ಕಳಲ್ಲಿ ಶೇ.69ರಷ್ಟು ಸಾವುಗಳು ಅಪೌಷ್ಟಿಕತೆಯಿಂದ ಸಂಭವಿಸುತ್ತಿದ್ದರೆ ಈ ವಯೋಮಾನದ ಇಬ್ಬರಲ್ಲಿ ಒಬ್ಬರು ಒಂದಲ್ಲಾ ಒಂದು ಬಗೆಯ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಈ ವರದಿಯ ಪ್ರಕಾರ ಭಾರತದಲ್ಲಿ ಶೇ.35ರಷ್ಟು ಮಕ್ಕಳು ವಯಸ್ಸಿಗೆ ತಕ್ಕಷ್ಟು ಎತ್ತರವಿಲ್ಲ. ಪ್ರತಿ ಇಬ್ಬರು ಮಹಿಳೆಯರಲ್ಲಿ ಒಬ್ಬರು ರಕ್ತಹೀನತೆಯಿಂದ ಬಳಲುತ್ತಿದ್ದರೆ ಶೇ. 40.5ರಷ್ಟು ಮಕ್ಕಳೂ ಸಹ ಅದೇ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಡೆಸಿದ 2016-18ರ ಸಾಲಿನ ರಾಷ್ಟ್ರೀಯ ಸಮಗ್ರ ಪೌಷ್ಟಿಕಾಂಶ ಸರ್ವೇ ಸಹ ಐದು ವಷರ್ದೊಳಗಿನ ಮಕ್ಕಳಲ್ಲಿ ಶೇ. 34.7ರಷ್ಟು ಮಕ್ಕಳು ವಯಸ್ಸಿಗೆ ತಕ್ಕಷ್ಟು ಎತ್ತರವಿಲ್ಲವೆಂದೂ, ಶೇ.17.3ರಷ್ಟು ಮಕ್ಕಳಿಗೆ ಎತ್ತರಕ್ಕೆ ತಕ್ಕಷ್ಟು ತೂಕವಿಲ್ಲವೆಂದೂ ಮತ್ತು ಶೇ.33.4ರಷ್ಟು ಮಕ್ಕಳು ವಯಸ್ಸಿಗೆ ತಕ್ಕಷ್ಟು ತೂಕವನ್ನು ಹೊಂದಿಲ್ಲವೆಂದೂ ವರದಿ ಮಾಡಿದೆ.

ಪೌಷ್ಟಿಕತೆಯು ಹಲವಾರು ಕಾರಣಗಳಿಂದ ಸಂಭವಿಸುತ್ತದೆ. ಬಡತನ, ಆಹಾರ ಧಾನ್ಯಗಳ ಮತ್ತು ಬೇಳೆಕಾಳುಗಳ ಅಲಭ್ಯತೆ, ಬಳಸುವ ಆಹಾರದಲ್ಲಿ ಪ್ರಮುಖ ಪೌಷ್ಟಿಕಾಂಶಗಳ ಕೊರತೆ, ಸಾರ್ವಜನಿಕ ಪಡಿತರದ ಅವ್ಯವಸ್ಥೆ ಮತ್ತು ಅಸಮಾನ ವಿತರಣೆ, ಕುಟುಂಬದಲ್ಲಿ ಮಹಿಳೆಯ ಸಾಪೇಕ್ಷ ಸ್ಥಾನಮಾನ, ಸ್ವಚ್ಛ ಕುಡಿಯುವ ನೀರಿನ ಅಲಭ್ಯತೆ ಮತ್ತು ನೈರ್ಮಲ್ಯದ ಕೊರತೆ ಮತ್ತು ಹಲವಾರು ಅನುವಂಶೀಯ ಹಾಗೂ ಪರಿಸರ ಸಂಬಂಧಿ ಕಾರಣಗಳೂ ಇದರಲ್ಲಿ ಸೇರಿಕೊಂಡಿವೆ. ಇಂದಿನ ಈ ಪರಿಸ್ಥಿತಿಗೆ ರಾಜಕೀಯ ಬದ್ಧತೆಯ ಕೊರತೆ ಮತ್ತು ಫಲಿತಾಂಶಗಳನ್ನು ಪರಿಣಾಮಕಾರಿಯಾಗಿ ತಂದುಕೊಡುವಲ್ಲಿ ಅಸಮರ್ಥವಾಗಿರುವ ಹಾಲಿ ವ್ಯವಸ್ಥೆ ಮತ್ತು ನೀತಿಗಳೆರಡೂ ಕಾರಣವಾಗಿವೆ. ಇತ್ತೀಚಿನ ಸಂಶೋಧನಾ ವರದಿಯೊಂದು ಹೇಳುವಂತೆ ಅಪೌಷ್ಟಿಕತೆ ನಿವಾರಣೆಗಾಗಿ ರೂಪಿಸಿರುವ ಯೋಜನೆಗಳು ಜಾರಿಯಾಗುತ್ತಿರುವ ರೀತಿ ಮತ್ತು ವೇಗಗಳನ್ನು ನೋಡಿದರೆ ಅಂದುಕೊಂಡಿರುವ ಗುರಿಯನ್ನು ಮುಟ್ಟುವುದು ಸಂದೇಹ. ಆದರೆ ಇತ್ತೀಚಿನ ಕ್ರೆಡಿಟ್ ಸೂಸಿ ಗ್ಲೋಬಲ್ ವೆಲ್ತ್ ರಿಪೋರ್ಟಿನ ಪ್ರಕಾರ ಅತಿ ವೇಗವಾಗಿ ಸಂಪತ್ತನ್ನು ಸೃಷ್ಟಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ.

ಇಷ್ಟಿದ್ದರೂ ಭಾರತದಲ್ಲಿ ಹಸಿವು ಮತ್ತು ತೀವ್ರತರನಾದ ಅಪೌಷ್ಟಿಕತೆಯನ್ನು ನಿವಾರಿಸಲಾಗದಿರುವುದು ಒಂದು ವಿಪರ್ಯಾಸವಲ್ಲವೇ? ಆದ್ದರಿಂದ ಸರಕಾರವು ಅಗತ್ಯವಿರುವಷ್ಟು ಆಹಾರ ಮತ್ತು ಪೌಷ್ಟಿಕತೆಯನ್ನು ಖಾತರಿಪಡಿಸುವುದಕ್ಕೆ ಅತ್ಯಂತ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ಅದಕ್ಕಾಗಿ ಪೌಷ್ಟಿಕಾಂಶಗಳನ್ನು ಒದಗಿಸ ಬೇಕಾದ ಸರಕಾರಿ ಯೋಜನೆಗಳಿಗೆ ಎಷ್ಟು ಅಗತ್ಯವಿದೆಯೋ ಅಷ್ಟು ಹೂಡಿಕೆಯನ್ನು ಮಾಡಬೇಕು. ಅಯೋಧ್ಯೆ ವಿವಾದಗಳು ಈ ದೇಶದಲ್ಲಿ ಸಾವುನೋವುಗಳನ್ನು ಸೃಷಿಸಬಹುದು ಎಂಬ ಭಯದಿಂದ ಸುಪ್ರೀಂಕೋರ್ಟ್ ಆತುರಾತುರದಿಂದ ತೀರ್ಪನ್ನು ನೀಡಿತು. ಆದರೆ ಯಾವುದೇ ಕೋಮುಗಲಭೆಗಳಿಲ್ಲದೇ ಇದ್ದರೂ ಈ ದೇಶದಲ್ಲಿ ಮಕ್ಕಳು, ಮಹಿಳೆಯರು, ದೊಡ್ಡವರು ಎನ್ನದೇ ಬಲಿಯಾಗುತ್ತಿದ್ದಾರೆ. ಜನರ ಜೀವದ ಕುರಿತಂತೆ ನಿಜವಾದ ಕಾಳಜಿಯನ್ನು ನಮ್ಮ ವ್ಯವಸ್ಥೆ ಹೊಂದಿದೆಯಾದರೆ, ಅನ್ನ ಎಂಬ ದೇವರಿಗೆ ಒಂದು ಗುಡಿ ನಿರ್ಮಾಣವಾಗಬೇಕಾಗಿದೆ. ಆ ಗುಡಿ ಈ ದೇಶದ ಹಸಿದವರೆಲ್ಲರ ಹಸಿವನ್ನು ಇಂಗಿಸುವ ಶಕ್ತಿಯನ್ನು ಹೊಂದಿರಬೇಕು. ಅಂತಹದೊಂದು ಗುಡಿಯ ನಿರ್ಮಾಣದ ಹೊಣೆಯನ್ನು ನಮ್ಮ ಸುಪ್ರೀಂಕೋರ್ಟ್ ಸರಕಾರಕ್ಕೆ ವಹಿಸಬೇಕು. ನಮ್ಮ ಸುಪ್ರೀಂಕೋರ್ಟ್ ನೀಡಬಹುದಾದ ಈ ಕುರಿತ ತೀರ್ಪಿಗಾಗಿ ಈ ದೇಶದ ದೊಡ್ಡ ಸಂಖ್ಯೆಯ ಭಕ್ತರು ಕಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News